Hina Khan: ಮುಟ್ಟಿದರೆ ಕೂದಲು ಉದುರುತ್ತದೆ, ಸ್ವತಃ ತಲೆ ಬೋಳಿಸಿಕೊಂಡ್ರು ಹಿನಾ ಖಾನ್; ಎದೆ ಕ್ಯಾನ್ಸರ್ ವಿರುದ್ಧ ನಟಿಯ ಹೋರಾಟ
Actress Hina Khan: ಹಿಂದಿ ಕಿರುತೆರೆ ನಟಿ ಹಿನಾ ಖಾನ್ ಎದೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯಿಂದ ಇವರ ಕೂದಲು ಹಿಡಿಹಿಡಿಯಾಗಿ ಉದುರುತ್ತಿದೆ. ಪ್ರತಿದಿನ ಉದುರುವ ಕೂದಲು ಅತೀವ ನೋವು, ಹಿಂಸೆ ನೀಡುತ್ತದೆ. ಇದೇ ಕಾರಣಕ್ಕೆ ತನ್ನ ಕೂದಲನ್ನು ತಾನೇ ಬೋಳಿಸಿಕೊಂಡಿದ್ದಾರೆ.
ಬೆಂಗಳೂರು: ಕ್ಯಾನ್ಸರ್ ಚಿಕಿತ್ಸೆ ಅತೀವ ನೋವುಂಟುಮಾಡುವ ಸಮಯ. ಕಿಮೋಥೆರಪಿ, ಔಷಧಗಳು ಇತ್ಯಾದಿಗಳಿಂದ ಚಿಕಿತ್ಸೆ ಪಡೆಯುವವರ ಕೂದಲುಗಳು ಉದುರುತ್ತವೆ. ಮೂರನೇ ಹಂತದ ಎದೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಕಿರುತೆರೆ ನಟಿ ಹಿನಾ ಖಾನ್‌ಗೂ ಪ್ರತಿನಿತ್ಯ ಹಿಡಿಹಿಡಿ ಕೂದಲು ಉದುರುವುದನ್ನು ನೋಡಿ ಬೇಸರ, ಒತ್ತಡ, ಹಿಂಸೆ ಉಂಟಾಗುತ್ತಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ತನ್ನ ಕೂದಲನ್ನು ಬೋಳಿಸಿಕೊಂಡಿದ್ದಾರೆ. ತನ್ನ ತಲೆ ಬೋಳಿಸಿಕೊಳ್ಳುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಕಿರುತೆರೆ ನಟಿ ಹಿನಾ ಖಾನ್ ಅವರು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕುರಿತು ಈ ಹಿಂದೆಯೇ ಘೋಷಿಸಿಕೊಂಡಿದ್ದರು. ಇತ್ತೀಚೆಗೆ ಇವರು ತನ್ನ ತಲೆಕೂದಲನ್ನು ತಾನೇ ಸ್ವತಃ ಬೋಳಿಸಿಕೊಳ್ಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎದೆ ಕ್ಯಾನ್ಸರ್ ಹೊಂದಿರುವ ಇವರು ತಲೆಯ ಕೂದಲನ್ನು ಏಕೆ ಬೋಳಿಸಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿದೆ. ಇದಕ್ಕೆ ಕಾರಣವಾದ ಅಂಶಗಳನ್ನು ಇದೇ ವಿಡಿಯೋದಲ್ಲಿ ನಟಿ ಹಂಚಿಕೊಂಡಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಯ ಪರಿಣಾಮ ಪ್ರತಿನಿತ್ಯ ರಾಶಿರಾಶಿ ಕೂದಲು ಉದುರುವ ದೃಶ್ಯವು ನನಗೆ ಅತೀವ ನೋವು ಮತ್ತು ಒತ್ತಡ ಉಂಟು ಮಾಡುತ್ತಿದೆ. ಇದೇ ಕಾರಣಕ್ಕೆ ತಲೆಯನ್ನು ಬೋಳಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ತನ್ನ ದಿಂಬು ಮತ್ತು ಬಟ್ಟೆಯ ಮೇಲೆ ಕೂದಲುಗಳು ಬಿದ್ದಿರುವ ದೃಶ್ಯವನ್ನೂ ವಿಡಿಯೋದಲ್ಲಿ ತೋರಿಸಿದ್ದಾರೆ.
