ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾಡಿದ ಮಹಾದಾನಕ್ಕೆ ತೆಲುಗು ನಟ ಮೆಗಾಸ್ಟಾರ್ ಚಿರಂಜೀವಿ ಮೆಚ್ಚುಗೆ
ಶಾಸಕ ಪ್ರದೀಪ್ ಈಶ್ವರ್ ನಿನ್ನೆ (ಅಕ್ಟೋಬರ್ 14) ಮೆಗಾಸ್ಟಾರ್ ಚಿರಂಜೀವಿಯನ್ನು ಭೇಟಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಇವರು ಮಾಡಿದ ಮಹಾದಾನವೊಂದು ಎಲ್ಲರ ಗಮನ ಸೆಳೆದಿದೆ. ರಕ್ತದಾನ ಮಹಾದಾನ ಎಂಬ ಮಾತಿನಂತೆ ಚಿರಂಜೀವಿ ಬ್ಲಡ್‌ಬ್ಯಾಂಕ್‌ನಲ್ಲಿ ರಕ್ತದಾನ ಮಾಡಿದ್ದಾರೆ.
ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಿನ್ನೆ (ಅಕ್ಟೋಬರ್ 14) ಮೆಗಾಸ್ಟಾರ್ ಚಿರಂಜೀವಿಯನ್ನು ಭೇಟಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಇವರು ಮಾಡಿದ ಮಹಾದಾನವೊಂದು ಎಲ್ಲರ ಗಮನ ಸೆಳೆದಿದೆ. ವಿಶೇಷವಾಗಿ ಚಿರಂಜೀವಿ ಮೆಚ್ಚುಗೆಗೆ ಪಾತ್ರವಾಗಿದೆ. ರಕ್ತದಾನ ಮಹಾದಾನ ಎಂಬ ಮಾತಿದೆ. ಮೆಗಾಸ್ಟಾರ್‌ನನ್ನು ಭೇಟಿಯಾಗುವ ಮೊದಲು ಚಿರಂಜೀವಿ ಚಾರಿಟೇಬಲ್ ಟ್ರಸ್ಟ್‌ನ ಬ್ಲಡ್ ಬ್ಯಾಂಕ್‌ನಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ರಕ್ತದಾನ ಮಾಡಿದ್ದಾರೆ.ಇವರ ಸಂಬಂಧಿ ರಮೇಶ್ ಬಾಬು ಕೂಡ ರಕ್ತದಾನ ಮಾಡಿದ್ದಾರೆ.
ರಕ್ತದಾನ ಮಾಡಿದ ಬಳಿಕ ಹೈದರಾಬಾದ್‌ನಲ್ಲಿರುವ ಚಿರಂಜೀವಿ ಮನೆಗೆ ಭೇಟಿ ನೀಡಿ ಮೆಗಾಸ್ಟಾರ್‌ನ ಜತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ರಮೇಶ್ ಮತ್ತು ಪ್ರದೀಪ್ ಈಶ್ವರ್‌ನನ್ನು ಚಿರಂಜೀವಿ ವಿಶೇಷವಾಗಿ ಅಭಿನಂದಿಸಿದ್ದಾರೆ. ರಕ್ತದಾನ ಮಾಡುವ ಮೂಲಕ ಜನರಿಗೆ ಸ್ಪೂರ್ತಿ ತುಂಬಿದ ಕಾರ್ಯಕ್ಕಾಗಿ ಇವರಿಬ್ಬರನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿರಂಜೀವಿ ಐಸ್ ಆಂಡ್ ಬ್ಲಡ್ ಬ್ಯಾಂಕ್‌ನಲ್ಲಿ ಆಗಾಗ ವಿವಿಧ ಸೆಲೆಬ್ರಿಟಿಗಳು ರಕ್ತದಾನ ಮಾಡುತ್ತ ಇರುತ್ತಾರೆ.
