ಭಾಗ್ಯಳ ಪ್ರೀತಿ ಅರ್ಥವಾಗುತ್ತಿದೆ; ಅಮ್ಮ, ಮಗನ ಆಸೆಯಂತೆ ಈಗಲಾದ್ರೂ ಬದಲಾಗ್ತಾನಾ ತಾಂಡವ್‌?
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಳ ಪ್ರೀತಿ ಅರ್ಥವಾಗುತ್ತಿದೆ; ಅಮ್ಮ, ಮಗನ ಆಸೆಯಂತೆ ಈಗಲಾದ್ರೂ ಬದಲಾಗ್ತಾನಾ ತಾಂಡವ್‌?

ಭಾಗ್ಯಳ ಪ್ರೀತಿ ಅರ್ಥವಾಗುತ್ತಿದೆ; ಅಮ್ಮ, ಮಗನ ಆಸೆಯಂತೆ ಈಗಲಾದ್ರೂ ಬದಲಾಗ್ತಾನಾ ತಾಂಡವ್‌?

ತಾಂಡವ್‌ಗೆ ಅಮ್ಮನ ಮಾತು, ಮಗನ ಮಾತು ಚುಚ್ಚುತಲೇ ಇರುತ್ತದೆ. ದೊಡ್ಡವರು, ಚಿಕ್ಕವರಿಂದ ನಾನು ಕೆಟ್ಟವನು ಎನಿಸಿಕೊಂಡೆ, ಅಮ್ಮ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಹಾಳು ಮಾಡುತ್ತಿದ್ದೇನೆ ಎಂದು ಯೋಚಿಸುವಾಗ ಶ್ರೇಷ್ಠ ಕಾಲ್‌ ಮಾಡುತ್ತಾಳೆ. ಅವಳ ಕಾಲ್‌ ಎಂದು ತಿಳಿಯುತ್ತಿದ್ದಂತೆ ಈಗಲೇ ಇವಳು ಫೋನ್‌ ಮಾಡಬೇಕಾ ಎಂದು ಬೈಯ್ಯುತ್ತಾನೆ.

ಭಾಗ್ಯಲಕ್ಷ್ಮಿ ಧಾರಾವಾಹಿ 277ನೇ ಎಪಿಸೋಡ್‌
ಭಾಗ್ಯಲಕ್ಷ್ಮಿ ಧಾರಾವಾಹಿ 277ನೇ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಮಗ ನನ್ನನ್ನು ನೋಡಲು ಆಸ್ಪತ್ರೆಗೆ ಬರಲಿಲ್ಲ ಎಂಬ ನೋವು ಕುಸುಮಾಗೆ ಕಾಡುತ್ತದೆ. ಒಬ್ಬನೇ ಮಗ ಸಾಕು ಅಂತ ನಿನಗೆ ಜನ್ಮ ಕೊಟ್ಟೆ, ಆದರೆ ನೀನು ನನ್ನ ನಂಬಿಕೆ ಉಳಿಸಿಕೊಳ್ಳಲಿಲ್ಲ. ನಮಗೆ ಆಗುವುದೇ ನಮ್ಮ ಸೊಸೆ ಎಂದು ಕುಸುಮಾ ಬೇಸರ ವ್ಯಕ್ತಪಡಿಸುತ್ತಾಳೆ.

