ಇಳಯರಾಜ ಬಯೋಪಿಕ್‌: ಸಿನಿಮಾವಾಗುತ್ತಿದೆ ಇಳಯರಾಜರ ಜೀವನಕಥೆ; ಸಂಗೀತ ಕ್ಷೇತ್ರದ ರಾಜನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ವಿವರ-kollywood news dhanush launches poster of music composer ilaiyaraaja biopic with kamal haasan pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಇಳಯರಾಜ ಬಯೋಪಿಕ್‌: ಸಿನಿಮಾವಾಗುತ್ತಿದೆ ಇಳಯರಾಜರ ಜೀವನಕಥೆ; ಸಂಗೀತ ಕ್ಷೇತ್ರದ ರಾಜನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ವಿವರ

ಇಳಯರಾಜ ಬಯೋಪಿಕ್‌: ಸಿನಿಮಾವಾಗುತ್ತಿದೆ ಇಳಯರಾಜರ ಜೀವನಕಥೆ; ಸಂಗೀತ ಕ್ಷೇತ್ರದ ರಾಜನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ವಿವರ

Ilaiyaraaja biopic: ಸಂಗೀತ ನಿರ್ದೇಶಕ ಇಳಯರಾಜ ಜೀವನಾಧರಿತ ಬಯೋಪಿಕ್‌ನ ಪೋಸ್ಟರ್‌ ಬಿಡುಗಡೆಯಾಗಿದೆ. ಇಳಯರಾಜ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಇಳಯರಾಜ, ಧನುಷ್‌, ಕಮಲ್‌ಹಾಸನ್‌ ಬಿಡುಗಡೆ ಮಾಡಿದ್ದಾರೆ. ಇಳಯರಾಜ ಬಯೋಪಿಕ್‌ ಸುದ್ದಿಯೊಂದಿಗೆ ಸಂಗೀತ ಲೋಕದ ಮಾಂತ್ರಿಕ ಇಳಯರಾಜರ ಬದುಕಿನ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ.

ಇಳಯರಾಜ ಬಯೋಪಿಕ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಇಳಯರಾಜ, ಕಮಲ್‌ಹಾಸನ್‌, ಧನುಷ್‌
ಇಳಯರಾಜ ಬಯೋಪಿಕ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಇಳಯರಾಜ, ಕಮಲ್‌ಹಾಸನ್‌, ಧನುಷ್‌

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಜೀವನಾಧರಿತ ಬಯೋಪಿಕ್‌ನ ಪೋಸ್ಟರ್‌ ಬಿಡುಗಡೆಯಾಗಿದೆ. ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಇಳಯರಾಜ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಇಳಯರಾಜ, ಧನುಷ್‌, ಕಮಲ್‌ಹಾಸನ್‌ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ಇಳಯರಾಜ ಪಾತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಧನುಷ್‌ ಮಾಡಲಿದ್ದಾರೆ. ಇಳಯರಾಜ ಸಿನಿಮಾಕ್ಕೆ ಸ್ವತಃ ಇಳಯರಾಜರೇ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಬಯೋಪಿಕ್‌ಗೆ ಇಳಯರಾಜ ಎಂದೇ ಹೆಸರಿಡಲಾಗಿದೆ. ಈ ಸಿನಿಮಾಕ್ಕೆ ಅರುಣ್‌ ಮಹೇಶ್ವರನ್‌ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಇದೇ ನಿರ್ದೇಶಕರು ಧನುಷ್‌ ಜತೆ ಇತ್ತೀಚೆಗೆ ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾ ಮಾಡಿದ್ದರು.

ಇಳಯರಾಜ ಬಯೋಪಿಕ್‌ ಪೋಸ್ಟರ್‌

ನಟ ಧನುಷ್‌ ಅವರು ಎಕ್ಸ್‌ನಲ್ಲಿ ಇಳಯರಾಜ ಬಯೋಪಿಕ್‌ನ ಪೋಸ್ಟರ್‌ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ "ಹಾನರ್ಡ್‌ ಇಳಯರಾಜ ಸರ್‌" ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಸಿನಿಮಾ ಕ್ಷೇತ್ರದ ವಿಶ್ಲೇಷಕರ ತರುಣ್‌ ಆದರ್ಶ್‌ ಅವರು ಪೋಸ್ಟರ್‌ ಬಿಡುಗಡೆ ಕಾರ್ಯಕ್ರಮದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. "ಇದು ಇಳಯರಾಜ ಬಯೋಪಿಕ್‌ ಕಾರ್ಯಕ್ರಮದ ವಿವರ. ಕಮಲ್‌ಹಾಸನ್‌ ಧನುಷ್‌ ಅವರು ಪಾಲ್ಗೊಂಡ ಪ್ರಮುಖ ಕಾರ್ಯಕ್ರಮವಾಗಿದೆ. ಇದು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಕಾರ್ಯಕ್ರಮ" ಎಂದು ತರುಣ್‌ ಆದರ್ಶ್‌ ಹೇಳಿದ್ದಾರೆ.

