Bigg Boss Kannada: ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಭಾವುಕ; ಸುದೀಪ್ ಸರ್ ನಿಮ್ಮನ್ನು ಈ ರೀತಿ ನೋಡಲು ಆಗ್ತಿಲ್ಲ ಎಂದ ಫ್ಯಾನ್ಸ್
Bigg Boss Kannada Season 11: ಬಿಗ್ ಬಾಸ್ ವೇದಿಕೆಯಲ್ಲಿ ವಾರದ ಕಥೆ ಈ ಬಾರಿ ಕಿಚ್ಚನ ಜೊತೆಯೇ ನಡೆಯಲಿದೆ. ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯದಂತ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾಗದ ಭಾರ ಎಂದು ಬಿಗ್ ಬಾಸ್ ಹೇಳಿದ್ದಾರೆ
ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲು ಈ ಬಾರಿ ಮತ್ತೆ ಕಿಚ್ಚ ಸುದೀಪ್ ವೇದಿಕೆ ಮೇಲಿದ್ದಾರೆ. ಜನರೆಲ್ಲ ತುಂಬಾ ಕುತೂಹಲದಿಂದ ಈ ಬಾರಿ ಕಿಚ್ಚ ಬರ್ತಾರಾ? ಇಲ್ವಾ? ಎಂದು ಕಾಯುತ್ತಿದ್ದರು. ಆದರೆ ಇಂದು ಬೆಳಿಗ್ಗೆ ಕಿಚ್ಚ ಬರುತ್ತಾನೆ ಎಂದು ಕಲರ್ಸ್ ಕನ್ನಡ ಹಾಕಿದ ಪೋಸ್ಟರ್ ಮೂಲಕ ಪಕ್ಕ ಆಗಿತ್ತು. ಇದೀಗ ಬಿಡುಗಡೆಯಾದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ತಾಯಿಗೆ ಎಲ್ಲರೂ ನಮನ ಸಲ್ಲಿಸುತ್ತಿರುವ ದೃಶ್ಯ ಕಂಡುಬಂದಿದೆ. ಹಾಗೇ ವಾಸುಕಿ ವೈಭವ್ ಕೂಡ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಕಿಚ್ಚ ಸುದೀಪ್ ಅವರಿಗೆ ಸಾಂತ್ವನ ನೀಡಿದ್ದಾರೆ.
ಕಿಚ್ಚ ಭಾವುಕ
"ಪರಪಂಚ ನೀನೇ.. ನನ್ನ ಪರಪಂಚ ನೀನೇ" ಈ ಹಾಡನ್ನು ವಾಸುಕಿ ವೈಭವ್ ಲೈವ್‌ನಲ್ಲಿ ಹಾಡಿದ್ದಾರೆ. ವೇದಿಕೆಯ ಮೇಲೆ ಮೌನ ಕವಿದಿದೆ. ಬಿಗ್ ಬಾಸ್ ಸ್ಪರ್ಧಿಗಳೂ ಸಹ ಬೇಸರದಲ್ಲಿ ನಿಂತಿದ್ದಾರೆ. ಒಂದು ಕಡೆ ದೀಪಾವಳಿ ಸಂಭ್ರಮವಾದರೆ ಇನ್ನೊಂದು ಕಡೆ ಈ ರೀತಿಯಾಗಿ ದುಃಖ ಆವರಿಸಿದೆ. ಬಿಗ್ ಬಾಸ್ ಮನೆಯನ್ನು ಸಿಂಗಾರಗೊಳಿಸಿದ್ದರೂ ಕಿಚ್ಚನ ವೇದಿಕೆ ಮಾತ್ರ ತುಂಬಾ ಮೌನವಾಗಿದೆ. ಇನ್ನು ಆಡಿಯನ್ಸ್ ಕೂಡ ಈ ಬಾರಿ ಬಿಳಿ ಬಣ್ಣದ ಬಟ್ಟೆ ಧರಿಸಿ ಬಂದಿದ್ದಾರೆ.
ಹಿಂದಿನ ವಾರ ಸೃಜನ್ ಹಾಗೂ ಯೋಗರಾಜ್ ಭಟ್ ಅವರು ಪಂಚಾಯ್ತಿ ನಡೆಸಿಕೊಟ್ಟಿದ್ದರು. ಅದಕ್ಕೂ ಹಿಂದಿನ ವಾರ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಎಲ್ಲರಿಗೂ ಸುದೀಪ್ ಅವರ ತಾಯಿ ಮೃತರಾಗಿರುವ ಸುದ್ದಿ ಸಿಕ್ಕಿತ್ತು. ತಾಯಿಯನ್ನು ಕಳೆದುಕೊಂಡಿದ್ದರೂ ತಮ್ಮ ಕರ್ತವ್ಯ ನಿಭಾಯಿಸಿದ್ದೀರಿ ಎಂದು ಬಿಗ್ ಬಾಸ್ ಹೇಳಿದ್ದಾರೆ. “ಪ್ರೇಕ್ಷಕರನ್ನು ರಂಜಿಸುವ ಮಾಣಿಕ್ಯದಂತ ನಾಯಕನನ್ನು ಕರುನಾಡ ಮಡಿಲಿಗೆ ಹಾಕಿ, ತನ್ನ ಪ್ರೀತಿಯನ್ನು ಮನೆ ಮನೆಯ ಜೊತೆ ಹಂಚಿಕೊಂಡ ನಿಮ್ಮ ತಾಯಿಯ ಅಗಲಿಕೆ ಭರಿಸಲಾಗದ ಭಾರ” ಎಂದು ಬಿಗ್ ಬಾಸ್ ಹೇಳಿದ್ದಾರೆ.
ನೋವಿನಲ್ಲಿ ನಿಮ್ಮ ಜವಾಬ್ದಾರಿ ನಿಭಾಯಿಸೋ ನಿಮ್ಮ ಈ ಕಾರ್ಯಕ್ಕೆ ಯಾರು ಸರಿ ಸಾಟಿ ಇಲ್ಲ ಸರ್ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.
12 ಸ್ಪರ್ಧಿಗಳು ನಾಮಿನೇಟೆಡ್
ಇನ್ನು ಇದನ್ನು ಹೊರತುಪಡಿಸಿ ಆಟದ ವಿಚಾರಕ್ಕೆ ಬಂದರೆ ಹನ್ನೆರಡು ಜನ ನಾಮಿನೇಟ್ ಆಗಿದ್ದಾರೆ. ಇರೋ 14 ಜನರಲ್ಲಿ 12 ಮಂದಿ ನಾಮಿನೇಟೆಡ್; ಪಾರಾಗೋರು ಯಾರು? ಟಾಟಾ ಬೈ ಬೈ ಹೇಳೋರು ಯಾರು? ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇವತ್ತಿನ ಕಿಚ್ಚನ ಪಂಚಾಯಿತಿಗೆ ಕಾತುರದಿಂದ ಕಾಯುತ್ತಿದ್ದೇವೆ ಎಂದು ಸಾಕಷ್ಟು ಜನ ಹೇಳುತ್ತಿದ್ದಾರೆ.