ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಡಿವೋರ್ಸ್ ಅಂದದ್ಯಾರು? ಇವರಿಬ್ಬರು ಮಣಿರತ್ನಂ ಜತೆ ಹೊಸ ಸಿನಿಮಾ ಮಾಡ್ತಾರಂತೆ!
ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿವಾಹ ವಿಚ್ಛೇದನದ ಕುರಿತು ವದಂತಿ ಹೆಚ್ಚುತ್ತಿರುವ ಸಮಯದಲ್ಲಿ ಇವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಹೊಸ ಸುದ್ದಿ ಬಂದಿದೆ. ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಒಳಗೊಂಡ ಹಿಂದಿ ಸಿನಿಮಾ ಮಾಡಲು ಮುಂದಾಗಿದ್ದಾರಂತೆ.
ಕಳೆದ ಹಲವು ತಿಂಗಳಿನಲ್ಲಿ ಬಾಲಿವುಡ್ನಲ್ಲಿ ಹೆಚ್ಚು ಸದ್ದು ಮಾಡಿದ್ದು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಡಿವೋರ್ಸ್ ವದಂತಿ. ನಮ್ಮ ಕರಾವಳಿ ಹುಡುಗಿಗೂ ಬಚ್ಚನ್ ಕುಟುಂಬಕ್ಕೂ ಸರಿ ಹೋಗ್ತಾ ಇಲ್ವಂತೆ, ಇವರಿಬ್ಬರೂ ದೂರವಾಗ್ತರಂತೆ ಎಂಬ ಗುಸು ಸಣ್ಣದಾಗಿ ಹರಡಿ ದೊಡ್ಡದಾಗಿ ಹಬ್ಬಿದರೂ ಬಚ್ಚನ್ ಕುಟುಂಬ ಈ ಕುರಿತು ತುಟಿಕ್ ಪಿಟಿಕ್ ಎಂದಿಲ್ಲ. ಎಲ್ಲವೂ ಸರಿಯಾಗಿರುತ್ತಿದ್ದರೆ "ನಮ್ಮ ನಡುವೆ ಅಂತಹದ್ದೇನೂ ಇಲ್ಲ, ನಾವು ಒಟ್ಟಿಗೆ ಇದ್ದೇವೆ" ಎಂದು ವಿವಿಧ ಕಾರ್ಯಕ್ರಮಗಳಲ್ಲಿ ಆತ್ಮೀಯವಾಗಿ ತೋರ್ಪಡಿಸಿಕೊಳ್ಳಬಹುದಿತ್ತು. ಎಲ್ಲವೂ ಸರಿಯಾಗಿರದೆ ಇದ್ದರೂ ಸೂಚನೆ ನೀಡಬಹುದಿತ್ತು. ಆದರೆ, ಇಂತಹ ವರದಿಗಳ ಕುರಿತು ಬಚ್ಚನ್ ಕುಟುಂಬ ಗಪ್ಚುಪ್ ಆಗಿದ್ದರು. ಆದರೆ, ಐಶ್ವರ್ಯಾ ರೈ ತನ್ನ ಮಗಳ ಜತೆ ಮಾತ್ರ ಕಾಣಿಸಿಕೊಳ್ಳುತ್ತಿರುವುದು ಹೆಚ್ಚುತ್ತಿದ್ದಂತೆ "ಐಶ್ವರ್ಯಾ ರೈ ಮತ್ತು ಅಭಿಷೇಕ್ ನಡುವೆ ಸಮ್ಥಿಂಗ್ ಈಸ್ ರಾಂಗ್" ಎಂದು ಬಹುತೇಕರು ಅಂದಾಜಿಸಿದ್ದರು.
ಆದರೆ, ಇತ್ತೀಚಿನ ವರದಿ ಇವರಿಬ್ಬರ ಸಂಬಂಧದ ಕುರಿತು ಬೇರೊಂದು ದಿಕ್ಕನ್ನು ತೋರಿಸುತ್ತಿದೆ. ಖ್ಯಾತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರು ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಒಳಗೊಂಡ ಹಿಂದಿ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ಮಣಿ ಸರ್ ಐಶ್ವರ್ಯಾ ಮತ್ತು ಅಭಿಷೇಕ್ ಜತೆ ಮೂರನೇ ಪ್ರಾಜೆಕ್ಟ್ ಮಾಡಲು ಬಹುದಿನದಿಂದ ಕಾಯುತ್ತಿದ್ದರು. ಈಗ ಅಂತಿಮವಾಗಿ ಇವರಿಬ್ಬರನ್ನು ಒಳಗೊಂಡ ತಂಡದ ಜತೆ ಏನೋ ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ" ಎಂದು ಝೂಮ್ ಟಿವಿಗೆ ಮೂಲಗಳು ತಿಳಿಸಿವೆ.
ಈ ಹಿಂದೆ ಮಣಿರತ್ನಂ ಜತೆ ಎರಡು ಬಾರಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜತೆಯಾಗಿ ನಟಿಸಿದ್ದರು. 2007ರಲ್ಲಿ ಮಣಿರತ್ನಂ ನಿರ್ದೇಶನದ ಗುರು ಸಿನಿಮಾದಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಜತೆಯಾಗಿ ನಟಿಸಿದರು. ನಂತರ ಅವರು ರಾವಣ (2010) ಸಿನಿಮಾದಲ್ಲೂ ಜತೆಯಾಗಿ ನಟಿಸಿದ್ದರು. ಸದ್ಯದ ವರದಿಗಳು ನಿಜವೇ ಆಗಿದ್ದರೆ ಅಭಿಷೇಕ್ ಅವರು ಮಣಿರತ್ನಂ ಜತೆಗೆ ನಾಲ್ಕನೇ ಸಿನಿಮಾ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಯುವ (2004) ಸಿನಿಮಾದಲ್ಲಿ ಅಭಿಷೇಕ್ ಅವರು ಮಣಿರತ್ನಂ ಜತೆಗೆ ಕೆಲಸ ಮಾಡಿದ್ದರು.
