Amaran OTT: ಅಮರನ್ ಚಿತ್ರದ ಒಟಿಟಿ ಆಗಮನದ ಕೌತುಕ; ಈ ದಿನದಂದು ನೆಟ್‌ಫ್ಲಿಕ್ಸ್‌ಗೆ ಎಂಟ್ರಿಕೊಡಲಿದೆ ತಮಿಳಿನ ಬ್ಲಾಕ್ ಬಸ್ಟರ್ ಸಿನಿಮಾ
Amaran OTT Update: ಚಿತ್ರಮಂದಿರಲ್ಲಿ 25 ದಿನ ಪೂರೈಸಿರುವ ಅಮರನ್ ಸಿನಿಮಾ ಒಟಿಟಿ ಬಿಡುಗಡೆ ಯಾವಾಗ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಥಿಯೇಟರ್‌ಗಳಲ್ಲಿ ಸೂಪರ್ ಹಿಟ್ ಆದ ಈ ಸಿನಿಮಾದ ಒಟಿಟಿ ಹಕ್ಕನ್ನು, ನೆಟ್‌ಫ್ಲಿಕ್ಸ್ ಫ್ಯಾನ್ಸಿ ರೇಟ್‌ಗೆ ಖರೀದಿಸಿದ್ದು, ಡಿಸೆಂಬರ್‌ನಲ್ಲಿ ಈ ಸಿನಿಮಾ ಹಲವು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
Amaran OTT: ದೀಪಾವಳಿ ಸೆನ್ಸೇಷನ್ ಎಂಬಂತೆ ಬಿಡುಗಡೆ ಆಗಿದ್ದ ಕಾಲಿವುಡ್ ನಟ ಶಿವ ಕಾರ್ತಿಕೇಯನ್ ನಟನೆಯ ಅಮರನ್ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಇದೇ ಸಿನಿಮಾದಿಂದ ಒಟಿಟಿ ಸ್ಟ್ರೀಮಿಂಗ್ ಬಗ್ಗೆಯೂ ಸ್ಪಷ್ಟತೆ ಸಿಕ್ಕಿದೆ. ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಅಮರನ್ ಸಿನಿಮಾ ದೀಪಾವಳಿ ಉಡುಗೊರೆಯಾಗಿ ಅಕ್ಟೋಬರ್ 31ರಂದು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಅದರಂತೆ ಕಲೆಕ್ಷನ್ ವಿಚಾರದಲ್ಲಿಯೂ ಮೋಡಿ ಮಾಡಿರುವ ಈ ಸಿನಿಮಾ ಈ ವರೆಗೂ 300 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಫ್ಯಾನ್ಸಿ ರೇಟ್‌ಗೆ ಅಮರನ್ ಒಟಿಟಿ ಹಕ್ಕು ಬಿಕರಿ
ಥಿಯೇಟರ್‌ಗಳಲ್ಲಿ ಸೂಪರ್ ಹಿಟ್ ಆದ ಅಮರನ್ ಸಿನಿಮಾದ ಒಟಿಟಿ ಹಕ್ಕನ್ನು, ನೆಟ್‌ಫ್ಲಿಕ್ಸ್ ಫ್ಯಾನ್ಸಿ ರೇಟ್‌ಗೆ ಖರೀದಿಸಿದೆ. ಆದರೆ.. ಆ ಮೊತ್ತ ಎಷ್ಟು ಎಂಬ ಬಗ್ಗೆ ಇನ್ನೂ ರಿವೀಲ್ ಆಗಿಲ್ಲ. ಆದರೆ, ಇತ್ತೀಚೆಗಷ್ಟೇ ಅಮರನ್ ಚಿತ್ರವನ್ನು ನೆಟ್‌ಫ್ಲಿಕ್ಸ್ ಬರೋಬ್ಬರಿ 60 ಕೋಟಿಗೆ ಖರೀದಿಸಿದೆ ಎಂಬ ಸುದ್ದಿ ಹೊರಬಿದ್ದಿದೆ. ಅಮರನ್ ಸಿನಿಮಾವನ್ನು ಕಮಲ್ ಹಾಸನ್ ಅವರು ತಮ್ಮ ರಾಜ್ ಕಮಲ್ ಇಂಟರ್ ನ್ಯಾಷನಲ್ ಬ್ಯಾನರ್‌ನಲ್ಲಿ 120 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಿದ್ದಾರೆ.
