Ranveer Singh: ಡೀಪ್‌ಫೇಕ್ ವಿಡಿಯೋ ಸೃಷ್ಟಿಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ ಬಾಲಿವುಡ್ ನಟ ರಣವೀರ್ ಸಿಂಗ್
Ranveer Singh files FIR: ತನ್ನ ವಿಡಿಯೋವನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸುವ ಮತ್ತು ಕಾಂಗ್ರೆಸ್‌ಗೆ ಮತ ನೀಡಿ ಎಂದು ಸೂಚಿಸುವ ಡೀಪ್‌ಫೇಕ್ ವಿಡಿಯೋ ಸೃಷ್ಟಿಸಿದವರ ವಿರುದ್ಧ ಬಾಲಿವುಡ್ ನಟ ರಣವೀರ್ ಸಿಂಗ್ ಪೊಲೀಸ್ ದೂರು ದಾಖಲಿಸಿದ್ದಾರೆ.

ಬೆಂಗಳೂರು: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ತಮ್ಮ ಎಐ ಡೀಪ್‌ಫೇಕ್ ವೀಡಿಯೊವನ್ನು ಪ್ರಚಾರ ಮಾಡುತ್ತಿದ್ದ ಸೋಷಿಯಲ್ ಮೀಡಿಯಾ ಹ್ಯಾಂಡಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಕುರಿತು ರಣವೀರ್ ಸಿಂಗ್ ಅವರ ವಕ್ತಾರರು ಮಾಹಿತಿ ನೀಡಿದ್ದಾರೆ. "ಸೈಬರ್ ಕ್ರೈಮ್ ಸೆಲ್ ಮೂಲಕ ಈ ವಿಡಿಯೋ ರಚಿಸಿದವರ ಪತ್ತೆಗಾಗಿ ಮತ್ತು ಹೆಚ್ಚಿನ ತನಿಖೆಯ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ" ಎಂದು ವಕ್ತಾರರು ಮಾಹಿತಿ ನೀಡಿದೆ. ಕಳೆದ ಕೆಲವು ದಿನಗಳಿಂದ ಈ ತಿರುಚಿದ ವಿಡಿಯೋ ವಿವಿಧ ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗಿತ್ತು. ಇದೀಗ ತನ್ನ ವಿಡಿಯೋ ಬಳಸಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲು ಮುಂದಾದವರ ವಿರುದ್ಧ ದೂರು ದಾಖಲಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಇತ್ತೀಚೆಗೆ ವಾರಣಾಸಿಗೆ ರಣವೀರ್ ಸಿಂಗ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸುದ್ದಿ ಸಂಸ್ಥೆ ಎಎನ್‌ಐಗೆ ಸಂದರ್ಶನ ನೀಡಿದ್ದರು. ಈ ರಿಯಲ್ ವಿಡಿಯೋವನ್ನೇ ಬಳಸಲಗಿದೆ. ಆದರೆ, ಇದಕ್ಕೆ ಎಐ ಆಧರಿತ ಟೂಲ್ ನೆರವಿನಿಂದ ನಕಲಿ ಆಡಿಯೋವನ್ನು ಜೋಡಿಸಲಾಗಿದೆ. ಈ ಡೀಪ್‌ಫೇಕ್ ವಿಡಿಯದಲ್ಲಿ ರಣವೀರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನಿರುದ್ಯೋಗ ಮತ್ತು ಹಣದುಬ್ಬರದ ಕಾರಣಕ್ಕಾಗಿ ಟೀಕಿಸುವಂತೆ ತೋರಿಸಲಾಗಿದೆ. ವಿಡಿಯೋದ ಕೊನೆಯಲ್ಲಿ "ಓಟ್ ಫಾರ್ ಕಾಂಗ್ರೆಸ್" ಎಂಬ ಸಂದೇಶವೂ ಇದೆ.
