ಕನ್ನಡ ಸುದ್ದಿ  /  Entertainment  /  Bigg Boss Show Telecasting In 7 Languages Including Hindi Kannada Tamil Telugu Malayalam Marathi Bangla Rsm

Bigg Boss: ಹಿಂದಿ ಬಿಟ್ರೆ ಕನ್ನಡದಲ್ಲೇ ಹೆಚ್ಚು; 7 ಭಾಷೆಗಳಲ್ಲಿ ಪ್ರಸಾರವಾಗ್ತಿದೆ ಬಿಗ್‌ ಬಾಸ್‌, ಡೀಟೇಲ್ಸ್‌ ಇಲ್ಲಿದೆ ನೋಡಿ ಸ್ವಾಮಿ

Bigg Boss: ಬಿಗ್‌ ಬಾಸ್‌ ಸೀಸನ್‌ 10 ಆರಂಭವಾಗಿದೆ. ಎಂದಿನಂತೆ ಈ ಬಾರಿ ಕೂಡಾ ಸುದೀಪ್‌ ಅವರೇ ಬಿಗ್‌ ಬಾಸ್‌ ನಿರೂಪಣೆ ಮಾಡುತ್ತಿದ್ದಾರೆ. ಸ್ಪರ್ಧಿಗಳಿಗೆ ಹೊಸ ಟಾಸ್ಕ್‌ ಶುರುವಾಗಿದೆ. ಪ್ರತಿದಿನ ರಾತ್ರಿ 9.30 ರಿಂದ 11 ಗಂಟೆವರೆಗೂ ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಪ್ರಸಾರವಾಗುತ್ತಿದೆ.

ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬಾಂಗ್ಲಾ ಸೇರಿ 7 ಭಾಷೆಗಳಲ್ಲಿ ಬಿಗ್‌ ಬಾಸ್‌ ಪ್ರಸಾರ
ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬಾಂಗ್ಲಾ ಸೇರಿ 7 ಭಾಷೆಗಳಲ್ಲಿ ಬಿಗ್‌ ಬಾಸ್‌ ಪ್ರಸಾರ (PC: Colors TV, Colors Kannada, Star Maa)

Bigg Boss: ಬಿಗ್‌ ಬಾಸ್‌ ಹಿನ್ನೆಲೆ ಬಗ್ಗೆ ನೋಡುವುದಾದರೆ ಭಾರತದಲ್ಲಿ ಮೊದಲು ಆರಂಭವಾಗಿದ್ದು 2006ರಲ್ಲಿ. ಸೋನಿ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮವನ್ನು ಮೊದಲ ಬಾರಿ ನಟ ಅರ್ಷದ್‌ ವರ್ಸಿ ನಡೆಸಿಕೊಟ್ಟಿದ್ದರು. ಹಿಂದಿಯಲ್ಲಿ ಇದುವರೆಗೂ 16 ಸೀಸನ್‌ಗಳು ಪ್ರಸಾರವಾಗಿದೆ. ಅದನ್ನು ಹೊರತುಪಡಿಸಿದರೆ ಕನ್ನಡದಲ್ಲಿ ಈಗ 10ನೇ ಸೀಸನ್‌ ಪ್ರಸಾರವಾಗುತ್ತಿದೆ. ಹಿಂದಿ, ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಬಾಂಗ್ಲಾ, ಮರಾಠಿ ಭಾಷೆಗಳಲ್ಲಿ ಕೂಡಾ ಬಿಗ್‌ ಬಾಸ್‌ ಪ್ರಸಾರವಾಗುತ್ತಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ.

  1. ಬಿಗ್‌ ಬಾಸ್‌ ಹಿಂದಿ

ಮೊದಲ ಸೀಸನ್‌ 2006ರಲ್ಲಿ ಪ್ರಸಾರವಾಯ್ತು ನಟ ಅರ್ಷದ್‌ ವರ್ಸಿ ಈ ಸೀಸನ್‌ ನಿರೂಪಣೆ ಮಾಡಿದ್ದರು. 2ನೇ ಸೀಸನ್‌ ಶಿಲ್ಪಾ ಶೆಟ್ಟಿ ಹಾಗೂ 3ನೇ ಸೀಸನ್‌ ಅಮಿತಾಬ್‌ ಬಚ್ಚನ್‌ ನಡೆಸಿಕೊಟ್ಟಿದ್ದರು. 4ನೇ ಸೀಸನ್‌ ಸಲ್ಮಾನ್ ಖಾನ್‌ ಹಾಗೂ 5ನೇ ಸೀಸನ್‌ ಸಲ್ಮಾನ್‌ ಹಾಗೂ ಸಂಜಯ್‌ ದತ್‌ ಜೊತೆ ಸೇರಿ ನಡೆಸಿಕೊಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೂ ಸಲ್ಮಾನ್‌ ಖಾನ್‌, ಹಿಂದಿ ಬಿಗ್‌ ಬಾಸ್‌ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಮೊದಲ ಸೀಸನ್‌ ಸೋನಿ ಲೈವ್‌ ಹಾಗೂ ನಂತರದ ಸೀಸನ್‌ಗಳು ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಹಿಂದಿಯಲ್ಲಿ ಇದುವರೆಗೂ 16 ಸೀಸನ್‌ಗಳು ಪ್ರಸಾರವಾಗಿದೆ. 17ನೇ ಸೀಸನ್‌ ಅಕ್ಟೋಬರ್‌ 15 ರಿಂದ ಆರಂಭವಾಗಲಿದೆ.