ಇಳಯರಾಜ ಅವರ ಬಯೋಪಿಕ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ವಿಶೇಷವಾಗಿ ಇಳಯರಾಜ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ಕುತೂಹಲವಿತ್ತು. "ನನ್ನ ತಂದೆ ಇಳಯರಾಜರ ಸಿನಿಮಾ ಮಾಡುವುದಾದರೆ ಆ ಸಿನಿಮಾದಲ್ಲಿ ತಂದೆಯ ಪಾತ್ರದಲ್ಲಿ ಧನುಷ್‌ರನ್ನು ನೋಡಲು ಬಯಸುವೆ" ಎಂದು ಈ ಹಿಂದೆ ಇಳಯರಾಜರ ಮಗ ಯುವನ್‌ ಶಂಕರ್‌ ರಾಜ್‌ ಹೇಳಿದ್ದರು.

ಈ ಬಯೋಪಿಕ್‌ ನಿರ್ಮಾಣವನ್ನು ಶ್ರೀರಾಮ್‌ ಭಕ್ತಿಶರಣ್‌, ಸಿಕೆ ಪದ್ಮ ಕುಮಾರ್‌, ವರುಣ್‌ ಮಾತೂರ್‌, ಇಲಮ್‌ಪರಿತಿ ಗಜೇಂದ್ರನ್‌ ಮತ್ತು ಸೌರಭ್‌ ಮಿಶ್ರಾ ಮಾಡಲಿದ್ದಾರೆ. ಇಳಯರಾಜ ಬಯಪಿಕ್‌ ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ರಿಲೀಸ್‌ ಆಗಲಿದೆ.

ಇಳಯರಾಜರ ಬಗ್ಗೆ ನಿಮಗೆಷ್ಟು ಗೊತ್ತು?

ಈ ಸಿನಿಮಾವು ಇಳಯರಾಜರ ಬದುಕು, ಕಾಲಘಟ್ಟದ ವಿವರ ಹೊಂದಿರಲಿದೆ. ಕಳೆದ ಐದು ದಶಕಗಳಲ್ಲಿ ಇಳಯರಾಜ ಅವರು ಸುಮಾರು 1 ಸಾವಿರಕ್ಕೂ ಹೆಚ್ಚು ಸಿನಿಮಾಗಳಿಗೆ ಕೆಲಸ ಮಾಡಿದ್ದು, 7 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ನೀಡಿದ್ದಾರೆ. ಜಗತ್ತಿನಾದ್ಯಂತ 20 ಸಾವಿರಕ್ಕೂ ಹೆಚ್ಚು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. 2010ರಲ್ಲಿ ಇವರಿಗೆ ಭಾರತದ ಅಗ್ರ ಮೂರನೇ ನಾಗರಿಕ ಪ್ರಶಸ್ತಿ ಪದ್ಮ ಭೂಷಣ ದೊರಕಿದೆ.2018ರಲ್ಲಿ ಇಳಯರಾಜರಿಗೆ ಎರಡನೇ ಪರಮೋಚ್ಚ ಪ್ರಶಸ್ತಿ ಪದ್ಮ ವಿಭೂಷಣ ನೀಡಿ ಗೌರವಿಸಲಾಗಿದೆ.

ಇಳಯರಾಜ ಅವರು 1943ರ ಜೂನ್‌ 2ರಂದು ಜನಿಸಿದರು. ಇವರ ಮೂಲಕ ಹೆಸರು ಜ್ಞಾನದೇಶಿಕನ್‌. ಲಂಡನ್‌ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್‌ನಿಂದ ಸ್ವರ್ಣ ಪದಕ ಪಡೆದಿದ್ದಾರೆ. ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್‌ ಶಿಷ್ಯರೂ ಹೌದು. ಸಂಗೀತ ನಿರ್ದೇಶನ ಮಾತ್ರವಲ್ಲದೆ ಗೀತ ರಚನೆಕಾರರಾಗಿ ಮತ್ತು ಗಾಯಕರಾಗಿಯೂ ಜನಪ್ರಿಯತೆ ಪಡೆದಿದ್ದಾರೆ.

ಸ್ಯಾಂಡಲ್‌ವುಡ್‌ನ ಭರ್ಜರಿ ಬೇಟೆ. ನನ್ನ ನೀ ಗೆಲ್ಲಲಾರೆ. ಗೀತಾ, ಜನ್ಮಜನ್ಮದ ಅನುಬಂಧ, ನಮ್ಮೂರ ಮಂದಾರ ಹೂವೇ, ಪಲ್ಲವಿ ಅನುಪಲ್ಲವಿ ಸಿನಿಮಾಗಳಿಗೆ ಇವರು ಸಂಗೀತ ನೀಡಿದ್ದಾರೆ. 'ಸಾಗರ ಸಂಗಮಂ' (ತೆಲುಗು), 'ಸಿಂಧು ಭೈರವಿ' (ತಮಿಳು), 'ರುದ್ರವೀಣ'(ತೆಲುಗು), 'ಪಜಾಸ್ಸಿ ರಾಜ'(ಮಲಯಾಳಂ) ಸೇರಿದಂತೆ ಇವರು ದೇಶಾದ್ಯಂತ ಸಂಗೀತದ ಸುಧೆಯನ್ನು ಹರಿಸಿದ್ದಾರೆ.

mysore-dasara_Entry_Point