ಅಮ್ಮ, ಮಗನ ಮಾತು ತಾಂಡವ್‌ ಮನಸ್ಸಿಗೆ ನಾಟುತ್ತಿದೆ

ಅಜ್ಜಿ ಬೇಸರಗೊಂಡಿರುವುದನ್ನು ಗಮನಿಸಿದ ತನ್ಮಯ್‌, ಹೆದರಬೇಡಿ ಅಜ್ಜಿ ನಾವೆಲ್ಲರೂ ಸೇರಿ ಗಣೇಶ ಹಬ್ಬ ಆಚರಿಸೋಣ, ದೇವರು ಅಪ್ಪನಿಗೆ ಖಂಡಿತ ಒಳ್ಳೆ ಬುದ್ಧಿ ನೀಡುತ್ತಾನೆ ಎನ್ನುತ್ತಾನೆ. ಮಗನ ಮಾತು ತಾಂಡವ್‌ಗೆ ನಾಟುತ್ತದೆ. ಫಾದರ್ಸ್‌ ಡೇ ಸಂದರ್ಭದಲ್ಲಿ ಇಬ್ಬರೂ ಮಕ್ಕಳು ತನಗೆ ಗಿಫ್ಟ್‌ ನೀಡುವುದನ್ನು ತಾಂಡವ್‌ ನೆನಪಿಸಿಕೊಂಡು ಮಗನನ್ನು ತಬ್ಬಿಕೊಳ್ಳುತ್ತಾನೆ. ಹೆದರಬೇಡ ನಾನು ಅಷ್ಟು ಕೆಟ್ಟ ಅಪ್ಪ ಅಲ್ಲ ಎಂದು ತಾಂಡವ್‌, ಮಗನಿಗೆ ಹೇಳುತ್ತಾನೆ. ಅಪ್ಪ ನೀವು ನನಗೆ ಇಷ್ಟ , ಆದರೆ ಒಮ್ಮೊಮ್ಮೆ ನೀವು ಅಮ್ಮನಿಗೆ ಬೈಯ್ಯುತ್ತೀರ ನನಗೆ ಅದೇ ಬೇಸರ, ಅದಕ್ಕೆ ಗಣೇಶನ ಪೂಜೆ ಮಾಡಬೇಕೆಂದುಕೊಂಡಿರುವುದಾಗಿ ಹೇಳುತ್ತಾನೆ. ತನ್ಮಯ್‌ ಬಾಯಲ್ಲಿ ಇಂಥಹ ಮಾತುಗಳನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಗುತ್ತದೆ.

ಮನೆಗೆ ಹೊರಡಲು ನಿಂತ ಸುನಂದಾ ಹಾಗೂ ಪೂಜಾ ಇಬ್ಬರನ್ನೂ ಹಬ್ಬ ಮುಗಿಸಿಕೊಂಡು ಹೋಗುವಂತೆ ಕುಸುಮಾ ತಡೆಯುತ್ತಾಳೆ. ನಾನು ನಾಳೆ ಮಧ್ಯಾಹ್ನ ಬರುತ್ತೇನೆ ಎಂದು ಭಾಗ್ಯ ತಂದೆ ಮನೆಗೆ ಹೊರಡುತ್ತಾರೆ. ಗಂಡ ಹೆಂಡತಿ ಇಬ್ಬರೂ ಮಡಿ ಉಟ್ಟು ಗಣೇಶನನ್ನು ಮಾಡಿ ಎಂದು ಕುಸುಮಾ ಮಗ ಸೊಸೆಗೆ ಹೇಳುತ್ತಾಳೆ. ಕುಸುಮಾ ಇಬ್ಬರಿಗೂ ಗಣೇಶನನ್ನು ಮಾಡಲು ಹೇಳಿಕೊಡುತ್ತಾಳೆ. ಮಗನಿಗೆ ತಾಯಿ ಮೇಲೆ ಪ್ರೀತಿ ಬರುವಂತೆ ಮಾಡಪ್ಪಾ ಗಣೇಶ ಎಂದು ಕುಸುಮಾ ಜೋರಾಗೇ ಹೇಳುತ್ತಾಳೆ. ಇನ್ನೊಂದೆಡೆ ಸುನಂದಾ, ಆದಷ್ಟು ಬೇಗ ನನ್ನ ಮಗಳ ಜೀವನವನ್ನು ದಡ ಸೇರಿಸು, ಅಳಿಯನಿಗೆ ಒಳ್ಳೆ ಬುದ್ಧಿ ಕೊಡು ಎಂದು ಕಣ್ಣೀರಿಡುತ್ತಾ ಬೇಡಿಕೊಳ್ಳುತ್ತಾಳೆ. ಇದನ್ನು ಗಮನಿಸುವ ಕುಸುಮಾ, ನೋಡಿ ನನ್ನ ಮಗನಿಗೆ ತಾಯಿ ಮೇಲೆ ಸ್ವಲ್ಪ ಪ್ರೀತಿ ಕಡಿಮೆ ಆಗಿದೆ. ಆದರೆ ಗಂಡನಾಗಿ ಹೆಂಡತಿ ಹಾಗೂ ಮಕ್ಕಳ ಮೇಲೆ ಎಂದಿಗೂ ಪ್ರೀತಿ ಕಡಿಮೆ ಅಗಿಲ್ಲ. ಅವನು ನಿಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುತ್ತಾಳೆ.