ಇದನ್ನು ಹೊರತುಪಡಿಸಿ ಹಿಂದಿಯಲ್ಲಿ ಹಲ್ಲಾ ಬೋಲ್‌ ಎಂಬ ಪ್ರತ್ಯೇಕ ಎಪಿಸೋಡ್‌ ಪ್ರಸಾರವಾಗಿತ್ತು. ಇದನ್ನು ಫರ್ಹಾ ಖಾನ್‌ ನಡೆಸಿಕೊಟ್ಟಿದ್ದರು. 2021 ಹಾಗೂ 2023ರಲ್ಲಿ ನಡೆದ ಒಟಿಟಿ ಬಿಗ್‌ಬಾಸ್‌ ಕಾರ್ಯಕ್ರಮವನ್ನು ಕ್ರಮವಾಗಿ ಕರಣ್‌ ಜೋಹರ್‌ ಹಾಗೂ ಸಲ್ಮಾನ್‌ ಖಾನ್‌ ನಿರೂಪಣೆ ಮಾಡಿದ್ದರು.

2. ಬಿಗ್‌ ಬಾಸ್‌ ಕನ್ನಡ

ಕನ್ನಡದಲ್ಲಿ ಬಿಗ್‌ ಬಾಸ್‌ ಮೊದಲ ಬಾರಿಗೆ ಪ್ರಸಾರವಾಗಿದ್ದು 2013ರಲ್ಲಿ. ಇದುವರೆಗೂ 9 ಸೀಸನ್‌ಗಳು ಪ್ರಸಾರವಾಗಿದ್ದು ಈಗ 10ನೇ ಸೀಸನ್‌ ನಡೆಯುತ್ತಿದೆ. ಮೊದಲು ಈಟಿವಿ ಕನ್ನಡ, ನಂತರ ಏಷ್ಯಾನೆಟ್‌ ಸುವರ್ಣ, ಕಲರ್ಸ್‌ ಸೂಪರ್‌ ಈಗ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಮೊದಲ ಸೀಸನ್‌ನಿಂದ ಇದುವರೆಗೂ ಬಿಗ್‌ ಬಾಸ್‌ ಕನ್ನಡ ಶೋವನ್ನು ಕಿಚ್ಚ ಸುದೀಪ್‌ ನಿರೂಪಣೆ ಮಾಡುತ್ತಿದ್ದಾರೆ.

2021ರಲ್ಲಿ ಬಿಗ್‌ ಬಾಸ್‌ ಮಿನಿ ಸೀಸನ್‌ ನಡೆದಿತ್ತು. ಇದನ್ನೂ ಸುದೀಪ್‌ ನಿರೂಪಣೆ ಮಾಡಿದ್ದರು. ನಂತರ 2022 ರಲ್ಲಿ ಒಟಿಟಿ ಬಿಗ್‌ ಬಾಸ್‌ ಪ್ರಸಾರವಾಗಿತ್ತು. ಇದರಲ್ಲಿದ್ದ ಕೆಲವು ಸ್ಪರ್ಧಿಗಳು ಸೀಸನ್‌ 9 ರಲ್ಲಿ ಕೂಡಾ ಭಾಗವಹಿಸಿದ್ದರು.

3. ಬಿಗ್‌ ಬಾಸ್‌ ತಮಿಳು

ತಮಿಳಿನಲ್ಲಿ ಬಿಗ್‌ ಬಾಸ್‌ ಮೊದಲ ಬಾರಿಗೆ 2017ರಲ್ಲಿ ಪ್ರಸಾರವಾಯ್ತು. ಇದುವರೆಗೂ 6 ಸೀಸನ್‌ಗಳು ಪ್ರಸಾರವಾಗಿದೆ. ಅಂದಿನಿಂದ ಇದುವರೆಗೂ ಖ್ಯಾತ ನಟ ಕಮಲ್‌ ಹಾಸನ್‌ ಈ ಶೋ ಹೊಣೆ ಹೊತ್ತಿದ್ದಾರೆ. ಎಲ್ಲಾ ಸೀಸನ್‌ಗಳು ಸ್ಟಾರ್‌ ವಿಜಯ ವಾಹಿನಿಯಲ್ಲಿ ಪ್ರಸಾರವಾಗಿದೆ. ಶೀಘ್ರದಲ್ಲೇ 7ನೇ ಸೀಸನ್‌ ಅನೌನ್ಸ್‌ ಆಗಲಿದೆ. ಕಮಲ್‌ ಹಾಸನ್‌ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಈ ಬಾರಿ ಕೂಡಾ ಅವರೇ ನಿರೂಪಣೆ ಮಾಡಲಿದ್ದಾರಾ ಅಥವಾ ಬೇರೆ ಯಾರಾದರೂ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರಾ ನೋಡಬೇಕು.

