Mahanati Show: ಮಹಾನಟಿ ಶೋನಲ್ಲಿ ಶ್ರಮಿಕ ವರ್ಗಕ್ಕೆ ಅವಮಾನ; ರಮೇಶ್ ಅರವಿಂದ್, ಪ್ರೇಮಾ, ಅನುಶ್ರೀ, ಗಗನ ವಿರುದ್ಧ ದೂರು ದಾಖಲು
ಮಹಾನಟಿ ಶೋನಲ್ಲಿ ಪ್ರಸಾರವಾದ ಸ್ಕಿಟ್ ಮತ್ತು ಅದರಲ್ಲಿನ ಡೈಲಾಗ್ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶ್ರಮಿಕ ವರ್ಗಕ್ಕೆ ಅವಮಾನ ಮಾಡಿದ್ದಾರೆ ಎಂದು ತೀರ್ಪುಗಾರರಾದ ರಮೇಶ್ ಅರವಿಂದ್, ನಟಿ ಪ್ರೇಮಾ, ನಿರೂಪಕಿ ಅನುಶ್ರೀ ವಿರುದ್ಧ ದೂರು ದಾಖಲಾಗಿದೆ.
Mahanati Show: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ವಾರಾಂತ್ಯದ ಮಹಾನಟಿ ರಿಯಾಲಿಟಿ ಶೋಕ್ಕೆ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ಇದೇ ಶೋನಲ್ಲಿ ಶ್ರಮಿಕ ವರ್ಗಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಮಹಾನಟಿ ಶೋ, ನಿರ್ದೇಶಕ, ತೀರ್ಪುಗಾರರು ಮತ್ತು ನಿರೂಪಕರ ವಿರುದ್ಧ ತುಮಕೂರಿನ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಕಿಟ್‌ನಲ್ಲಿ ಬಳಸಿದ ಪದಕ್ಕೆ ವಾಹನ ಚಾಲಕರು, ಮೆಕ್ಯಾನಿಕ್ ಆಗಿ ಕೆಲಸ ಮಾಡುವವರು ತಿರುಗಿ ಬಿದ್ದಿದ್ದಾರೆ.
ಇದೇ ಮಹಾನಟಿ ಶೋನಲ್ಲಿ ಸ್ಪರ್ಧಿ ಗಗನ ಅವರಿಗೆ ತೀರ್ಪುಗಾರರಾದ ರಮೇಶ್ ಅರವಿಂದ್, ತಕ್ಷಣ ತಲೆಯಲ್ಲಿ ಹೊಳೆಯುವ ಕಾನ್ಸೆಪ್ಟ್ ನೀಡಿ, ಅದನ್ನು ನಟನೆ ಮೂಲಕ ತೋರಿಸುವಂತೆ ಹೇಳಿದ್ದಾರೆ. ಗಗನಗೆ ನಿಮ್ಮ ತಂಗಿ ಮೆಕ್ಯಾನಿಕ್‌ವೊಬ್ಬನನ್ನು ಲವ್ ಮಾಡುತ್ತಿದ್ದರೆ ನಿನ್ನ ಥಾಟ್ ಏನು? ಎಂಬ ಕಾನ್ಸೆಪ್ಟ್ ಸಿಕ್ಕಿದೆ. ಕೂಡಲೇ ಡೈಲಾಗ್ ಹೊಂದಿಸಿಕೊಂಡು, "ಕೊಚ್ಚೆ ಗುಂಡಿಗೆ ಬೀಳಬೇಡ. ದುಡ್ಡು ಮುಖ್ಯ. ನೀನು ಮೆಕ್ಯಾನಿಕ್‌ನ ಪ್ರೀತಿಸಿದರೆ ಗ್ರೀಸು ತಿಂದ್ಕೊಂಡು ಬದುಕಬೇಕಾಗುತ್ತೆ" ಎಂಬ ಡೈಲಾಗ್ ಮೂಲಕ ನಟನೆ ಮಾಡಿ ತೋರಿಸಿದ್ದಾರೆ ಗಗನ. ಈಗ ಇದೇ ಸಂಭಾಷಣೆ ವಿವಾದಕ್ಕೆ ಕಾರಣವಾಗಿದೆ.
ಈ ಸಂಭಾಷಣೆ ವೈರಲ್ ಆಗುತ್ತಿದ್ದಂತೆ, ದ್ವಿಚಕ್ರ ವಾಹನ ಮೆಕ್ಯಾನಿಕಲ್ ಸಂಘ ಒಟ್ಟಾಗಿದೆ. ಚಿಕ್ಕನಾಯಕನಹಳ್ಳಿಯಲ್ಲಿ ದೂರು ದಾಖಲಿಸಿ ಈ ಕೂಡಲೇ ಕ್ಷಮೆಗೆ ಆಗ್ರಹಿಸಿದೆ. ಶ್ರಮಿಕ ವರ್ಗದ ವೃತ್ತಿಯನ್ನು ಹಾಸ್ಯಾಸ್ಪದವಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಒಂದು ವೃತ್ತಿಯನ್ನು ಎಲ್ಲರ ಸಮ್ಮುಖದಲ್ಲಿ ಕೆಟ್ಟದ್ದು ಎಂದು ಬಿಂಬಿಸಲಾಗಿದೆ. ಹಾಗಾಗಿ ಈ ಕೂಡಲೇ ಇಡೀ ಮಹಾನಟಿ ತಂಡ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲೂ ದೂರು ದಾಖಲಿಸುವುದಾಗಿ ಎಚ್ಚರಿಕೆ ರವಾನಿಸಿದೆ.
ಡಾ.ವಡ್ಡಗೆರೆ ನಾಗರಾಜಯ್ಯ ಬರಹ
ಜೀ ಕನ್ನಡ ದೂರದರ್ಶನ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ, ನಟ ರಮೇಶ್ ಅರವಿಂದ್, ''ನಿನ್ನ ತಂಗಿ ಯಾರಾದ್ರೂ ಮೆಕ್ಯಾನಿಕ್ ಒಬ್ಬನನ್ನು ಪ್ರೀತಿಸಿದರೆ ನಿನ್ನ ತಂಗಿಗೆ ಹೇಗೆ ಬುದ್ಧಿ ಹೇಳ್ತೀಯ? ನಿನಗೆ ತೋಚಿದ್ದನ್ನು ತೋಚಿದಂತೆ ಮಾತಾಡು" ಎಂದು ಒಬ್ಬ ಯುವತಿಗೆ ಕೇಳುತ್ತಾರೆ. ಆಗ ಆ ಯುವತಿ, 'ಕೊಚ್ಚೆ ಗುಂಡಿಗೆ ಬೀಳಬೇಡ. ದುಡ್ಡು ಮುಖ್ಯ. ನೀನು ಮೆಕ್ಯಾನಿಕ್‌ನ ಪ್ರೀತಿಸಿದರೆ ಗ್ರೀಸು ತಿಂದ್ಕೊಂಡು ಬದುಕಬೇಕಾಗುತ್ತೆ" ಎಂದು ದೊಡ್ಡ ಉಮೇದಿನಿಂದ ಹೇಳುತ್ತಾಳೆ.
ಆ ಯುವತಿಯ ಮಾತು ಕೇಳಿ, ರಮೇಶ್ ಅರವಿಂದ್ ಮತ್ತು ಆತನ ಜೊತೆಯಲ್ಲಿದ್ದ ಹೊಟ್ಟೆ ತುಂಬಿದ ಅಹಂಕಾರಿಗಳು ಕೇಕೆ ಹಾಕಿ ಚಪ್ಪಾಳೆ ತಟ್ಟಿ ಆ ಹುಡುಗಿಯನ್ನು ಮತ್ತಷ್ಟು ಹುರಿದುಂಬಿಸಿ ಪ್ರಚೋದಿಸುತ್ತಾರೆ. ಆಗ ಆ ಹುಡುಗಿ, "ಮೆಕ್ಯಾನಿಕ್ ಗಳನ್ನು ಪ್ರೀತಿಸುವುದು ಕೊಚ್ಚೆ ಗುಂಡಿಗೆ ಬಿದ್ದಂತೆ, ಗ್ರೀಸ್ ತಿಂದು ಬದುಕಬೇಕಾಗುತ್ತೆ" ಎಂದು ಹೇಳುತ್ತಾಳೆ.
ಮೌಲ್ಯಪ್ರಜ್ಞೆ ಕಳೆದುಕೊಂಡ ಆ ಹುಡುಗಿಗೆ ಈ ಮಹನೀಯರು ಬುದ್ಧಿ ಹೇಳುವುದು ಬಿಟ್ಟು ಚಪ್ಪಾಳೆ ತಟ್ಟಿ ಕೇಕೆಹಾಕಿ ಶಿಳ್ಳೆ ಹೊಡೆದು ನಗುತ್ತಾರೆ. ಮೆಕ್ಯಾನಿಕ್ ಗಳ ಅಥವಾ ಇನ್ನಾವುದೇ ಜನರ ಬಡತನದ ಬದುಕನ್ನು ಲೇವಡಿ ಮಾಡಿಕೊಂಡು ನಗುವ ಇವರು ಎಂತಹ ಕ್ರೂರಿಗಳಿರಬಹುದು ? ಸಿರಿವಂತಿಕೆಯ ಅಹಂಕಾರ ನೆತ್ತಿಗೇರಿ ಮಾನವೀಯತೆಯ ಚಿಗುರನ್ನೇ ಒಸಕಿ ಹಾಕುವಷ್ಟು ಮನುಷ್ಯರು ಕ್ರೂರಿಗಳಾಗಬಾರದು.
ವಿಭಾಗ