ಶ್ರೀಮುರಳಿ, ಪ್ರಶಾಂತ್ ನೀಲ್, ಡಾ ಸೂರಿ ಕಾಂಬಿನೇಷನ್‌ನ ಬಘೀರ ಯಾಕೆ ನೋಡ್ಬೇಕು? ಇಲ್ಲಿದೆ ಸಿನಿಮಾದ ಹೈಲೈಟ್ಸ್
ನಟ ಶ್ರೀಮುರಳಿ ಅಭಿನಯದ, ಡಾ. ಸೂರಿ ನಿರ್ದೇಶನದ ಬಘೀರ ಸಿನಿಮಾ ನಾಳೆ (ಅಕ್ಟೋಬರ್ 31) ತೆರೆ ಕಾಣುತ್ತಿದೆ. ಕನ್ನಡದಲ್ಲಿ ಬಿಡುಗಡೆಯಾಗುತ್ತಿರುವ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಈ ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದಾರೆ. ಬಘೀರ ನೋಡಬೇಕು ಅನ್ನೋದಕ್ಕೆ 5 ಕಾರಣಗಳಿವು.
ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ಬಘೀರ ನಾಳೆ (ಅಕ್ಟೋಬರ್ 31) ತೆರೆ ಮೇಲೆ ಬರುತ್ತಿದೆ. ಕಳೆದ ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಈ ಸಿನಿಮಾ ತುಂಬಾನೇ ಸದ್ದು ಮಾಡಿದ್ದು, ನಿರೀಕ್ಷೆ ಹುಟ್ಟುಹಾಕಿದೆ. ಮುರಳಿ ಈ ಸಿನಿಮಾದಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಶಾಂತ್ ನೀಲ್ ಈ ಸಿನಿಮಾಕ್ಕೆ ಚಿತ್ರಕಥೆ ಬರೆದಿದ್ದು, ಡಾ ಸೂರಿ ನಿರ್ದೇಶನ ಮಾಡಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಮೂಲಕ ಕನ್ನಡಿಗರ ಮನಗೆದ್ದ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಈ ಹಿಂದೆ ಉಗ್ರಂನಂತಹ ಹಿಟ್ ಸಿನಿಮಾ ನೀಡಿದ್ದ ಪ್ರಶಾಂತ್ ನೀಲ್ ಹಾಗೂ ಶ್ರೀಮುರಳಿ ಜೋಡಿ ಈಗ ಬಘೀರ ಮೂಲಕ ಮತ್ತೆ ಒಂದಾಗಿದ್ದು ಸಿನಿಮಾ ಬಿಡುಗಡೆಯಾಗಿ ಕನ್ನಡಿಗರು ಎದುರು ನೋಡುತ್ತಿದ್ದಾರೆ. ಮಾಸ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಮೇಕಿಂಗ್ ಮೂಲಕವೂ ಚಿತ್ರ ಗಮನ ಸೆಳೆದಿದೆ. ಟೀಸರ್, ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಬಘೀರ ಸಿನಿಮಾ ಯಾಕೆ ನೋಡಬೇಕು ಅನ್ನೋದಕ್ಕೆ ಇಲ್ಲಿದೆ 5 ಕಾರಣಗಳು.
ಉಗ್ರಂ ಬಳಿಕ ಒಂದಾದ ಪ್ರಶಾಂತ್ ನೀಲ್–ಮುರಳಿ
2014ರಲ್ಲಿ ಬಿಡುಗಡೆಯಾದ ಪ್ರಶಾಂತ್ ನೀಲ್, ಶ್ರೀಮುರಳಿ ಕಾಂಬಿನೇಷನ್‌ನ ಉಗ್ರಂ ಸಿನಿಮಾ ಕನ್ನಡ ಸಿನಿಮಾರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿತ್ತು. ಸಾಲು ಸಾಲು ಸಿನಿಮಾಗಳು ಸೋತು ನಿರಾಸೆಯಲ್ಲಿದ್ದ ರೋರಿಂಗ್‌ಸ್ಟಾರ್‌ಗೆ ಈ ಸಿನಿಮಾ ಒಂದು ದೊಡ್ಡ ಬ್ರೇಕ್ ನೀಡಿತ್ತು. ಈ ಸಿನಿಮಾವು ಕನ್ನಡಿಗರಿಗೆ ಸಖತ್ ಇಷ್ಟವಾಗಿತ್ತು. ಇದೀಗ ಮತ್ತೆ ಈ ಜೋಡಿ ಒಂದಾಗಿದ್ದು, ಪ್ರಶಾಂತ್ ನೀಲ್ ಕಥೆ, ಮುರಳಿ ಅಭಿನಯ ಮತ್ತೆ ತೆರೆ ಮೇಲೆ ಮ್ಯಾಜಿಕ್ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ಜನ ಕಾತರದಿಂದ ಕಾಯುತ್ತಿದ್ದಾರೆ. ಇದರೊಂದಿಗೆ ಡಾ ಸೂರಿ ನಿರ್ದೇಶನವೂ ಜೊತೆಯಾಗಿರುವುದು ನಿರೀಕ್ಷೆ ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ಖಡಕ್ ಲುಕ್‌ನಲ್ಲಿ ಶ್ರೀಮುರಳಿ
ಬಘೀರ ಸಿನಿಮಾಕ್ಕಾಗಿ ಶ್ರೀಮುರಳಿ ಸಾಕಷ್ಟು ದೇಹ ದಂಡಿಸಿದ್ದಾರೆ. ಬಘೀರನ ಪಾತ್ರಕ್ಕಾಗಿ 3 ವರ್ಷಗಳ ಕಾಲ ದೇಹವನ್ನು ಹುರಿಗೊಳಿಸಿ ಖಡಕ್ ಲುಕ್‌ನಲ್ಲಿ ತೆರೆ ಮೇಲೆ ಮಿಂಚಲಿದ್ದಾರೆ. ಮೂರು ವರ್ಷಗಳ ಕಾಲ ಬಿರಿಯಾನಿ, ತುಪ್ಪ, ಬೆಣ್ಣೆ ತಿನ್ನದೇ ಪಾತ್ರಕ್ಕಾಗಿ ದೇಹವನ್ನು ಸಜ್ಜುಗೊಳಿಸಿದ್ದಾರೆ. ಈ ಚಿತ್ರದಲ್ಲಿ ಮುರುಳಿ ದ್ವಿಪಾತ್ರದಲ್ಲಿ ನಟಿಸಿದ್ದು, ಕಾಪ್ ವೇದಾಂತ್ ಹಾಗೂ ರಗಡ್ ಬಘೀರ ಎರಡು ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಚಿತ್ರದಲ್ಲಿ ಮುರುಳಿ ಸೂಪರ್‌ಹೀರೊ ರೀತಿ ತೆರೆ ಮೇಲೆ ಮಿಂಚುವುದನ್ನು ನೋಡಲು ಬಘೀರ ನೋಡಬೇಕು.
ಡಾ ಸೂರಿ ದೃಷ್ಟಿಕೋನ
ಬಘೀರ ಸಿನಿಮಾ ಮೂಲಕ ಡಾ ಸೂರಿ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಲಾರ್ ಸಿನಿಮಾಕ್ಕೆ ಬರಹಗಾರರಾಗಿದ್ದ ಡಾ ಸೂರಿ ಹೊಂಬಾಳೆ ಫಿಲ್ಮ್ಸ್ ಜೊತೆ ಪಾಲುದಾರರಾಗಿದ್ದಾರೆ. ಸಲಾರ್‌ನಲ್ಲಿ ಇವರು ಸೃಷ್ಟಿಸಿದ್ದ ಬ್ಯಾಟ್‌ಮನ್‌ನಂತಹ ಪಾತ್ರವು ಜನರಿಗೆ ತುಂಬಾ ಇಷ್ಟವಾಗಿತ್ತು. ಬಘೀರದಲ್ಲೂ ಇಂತಹ ಪ್ರಯತ್ನಗಳು ಇರಬಹುದು ಎಂದು ಸಿನಿ ಪ್ರೇಕ್ಷಕರು ಅಂದುಕೊಳ್ಳುತ್ತಿದ್ದಾರೆ. ಸೂಪರ್‌ಹೀರೊ ಜಾನರ್‌ನೊಂದಿಗೆ ಭಾರತೀಯ ಸೊಗಡನ್ನು ಚಿತ್ರದಲ್ಲಿ ನಿರೀಕ್ಷಿಸಬಹುದು.
ಸೂಪರ್ ಹೀರೊ ಪರಿಕಲ್ಪನೆ
ಕನ್ನಡದಲ್ಲಿ ಸೂಪರ್ ಹೀರೊ ಪರಿಕಲ್ಪನೆಯ ಸಿನಿಮಾಗಳು ಬಂದಿರುವುದು ಕಡಿಮೆ ಅಂತಲೇ ಹೇಳಬಹುದು. ತೆಲುಗಿನ ಹನುಮಾನ್, ಮಲಯಾಳಂನ ಮಿನ್ನಲ್ ಮುರಳಿಯಂತಹ ಸಿನಿಮಾಗಳು ಭಾರತೀಯರಿಗೆ ಇಷ್ಟವಾಗಿದ್ದವು. ಇದೇ ಅದೇ ಸಾಲಿಗೆ ಬಘೀರ ಕೂಡ ಸೇರುವ ನಿರೀಕ್ಷೆಇದೆ.
ಕುತೂಹಲಕಾರಿ ಪ್ರಚಾರ ತಂತ್ರ
ಬಘೀರ ಸಿನಿಮಾದ ಪ್ರಚಾರಕ್ಕೆ ವಿಭಿನ್ನ ತಂತ್ರಗಳನ್ನು ಬಳಸಲಾಗಿದೆ. ಆದರೆ ಇಲ್ಲಿಯೂ ಕಥೆಯ ಅಂಶವನ್ನು ಬಿಟ್ಟಿಕೊಡದೇ ಪ್ರೇಕ್ಷಕರಲ್ಲಿ ಸಿನಿಮಾ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿವುದು ಸುಳ್ಳಲ್ಲ.