ದಮ್ ಮಾರೋ ದಮ್ ಹಾಡಿಗಾಗಿ ನಿಜವಾಗಿಯೂ ನಶೆ ಏರಿಸಿಕೊಂಡಿದ್ದೆ; ಹರೇ ರಾಮ ಹರೇ ಕೃಷ್ಣ ಸಿನಿಮಾ ಫ್ಲಾಶ್ ಬ್ಯಾಕ್ ಹಂಚಿಕೊಂಡ ಜೀನತ್ ಅಮನ್
1971 ರಲ್ಲಿ ತೆರೆ ಕಂಡ ಹರೇ ರಾಮ ಹರೇ ಕೃಷ್ಣ ಚಿತ್ರದ ದಮ್ ಮಾರೋ ದಮ್ ಹಾಡು ನೈಜವಾಗಿ ಬರಲಿ ಎಂದು ತಾನು ನಿಜವಾಗಿಯೂ ನಶೆ ಏರಿಸಿಕೊಂಡಿದ್ದೆ. ಹಿಪ್ಪಿಗಳು ತೆಗೆದುಕೊಳ್ಳುತ್ತಿದ್ದ ಮಾದಕ ದ್ರವ್ಯವನ್ನು ನಾನೂ ಪಡೆದಿದ್ದೆ, ಇದು ನನ್ನ ತಾಯಿಗೆ ಗೊತ್ತಾಗಿ ಕೋಪಗೊಂಡಿದ್ದರು ಎಂದು ಬಾಲಿವುಡ್ ಖ್ಯಾತ ನಟಿ ಜೀನತ್ ಅಮನ್ ಹೇಳಿಕೊಂಡಿದ್ದಾರೆ.
ಯಾವುದೇ ಸಿನಿಮಾ ಮಾಡುವಾಗ ನಟ-ನಟಿಯರು ಪಾತ್ರಕ್ಕಾಗಿ ಬಹಳ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲೂ ಅದು ಚಾಲೆಂಜಿಂಗ್ ಪಾತ್ರವಾಗಿದ್ದರಂತೂ ಅದಕ್ಕಾಗಿಯೇ ಸಮಯ ಮೀಸಲಿಡಬೇಕಾಗುತ್ತದೆ. ಪಾತ್ರಕ್ಕಾಗಿ ದಪ್ಪ ಆಗಬೇಕು, ಸಣ್ಣ ಆಗಬೇಕು. ಬಯೋಪಿಕ್ ಸಿನಿಮಾಗಳಲ್ಲಿ ನಟಿಸಬೇಕಾದರೆ ಆ ವ್ಯಕ್ತಿಯ ಹಾವ ಭಾವ ಕಲಿಯಬೇಕು. ಹೀಗೆ ಸಾಕಷ್ಟು ತಯಾರಿ ಬೇಕಿರುತ್ತದೆ.
ಫ್ಲಾಶ್‌ಬ್ಯಾಕ್ ಹಂಚಿಕೊಂಡ ಹಿರಿಯ ನಟಿ ಜೀನತ್ ಅಮನ್
ಆದರೆ ಕೆಲವೊಮ್ಮೆ ನಟ/ನಟಿಯರು ಆಕ್ಟಿಂಗ್ ನೈಜವಾಗಿರಲೆಂದು ಪಾತ್ರಕ್ಕೆ ತಕ್ಕಂತೆ ತಯಾರಾಗುತ್ತಾರೆ. 1971 ರಲ್ಲಿ ತೆರೆ ಕಂಡ ಹರೇ ರಾಮ ಹರೇ ಕೃಷ್ಣ ಹಿಂದಿ ಸಿನಿಮಾವೊಂದರ ಹಾಡಿಗಾಗಿ ತಾನು ನಿಜವಾಗಿಯೂ ನಶೆ ಏರಿಸಿಕೊಂಡಿದ್ದೆ ಎಂದು ಬಾಲಿವುಡ್ ಖ್ಯಾತ ನಟಿ ಜೀನತ್ ಅಮನ್ ಹೇಳಿಕೊಂಡಿದ್ದಾರೆ. ಜೀನತ್ ಅಮನ್, ಆ ಕಾಲದಲ್ಲಿ ಬಾಲಿವುಡ್ ಸಿನಿಮಾಭಿಮಾನಿಗಳು ಆರಾಧಿಸುತ್ತಿದ್ದ ಸೌಂದರ್ಯ ದೇವತೆ.
ನಟನೆಗಿಂತ ಹೆಚ್ಚಾಗಿ ಸೌಂದರ್ಯ, ಮೈಮಾಟದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದ ಚೆಲುವೆ. ಜೀನತ್ ಅಮನ್ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ ಸಾಕು ಜನರು ಮುಗಿಬಿದ್ದು ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಿದ್ದರು. ಜೀನತ್ ಈಗ ಅಪರೂಪಕ್ಕೆ ಆಗೊಂದು ಈಗೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೀನತ್ ಅಮನ್ ಇನ್‌ಸ್ಟ್ರಾಗ್ರಾಮ್ ಮೂಲಕ ತಮ್ಮ ಸಿನಿಮಾಗಳ ಬಗ್ಗೆ ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಹರೇ ರಾಮ ಹರೇ ಕೃಷ್ಣ ಸಿನಿಮಾದ ಧಮ್ ಮಾರೋ ಧಮ್ ಹಾಡಿಗಾಗಿ ತಾವು ಯಾವ ರೀತಿ ತಯಾರಿ ಮಾಡಿಕೊಂಡಿದ್ದೆ ಎಂಬುದನ್ನು ಕೂಡಾ ಜೀನತ್ ಹೇಳಿಕೊಂಡಿದ್ದಾರೆ.