ತಮಿಳುನಾಡಿನಲ್ಲೇ 150 ಕೋಟಿ ಕಲೆಕ್ಷನ್
ಅಮರನ್ ಸಿನಿಮಾದ ಕಲೆಕ್ಷನ್‌ನಲ್ಲಿ ತಮಿಳುನಾಡಿನಿಂದಲೇ 150 ಕೋಟಿ ಹರಿದುಬಂದಿದೆ. ತೆಲುಗು ರಾಜ್ಯಗಳಿಂದಲೂ ಭರ್ಜರಿ ಕಲೆಕ್ಷನ್ ಮಾಡಿದ ಈ ಸಿನಿಮಾಕ್ಕೆ, ಕರ್ನಾಟಕದಲ್ಲಿ ಕನ್ನಡ ವರ್ಷನ್ ಮತ್ತು ಕೇರಳದಲ್ಲಿ ಮಲಯಾಳಂ ವರ್ಷನ್ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲಾಗಲಿಲ್ಲ. ತೆಲುಗಿನಲ್ಲಿ ನಟಿ ಸಾಯಿ ಪಲ್ಲವಿಗೆ ಒಳ್ಳೆಯ ಕ್ರೇಜ್ ಇದೆ. ಆ ಕಾರಣಕ್ಕೂ ಈ ಸಿನಿಮಾ ತೆಲುಗು ಮಾಡಿನಲ್ಲಿ ಮೋಡಿ ಮಾಡಿತು. ಈಗ ಅಮರನ್ ಸಿನಿಮಾದಿಂದ ಸಾಯಿಪಲ್ಲವಿ ಜತೆಗೆ ಶಿವಕಾರ್ತಿಕೇಯನ್ ಅವರಿಗೂ ಬೇಡಿಕೆ ಸೃಷ್ಟಿಯಾಗಿದೆ.
300 ಕೋಟಿ ಕ್ಲಬ್ ಸೇರಿದ ಅಮರನ್
ಇತ್ತೀಚೆಗಷ್ಟೇ ತಮಿಳಿನ ಜೈಲರ್, ಲಿಯೋ ಮತ್ತು ಗೋಟ್ ಸಿನಿಮಾಗಳು 300 ಕೋಟಿ ಕ್ಲಬ್ ಸೇರಿದ್ದವು. ಈಗ ಅಮರನ್ ಕೂಡ ಆ ಪಟ್ಟಿಗೆ ಸೇರಿಕೊಂಡಿದೆ. ಶಿವ ಕಾರ್ತಿಕೇಯನ್ ಅವರ ಸುದೀರ್ಘ ಸಿನಿಮಾ ವೃತ್ತಿಜೀವನದಲ್ಲಿ ಇದು ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬುದು ಗಮನಾರ್ಹ. ಈ ಹಿಂದಿನ ಅವರ ಬೇರಾವ ಸಿನಿಮಾ 300 ಕೋಟಿ ಕ್ಲಬ್ ಸೇರಿರಲಿಲ್ಲ. ಇಷ್ಟು ದೊಡ್ಡ ಮಟ್ಟದಲ್ಲಿಯೂ ಬಿಡುಗಡೆ ಆಗಿರಲಿಲ್ಲ.
ನೈಜ ಘಟನೆ ಆಧರಿತ ಚಿತ್ರ
ಅಮರನ್ ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನವನ್ನು ಆಧರಿಸಿದ ಸಿನಿಮಾ. ಶಿವಕಾರ್ತಿಕೇಯನ್ ಈ ಚಿತ್ರದಲ್ಲಿ ಮುಕುಂದ್ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಯಿ ಪಲ್ಲವಿ ಅವರ ಪತ್ನಿ ರೆಬೆಕಾ ಪಾತ್ರದಲ್ಲಿದ್ದಾರೆ. ರಾಜ್ ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಿಸಿದ್ದಾರೆ.
ಅಮರನ್ ಒಟಿಟಿಗೆ ಯಾವಾಗ?
ಇನ್ನು ಚಿತ್ರಮಂದಿರದ ಜತೆಗೆ ಒಟಿಟಿಯಲ್ಲಿ ಈ ಸಿನಿಮಾ ಯಾವಾಗ ಎಂದು ಕಾದುಕುಳಿತ ವರ್ಗವೂ ದೊಡ್ಡದಿದೆ. ಅದರಂತೆ, ಈಗ 25 ದಿನ ಪೂರೈಸಿ ಮುನ್ನುಗ್ಗುತ್ತಿರುವ ಈ ಸಿನಿಮಾ, ಚಿತ್ರಮಂದಿರಕ್ಕೆ ಹೆಚ್ಚೆಚ್ಚು ಜನರನ್ನು ಕರೆತರುತ್ತಿದೆ. ಈ ಕಾರಣಕ್ಕೆ ಒಟಿಟಿ ಬಿಡುಗಡೆ ಮುಂದೂಡಬೇಕೆಂದು, ಚಿತ್ರಮಂದಿರದ ಮಾಲೀಕರು, ವಿತರಕರು ನಿರ್ಮಾಪಕರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ನಡುವೆ ಅಮರನ್ ಸಿನಿಮಾ ಡಿಸೆಂಬರ್ 5 ಅಥವಾ ಡಿಸೆಂಬರ್ 11 ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ವಾಸ್ತವವಾಗಿ, ಈ ಚಿತ್ರವು ನವೆಂಬರ್ ಅಂತ್ಯದಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್‌ನಿಂದ ಇನ್ನಷ್ಟೇ ಅಧಿಕೃತ ಘೋಷಣೆ ಹೊರಬರಬೇಕಿದೆ.