2022 ರಲ್ಲಿ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಗ್‌ ಬಾಸ್‌ ಅಲ್ಟಿಮೇಟ್‌ ಪ್ರಸಾರವಾಗಿತ್ತು. ಇದನ್ನು ಸಿಲಂಬರಸನ್‌ ನಿರೂಪಣೆ ಮಾಡಿದ್ದರು.

4. ಬಿಗ್‌ ಬಾಸ್‌ ತೆಲುಗು

ಬಿಗ್‌ ಬಾಸ್‌ ತೆಲುಗು ಮೊದಲ ಬಾರಿಗೆ 2017 ಜುಲೈನಲ್ಲಿ ಆರಂಭವಾಯ್ತು. ಮೊದಲ ಸೀಸನ್‌ ಜ್ಯೂನಿಯರ್‌ ಎನ್‌ಟಿಆರ್‌, ಎರಡನೇ ಸೀಸನ್‌ ನಾನಿ ನಡೆಸಿಕೊಟ್ಟಿದ್ದರು. 3ನೇ ಸೀಸನ್‌ನಿಂದ ಇದುವರೆಗೂ ಅಕ್ಕಿನೇನಿ ನಾಗಾರ್ಜುನ ನಿರೂಪಣೆ ಮಾಡುತ್ತಿದ್ದಾರೆ. ಇಲ್ಲಿವರೆಗೂ 6 ಸೀಸನ್‌ಗಳು ಪ್ರಸಾರವಾಗಿದ್ದು ಸೀಸನ್‌ 7 ನಡೆಯುತ್ತಿದೆ. ಸೆಪ್ಟೆಂಬರ್‌ 3 ರಿಂದ ಆರಂಭವಾಗಿದೆ. ಸ್ಟಾರ್‌ ಮಾ ವಾಹಿನಿಯಲ್ಲಿ ಬಿಗ್‌ ಬಾಸ್‌ ಪ್ರಸಾರವಾಗುತ್ತಿದೆ.

ಇದರ ಜೊತೆಗೆ 2022ರಲ್ಲಿ ಬಿಗ್‌ ಬಾಸ್‌ ನಾನ್‌ ಸ್ಟಾಪ್‌ ಶೋ ಡಿಸ್ನಿ ಹಾಟ್‌ ಸ್ಟಾರ್‌ನಲ್ಲಿ ಪ್ರಸಾರವಾಗಿತ್ತು. ಇದನ್ನೂ ನಾಗಾರ್ಜುನ ಹೋಸ್ಟ್‌ ಮಾಡಿದ್ದರು.

5. ಬಿಗ್‌ ಬಾಸ್‌ ಮಲಯಾಳಂ

2018 ರಲ್ಲಿ ಮಲಯಾಳಂನಲ್ಲಿ ಮೊದಲ ಬಾರಿಗೆ ಬಿಗ್‌ ಬಾಸ್‌ ಶುರುವಾಯ್ತು. ಇದುವರೆಗೂ ಮಲಯಾಳಂನಲ್ಲಿ 5 ಸೀಸನ್‌ಗಳು ಪ್ರಸಾರವಾಗಿದ್ದು ಖ್ಯಾತ ನಟ ಮೋಹನ್‌ ಲಾಲ್‌ ನಿರೂಪಣೆ ಮಾಡುತ್ತಿದ್ದಾರೆ. ಏಷ್ಯಾನೆಟ್‌ ವಾಹಿನಿಯಲ್ಲಿ ಎಲ್ಲಾ ಸೀಸನ್‌ಗಳು ಪ್ರಸಾರವಾಗಿದೆ.