ಪಾತ್ರಕ್ಕಾಗಿ ನಿಜವಾಗಿಯೂ ಮಾದಕ ದ್ರವ್ಯ ಸೇವಿಸಿದ್ದೆ
ಆ ಸಮಯದಲ್ಲಿ ನಾವು ನೇಪಾಳದ ಕಠ್ಮಂಡುವಿನಲ್ಲಿ ಹರೇ ರಾಮ ಹರೇ ಕೃಷ್ಣ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದೆವು. ದಮ್ ಮಾರೋ ದಮ್ ಹಾಡಿಗಾಗಿ ದೇವ್ ಅನಂದ್ ಸರ್ ಅಲ್ಲಿನ ರಸ್ತೆಗಳಲ್ಲಿ ಓಡಾಡುತ್ತಿದ್ದ ಹಿಪ್ಪಿಗಳನ್ನು ಒಗ್ಗೂಡಿಸಿದ್ದರು. ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಅವರಿಗೂ ಖುಷಿ ಇತ್ತು. ಹಾಡಿನ ದೃಶ್ಯಗಳು ನೈಜವಾಗಿ ಬರಬೇಕೆಂದು ದೇವ್ ಆನಂದ್ ಸರ್ ಆಗ್ಗಾಗ್ಗೆ ಹೇಳುತ್ತಿದ್ದರು. ಆದ್ದರಿಂದ ನಾನೂ ಕೂಡಾ ಹಿಪ್ಪಿಗಳೊಂದಿಗೆ ನಶೆ ಏರಿಸಿಕೊಳ್ಳುತ್ತಿದ್ದೆ.
ಪ್ರತಿದಿನ ಶೂಟಿಂಗ್ ಮುಗಿಸುವಷ್ಟರಲ್ಲಿ ನಾನು ನಶೆಯಿಂದ ತೇಲಾಡುತ್ತಿದ್ದೆ. ತಲೆ ಸುತ್ತು, ತಲೆ ನೋವಿನ ಕಾರಣ ನಾನು ಸರಿಯಾಗಿ ನಡೆಯಲು ಆಗದೆ, ಹೋಟೆಲ್ ರೂಮ್‌ಗೆ ಹಿಂತಿರುಗಲಾಗದ ಸ್ಥಿತಿಯಲ್ಲಿದ್ದೆ. ಚಿತ್ರತಂಡದವರು ನನ್ನನ್ನು ಕಾರಿನಲ್ಲಿ ಹೊರಗೆ ಸುತ್ತಾಡಿಸಿ ನಂತರ ರೂಮ್‌ವರೆಗೂ ಬಿಟ್ಟು ಬರುತ್ತಿದ್ದರು. ನನ್ನ ಪರಿಸ್ಥಿತಿ ನೋಡಿ ಅಮ್ಮನಿಗೆ ಗಾಬರಿಯಾಗಿತ್ತು. ಅಷ್ಟು ಚಿಕ್ಕ ವಯಸ್ಸಿನಲ್ಲಿ ಚಿತ್ರದ ಶೂಟಿಂಗ್‌ಗಾಗಿ ನನಗೆ ಮಾದಕ ದ್ರವ್ಯ ಸೇವಿಸಲು ಬಿಟ್ಟಿದ್ದಕ್ಕಾಗಿ ಚಿತ್ರತಂಡದ ವಿರುದ್ಧ ಅಮ್ಮ ಗರಂ ಆಗಿದ್ದರು. ನನ್ನ ಬಗ್ಗೆಯೂ ಕೋಪಗೊಂಡಿದ್ದರು ಎಂದು ಜೀನತ್ ಅಮನ್ ಅಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಲೈವ್ ಬ್ಯಾಂಡ್ ಮ್ಯೂಸಿಕ್
ಈ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ಲೈವ್ ಬ್ಯಾಂಡ್ ಆಯೋಜಿಸಲಾಗಿದ್ದು ಅದರಲ್ಲಿ ನನ್ನ ಸಿನಿಮಾದ ಕೆಲವೊಂದು ಹಾಡುಗಳನ್ನೂ ಹಾಡಲಾಗುವುದು. ನನ್ನ ಜನರೇಶನ್ ಅಭಿಮಾನಿಗಳಿಗೆ ಇದು ಖುಷಿ ನೀಡುವುದು ಪಕ್ಕಾ, ಆದ್ದರಿಂದ ನಿಮ್ಮ ಅಪ್ಪ-ಅಮ್ಮ ಅಂಕಲ್ , ಆಂಟಿಯರಿಗೆ ಟಿಕೆಟ್ ಬುಕ್ ಮಾಡುವುದನ್ನು ಮರೆಯಬೇಡಿ. ಬುಕ್ ಮೈ ಶೋನಲ್ಲಿ ಕೂಡಾ ಟಿಕೆಟ್ ಬುಕ್ ಮಾಡಬಹುದು ಎಂದು ಅದರ ಲಿಂಕನ್ನು ಕೂಡಾ ಹಿರಿಯ ನಟಿ ಹಂಚಿಕೊಂಡಿದ್ದಾರೆ.