"ಅವರು ಮೊದಲ ಬಾರಿಗೆ ಯುವಾ ಚಿತ್ರಕ್ಕೆ ಸಹಿ ಹಾಕಲು ನಮ್ಮ ಮನೆಗೆ ಬಂದಾಗ, ಅವರು ಅಪ್ಪ ( ಅಮಿತಾಬ್ ಬಚ್ಚನ್ಗೆ ) ಸಹಿ ಹಾಕಲು ಬಂದಿದ್ದಾರೆ ಎಂದು ನಾನು ಭಾವಿಸಿದೆವು. ನಾನೇ ನಟಿಸಲು ಬಂದಿದ್ದೇನೆ ಎಂದಾಗ ಖುಷಿಯಾಯಿತು. ಅವನು ತನ್ನ ಸಿನಿಮಾದಲ್ಲಿ ನಟಿಸಿದ್ದಾನೆ ಎಂದು ನಾನು ಹೆಮ್ಮೆ ಪಡುತ್ತೇನೆ" ಎಂದು ಮಣಿರತ್ನಂ ಹಿಂದೊಮ್ಮೆ ಹೇಳಿದ್ದರು.
ಅಭಿಷೇಕ್ ಮತ್ತು ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನದ ಬಗ್ಗೆ ವದಂತಿಗಳು ಇನ್ನೂ ಕಡಿಮೆಯಾಗಿಲ್ಲ. ಜುಲೈನಲ್ಲಿ ಅಂಬಾನಿ ಮದುವೆಗೆ ಇವರಿಬ್ಬರು ಪ್ರತ್ಯೇಕವಾಗಿ ಆಗಮಿಸಿದಾಗಲೇ ವದಂತಿಗಳು ಇನ್ನಷ್ಟು ಹೆಚ್ಚಾಗಿದ್ದವು. ಗ್ರೇ ಡಿವೋರ್ಸ್ ಕುರಿತಾದ ಲೇಖನವನ್ನು ಅಭಿಷೇಕ್ ಬಚ್ಚನ್ ಲೈಕ್ ಮಾಡಿದ್ದು ಈ ವದಂತಿಯ ಅಗ್ಗಿಷ್ಟಿಕೆಗೆ ತುಪ್ಪ ಸುರಿಯಿತು.
ಇನ್ಸ್ಟಾಗ್ರಾಂನಲ್ಲಿ ಅಮಿತಾಬ್ ಬಚ್ಚನ್ ಅವರು ಐಶ್ವರ್ಯಾ ರೈ ಅವರನ್ನು ಅನ್ಫಾಲೋ ಮಾಡಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸಲಾಯಿತು. ಆರ್ಚೀಸ್ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಆಗಮಿಸಿದಾಗ ಐಶ್ವರ್ಯಾ ರೈ ಕಡೆಗೆ ಅವರು ಆತ್ಮೀಯ ದೃಷ್ಟಿ ಬೀರಿಲ್ಲ ಎಂದು ನೆಟ್ಟಿಗರು ಚರ್ಚೆ ಮಾಡಿದರು. ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಭಿಷೇಕ್ ಬಚ್ಚನ್ ವೆಡ್ಡಿಂಗ್ ರಿಂಗ್ ಧರಿಸಿಲ್ಲ ಎಂದು ಇನ್ನು ಕೆಲವರು ಇವರ ಡಿವೋರ್ಸ್ ವಿಚಾರ ಚರ್ಚಿಸಿದ್ದಾರೆ.
ಐಶ್ವರ್ಯಾ ರೈ ಅವರು ತನ್ನ ತಾಯಿ ವೃಂದಾ ರೈ ಮತ್ತು ಮಗಳು ಆರಾಧ್ಯ ಜತೆಗೆ ತನ್ನ 50ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಬಚ್ಚನ್ ಕುಟುಂಬ ಭಾಗವಹಿಸಿರಲಿಲ್ಲ. ಐಶ್ವರ್ಯಾ ರೈ ಹುಟ್ಟುಹಬ್ಬದ ಸಮಯದಲ್ಲಿ ಅಭಿಷೇಕ್ ಬಚ್ಚನ್ ಕೇವಲ "ಹ್ಯಾಪಿ ಬರ್ತ್ಡೇ! ಎಂದು ವಿಶ್ ಮಾಡಿದ್ದರು. ಪತ್ನಿಗೆ ಇಷ್ಟೊಂದು ನೀರಸ ವಿಶ್ ಮಾಡಿದ್ದು ಗುಸುಗುಸು ಹೆಚ್ಚಿಸಿತು. ಹೀಗೆ ಇವರಿಬ್ಬರು ದೂರವಾಗಿದ್ದಾರೆ ಎಂದು ನಾನಾ ಕಾರಣಗಳನ್ನು ಇಟ್ಟುಕೊಂಡು ಚರ್ಚಿಸಲಾಗುತ್ತಿದೆ.