Vettaiyan Review: ವೆಟ್ಟೈಯನ್ ಸಿನಿಮಾ ನೋಡಿ ಸೂಪರ್‌ಸ್ಟಾರ್‌ ಫ್ಯಾನ್ಸ್‌ ಏನಂದ್ರು? ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ರಜನಿಕಾಂತ್‌ ಚಿತ್ರ
ಕನ್ನಡ ಸುದ್ದಿ  /  ಮನರಂಜನೆ  /  Vettaiyan Review: ವೆಟ್ಟೈಯನ್ ಸಿನಿಮಾ ನೋಡಿ ಸೂಪರ್‌ಸ್ಟಾರ್‌ ಫ್ಯಾನ್ಸ್‌ ಏನಂದ್ರು? ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ರಜನಿಕಾಂತ್‌ ಚಿತ್ರ

Vettaiyan Review: ವೆಟ್ಟೈಯನ್ ಸಿನಿಮಾ ನೋಡಿ ಸೂಪರ್‌ಸ್ಟಾರ್‌ ಫ್ಯಾನ್ಸ್‌ ಏನಂದ್ರು? ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ರಜನಿಕಾಂತ್‌ ಚಿತ್ರ

Vettaiyan: ವೆಟ್ಟೈಯನ್‌ ಚಿತ್ರ ಬಿಡುಗಡೆಯಾಗಿದ್ದು, ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. ಒಂದೆಡೆ ರಜನಿಕಾಂತ್‌ ನಟನೆ ಬಗ್ಗೆ ನಿರಾಶೆ ವ್ಯಕ್ತವಾಗಿದ್ದು, ಮತ್ತೊಂದೆಡೆ ಟ್ವಿಸ್ಟ್‌ ಬಗ್ಗೆಯೂ ಪ್ರತಿಕ್ರಿಯೆ ಬಂದಿವೆ. ಸಾಮಾಜಿಕ ಸಂದೇಶ ನಿರೀಕ್ಷಿಸುವವರು ಚಿತ್ರ ವೀಕ್ಷಿಸಬಹುದು ಎನ್ನುತ್ತಿದ್ದಾರೆ ವೀಕ್ಷಕರು.

Vettaiyan Review: ರಜನಿಕಾಂತ್ ಬಲವಂತವಾಗಿ ನಟಿಸಿದಂತಿದೆ ಎಂದ ವೀಕ್ಷಕ
Vettaiyan Review: ರಜನಿಕಾಂತ್ ಬಲವಂತವಾಗಿ ನಟಿಸಿದಂತಿದೆ ಎಂದ ವೀಕ್ಷಕ

ಸೂಪರ್‌ ಸ್ಟಾರ್‌ ರಜನಿಕಾಂತ್‌, ವೆಟ್ಟೈಯನ್‌ ಚಿತ್ರದ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಜೈ ಭೀಮ್ ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶನದ ಚಿತ್ರವು ಬಿಡುಗಡೆಯ ಮೊದಲ ದಿನವೇ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಬಾಲಿವುಡ್‌ನ ದಿಗ್ಗಜ ನಟ ಅಮಿತಾಬ್ ಬಚ್ಚನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಿ ಹಾಗೂ ರಜನಿಕಾಂತ್ 33 ವರ್ಷಗಳ ನಂತರ ಒಟ್ಟಾಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಇದು ರಜನಿಕಾಂತ್‌ ಅವರ 170ನೇ ಸಿನಿಮಾವಾಗಿದ್ದು; ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿ ಒಟ್ಟು 5 ಭಾಷೆಗಳಲ್ಲಿ ರಿಲೀಸ್‌ ವಿಶ್ವದಾದ್ಯಂತ ರಿಲೀಸ್ ಆಗಿದೆ.

ಚಿತ್ರದಲ್ಲಿ ಬಿಗ್‌ ಬಿ ಜೊತೆಗೆ ಕನ್ನಡದ ನಟ ಕಿಶೋರ್‌, ಮಲಯಾಳಂ ನಟ ಫಹಾದ್ ಫಾಸಿಲ್, ತೆಲುಗು ನಟ ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಷಾರ ವಿಜಯನ್, ರೋಹಿಣಿ, ರಕ್ಷಣ್ ಮತ್ತು ಇತರರು ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ, ಎಸ್‌ಆರ್ ಕತೀರ್ ಅವರ ಛಾಯಾಗ್ರಹಣ ಅಭಿಮಾನಿಗಳಿಗೆ ಇಷ್ಟವಾಗಿದೆ.

