ಕನ್ನಡ ಸಾಹಿತ್ಯ ಸಮ್ಮೇಳನ; ಸಕ್ಕರೆ ನಾಡಲ್ಲಿ ಅಕ್ಷರ ಜಾತ್ರೆಯ ಅಕ್ಕರೆ, ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆಯ ನೇರ ಪ್ರಸಾರದ ವಿಡಿಯೋ ಲಿಂಕ್
Kannada Sahitya Sammelana: ಬಹು ನಿರೀಕ್ಷಿತ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಬೆಳಗ್ಗೆ ಧ್ವಜಾರೋಹಣ ನೆರವೇರಿದ್ದು, ಈಗ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯುತ್ತಿದ್ದು, ಅದರ ನೇರ ಪ್ರಸಾರದ ವಿಡಿಯೋ ಮತ್ತು ವಿವರ ಇಲ್ಲಿದೆ.
Kannada Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ ಅಕ್ಷರ ಜಾತ್ರೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಮೂರು ದಿನಗಳ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಧ್ವಜಾರೋಹಣ ಇಂದು (ಡಿಸೆಂಬರ್ 20) ಬೆಳಗ್ಗೆ ನೆರವೇರಿದೆ. ಇದರೊಂದಿಗೆ ಸಾಹಿತ್ಯ ಸಮ್ಮೇಳನದ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಇದಾದ ಕೂಡಲೇ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಶುರುವಾಗಿದೆ. ನಂತರ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಮಂಡ್ಯದಲ್ಲಿ ಅಕ್ಷರ ಜಾತ್ರೆಗೆ ಧ್ವಜಾರೋಹಣದ ಮುನ್ನುಡಿ
ಸಮ್ಮೇಳನದ ವೇದಿಕೆ ಆವರಣದಲ್ಲಿ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ, ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್ ಚಲುವರಾಯಸ್ವಾಮಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷ ನಾಡೋಜ ಡಾ ಮಹೇಶ್ ಜೋಶಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು. ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕ ಮೀರಾ ಶಿವಲಿಂಗಯ್ಯ ನಾಡ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ,ಶಾಸಕ ದಿನೇಶ್ ಗೂಳಿಗೌಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು
ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆಗೆ ಚಾಲನೆ
ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನಗಾರಿ ಬಾರಿಸಿ ಚಾಲನೆ ನೀಡಿದರು. ಆದಿ ಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ, ಪುರುಶೋತ್ತಮಾನಂದ ಸ್ವಾಮೀಜಿ , ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ನರೇಂದ್ರಸ್ವಾಮಿ, ರವಿ ಕುಮಾರ್, ಮಧು ಮಾದೇಗೌಡ, ದಿನೇಶ್ ಗೂಳಿಗೌಡ ,ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಮತ್ತಿತರರು ಉಪಸ್ಥಿತರಿದ್ದರು.
ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಬೆಳಗ್ಗೆ ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆಗೆ ಚಾಲನೆ ಸಿಕ್ಕಿದೆ. ಮೆರವಣಿಗೆಯಲ್ಲಿ 154 ಕಲಾತಂಡಗಳು ಭಾಗವಹಿಸುತ್ತಿದ್ದು, 800 ಮಹಿಳೆಯರು ಪೂರ್ಣ ಕುಂಭ ಹಿಡಿದು ಸಾಗಿದ್ದಾರೆ. ಈ ಮೆರವಣಿಗೆ ನಗರದ ಪ್ರಮುಖ ರಸ್ತೆಗಳ ಮೂಲಕ ಸಮ್ಮೇಳನ ವೇದಿಕೆ ತಲುಪಲಿದೆ.
ಸಮ್ಮೇಳನ ಸರ್ವಾಧ್ಯಕ್ಷರ ಮೆರವಣಿಗೆಯ ನೇರ ಪ್ರಸಾರದ ವಿಡಿಯೋ
ಮೆರವಣಿಗೆ ಬಳಿಕ ಸಮ್ಮೇಳನದ ಉದ್ಘಾಟನೆ
ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಸಮ್ಮೇಳನ ಸ್ಥಳ ತಲುಪಿದ ಬಳಿಕ ಅಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮ್ಮೇಳನದ ಪ್ರಧಾನ ವೇದಿಕೆಗೆ ರಾಜಮಾತೆ ಕೆಂಪ ನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್, ಮಹಾಮಂಟಪಕ್ಕೆ ಸರ್ ಎಂ.ವಿಶ್ವೇಶ್ವರಯ್ಯ, ಮಹಾದ್ವಾರಕ್ಕೆ ಯಕ್ಷಕವಿ ಕೆಂಪಣ್ಣಗೌಡ ಮತ್ತು ಉಭಯ ಕವಿತಾ ವಿಶಾರದ ಷಡಕ್ಷರ ದೇವ, ಪ್ರವೇಶ ದ್ವಾರಕ್ಕೆ ಶ್ರೇಷ್ಠ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಮತ್ತು ಡಾ.ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಹೆಸರನ್ನಿಡಲಾಗಿದೆ.
ಪ್ರಧಾನವೇದಿಕೆ ಕಾರ್ಯಕ್ರಮ ಬೆಳಗ್ಗೆ 10.30ಕ್ಕೆ ಆರಂಭವಾಗ ಬೇಕಾಗಿದ್ದು, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾ ಟಿಸುವರು. ಸಮ್ಮೇಳನಾಧ್ಯಕ್ಷ ಸ್ಥಾನವನ್ನು ನಾಡೋಜ ಡಾ.ಗೊ.ರು.ಚನ್ನಬಸಪ್ಪ ವಹಿಸುವರು. ಎಚ್.ಡಿ.ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮೊದಲಾದವರು ಭಾಗವಹಿಸುವರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಪ್ರಧಾನ ವೇದಿಕೆಯಲ್ಲಿಸಮ್ಮೇಳನಾಧ್ಯಕ್ಷರ ಜೊತೆಗಿನ ಸಂವಾದವೂ ಸೇರಿ11 ಗೋಷ್ಠಿ, 2 ಸಮಾನಾಂತರವೇದಿಕೆಗಳಲ್ಲಿ 20 ಗೋಷ್ಠಿ ಆಯೋಜಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ, ಅಂಬೇಡ್ಕರ್‌ಭವನ, ಸಮಾನಾಂತರ ವೇದಿಕೆ ಮತ್ತು ಪ್ರಧಾನ ವೇದಿಕೆಗಳಲ್ಲಿ ಸ್ಥಳೀಯ ಕಲಾವಿದರ ಕಾರ್ಯಕ್ರಮಗಳು, ಪ್ರಧಾನ ವೇದಿಕೆಯಲ್ಲಿ ನುಡಿ ಜಾತ್ರೆ ಸ್ವರ ಯಾತ್ರೆ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲ ದಿನ ಸಾಧುಕೋಕಿಲ ಮತ್ತು ರಾಜೇಶ್ ಕೃಷ್ಣನ್ ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.