"ಬಂದಿರುವ ಕಾಯಿಲೆಯನ್ನು ಒಪ್ಪಿಕೊಂಡರೆ ಮಾತ್ರ ಇದರ ವಿರುದ್ಧ ಗೆಲುವು ಪಡೆಯಬಹುದು. ನಾನು ನನ್ನ ಯುದ್ಧದ ಗುರುತುಗಳನ್ನು ಸ್ವೀಕರಿಸಿಕೊಳ್ಳುತ್ತಿದ್ದೇನೆ. ನೀವು ನಿಮ್ಮನ್ನು ಹಗ್ ಮಾಡಿಕೊಂಡರೆ ನೀವು ಚೇತರಿಕೆಯ ಕಡೆಗೆ ಹೆಜ್ಜೆ ಹಾಕುವಿರಿ. ಕೂದಲು ಪ್ರತಿನಿತ್ಯ ಉದುರುವುವುದನ್ನು ನೋಡಲು ಬಯಸುವುದಿಲ್ಲ. ಅದು ಒತ್ತಡದಿಂದ ಕೂಡಿರುತ್ತದೆ" ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಪ್ರತಿನಿತ್ಯ ಕೂದಲು ಉದುರುವುದನ್ನು ನೋಡಿದಾಗ ಹೇಗೆ ಒತ್ತಡ ಮತ್ತು ಖಿನ್ನತೆ ಬಾಧಿಸುತ್ತದೆ ಎಂದು ಅವರು ವಿವರಿಸಿದ್ದಾರೆ. "'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ. ಮುಜೆ ಉಸ್ಸೆ ಪೆಹ್ಲೆ ಹೈ ಮೇರೆ ಜೋ ಕಂಟ್ರೋಲ್ ಮೇ ಹೈ ಮುಜೆ ಉಸ್ಕೆ ಸ್ಟೆಪ್ಸ್ ಲೇನೆ ಹೈ (ನನ್ನ ನಿಯಂತ್ರಣದಲ್ಲಿ ಏನಿದೆಯೋ ಅದನ್ನು ನಿರ್ವಹಿಸಲು ಬಯಸುವೆ) " ಎಂದಿದ್ದಾರೆ.
ಹಿನಾ ಖಾನ್ ಅವರಿಗೆ ಮೂರನೇ ಹಂತದ ಎದೆಯ ಕ್ಯಾನ್ಸರ್ ಪತ್ತೆಯಾಗಿತ್ತು. ಈ ಕುರಿತು ಜೂನ್ 28ರಂದು ತನ್ನ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. "ಈ ಚಿಕಿತ್ಸೆಯ ಸಂದರ್ಭದಲ್ಲಿ ಉಂಟಾಗುವ ದೈಹಿಕ ಯಾತನೆಯ ಅರಿವು ನನಗಿದೆ. ಆದರೆ, ನಾನು ಸ್ಟ್ರಾಂಗ್ ಆಗಿರಲು ಬಯಸುವೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುವೆ" ಎಂದಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಯ ನಡುವೆಯೂ ಹಿನಾ ಖಾನ್ ಅವರು ಇತ್ತೀಚೆಗೆ ಶೂಟಿಂಗ್ ಕೆಲಸಕ್ಕೆ ಮರಳಿದ್ದರು. "ನಾನು ನನ್ನ ಒಳ್ಳೆಯ ದಿನಗಳನ್ನು ಎದುರು ನೋಡುತ್ತಿದ್ದೇನೆ. ನಾನು ಇಷ್ಟಪಡುವುದನ್ನು ಮಾಡುತ್ತೇನೆ. ಅದೇ ನನ್ನ ಕೆಲಸ. ನಾನು ನನ್ನ ಕೆಲಸವನ್ನು ಪ್ರೀತಿಸುವೆ. ನಾನು ಕೆಲಸ ಮಾಡುವಾಗ ನನ್ನ ಕನಸುಗಳ ಜತೆ ಬದುಕುತ್ತೇನೆ. ಅದೇ ನನಗೆ ದೊಡ್ಡ ಪ್ರೇರಣೆ. ನಾನು ಕೆಲಸ ಮಾಡುವುದನ್ನು ಮುಂದುವರೆಸಲು ಬಯಸುತ್ತೇನೆ" ಎಂದು ಅವರು ಹೇಳಿದ್ದರು.
"ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದೇನೆ. ಹಾಗಾಂತ ಯಾವಾಗಲೂ ಆಸ್ಪತ್ರೆಯಲ್ಲಿಯೇ ಇರುವೆ ಎಂದಲ್ಲ. ಈ ರೋಗದ ವಿರುದ್ಧ ಹೋರಾಡುತ್ತಿರುವ ಎಲ್ಲಾ ಸುಂದರ ಜನರೇ ನೆನಪಿಡಿ, ಇದು ನಿಮ್ಮ ಕಥೆ, ನಿಮ್ಮ ಜೀವನ. ನಮಗೆ ಶಕ್ತಿ ಇದ್ದರೆ ಸಂತೋಷವನ್ನು ಉಂಟು ಮಾಡುವ ಕೆಲಸವನ್ನು ಮಾಡುತ್ತ ಇರಬೇಕು. ಇರುವ ರೋಗವನ್ನು ಒಪ್ಪಿಕೊಳ್ಳಿ, ಅಪ್ಪಿಕೊಳ್ಳಿ, ಸಾಮಾನ್ಯಗೊಳಿಸಿ" ಎಂದು ಅವರು ಇತರೆ ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬುವಂತಹ ಮಾತುಗಳನ್ನು ಆಡಿದ್ದರು.