ಈಗಾಗಲೇ ಹಲವು ಅಭಿಮಾನಿಗಳು ಚಿತ್ರವನ್ನು ವೀಕ್ಷಿಸಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಹೀಗಾಗಿ ಫ್ಯಾನ್ಸ್‌ ನಡುವೆ ಕುತೂಹಲ ಹೆಚ್ಚುತ್ತಿದೆ. ಸಾಮಾಜಿಕವಾಗಿ ಪ್ರಸ್ತುತವಿರುವ ಹಲವು ವಿಚಾರಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ನಕಲಿ ಎನ್‌ಕೌಂಟರ್‌, ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯಮಿಗಳಿಂದ ಆಗುತ್ತಿರುವ ಶೋಷಣೆಯನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಚಿತ್ರವು ವೀಕ್ಷಕನನ್ನು 1980-1990ರ ದಶಕಕ್ಕೆ ಕೊಂಡೊಯ್ಯುತ್ತದೆ.

ಕಾನೂನು ಜಾರಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಆಗುತ್ತಿರುವ ಭ್ರಷ್ಟಾಚಾರ ಕುರಿತು ಚಿತ್ರದಲ್ಲಿ ಚಿತ್ರದಲ್ಲಿ ತೋರಿಸಲಾಗಿದೆ. ಚಲನಚಿತ್ರಗಳಲ್ಲಿ ಸಾಮಾಜಿಕ ಸಂದೇಶ ನಿರೀಕ್ಷಿಸುವವರು ಚಿತ್ರ ವೀಕ್ಷಿಸಬಹುದು ಎನ್ನುತ್ತಿದ್ದಾರೆ ವೀಕ್ಷಕರು. ಸದ್ಯ ಚಿತ್ರದ ಕುರಿತು ವೀಕ್ಷಕರು ಏನು ಹೇಳುತ್ತಾರೆ ನೋಡೋಣ.

ರಜನಿಕಾಂತ್‌ ಬಲವಂತವಾಗಿ ನಟಿಸಿದಂತಿದೆ

ಉಮೈರ್ ಸಂಧು ಎಂಬವರು ಚಿತ್ರ ವಿಮರ್ಶೆ ಮಾಡಿದ್ದು, ಅಮಿತಾಬ್ ಬಚ್ಚನ್ ಮತ್ತು ರಜಿನಿಕಾಂತ್ ಜೋಡಿ ಚಿತ್ರದ ಪಾಸಿಟಿವ್‌ ಅಂಶ. ಆದರೆ ಅಮಿತ್ ಅವರು ತಾಜಾತನದಿಂದ ಕಾಸಿಕೊಂಡರೆ, ರಜನಿಕಾಂತ್ ಅನಾರೋಗ್ಯಕರವಾಗಿ, ಬಲವಂತವಾಗಿ ಸಿನಿಮಾದಲ್ಲಿ ನಟಿಸಿದಂತೆ ಕಾಣುತ್ತಾರೆ. ಒಟ್ಟಾರೆ ಒಂದು ಬಾರಿ ವೀಕ್ಷಿಸಬಹುದಾದ ಚಿತ್ರ. ರಜನಿ ಅಭಿಮಾನಿಗಳಿಗೆ ನಿಜವಾದ ಆಕ್ಷನ್ ಥ್ರಿಲ್ಲರ್ ಎಂದು 5ರಲ್ಲಿ 2 ಅಂಕ ನೀಡಿದ್ದಾರೆ.

