Jothe Jotheyali: ಇನ್ನೂ ತಿಳಿಯಾಗಿಲ್ಲ ಪ್ರಕರಣ...ಮತ್ತೆ ಇದೇ ವಿಚಾರವಾಗಿ ಸುದ್ದಿಗೋಷ್ಠಿ, ಯಾರು ಏನಂದ್ರು...?
ಅನಿರುದ್ಧ್ ಅವರ ಸ್ವಂತ ಸ್ಥಳ ಧಾರಾವಾಡದಲ್ಲೂ ಸ್ನೇಹಿತರು ಧಾರಾವಾಹಿ ತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಅನಿರುದ್ಧ್ ಅವರನ್ನು ನಾವು ಸುಮಾರು 40 ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಅವರು ಇದುವರೆಗೂ ಯಾರೊಂದಿಗೆ ಕೂಡಾ ದುರಹಂಕಾರ ತೋರಿಸಿಲ್ಲ. ಹಾಗೆಂದ ಮಾತ್ರಕ್ಕೆ ಧಾರಾವಾಹಿ ಚಿತ್ರೀಕರಣದ ವೇಳೆ ಹಾಗೆ ವರ್ತಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿ ವಿವಾದ ಇನ್ನೂ ತಿಳಿಯಾಗಿಲ್ಲ. ಆರೋಪ, ಪ್ರತ್ಯಾರೋಪಗಳ ನಂತರ ನಟ ಅನಿರುದ್ಧ್, ತಂಡದಿಂದ ಹೊರಬಂದಿದ್ದರು. ಆದರೆ ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಏನೇ ಆಗಲೀ ಮತ್ತೆ ಧಾರಾವಾಹಿಯಲ್ಲಿ ಅವರೇ ಮುಂದುವರೆಯಬೇಕು ಎಂಬ ಒತ್ತಡ ವಾಹಿನಿ ಮೇಲೆ ಹೆಚ್ಚಾಗಿದೆ.
'ಜೊತೆ ಜೊತೆಯಲಿ' ಧಾರಾವಾಹಿ ಆರಂಭವಾದಾಗ ಅನಿರುದ್ಧ್‌ಗೆ ಮಹಿಳಾ ಅಭಿಮಾನಿಗಳು ಹೆಚ್ಚಾಗಿದ್ದರು. ಇನ್ನು ಮುಂದೆ ಅನಿರುದ್ಧ್ ಈ ಧಾರಾವಾಹಿಯಲ್ಲಿ ಇರುವುದಿಲ್ಲ ಎಂಬ ವಿಚಾರ ತಿಳಿದಾಗಿನಿಂದ ಎಲ್ಲರೂ ಬೇಸರ ವ್ಯಕ್ತಪಡಿಸಿದ್ದರು. ಈಗ ವಾಹಿನಿ ವಿರುದ್ಧ ಅನಿರುದ್ಧ್ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಏನೇ ಆಗಲೀ, ಮತ್ತೆ ಧಾರಾವಾಹಿಯಲ್ಲಿ ಅನಿರುದ್ಧ್ ಅವರು ಮುಂದುವರೆಯಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದ್ದಂತೆ ಮಂಗಳವಾರ ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಅನಿರುದ್ಧ್ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಪ್ರೆಸ್‌ಮೀಟ್ ಕೂಡಾ ನಡೆಸಿದ್ದಾರೆ.
ಇದೀಗ ಅನಿರುದ್ಧ್ ಅವರ ಸ್ವಂತ ಸ್ಥಳ ಧಾರಾವಾಡದಲ್ಲೂ ಸ್ನೇಹಿತರು ಧಾರಾವಾಹಿ ತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಅನಿರುದ್ಧ್ ಅವರನ್ನು ನಾವು ಸುಮಾರು 40 ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಅವರು ಇದುವರೆಗೂ ಯಾರೊಂದಿಗೆ ಕೂಡಾ ದುರಹಂಕಾರ ತೋರಿಸಿಲ್ಲ. ಹಾಗೆಂದ ಮಾತ್ರಕ್ಕೆ ಧಾರಾವಾಹಿ ಚಿತ್ರೀಕರಣದ ವೇಳೆ ಹಾಗೆ ವರ್ತಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ. ಅನಿರುದ್ಧ್ ಬಹಳ ಸರಳ ವ್ಯಕ್ತಿತ್ವದವರು. ಧಾರಾವಾಹಿ ತಂಡ ಅವರ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿದೆ. ಏನಾದರೂ ಮನಸ್ತಾಪ ಇದ್ದರೆ ಕುಳಿತು ಮಾತನಾಡಿ ಎಲ್ಲವನ್ನೂ ಸರಿಪಡಿಸಿಕೊಳ್ಳಬಹುದಿತ್ತು. ಈ ರೀತಿ ಸುದ್ದಿಗೋಷ್ಠಿ ಮಾಡಿ ಅವರ ಹೆಸರಿಗೆ ಕಳಂಕ ತರುವುದು ತಪ್ಪು ಎಂದಿದ್ದಾರೆ.