ನಟ ಚಿರಂಜೀವಿ ಅವರು ಸದ್ಯ ಚಿರು ವಸಿಷ್ಠ ನಿರ್ದೇಶನದ ವಿಶ್ವಂಭರಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯುವಿ ಕ್ರಿಯೇಷನ್ಸ್ ಬ್ಯಾನರ್‌ನಡಿಯಲ್ಲಿ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ತ್ರಿಷಾ ಮತ್ತು ಆಶಿಕಾ ರಂಗನಾಥ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇದು ಸೋಷಿಯೋ ಫ್ಯಾಂಟಸಿ ಸಿನಿಮಾ ಎಂದು ಹೇಳಲಾಗಿದೆ. ದಸರಾ ಹಬ್ಬದ ಸಮಯದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ರಕ್ತದಾನ ಮಹಾದಾನ ಏಕೆ?
ರಕ್ತದಾನವನ್ನು ಮಹಾದಾನ ಎಂದು ಹೇಳಲಾಗುತ್ತದೆ. ವಿವಿಧ ಸಂಘಸಂಸ್ಥೆಗಳು, ಸರಕಾರವು ರಕ್ತದಾನದ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುತ್ತದೆ. ರಕ್ತದಾನವನ್ನು ಅನೇಕ ಕಾರಣಗಳಿಗಾಗಿ ಮಹಾದಾನ ಎಂದು ಹೇಳಲಾಗುತ್ತದೆ.
- ರಕ್ತದಾನ ಒಬ್ಬರ ಜೀವ ಉಳಿಸಲು ನೆರವಾಗುತ್ತದೆ. ಒಂದು ಬಾರಿ ರಕ್ತದಾನ ಮಾಡಿದರೆ ಅದರಲ್ಲಿ ನಾಲ್ವರ ಪ್ರಾಣ ಉಳಿಸಲು ಸಾಧ್ಯವಿದೆ.
- ರಕ್ತದಾನದಿಂದ ದೇಹದ ಹೆಚ್ಚುವರಿ ಕಬ್ಬಿಣಾಂಶ ಹೊರಹೋಗುತ್ತದೆ. ಹೆಚ್ಚುವರಿ ಕಬ್ಬಿಣಾಂಶ ಅಧಿಕ ರಕ್ತದ ಒತ್ತಡ ಇತ್ಯಾದಿಗಳಿಗೆ ಕಾರಣವಾಗುತ್ತದೆ. ಅಧಿಕ ಕಬ್ಬಿಣಾಂಶವು ಲಿವರ್, ಹೃದಯ, ಪಿತ್ತಚನಕಾಂಗದಲ್ಲಿ ಶೇಖರಣೆಯಾಗಿ ಹೃದಯಬೇನೆ, ರಕ್ತದೊತ್ತಡಕ್ಕೆ ಕಾರಣವಾಗುತ್ತದೆ.
- ರಕ್ತದಾನ ಸಮಯದಲ್ಲಿ ನಿಮ್ಮ ಆರೋಗ್ಯ ತಪಾಸಣೆಯನ್ನೂ ಮಾಡಲಾಗುತ್ತದೆ. ಹೃದಯ ಬಡಿತ, ರಕ್ತದೊತ್ತಡ, ಕೊಲೆಸ್ಟ್ರಾರಲ್, ಹಿಮೋಗ್ಲೋಬಿನ್‌ಮಟ್ಟವನ್ನು ಪರೀಕ್ಷೆ ಮಾಡುತ್ತಾರೆ. ಇದರಿಂದ ನಮ್ಮ ಆರೋಗ್ಯದ ಕುರಿತೂ ತಿಳಿದುಕೊಳ್ಳಬಹುದು.
- ರಕ್ತದಾನವು ರಕ್ತದ ಕ್ಯಾನ್ಸರ್ ಅಪಾಯವನ್ನು ಕಕಡಿಮೆ ಮಾಡುತ್ತದೆ. ರಕ್ತದಾನ ಮಾಡಿದಾಗ ನಿಮ್ಮ ದೇಹ ಹೊಸ ರಕ್ತ ಪಡೆಯುವ ಅವಕಾಶ ಪಡೆಯುತ್ತದೆ. ಇದರಿಂದ ರಕ್ತದ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.