Bhagyalakshmi Serial: ಒಂದರ ಹಿಂದೆ ಮತ್ತೊಂದು ಕಷ್ಟ; ಈ ಅಗ್ನಿಪರೀಕ್ಷೆಯಿಂದ ಭಾಗ್ಯಾ ಹೇಗೆ ಪಾರಾಗ್ತಾಳೆ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಡಿಸೆಂಬರ್ 22ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.
Bhagyalakshmi Kannada Serial: ನಮಗೆ ಬಂದಿರುವ ಕಷ್ಟ ದೂರಾಗಲಿ, ತಾಂಡವ್ ಮನಸ್ಸು ಬದಲಿಸಿಕೊಂಡು ಮನೆಗೆ ವಾಪಸ್ ಬರಲಿ ಎಂದು ಕುಸುಮಾ ಹಾಗೂ ಭಾಗ್ಯಾ ಮಂಗಳಗೌರಿ ವ್ರತದಲ್ಲಿ ಭಾಗಿಯಾಗುತ್ತಾರೆ. ಮನೆಗೆ ಬಂದವರು ತಾಂಡವ್ ಇಲ್ಲದ್ದನ್ನು ನೋಡಿ ಅನುಮಾನದಿಂದ ಕುಸುಮಾಗೆ ಪ್ರಶ್ನಿಸುತ್ತಾರೆ. ಆದರೆ ಕುಸುಮಾ ಎಂದಿಗೂ ನಿಜ ಬಿಟ್ಟುಕೊಡುವುದಿಲ್ಲ.
ಮಗನನ್ನು ಬಿಟ್ಟುಕೊಡದ ಕುಸುಮಾ
ನನ್ನ ಮಗ ದೊಡ್ಡ ಆಫೀಸರ್, ಅವನು ಒಂದು ದಿನವೂ ರಜೆ ಹಾಕಲು ಸಾಧ್ಯವಿಲ್ಲ, ಅಷ್ಟು ಬ್ಯುಸಿ ಎನ್ನುತ್ತಾಳೆ. ಕುಸುಮಾ ಮಾತನ್ನು ಕೇಳುವ ಭಾಗ್ಯಾ, ಅತ್ತೆಗೆ ಮಗ ಎಂದರೆ ಎಲ್ಲಿಲ್ಲದ ಪ್ರೀತಿ. ಎಷ್ಟೇ ಕಷ್ಟ ಇದ್ದರೂ ಅವರನ್ನು ಬಿಟ್ಟುಕೊಡುವುದಿಲ್ಲ. ನಾನಂತೂ ಅವರು ಲೋನ್ ಕಟ್ಟಲು ಹೇಳಿದ ವಿಚಾರವನ್ನು ಎಂದಿಗೂ ಅತ್ತೆ ಮುಂದೆ ಬಾಯಿ ಬಿಡಬಾರದು ಎಂದು ನಿರ್ಧರಿಸುತ್ತಾಳೆ. ಪೂಜೆ ಸಾಂಗವಾಗಿ ನೆರವೇರುತ್ತದೆ. ಕುಸುಮಾ ಹಾಗೂ ಭಾಗ್ಯಾ ಎಲ್ಲಿರಿಗೂ ಬಾಗಿನ, ಅರಿಶಿನ, ಕುಂಕುಮ ನೀಡಿ, ದೇವರ ಮುಂದಿರುವ ಒಡವೆಗಳನ್ನು ತೆಗೆದುಕೊಳ್ಳಲು ಹೇಳುತ್ತಾಳೆ. ಒಬ್ಬೊಬ್ಬರೇ ಬಂದು ತಾವು ಪೂಜೆಗೆ ಇಟ್ಟಿದ್ದ ಒಡವೆಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ನೆರೆಮನೆಯ ಒಬ್ಬಾಕೆ ಮಾತ್ರ ಪೋನ್ ಕಾಲ್‌ನಲ್ಲಿ ಬ್ಯುಸಿ ಆಗಿದ್ದರಿಂದ ಮರೆತು ಒಡವೆ ತೆಗೆದುಕೊಳ್ಳುವುದಿಲ್ಲ.
ಪೂಜೆ ಮುಗಿಸಿ ಒಡವೆಗಳನ್ನೆಲ್ಲಾ ಕಪಾಟಿನಲ್ಲಿ ಇಡಲು ಹೋದ ಭಾಗ್ಯಾಗೆ ಹೋಂ ಲೋನ್‌ನದ್ದೇ ಚಿಂತೆ. ಎಲ್ಲಾ ಒಡವೆಗಳನ್ನು ಇಡುವ ಬದಲಿಗೆ ತನ್ವಿ ಹಾಗೂ ನನ್ನ ಒಡವೆಗಳನ್ನು ಅಡವಿಟ್ಟು ದುಡ್ಡು ಪಡೆದು ಲೋನ್ ತೀರಿಸೋಣ ಎಂದು ನಿರ್ಧರಿಸುತ್ತಾಳೆ. ಶಾಲೆಗೆ ಹೋಗುವಾಗ ಒಡವೆ ಅಡವಿಟ್ಟು ಆ ಹಣವನ್ನು ಲೋನ್ ಕಟ್ಟುತ್ತಾಳೆ. ಅಷ್ಟರಲ್ಲಿ ಭಾಗ್ಯಾಗೆ ಶಾಲೆಯಿಂದ ಕರೆ ಬರುತ್ತದೆ. ಮಗ ತನ್ಮಯ್ ಯಾವುದೇ ಹುಡುಗನೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ ಎಂದು ಶಾಲೆಯವರು ಹೇಳಿದಾಗ ಭಾಗ್ಯಾಗೆ ಶಾಕ್ ಆಗುತ್ತದೆ. ಅಲ್ಲಿಂದ ಭಾಗ್ಯಾ ಶಾಲೆ ಬಳಿ ಓಡುತ್ತಾಳೆ.
ಸುಂದರಿಯನ್ನು ಹೊರ ಹಾಕಲು ಪ್ಲ್ಯಾನ್
ಇತ್ತ ತಾಂಡವ್ ಹಾಗೂ ಶ್ರೇಷ್ಠಾಗೆ, ಮನೆಯಲ್ಲಿ ಕಳ್ಳತನ ಮಾಡಿರುವುದು ಸುಂದರಿಯೇ ಎಂದು ಗೊತ್ತಾಗುತ್ತದೆ. ಅವರಿಬ್ಬರನ್ನೂ ಕರೆ ತಂದಿದ್ದು ನೀನೇ, ನಿನ್ನಿಂದಲೇ ಇಷ್ಟೆಲ್ಲಾ ಆಗುತ್ತಿರುವುದು ಎಂದು ತಾಂಡವ್ ಶ್ರೇಷ್ಠಾ ಮೇಲೆ ಕೋಪಗೊಳ್ಳುತ್ತಾನೆ. ನೀನು ಏನು ಮಾಡ್ತೀಯೋ ನನಗೆ ಗೊತ್ತಿಲ್ಲ ಸುಂದರಿಯನ್ನು ಇಲ್ಲಿಂದ ಓಡಿಸು ಎಂದು ತಾಂಡವ್ ಕಂಡಿಷನ್ ಮಾಡುತ್ತಾನೆ. ಇದೆಲ್ಲಾ ಮುಗಿಯಬೇಕು ಎಂದರೆ ನಾವಿಬ್ಬರೂ ಆದಷ್ಟು ಬೇಗ ಮದುವೆ ಆಗಲೇಬೇಕು ಎಂದು ಶ್ರೇಷ್ಠಾ ಅಂದುಕೊಳ್ಳುತ್ತಾಳೆ. ಕೋಪಗೊಂಡಿರುವ ತಾಂಡವ್‌ನನ್ನು ಹೇಗಾದರೂ ಸಮಾಧಾನ ಮಾಡಬೇಕೆಂದು ಶ್ರೇಷ್ಠಾ ಅವನಿಗೆ ನಾನೇ ಅಡುಗೆ ಮಾಡಿದ್ದು ಎಂದು ಸುಳ್ಳು ಹೇಳಿ ಲಂಚ್ ಬಾಕ್ಸ್ ಕೊಂಡೊಯ್ಯುತ್ತಾಳೆ. ಆದರೆ ತಾಂಡವ್ ಖುಷಿಯಾಗಿರುವುದನ್ನು ನೋಡಿ ಶ್ರೇಷ್ಠಾಗೆ ಆಶ್ಚರ್ಯವಾಗುತ್ತದೆ.
ಇಎಂಐ ಕಟ್ಟಲು ಭಾಗ್ಯಾಗೆ ಇನ್ನೂ ದುಡ್ಡು ಅಡ್ಜೆಸ್ಟ್ ಆಗಿಲ್ಲ. ಇಲ್ಲವಾದರೆ ಬ್ಯಾಂಕಿನಿಂದ ನನಗೆ ಮೆಸೇಜ್ ಬರುತ್ತಿತ್ತು. ನನಗಂತೂ ಬಹಳ ಖುಷಿಯಾಗುತ್ತಿದೆ ಅವರ ಪರಿಸ್ಥಿತಿ ನೋಡಿ, ನಾನು ಇಲ್ಲದೆ ಆ ಮನೆ ನಡೆಯುವುದಿಲ್ಲ ಎಂದು ಅಮ್ಮನಿಗೆ ಗೊತ್ತಾಗುತ್ತದೆ. ಸೊಸೆ ಬುದ್ಧಿ ತಿಳಿಯುತ್ತಿದ್ದಂತೆ ಅಮ್ಮ ನನ್ನ ಬಳಿ ಬಂದು ಮನೆಗೆ ವಾಪಸ್ ಬರುವಂತೆ ಮನವಿ ಮಾಡಿಕೊಳ್ಳುತ್ತಾಳೆ ಎಂದು ತಾಂಡವ್ ಸಂತೋಷಪಡುತ್ತಾನೆ. ಈ ಖುಷಿಯನ್ನು ಸೆಲಬ್ರೇಟ್ ಮಾಡಲೇಬೇಕು. ನಿನ್ನನ್ನು ಹೊರಗೆ ಕರೆದೊಯ್ಯುತ್ತೇನೆ ಎನ್ನುತ್ತಾನೆ. ನರಿ ಬುದ್ಧಿಯ ಶ್ರೇಷ್ಠಾ ಇದೇ ಸರಿಯಾದ ಸಮಯ ಎಂದುಕೊಂಡು, ಹೇಗಿದ್ದರೂ 40 ಸಾವಿರ ರೂಪಾಯಿ ಉಳಿಸಿದ್ದೀರಲ್ಲ. ಹೂ ಮುಡಿಸುವ ಶಾಸ್ತ್ರಕ್ಕೆ ನೀನೇ ಏನಾದರೂ ಕೊಡಿಸು ಎನ್ನುತ್ತಾಳೆ. ಶ್ರೇಷ್ಠಾ ಬೇಡಿಕೆಗೆ ತಾಂಡವ್ ಖುಷಿಯಿಂದ ಒಪ್ಪುತ್ತಾನೆ.
ಭಾಗ್ಯಾಗೆ ಮತ್ತೊಂದು ಕಷ್ಟ
ಅಷ್ಟರಲ್ಲಿ ತಾಂಡವ್‌ಗೆ ಕೂಡಾ ಸ್ಕೂಲ್‌ನಿಂದ ಕರೆ ಬರುತ್ತದೆ. ತನ್ಮಯ್, ಮತ್ತೊಬ್ಬ ಹುಡುಗನ ಜೊತೆ ಏನೋ ಗಲಾಟೆ ಮಾಡಿಕೊಂಡಿದ್ದಾನಂತೆ ನಾನು ಹೋಗಬೇಕು ಎನ್ನುತ್ತಾನೆ. ಅಷ್ಟರಲ್ಲಿ ಶ್ರೇಷ್ಠಾ, ತಾಂಡವ್‌ನನ್ನು ತಡೆಯುತ್ತಾಳೆ. ಇತ್ತ ನೆರೆಮನೆಯ ಮಹಿಳೆ, ನಾನು ಒಡವೆ ತೆಗೆದುಕೊಳ್ಳುವುದನ್ನು ಮರೆತೆ ಎಂದು ಕುಸುಮಾಗೆ ಫೋನ್ ಮಾಡುತ್ತಾರೆ. ಸರಿ ನಿಧಾನವಾಗಿ ಬನ್ನಿ ಗಾಬರಿ ಆಗಬೇಡಿ , ನಿಮ್ಮ ಒಡವೆಯನ್ನು ತೆಗೆದಿಡುತ್ತೇನೆ ಎಂದು ಕುಸುಮಾ ಹೇಳುತ್ತಾಳೆ.
ಭಾಗ್ಯಾಗೆ ಕಷ್ಟದ ಮೇಲೆ ಕಷ್ಟ ಬರುತ್ತಲೇ ಇದೆ. ನೆರೆಮನೆಯ ಒಡವೆಯನ್ನೂ ಭಾಗ್ಯಾ ಅಡವಿಟ್ಟುಬಿಟ್ಲಾ? ತನ್ಮಯ್ ಶಾಲೆ ಘಟನೆಯನ್ನು ಭಾಗ್ಯಾ ಹೇಗೆ ನಿಭಾಯಿಸುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.