6. ಬಿಗ್‌ ಬಾಸ್‌ ಮರಾಠಿ

ಮರಾಠಿಯಲ್ಲಿ ಇದುವರೆಗೂ 3 ಸೀಸನ್‌ ಪ್ರಸಾರವಾಗಿದ್ದು ಸದ್ಯಕ್ಕೆ 4ನೇ ಶೋ ನಡೆಯುತ್ತಿದೆ. ಮೊದಲ ಬಾರಿಗೆ 2018 ರಲ್ಲಿ ಮರಾಠಿ ಬಿಗ್‌ ಬಾಸ್‌ ಆರಂಭವಾಗಿತ್ತು. ಕಲರ್ಸ್‌ ಮರಾಠಿಯಲ್ಲಿ ಪ್ರಸಾರವಾಗುತ್ತಿರುವ ಮರಾಠಿ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ಖ್ಯಾತ ನಿರ್ಮಾಪಕ, ನಿರ್ದೇಶಕ ಮಹೇಶ್‌ ಮಂಜ್ರೇಕರ್‌ ನಡೆಸಿಕೊಡುತ್ತಿದ್ದಾರೆ.

7. ಬಿಗ್‌ ಬಾಸ್‌ ಬಾಂಗ್ಲಾ

2013 ರಲ್ಲಿ ಆರಂಭವಾದ ಬಾಂಗ್ಲಾ ಬಾಂಗ್ಲಾ ಬಿಗ್‌ ಬಾಸ್‌ ಇದುವರೆಗೂ 2 ಸೀಸನ್‌ ಪ್ರಸಾರವಾಗಿದೆ ಅಷ್ಟೇ. 2016ರ ನಂತರ ಮತ್ತೆ ಮೂರನೇ ಸೀಸನ್‌ ಶುರುವಾಗಿಲ್ಲ. ಮೊದಲ ಸೀಸನ್‌ ಈಟಿವಿ ಬಾಂಗ್ಲಾದಲ್ಲಿ ಪ್ರಸಾರವಾಗಿತ್ತು. ಇದನ್ನು ಖ್ಯಾತ ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ ನಡೆಸಿಕೊಟ್ಟಿದ್ದರು. ಕಲರ್ಸ್‌ ಬಾಂಗ್ಲಾದಲ್ಲಿ ಪ್ರಸಾರವಾಗಿದ್ದ ಎರಡನೇ ಸೀಸನ್‌ನ್ನು ನಟ ಜಿತೇಂದ್ರ ಮದ್ನಾನಿ ನಡೆಸಿಕೊಟ್ಟಿದ್ದರು.

ಕನ್ನಡ ಬಿಗ್‌ ಬಾಸ್‌ ಈ ಬಾರಿಯ ಹೈಲೈಟ್ಸ್‌

  • 17 ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸಿದ್ದಾರೆ.
  • 6 ಸ್ಪರ್ಧಿಗಳು ಪೆಂಡಿಂಗ್‌ ಲಿಸ್ಟ್‌ನಲ್ಲಿದ್ದು ಕೆಲವೊಂದು ಷರತ್ತುಗಳ ಅನ್ವಯ ದೊಡ್ಮನೆ ಪ್ರವೇಶಿಸಿದ್ದಾರೆ.
  • ಈ ಬಾರಿ ಓಟಿಂಗ್‌ ಮೂಲಕ ಸ್ಪರ್ಧಿಗಳ ಆಯ್ಕೆ ಮಾಡಲಾಗಿತ್ತು.
  • ಜಿಯೋ ಸಿನಿಮಾದಲ್ಲಿ ದಿನದ 24 ಗಂಟೆಯೂ ಶೋ ಲಭ್ಯವಿದೆ.
  • ಆದಂ ಪಾಷಾ ನಂತರ ಮತ್ತೊಬ್ಬರು ಟ್ರಾನ್ಸ್‌ಜೆಂಡರ್‌ ನೀತು ವನಜಾಕ್ಷಿ ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದಾರೆ.
  • ಇಬ್ಬರು ಎನ್‌ಆರ್‌ಐಗಳು ಈ ಬಾರಿ ಸ್ಪರ್ಧಿಗಳಾಗಿ ಭಾಗವಹಿಸಿದ್ದಾರೆ.
  • ಮೊದಲ ಬಾರಿಗೆ ಶಾಸಕರೊಬ್ಬರು ಅತಿಥಿಯಾಗಿ ಬಿಗ್‌ ಬಾಸ್‌ ಮನೆಗೆ ಬಂದು ಹೋಗಿದ್ದಾರೆ.
  • ಇನ್ನೊವೇಟಿವ್‌ ಫಿಲ್ಮ್‌ ಸಿಟಿಯಿಂದ ಬಿಗ್‌ ಬಾಸ್‌ ಮನೆ ಬೆಂಗಳೂರು ಮೈಸೂರು ರಸ್ತೆಯ ರಾಮೋಹಳ್ಳಿಯ ದೊಡ್ಡ ಆಲದ ಮರಕ್ಕೆ ಶಿಫ್ಟ್‌ ಆಗಿದೆ.
  • ಸ್ಪರ್ಧಿಗಳು ಈ ಬಾರಿ 100 ದಿನಗಳು ದೊಡ್ಮನೆಯಲ್ಲಿ ಉಳಿಯಲಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