ಕರ್ನಾಟಕದಲ್ಲಿ ಚಳಿಗೆ ಮಳೆಯ ಸಾಥ್, ಚಂಡಮಾರುತ ಪರಿಣಾಮ ಕೊಡಗಿನಲ್ಲಿಂದು ಭಾರಿಮಳೆ, ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಇದೆ; ಡಿ.4 ಹವಾಮಾನ ವರದಿ
Karnataka Weather: ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕದ ಹವಾಮಾನ ಬದಲಾಗಿದೆ. ಚಳಿಗಾಲದಲ್ಲೂ ಮಳೆ ಸುರಿಯುವಂತಾಗಿದೆ. ಜೋರು ಚಳಿಯ ನಡುವೆ ಮಳೆಯು ಕೂಡ ಜೊತೆಯಾಗಿ ವಾತಾವರಣ ಸಂಪೂರ್ಣ ಬದಲಾಗಿದೆ. ಇಂದು (ಡಿಸೆಂಬರ್ 4) ಕೊಡಗಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಎಲ್ಲೆಲ್ಲಿ ಮಳೆ ಮಳೆಯಾಗಲಿದೆ, ಎಲ್ಲೆಲ್ಲಿ ಚಳಿ ಜೋರು ಎಂಬ ವಿವರ ಇಲ್ಲಿದೆ.
Karnataka Weather: ಫೆಂಗಲ್ ಚಂಡಮಾರುತದ ಕಾರಣದಿಂದ ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಚಳಿಗಾಲದಲ್ಲಿ ಮಳೆಯಾಗುತ್ತಿದ್ದು, ಕಟಾವು ಮಾಡಲು ಸಿದ್ಧವಾಗಿರುವ ಬೆಳೆಗಳು ಹಾನಿಯಾಗುತ್ತಿವೆ. ಸಮಯವಲ್ಲದ ಸಮಯದಲ್ಲಿ ಮಳೆ ಬಂದಿರುವುದು ರೈತರಿಗೆ ನೋವುಂಟು ಮಾಡಿದೆ. ಜೋರು ಚಳಿಯ ಜೊತೆಗೆ ಮಳೆಯು ಕೂಡ ಜೊತೆಯಾಗಿದ್ದು, ಅಲ್ಲೊಲ್ಲ ಕಲ್ಲೋಲ ಸೃಷ್ಟಿದೆ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಕಡೆಯ ಮಳೆಯ ಪ್ರಭಾವ ಜೋರಿದೆ. ಇಂದು (ಡಿಸೆಂಬರ್ 4) ಕೊಡಗಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇದಲ್ಲದೇ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಇದರ ಪರಿಣಾಮ ತಮಿಳುನಾಡು, ಕರ್ನಾಟಕ ಹಾಗೂ ಕೇರಳದಲ್ಲಿ ಮಳೆಯಾಗುತ್ತಿದೆ.
ಕರಾವಳಿ ಜಿಲ್ಲೆಗಳಲ್ಲಿ ಮಳೆ
ಫೆಂಗಲ್ ಪರಿಣಾಮದಿಂದ ಕರಾವಳಿ ಜಿಲ್ಲೆಗಳಲ್ಲೂ ಮಳೆ ಜೋರಾಗಿದೆ. ಡಿಸೆಂಬರ್ 2 ರಂದು ಮಳೆಯ ಪ್ರಮಾಣ ಜೋರಿದ್ದು ನಿನ್ನೆ (ಡಿಸೆಂಬರ್ 3) ವರುಣರಾಯ ಕೊಂಚ ಬಿಡುವು ನೀಡಿದ್ದ. ಇಂದು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನಲ್ಲೂ ಮಳೆ
ತಾಪಮಾನ ವಿಪರೀತ ಕುಸಿದಿರುವ ಕಾರಣ ಚಳಿಯಲ್ಲಿ ನಡುಗುತ್ತಿರುವ ಉತ್ತರ ಒಳನಾಡಿನ ಕೆಲ ಜಿಲ್ಲೆಗಳ ಜನರಿಗೆ ಮಳೆ ಇನ್ನಷ್ಟು ಚಳಿ ಹೆಚ್ಚುವಂತೆ ಮಾಡಿದೆ. ಇಂದು ಉತ್ತರ ಒಳನಾಡಿನ ರಾಯಚೂರು ಹಾಗೂ ಯಾದಗಿರಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ತಾಪಮಾನ ಇಳಿಕೆ ಹಾಗೂ ತೇವಾಂಶ ಕಡಿಮೆಯಾಗುವ ಕಾರಣ ಈ ಭಾಗದಲ್ಲಿ ಒಣಹವೆ ಕಾಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನಲ್ಲಿ ಚಳಿಯ ಜೊತೆ ಮಳೆ
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಳಿಯ ಜೊತೆಗೆ ಮಳೆಯೂ ಕೂಡ ಜೊತೆಯಾಗಿ, ಜನರನ್ನು ತಲ್ಲಣಗೊಳಿಸಿದೆ. ಬೆಂಗಳೂರಿನಲ್ಲಿ ಭಾರಿ ಚಳಿಯಿದ್ದು, ಜನರು ತತ್ತರಿಸಿದ್ದಾರೆ. ನಿನ್ನೆಯಂತೆ ಇಂದು ಕೂಡ ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗಲಿದೆ. ಕೊಡಗಿನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಸಿದೆ. ಚಿಕ್ಕಮಗಳೂರು, ಹಾಸನ, ಮೈಸೂರು, ಶಿವಮೊಗ್ಗ, ವಿಜಯನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇನ್ನೂ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಗನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿಂದು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಚಳಿ ಪ್ರಮಾಣ ಜೋರಿರಲಿದೆ. ಬೆಂಗಳೂರಿನಲ್ಲಿ ಸಂಪೂರ್ಣ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಹೆಚ್ಚು, ಮುನ್ನೆಚ್ಚರಿಕೆ ಮರೆಯದಿರಿ.