ಘಟನೆಯ ವಿವರ
ಅನಿರುದ್ಧ್ ಕೆಲವು ದಿನಗಳ ಹಿಂದೆ ಧಾರಾವಾಹಿಯ ದೃಶ್ಯವೊಂದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಎಷ್ಟೇ ಮನವೊಲಿಸಲು ಯತ್ನಿಸಿದರೂ ಆ ದೃಶ್ಯದಲ್ಲಿ ನಟಿಸುವುದಿಲ್ಲ ಎಂದು ಚಿತ್ರೀಕರಣ ಬಿಟ್ಟು ಅರ್ಧದಲ್ಲೇ ಹೊರ ಹೋಗಿದ್ದರಂತೆ. ಇದೀಗ ಮತ್ತೆ ಅವರು ಅದೇ ರೀತಿ ನಡೆದುಕೊಂಡಿದ್ದು ಅವರ ಈ ವರ್ತನೆಯಿಂದ ಧಾರಾವಾಹಿ ತಂಡಕ್ಕೆ ತಲೆ ನೋವಾಗಿತ್ತಂತೆ. ಅನಿರುದ್ಧ್ ಹೀಗೆ ಪದೇ ಪದೆ ಆ ಸೀನ್ ಮಾಡುವುದಿಲ್ಲ, ಈ ಸೀನ್ ಮಾಡುವುದಿಲ್ಲ ಎನ್ನುತ್ತಾ ಚಿತ್ರೀಕರಣದ ಮಧ್ಯದಲ್ಲೇ ಹೊರ ಹೋಗುವುದು ತಂಡಕ್ಕೆ ತೊಂದರೆಯಾಗುತ್ತಿರುವುದಿಂದ ನಿರ್ದೇಶಕ ಹಾಗೂ ಇನ್ನಿತರರು ಕಿರುತೆರೆ ಸಂಘಕ್ಕೆ ದೂರು ನೀಡಿದ್ದರಂತೆ. ಆದರೆ ಈ ಆರೋಪವನ್ನು ಅನಿರುದ್ಧ್ ಅಲ್ಲಗಳೆದಿದ್ದರು.
ಮೂರು ಕೋಟಿ ವ್ಯೂವ್ಸ್ ಪಡೆದಿದ್ದ ಧಾರಾವಾಹಿಯ ಟೈಟಲ್ ಸಾಂಗ್
ಇತ್ತೀಚೆಗೆ ಈ ಧಾರಾವಾಹಿಯ ಶೀರ್ಷಿಕೆ ಗೀತೆ ಯೂಟ್ಯೂಬ್‌ನಲ್ಲಿ ಮೂರು ಕೋಟಿಗೂ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿತ್ತು. ಈ ಹಾಡಿಗೆ ಹರ್ಷ ಪ್ರಿಯಾ ಅವರ ಸಾಹಿತ್ಯವಿದ್ದು ಸುನಾದ್ ಗೌತಮ್ ಸಂಯೋಜನೆ ಇದೆ. ಸರಿಗಮಪ ಖ್ಯಾತಿಯ ನಿಹಾಲ್ ತಾವ್ರೋ, ರಜತ್ ಹೆಗ್ಡೆ ಮತ್ತು ನೀನಾ ನಾಯಕ್ ಈ ಹಾಡನ್ನು ಹಾಡಿದ್ದಾರೆ. ಈ ಹಾಡು ಎಷ್ಟು ಫೇಮಸ್ ಎಂದರೆ ಪುಟ್ಟ ಮಕ್ಕಳು ಕೂಡಾ ಈ ಹಾಡನ್ನು ಬಹಳ ಇಷ್ಟಪಡುತ್ತಾರೆ. ಇತ್ತೀಚೆಗಂತೂ ಯಾವ ಮದುವೆ ಕಾರ್ಯಕ್ರಮಗಳಿದ್ದರೂ ಈ ಹಾಡನ್ನು ಪ್ರೀತಿಯ ಸಂಕೇತವಾಗಿ ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಬಹಳ ವೈರಲ್ ಆಗಿತ್ತು.