ದ್ವಿತಿಯಾರ್ಧವೇ ಹೈಲೈಟ್

ವೈಶಾಲಿ ಎಂಬವರ ಪ್ರಕಾರ ವೆಟ್ಟೈಯನ್‌ ಚಿತ್ರವು ವಿಶೇಷ ಥೀಮ್ ಹಾಗೂ ನಟನೆ ಆಧಾರಿತ ಚಲನಚಿತ್ರ. ಚಿತ್ರದುದ್ದಕ್ಕೂ ರಜಿನಿಕಾಂತ್ ಹಾಗೂ ಅಮಿತಾಬ್ ಬಚ್ಚನ್ ಚಿತ್ರದಲ್ಲಿ ಪ್ರಾಬಲ್ಯ ಕಾಣಬಹುದು. ಫಹಾದ್ ಫಾಸಿಲ್ ಮತ್ತು ರಾಣಾ ನಟನೆ ಚೆನ್ನಾಗಿದೆ. ಸಿನಿಮಾದ 2ನೇ ಅರ್ಧವೇ ಪ್ರಮುಖ ಹೈಲೈಟ್. ಉತ್ತಮ ಸಂದೇಶದೊಂದಿಗೆ ಹಲವು ಟ್ವಿಸ್ಟ್ ಸಿನಿಮಾದಲ್ಲಿದೆ ಎಂದು ಹೇಳಿದ್ದಾರೆ.

ಡಾ.ರವಿ ಅವರ ಪ್ರಕಾರ, ಎನ್‌ಕೌಂಟರ್‌ ಕುರಿತ ದೃಷ್ಟಿಕೋನಗಳು ಮತ್ತು ಇತರ ಕೆಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಮಾತನಾಡುತ್ತದೆ. ಅಲ್ಲದೆ ಜನರನ್ನು ಚಿಂತನೆಯತ್ತ ಪ್ರಚೋದಿಸುತ್ತದೆ. ಸಿನಿಮಾದುದ್ದಕ್ಕೂ ತಲೈವಾರ್ ಅಂಶಗಳಿವೆ. ಆದರೆ ಜೈಲರ್ ನಿರೀಕ್ಷೆ ಬೇಡ. ಸಿನಿಮಾ ಮಂದಿರದಲ್ಲೇ ನೋಡಬೇಕಾದ ಕೆಲವೊಂದು ಆಹ್ಲಾದಕರ ಸಂಗತಿಗಳಿವೆ. ಅದನ್ನು ನೇರವಾಗಿ ನೋಡುವುದೇ ಉತ್ತಮ.‌

ಕುಟುಂಬ ಸಮೇತ ನೋಡಬಹುದಾದ ಚಿತ್ರ

ವೆಟ್ಟೈಯನ್‌ ಚಿತ್ರವು ರಜನಿಕಾಂತ್‌ ಅಭಿಮಾನಿಗಳನ್ನು ಮಾತ್ರವಲ್ಲದೆ ಕುಟುಂಬವಾಗಿ ವೀಕ್ಷಿಸುವ ಎಲ್ಲರನ್ನೂ ತೃಪ್ತಿಪಡಿಸುತ್ತದೆ. ಮತ್ತೊಂದು ಬ್ಲಾಕ್‌ಬಸ್ಟರ್‌ಗೆ ಸಿದ್ಧರಾಗಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಕಥೆ, ಸ್ಕ್ರೀನ್ ಪ್ಲೇ, ರಜಿನಿಸಂ, ಸಾಮಾಜಿಕ ಸಂದೇಶ, ನಟನೆ, ಬಿಜಿಎಂ, ನಿರ್ದೇಶಕ ಸ್ಪರ್ಶ, ಟ್ವಿಸ್ಟ್ ಎಲ್ಲವೂ ಚೆನ್ನಾಗಿದೆ. ವೆಟ್ಟೈಯನ್‌ ಚಿತ್ರವು ರಜಿನಿಕಾಂತ್ ಅಭಿಮಾನಿಗಳು, ಚಲನಚಿತ್ರ ಪ್ರೇಮಿಗಳು ಮತ್ತು ಸಾಮಾನ್ಯ ಪ್ರೇಕ್ಷಕರನ್ನು ಕೂಡಾ ತೃಪ್ತಿಪಡಿಸಲಿದೆ ಎಂದು ಮತ್ತೊಬ್ಬ ವೀಕ್ಷಕ ಹೇಳಿದ್ದಾರೆ.

Whats_app_banner