ರಣವೀರ್ ಸಿಂಗ್ ಅವರು ಇತ್ತೀಚೆಗೆ ವಾರಾಣಾಸಿಯ ಗಂಗಾದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದರು. ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಆಯೋಜಿಸಿದ ಈ ಶೋ ಬಳಿಕ ಬದಲಾದ ವಾರಣಸಿ ಬಗ್ಗೆ ರಣವೀರ್ ಸಿಂಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಜತೆಗೆ, ಈ ನಗರದ ಜತೆಗಿರುವ ದೈವಿಕ ಅನುಭವಗಳನ್ನೂ ಅವರು ಹಂಚಿಕೊಂಡಿದ್ದರು. ಇದೇ ವಿಡಿಯೋಗೆ ಬೇರೆ ಧ್ವನಿಯನ್ನು ಜೋಡಿಸಿ ಡೀಪ್‌ಫೇಕ್ ವಿಡಿಯೋ ರಚಿಸಲಾಗಿತ್ತು. ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬಳಿಕ ರಣವೀರ್ ಸಿಂಗ್ ಅವರು ತನ್ನ ಇನ್‌ಸ್ಟಾಗ್ರಾ ಸ್ಟೋರಿಯಲ್ಲಿ "ಸ್ನೇಹಿತರೇ, ಡೀಪ್‌ಫೇಕ್ ಕುರಿತು ಜಾಗೃತರಾಗಿರಿ" ಎಂದು ಪೋಸ್ಟ್ ಮಾಡಿದ್ದಾರೆ.
ರಣವೀರ್ ಸಿಂಗ್ ಅವರ ಮುಂದಿನ ಸಿನಿಮಾಗಳು
ರೋಹಿತ್ ಶೆಟ್ಟಿಯವರ ಮುಂದಿನ ಸಿನಿಮಾ ಸಿಂಗಂ ಎಗೈನ್‌ನಲ್ಲಿ ರಣವೀರ್ ಸಿಂಗ ಅವರು ಸಿಂಬಾ ಆಗಿ ಕಾಣಿಸಲಿದ್ದಾರೆ. ಈ ಸಿನಿಮಾದಲ್ಲಿ ಅಜಯ್ ದೇವಗನ್, ಅಕ್ಷಯ್ ಕುಮಾರ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್ ಕೂಡ ನಟಿಸಿದ್ದಾರೆ. ಫಾರ್ಹನ್ ಅಕ್ತಾರ್ ಅವರ ಡಾನ್ 3ಯಲ್ಲೂ ರಣವೀರ್ ಕಾಣಿಸಲಿದ್ದಾರೆ. ಈ ಸಿನಿಮಾ 2025ಕ್ಕೆ ಬಿಡುಗಡೆಯಾಗಲಿದೆ.
ಕೊನೆಯದಾಗಿ ರಣವೀರ್ ಅವರು ಕರಣ್ ಜೋಹರ್ ನಿರ್ದೇಶಣದ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮದಲ್ಲಿ ಆಲಿಯಾ ಭಟ್, ಧರ್ಮೇಂದ್ರ, ಜಯಾ ಬಚ್ಚನ್, ಶಬನಾ ಆಜ್ಮಿ ಮತ್ತು ಇತರರು ನಟಿಸಿದ್ದರು.
ಡೀಪ್‌ಫೇಕ್ ಎಂದರೇನು?
ನಕಲಿ ಕಂಟೆಂಟ್ ರಚನೆಯಂತೆ ನಕಲಿ ವಿಡಿಯೋ ರಚಿಸಲು ಮೆಷಿನ್ ಲರ್ನಿಂಗ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ವಿಷುಯಲ್ ಮತ್ತು ಆಡಿಯೋ ಕಂಟೆಂಟ್ ರಚಿಸಲಾಗುತ್ತದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಥವಾ ಎಐ ಬಳಸಿ ಹೊಸ ವಿಡಿಯೋ ಅಥವಾ ಆಡಿಯೋ ರಚಿಸಲಾಗುತ್ತದೆ. ರಣವೀರ್ ಸಿಂಗ್ ಪ್ರಕರಣದಲ್ಲಿ ಒರಿಜಿನಲ್ ವಿಡಿಯೋವನ್ನು ಉಳಿಸಿಕೊಂಡು ಕೃತಕ ಆಡಿಯೋ ಜೋಡಿಸಲಾಗಿತ್ತು. ಅದು ಅಸಲಿ ಆಡಿಯೋದಂತೆ ಮತ್ತು ರಣವೀರ್ ಸಿಂಗ್ ಅವರ ತುಟಿ ಚಲನೆಗೆ ಹೊಂದುವಂತೆ ಮಾಡಲಾಗಿತ್ತು.

ವಿಭಾಗ