ನನ್ನೊಂದಿಗೆ ಹಬ್ಬ ಆಚರಿಸುವಂತೆ ತಾಂಡವ್‌ನನ್ನು ಆಹ್ವಾನಿಸುವ ಶ್ರೇಷ್ಠ

ಮತ್ತೊಂದೆಡೆ ರೂಮ್‌ನಲ್ಲಿ ಬಂಧಿಯಾಗಿರುವ ಶ್ರೇಷ್ಠಾಗೆ ಕಾವ್ಯ ಊಟ ನೀಡಲು ಬರುತ್ತಾಳೆ. ತಾಂಡವ್‌ನನ್ನು ಬಿಟ್ಟುಬಿಡು, ಮದುವೆ ಆಗಿರುವ ಗಂಡಸರನ್ನು ಪ್ರೀತಿ ಮಾಡಿದರೆ ಅವರು ನಿನಗೆ ದಕ್ಕುವುದಿಲ್ಲ. ಗಂಭೀರ ಪರಿಸ್ಥಿತಿ ಎದುರಾದರೆ ಅವರು ತಮ್ಮ ಹೆಂಡತಿ, ಮಕ್ಕಳ ಕಡೆ ಹೋಗುತ್ತಾರೆ ಎಂದು ಬುದ್ಧಿ ಹೇಳುತ್ತಾಳೆ. ಆದರೆ ಶ್ರೇಷ್ಠ ಮಾತ್ರ ಯಾರ ಮಾತನ್ನು ಕೇಳಲು ರೆಡಿ ಇರುವುದಿಲ್ಲ. ತಾಂಡವ್‌, ಭಾಗ್ಯ ಹಾಗೂ ಮಕ್ಕಳೊಂದಿಗೆ ಮಣ್ಣಿನ ಗಣೇಶ ಮಾಡುವ ವಿಡಿಯೋವನ್ನು ಪೂಜಾ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿರುತ್ತಾಳೆ. ಅದನ್ನು ಕಾವ್ಯ ಶ್ರೇಷ್ಠಗೆ ತೋರಿಸುತ್ತಾಳೆ. ಆದರೆ ಶ್ರೇಷ್ಠ ತಾಂಡವ್‌ನನ್ನು ನಾನು ಇಲ್ಲಿಗೆ ಬರಲು ಹೇಳುತ್ತೇನೆ. ಅವನು ನನ್ನನ್ನು ಪ್ರೀತಿಸುತ್ತಾನೆ ಎನ್ನುತ್ತಾಳೆ.

