ವಿಶ್ವಂಭರ ತೆಲುಗು ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಟನೆ; ಚಿತ್ರತಂಡಕ್ಕಿಂತ ಮೊದಲೇ ಸುದ್ದಿ ಲೀಕ್ ಮಾಡಿ ಇರಿಸುಮುರಿಸು ಮಾಡಿದ್ರ ಮದಗಜ ನಟಿ
ನಟಿ ಆಶಿಕಾ ರಂಗನಾಥ್ ಮೆಗಾಸ್ಟಾರ್ ಚಿರಂಜೀವಿ ನಟನೆಯ ಟಾಲಿವುಡ್ ಸಿನಿಮಾ ವಿಶ್ವಂಭರದಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೆ. ಆದರೆ, ಇತ್ತೀಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡುವಾಗ ಬಾಯ್ತಪ್ಪಿ ವಿಶ್ವಂಭರ ಚಿತ್ರದಲ್ಲಿ ತಾನು ನಟಿಸುತ್ತಿರುವ ವಿವರವನ್ನು ಆಶಿಕಾ ನೀಡಿರುವುದು ಚಿತ್ರತಂಡಕ್ಕೆ ಇರಿಸುಮುರಿಸು ತಂದಿದೆ ಎನ್ನಲಾಗಿದೆ.

ಬೆಂಗಳೂರು: ಚಿರಂಜೀವಿ ನಟನೆಯ ವಿಶ್ವಂಭರ ಸಿನಿಮಾದಲ್ಲಿ ಕನ್ನಡ ನಟಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ. ಈ ಕುರಿತು ಚಿತ್ರತಂಡ ಇಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಆದರೆ, ಚಿತ್ರತಂಡವು ಆಶಿಕಾ ರಂಗನಾಥ್ ನಟನೆಯ ಕುರಿತು ಅಪ್‌ಡೇಟ್ ನೀಡಲು ಕಾರಣವಾದ ಅಂಶ ಬೇರೆಯೇ ಇದೆ ಎನ್ನಲಾಗಿದೆ. ಗುಲ್ಟೆ.ಕಾಂ ವರದಿ ಪ್ರಕಾರ ಆಶಿಕಾ ರಂಗನಾಥ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ವಿಶ್ವಂಭರ ಸಿನಿಮಾದಲ್ಲಿ ತನ್ನ ನಟನೆಯ ವಿವರ ಸೋರಿಕೆ ಮಾಡಿದ್ದರು. ಈ ಕಾರಣದಿಂದಲೇ ಚಿತ್ರತಂಡ ಅವಸರದಲ್ಲಿ ಆಶಿಕಾ ರಂಗನಾಥ್ ನಟನೆಯ ಕುರಿತು ಅಪ್‌ಡೇಟ್ ನೀಡಿದೆ ಎನ್ನಲಾಗುತ್ತಿದೆ. ಈಗಾಗಲೇ ನಟಿ ಆಶಿಕಾ ರಂಗನಾಥ್ ಅವರು ವಿಶ್ವಂಭರ ಸಿನಿಮಾದಲ್ಲಿ ತನ್ನ ಕೆಲಸ ಪೂರ್ಣಗೊಳಿಸಿದ್ದಾರೆ.
ಈ ಹಿಂದೆ ವಿಶ್ವಂಭರ ಸಿನಿಮಾದಲ್ಲಿ ತಾವು ನಟಿಸುತ್ತಿರುವ ಕುರಿತು ಸುರಭಿ ಮತ್ತು ಇಶಾ ಚೌಲ ವಿವಿಧ ಸಂದರ್ಶನಗಳಲ್ಲಿ ಹೇಳಿದ್ದರು. ತಾವು ಈ ಪ್ರಾಜೆಕ್ಟ್‌ನ ಭಾಗವಾಗಿರುವ ಕುರಿತು ಹೇಳಿದ್ದರು. ಇತ್ತೀಚೆಗೆ ಆಶಿಕಾ ರಂಗನಾಥ್ ಪ್ರಮುಖ ಸುದ್ದಿತಾಣಕ್ಕೆ ಸಂದರ್ಶನ ನೀಡಿದ್ದರು. "ಹಸಿರು ಪರದೆಯ ಪರಿಸರದಲ್ಲಿ ತನ್ನನ್ನು ತಾನೇ ಕಲ್ಪಿಸಿಕೊಂಡು ನಟಿಸುವ" ಕುರಿತು ಮಾತನಾಡಿದ್ದರು. ಇದೇ ಸಮಯದಲ್ಲಿ ತಾನು ಚಿರಂಜೀವಿ ಜತೆ ಜೋಡಿಯಾಗಿ ನಟಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು. ಈ ಮೂಲಕ ವಿಶ್ವಂಭರ ಸಿನಿಮಾದಲ್ಲಿ ತಾನು ನಟಿಸುತ್ತಿರುವ ಕುರಿತು ಚಿತ್ರತಂಡ ಅಧಿಕೃತವಾಗಿ ಘೋಷಿಸುವ ಮೊದಲೇ ತಿಳಿಸಿದ್ದರು. ಇದು ಚಿತ್ರತಂಡಕ್ಕೆ ಇರಿಸುಮುರಿಸು ತಂದಿದೆ ಎಂದು ಗುಲ್ಟೆ.ಕಾಂ ವರದಿ ಮಾಡಿದೆ.
ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ ಈ ಸುದ್ದಿ ಬ್ರೇಕ್ ಮಾಡಿದ ಬಳಿಕ ಸಿನಿಮಾ ನಿರ್ಮಾಪಕರಿಗೆ ಈ ಸುದ್ದಿಯನ್ನು ಅಧಿಕೃತವಾಗಿ ತುರ್ತಾಗಿ ಘೋಷಿಸುವ ಅನಿವಾರ್ಯತೆ ಉಂಟಾಗಿತ್ತು. ತಾವು ಮಾತನಾಡುವ ಮೊದಲೇ ಈ ಸುದ್ದಿ ಎಲ್ಲೆಡೆ ಹಬ್ಬಿರುವುದು ಚಿತ್ರತಂಡಕ್ಕೆ ತುಸು ಬೇಸರ ತಂದಿರಬಹುದು. ವಿಶ್ವಂಭರ ಸಿನಿಮಾದಲ್ಲಿ ಮೆಗಾಸ್ಟಾರ್ ಜತೆ ಆಶಿಕಾ ರಂಗನಾಥ್ ನಟಿಸುವ ಕುರಿತು ಇದೀಗ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಈ ಸಿನಿಮಾದಲ್ಲಿ ಚಿರಂಜೀವಿಗೆ ನಾಯಕಿಯಾಗಿ ತ್ರಿಷಾ ಕೃಷ್ಣನ್ ನಟಿಸುತ್ತಿದ್ದಾರೆ. ಈ ಕುರಿತು ಈಗಾಗಲೇ ಚಿತ್ರತಂಡ ಹಲವು ವಿಡಿಯೋ ಬಿಡುಗಡೆ ಮಾಡಿದೆ.
ಟಾಲಿವುಡ್‌ಗೆ ಕಾಲಿಟ್ಟ ಆಶಿಕಾ ರಂಗನಾಥ್
ಮೆಗಾಸ್ಟಾರ್ ಚಿರಂಜೀವಿ ಚಿತ್ರದಲ್ಲಿ ಅವಕಾಶ ಪಡೆಯುವ ಮೂಲಕ ಆಶಿಕಾ ರಂಗನಾಥ್ ಸುದ್ದಿಯಲ್ಲಿದ್ದಾರೆ. ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ಆಶಿಕಾ ರಂಗನಾಥ್ ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಯುವಿ ಕ್ರಿಯೆಷನ್ಸ್ ಮೂಲಕ ನಿರ್ಮಾಣವಾಗುತ್ತಿರುವ ವಿಶ್ವಂಭರ ಸಿನಿಮಾದಲ್ಲಿ ಹಲವು ಪ್ರಮುಖ ನಟಿಯರು, ನಟರು ನಟಿಸುತ್ತಿದ್ದಾರೆ. 2025ರ ಜನವರಿ 10ರಂದು ವಿಶ್ವಂಭರ ಸಿನಿಮಾ ರಿಲೀಸ್ ಆಗಲಿದೆ. ಈ ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ, ಮಲ್ಲಿದಿ ವಸಿಷ್ಠ ನಿರ್ದೇಶನವಿದೆ.
ಆಶಿಕಾ ರಂಗನಾಥ್ ಸಿನಿಮಾಗಳು
2016ರಲ್ಲಿ ಕ್ರೇಜಿ ಬಾಯ್ ಸಿನಿಮಾದ ಮೂಲ ಸ್ಯಾಂಡಲ್‌ವುಡ್‌ಗೆ ಆಶಿಕಾ ರಂಗನಾಥ್ ಪ್ರವೇಶ ನೀಡಿದ್ದರು. ಇದಾದ ಬಳಿಕ ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರಾಂಬೋ 2, ತಾಯಿಗೆ ತಕ್ಕ ಮಗ, ಕೋಟಿಗೊಬ್ಬ 3, ಮದಗಜ, ಜೇಮ್ಸ್, ಅವತಾರ ಪುರುಷ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಾದ ಬಳಿಕ ಗರುಡ, ಕಾಣೆಯಾದವರ ಬಗ್ಗೆ ಪ್ರಕಟಣೆ, ರೈಮೋ, ಪಟ್ಟಥು ಅರಸನ್ (ತಮಿಳು), ಅಮಿಗೋಸ್ (ತೆಲುಗು) ನಾ ಸಾಮಿ ರಂಗ (ತೆಲುಗು), ಅವತಾರ ಪುರುಷ 2 ಸಿನಿಮಾಗಳಲ್ಲಿ ನಟಿಸಿದ್ದರು. ಆಶಿಕಾ ರಂಗನಾಥ್ ನಟನೆಯ ಒ2 ಕನ್ನಡ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು.