ನೀವು ಸಿಂಕ್‌ನಲ್ಲಿ ಕೊಳಕು ಪಾತ್ರೆಗಳನ್ನು ರಾತ್ರಿಯಿಡೀ ಇಡುತ್ತೀರಾ: ಇದು ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು, ಇರಲಿ ಎಚ್ಚರ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಸಿಂಕ್‌ನಲ್ಲಿ ಕೊಳಕು ಪಾತ್ರೆಗಳನ್ನು ರಾತ್ರಿಯಿಡೀ ಇಡುತ್ತೀರಾ: ಇದು ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು, ಇರಲಿ ಎಚ್ಚರ

ನೀವು ಸಿಂಕ್‌ನಲ್ಲಿ ಕೊಳಕು ಪಾತ್ರೆಗಳನ್ನು ರಾತ್ರಿಯಿಡೀ ಇಡುತ್ತೀರಾ: ಇದು ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು, ಇರಲಿ ಎಚ್ಚರ

ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ರಾತ್ರಿಯಿಡೀ ಇಡುತ್ತೀರಾ. ಹಾಗಿದ್ದರೆ ಜಾಗರೂಕರಾಗಿರಿ. ಏಕೆಂದರೆ ಅದು ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ಕೊಳಕು ಪಾತ್ರೆಗಳನ್ನು ದೀರ್ಘಕಾಲದವರೆಗೆ ತೊಳೆಯದೆ ಇಡುವುದರಿಂದ ಪಾತ್ರೆಗಳಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ನೀವು ಸಿಂಕ್‌ನಲ್ಲಿ ಕೊಳಕು ಪಾತ್ರೆಗಳನ್ನು ರಾತ್ರಿಯಿಡೀ ಇಡುತ್ತೀರಾ: ಇದು ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು
ನೀವು ಸಿಂಕ್‌ನಲ್ಲಿ ಕೊಳಕು ಪಾತ್ರೆಗಳನ್ನು ರಾತ್ರಿಯಿಡೀ ಇಡುತ್ತೀರಾ: ಇದು ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು (PC: Freepik)

ಚಳಿಯಿಂದಾಗಿ ನಿಮ್ಮ ಮನೆಯಲ್ಲಿ ಕೊಳಕು ಪಾತ್ರೆಗಳನ್ನು ರಾತ್ರಿ ಸಿಂಕ್‍ನಲ್ಲಿಯೇ ಬಿಟ್ಟು ಬೆಳಗ್ಗೆ ತೊಳೆಯುವಿರಾ? ಹಾಗಿದ್ದರೆ ಜಾಗರೂಕರಾಗಿರಿ. ಯಾಕೆಂದರೆ ಕೊಳಕು ಪಾತ್ರೆಗಳು ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ. ಸಿಂಕ್‌ನಲ್ಲಿ ಕೊಳಕು ಪಾತ್ರೆಗಳನ್ನು ಹಾಗೆ ಬಿಡುವುದರಿಂದ ಇದು ಹಲವು ರೀತಿಯಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಪಾತ್ರೆಗಳನ್ನು ದೀರ್ಘಕಾಲ ಅಥವಾ ರಾತ್ರಿಯಿಂದ ಬೆಳಗಿನವರೆಗೆ ಸಿಂಕ್‌ನಲ್ಲಿ ಇರಿಸಿದರೆ, ಅವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಆಶ್ರಯಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಸಿಂಕ್‌ನಲ್ಲಿ ಕೊಳಕು ಪಾತ್ರೆಯನ್ನು ಹಾಗೆ ಬಿಡುವುದರಿಂದ ಏನೆಲ್ಲಾ ಅಪಾಯವುಂಟಾಗಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಸಿಂಕ್‌ನಲ್ಲಿ ಕೊಳಕು ಪಾತ್ರೆಯನ್ನು ಹಾಗೆ ಬಿಡುವುದರಿಂದ ಉಂಟಾಗುವ ಅಪಾಯಗಳು

ಬ್ಯಾಕ್ಟೀರಿಯಾದ ಬೆಳವಣಿಗೆ: ಸಾಲ್ಮೊನೆಲ್ಲಾ, ಲಿಸ್ಟೇರಿಯಾ ಮತ್ತು ಇ-ಕೋಲಿ ಬ್ಯಾಕ್ಟೀರಿಯಾಗಳು ಅಡುಗೆಮನೆಯಲ್ಲಿ ದೀರ್ಘಕಾಲ ಇಡಲಾದ ಕೊಳಕು ಪಾತ್ರೆಗಳ ಮೇಲೆ ಹುಟ್ಟುತ್ತವೆ. ಇದು ಆಹಾರದಲ್ಲಿ ವಿಷ ಮತ್ತು ಜಠರಗರುಳಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಪಾತ್ರೆಗಳನ್ನು ಸ್ವಚ್ಛಗೊಳಿಸಿದ ನಂತರವೂ ಅವು ನಾಶವಾಗುವುದಿಲ್ಲ. ಅಂತಹ ಪಾತ್ರೆಗಳಲ್ಲಿ ಆಹಾರವನ್ನು ಬಡಿಸಿದಾಗ, ಅವು ಆಹಾರದ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಈ ಬ್ಯಾಕ್ಟೀರಿಯಾಗಳ ಹೆಸರುಗಳು ಎಷ್ಟು ವಿಚಿತ್ರವೋ, ಅಷ್ಟೇ ಅಪಾಯಕಾರಿಯೂ ಹೌದು. ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರು, ರೋಗನಿರೋಧಕ ಶಕ್ತಿ ದುರ್ಬಲವಾಗಿರುವವರು ಅಥವಾ ತಾಯಂದಿರಾಗಲಿರುವ ಮಹಿಳೆಯರು ಈ ಬ್ಯಾಕ್ಟೀರಿಯಾಗಳ ದಾಳಿಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ವಾಂತಿ, ಹೊಟ್ಟೆನೋವು, ಭೇದಿ, ಅಜೀರ್ಣ ಇವೆಲ್ಲವೂ ಇದರಿಂದ ಉಂಟಾಗುವ ಸಮಸ್ಯೆಗಳಾಗಿವೆ. ಈ ಸ್ಥಿತಿಯು ಗಂಭೀರವಾಗಿದ್ದರೆ ಗರ್ಭಪಾತ ಮತ್ತು ಮೂತ್ರಪಿಂಡ ವೈಫಲ್ಯದ ಅಪಾಯವೂ ಹೆಚ್ಚಾಗುತ್ತದೆ.

ಮಾಲಿನ್ಯ: ಮೊದಲೇ ತಿಳಿಸಿದಂತೆ ಕೊಳಕು ಪಾತ್ರೆಗಳಲ್ಲಿ ರೂಪುಗೊಳ್ಳುವ ಬ್ಯಾಕ್ಟೀರಿಯಾವು ಅಡುಗೆ ಮನೆಯ ಸುತ್ತಲೂ ಹರಡಬಹುದು ಅಥವಾ ಆಹಾರವನ್ನು ಕಲುಷಿತಗೊಳಿಸಬಹುದು. ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಹರಡಬಹುದು. ಇದರಿಂದ ನೀವೆಷ್ಟೇ ಸ್ವಚ್ಛಗೊಳಿಸಿದರೂ ಕೂಡ ಈ ಸೂಕ್ಷ್ಮಜೀವಿಗಳು ನಾಶವಾಗುವುದಿಲ್ಲ. ಬದಲಾಗಿ ರೋಗಗಳನ್ನು ಹರಡುತ್ತವೆ.

ಶಿಲೀಂಧ್ರಗಳು: ಕೊಳಕು ಭಕ್ಷ್ಯದ ಪಾತ್ರೆಗಳನ್ನು ಸಿಂಕ್‌ನಲ್ಲಿ ಹಾಗೆಯೇ ಬಿಡುವುದರಿಂದ ಶಿಲೀಂಧ್ರಗಳು ಬೆಳೆಯಲು ಪ್ರಾರಂಭಿಸಬಹುದು. ಇದು ಉಸಿರಾಟದ ತೊಂದರೆಗಳು ಅಥವಾ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು.

ಕೆಟ್ಟ ವಾಸನೆ: ಪಾತ್ರೆಗಳ ಮೇಲೆ ಉಳಿದಿರುವ ಆಹಾರದ ಕಣಗಳ ಕೊಳೆತವು ಅಹಿತಕರ ವಾಸನೆಗೆ ಕಾರಣವಾಗಬಹುದು. ಇದರಿಂದ ಅಡುಗೆ ಮನೆ ಪೂರ್ತಿ ಕೆಟ್ಟ ವಾಸನೆ ಬರಬಹುದು. ಇದು ಅಶುಚಿಯಾದ ಅಡುಗೆ ವಾತಾವರಣಕ್ಕೆ ಕಾರಣವಾಗಬಹುದು.

ಕೀಟಗಳು: ಉಳಿದ ಆಹಾರವು ಇರುವೆಗಳು, ಜಿರಳೆಗಳು, ಸೊಳ್ಳೆ ಮುಂತಾದ ಕೀಟಗಳನ್ನು ಆಕರ್ಷಿಸಬಹುದು. ಇದು ಹೊಸ ಹೊಸ ರೋಗಗಳನ್ನು ಪರಿಚಯಿಸಬಹುದು. ಮನೆ ತುಂಬಾ ಸೊಳ್ಳೆ, ಜಿರಳೆ ಕಾಣಿಸಿಕೊಂಡರೆ ನಿಮಗೂ ಅಸಹ್ಯ ಉಂಟಾಗಬಹುದು. ಹೀಗಾಗಿ ಈ ಆರೋಗ್ಯದ ಅಪಾಯಗಳನ್ನು ತಪ್ಪಿಸಲು, ಪಾತ್ರೆಗಳನ್ನು ತ್ವರಿತವಾಗಿ ಸ್ವಚ್ಛಗೊಳಿಸುವುದು ಅಗತ್ಯ. ಹಾಗೆಯೇ ಅಡುಗೆಮನೆಯ ಮೇಲ್ಮೈಗಳನ್ನು ನೈರ್ಮಲ್ಯವಾಗಿರಿಸುವುದು ಕೂಡ ಅಷ್ಟೇ ಅವಶ್ಯಕ.

ಒಟ್ಟಿನಲ್ಲಿ ಸೋಮಾರಿತನವನ್ನು ಬಿಟ್ಟು ಎಚ್ಚರಿಕೆ ವಹಿಸಿ. ಅಡುಗೆ ಮನೆ, ಪಾತ್ರೆಗಳು ಮತ್ತು ಸಿಂಕ್ ಅನ್ನು ಸ್ವಚ್ಛವಾಗಿಡಲು ಸೋಮಾರಿಯಾಗಬೇಡಿ. ಅಷ್ಟೇ ಅಲ್ಲ, ಫ್ರಿಜ್‍ನಲ್ಲಿ ದೀರ್ಘಕಾಲ ಇಟ್ಟಿರುವ ಆಹಾರ ಪದಾರ್ಥಗಳು ಕೂಡ ಕಾಯಿಲೆಗೆ ಮೂಲ ಕಾರಣ.

Whats_app_banner