ಇತ್ತ, ತಾಂಡವ್‌ಗೆ ಅಮ್ಮನ ಮಾತು, ಮಗನ ಮಾತು ಚುಚ್ಚುತಲೇ ಇರುತ್ತದೆ. ದೊಡ್ಡವರು, ಚಿಕ್ಕವರಿಂದ ನಾನು ಕೆಟ್ಟವನು ಎನಿಸಿಕೊಂಡೆ, ಅಮ್ಮ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಹಾಳು ಮಾಡುತ್ತಿದ್ದೇನೆ ಎಂದು ಯೋಚಿಸುವಾಗ ಶ್ರೇಷ್ಠ ಕಾಲ್‌ ಮಾಡುತ್ತಾಳೆ. ಅವಳ ಕಾಲ್‌ ಎಂದು ತಿಳಿಯುತ್ತಿದ್ದಂತೆ ಈಗಲೇ ಇವಳು ಫೋನ್‌ ಮಾಡಬೇಕಾ ಎಂದು ಬೈಯ್ಯುತ್ತಾನೆ. ನಾಳೆ ನಮ್ಮ ಮನೆಗೆ ಗಣಪತಿ ಹಬ್ಬ ಮಾಡಲು ಬಾ ಎಂದು ಶ್ರೇಷ್ಠ ಕರೆಯುತ್ತಾಳೆ. ಆದರೆ ತಾಂಡವ್‌ ಮಾತ್ರ ಆಕೆಯ ಮಾತು ಕೇಳಲು ರೆಡಿ ಇಲ್ಲ. ನಾಳೆ ನೀನು ಬರದೆ ಇದ್ದರೆ ನಾನೇ ಬರುತ್ತೇನೆ ಎಂದು ಶ್ರೇಷ್ಠ ಬ್ಲಾಕ್‌ ಮೇಲ್‌ ಮಾಡಿ ಫೋನ್‌ ಇಡುತ್ತಾಳೆ.

ಹೆಂಡತಿಯ ಪ್ರೀತಿ ತಾಂಡವ್‌ಗೆ ಅರ್ಥವಾಗುತ್ತಿದೆ

ಶ್ರೇಷ್ಠ ಜೊತೆ ಮಾತನಾಡುವ ತಾಂಡವ್‌ಗೆ ಕಿರಿಕಿರಿಯಾಗುತ್ತದೆ. ಅಷ್ಟರಲ್ಲಿ ಭಾಗ್ಯ ಟೀ ಹಿಡಿದು ಬರುತ್ತಾಳೆ. ಬೆಳಗ್ಗಿನಿಂದ ನಿಮ್ಮ ಮೂಡ್‌ ಸರಿ ಇಲ್ಲ ಎನಿಸುತ್ತದೆ. ಶುಂಠಿ ಟೀ ಮಾಡಿದ್ದೀನಿ, ಜೊತೆಗೆ ನೀಲಗಿರಿ ತೈಲ ಹಣೆಗೆ ಹಚ್ಚಿಕೊಳ್ಳಿ ಎನ್ನುತ್ತಾಳೆ. ಮದುವೆ ಹೊಸತರಲ್ಲಿ ಹೇಳಿದ ಮಾತು ತಾಂಡವ್‌ಗೆ ನೆನಪಾಗುತ್ತದೆ. ಇವಳು ಈಗಲೂ ಇದನ್ನು ನೆನಪಿಟ್ಟುಕೊಂಡಿದ್ದಾಳಾ. ನಾನು ಎಷ್ಟು ದೂರ ತಳ್ಳಿದರೂ ನನ್ನನ್ನು ಇವಳು ಇಷ್ಟು ಪ್ರೀತಿಸುತ್ತಾಳಾ ಎಂದುಕೊಳ್ಳುತ್ತಾನೆ.

ಈಗಾಗಲಾದರೂ ತಾಂಡವ್‌ಗೆ ತನ್ನ ತಪ್ಪಿನ ಅರಿವಾಗಿ ಶ್ರೇಷ್ಠ ಸಹವಾಸ ಬಿಟ್ಟು ಭಾಗ್ಯಳನ್ನು ಅರ್ಥ ಮಾಡಿಕೊಳ್ಳುತ್ತಾನಾ ಕಾದು ನೋಡಬೇಕು.

Whats_app_banner