ನಿಮ್ಮ ಪ್ರಾರ್ಥನೆಯಲ್ಲಿ...; ಪೋಷಕರ ವಿಚ್ಛೇದನದ ಬಗ್ಗೆ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಪುತ್ರಿ ರಹೀಮಾ ಹೃದಯಸ್ಪರ್ಶಿ ಪೋಸ್ಟ್
ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಹಾಗೂ ಪತ್ನಿ ಸಾಯಿರಾ ಬಾನು ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ಮೂಲಕ ತಮ್ಮ 29 ವರ್ಷದ ಸಾಂಸಾರಿಕ ಬದುಕಿಗೆ ಅಂತ್ಯ ಹಾಡಲಿದ್ದಾರೆ. ಪೋಷಕರ ವಿಚ್ಛೇದನಕ್ಕೆ ಸಂಬಂಧಿಸಿ ರೆಹಮಾನ್ ಅವರ ಮಗಳು ರಹೀಮಾ ಅತ್ಯಂತ ಭಾವುಕರಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ತಮ್ಮ 29 ವರ್ಷಗಳ ಸುಮಧುರ ದಾಂಪತ್ಯ ಬದುಕಿಗೆ ಇತಿಶ್ರೀ ಹಾಡಲಿದ್ದಾರೆ ರೆಹಮಾನ್ ಹಾಗೂ ಸಾಯಿರಾ ಬಾನು. 2025ರ ಮಾರ್ಚ್‌ನಲ್ಲಿ ಇವರ ದಾಂಪತ್ಯ ಜೀವನ 30ನೇ ವರ್ಷಕ್ಕೆ ಕಾಲಿಡುತ್ತಿತ್ತು. ಆದರೆ ನವೆಂಬರ್ 19ರಂದು ಈ ಜೋಡಿ ವಿಚ್ಛೇದನ ಘೋಷಿಸುವ ಮೂಲಕ ತಮ್ಮ ಕುಟುಂಬ ಹಾಗೂ ಅಭಿಮಾನಿ ವರ್ಗಕ್ಕೆ ಶಾಕ್ ನೀಡಿದೆ.
ಯಾರದ್ದೇ ದಾಂಪತ್ಯ ಜೀವನ ವಿಚ್ಛೇದನದ ಹಂತಕ್ಕೆ ಬಂದರೆ ಮೊದಲು ಅದರ ಪರಿಣಾಮ ತಾಕುವುದು, ನೋವು ಅನುಭವಿಸುವುದು ಅವರ ಮಕ್ಕಳು. ರೆಹಮಾನ್ ಹಾಗೂ ಸಾಯಿರಾ ಪ್ರಕರಣದಲ್ಲೂ ಇದೇ ನಡೆದಿದೆ. ಸಂಗೀತ ಮಾಂತ್ರಿಕನ ಕುಟುಂಬದಲ್ಲೂ ವಿಚ್ಛೇದನ ಮಕ್ಕಳ ಮೇಲೆ ಪ್ರಭಾವ ಬೀರಿದೆ. ರೆಹಮಾನ್ ಅವರ ಮಗ ಎಆರ್ ಅಮೀನ್ ಮತ್ತು ಪುತ್ರಿಯರಾದ ಖತೀಜಾ ಮತ್ತು ರಹೀಮಾ ಪೋಷಕರ ವಿಚ್ಛೇದನದ ನೋವು ತೋಡಿಕೊಂಡಿದ್ದಾರೆ. ಮಗ ಅಮೀನ್ ಈ ಬಗ್ಗೆ ಮೊದಲು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ನಂತರ ಮಗಳು ರಹೀಮಾ ಕೂಡ ಪೋಷಕರ ವಿಚ್ಛೇದನದ ಬಗ್ಗೆ ಮನದಾಳದ ನೋವು ಹಂಚಿಕೊಂಡಿದ್ದಾರೆ. ಮಾತ್ರವಲ್ಲ ‘ನಮ್ಮ ಕುಟುಂಬ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಎಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು‘ ಎಂದು ಆಕೆ ವಿನಂತಿ ಮಾಡಿ ಪೋಸ್ಟ್ ಹಾಕಿದ್ದಾರೆ.
ಪೋಷಕರ ವಿಚ್ಛೇದನದ ಬಗ್ಗೆ ಮೌನ ಮುರಿದ ರಹೀಮಾ
ಎಆರ್ ರೆಹಮಾನ್ ಪುತ್ರಿ ರಹೀಮಾ ಪೋಷಕರ ವಿಚ್ಛೇದನದ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ‘ನಮ್ಮ ಪೋಷಕರ ವಿಚ್ಛೇದನದ ವಿಚಾರವನ್ನು ಅತ್ಯಂತ ಗೌಪ್ಯವಾಗಿ ಹಾಗೂ ಗೌರವದಿಂದ ಪರಿಗಣಿಸುವುದನ್ನು ನಾನು ಪ್ರಶಂಶಿಸುತ್ತೇನೆ. ನಿಮ್ಮ ಪರಿಗಣನೆಗೆ ಧನ್ಯವಾದ‘ ಎಂದು ಬರೆದುಕೊಂಡು ಒಂದು ಸ್ಟೋರಿ ಹಾಕಿದ್ದಾರೆ, ಇನ್ನೊಂದು ಸ್ಟೋರಿಯಲ್ಲಿ ತಂದೆಯ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ‘ನಿಮ್ಮ ಪ್ರಾರ್ಥನೆಯಲ್ಲಿ ನಮ್ಮನ್ನು ಉಳಿಸಿಕೊಳ್ಳಿ‘ ಎಂಬರ್ಥದಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
ವಿಚ್ಛೇದನದ ಬಗ್ಗೆ ಅಧಿಕೃತ ಹೇಳಿಕೆ ಕೊಟ್ಟ ರೆಹಮಾನ್
ಭಾರತದ ಸಂಗೀತ ಮಾಂತ್ರಿಕ ಎಂದೇ ಕರೆಸಿಕೊಳ್ಳುವ ಎಆರ್ ರೆಹಮಾನ್ ನವೆಂಬರ್ 19 ರಂದು ತಮ್ಮ ಹಾಗೂ ಪತ್ನಿ ಸಾಯಿರಾ ನಡುವಿನ ವಿಚ್ಛೇದನದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ದೃಢೀಕರಣ ನೀಡಿದ್ದರು. ನಾನು ದಾಂಪತ್ಯದ 30ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ನಮ್ಮ ಬದುಕು ಬೇರೆ ಯೋಜನೆಯನ್ನೇ ಹೊಂದಿತ್ತು ಎಂದು ಅವರು ನೋವಿನಲ್ಲಿ ಬರೆದುಕೊಂಡಿದ್ದರು. ‘ನಾವು ಮೂವತ್ತರ ದಾಂಪತ್ಯಕ್ಕೆ ಕಾಲಿಡುವ ಸಂದರ್ಭದಲ್ಲಿ ಬದುಕು ನಮ್ಮ ಜೀವನದಲ್ಲಿ ಬೇರೆಯದ್ದನ್ನೇ ಯೋಜಿಸಿದೆ. ಆದರೆ ಎಲ್ಲವೂ ಕಾಣದ ಅಂತ್ಯವನ್ನು ಹೊಂದಿದೆ. ಘಾಸಿಯಾದ ಹೃದಯ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಒಡೆದ ಕನ್ನಡಿ ಎಂದಿಗೂ ಒಂದಾಗಲು ಸಾಧ್ಯವಿಲ್ಲ. ನಾವು ಅತ್ಯಂತ ನೋವಿನ ಘಟ್ಟದಲ್ಲಿ ಸಾಗುವ ಈ ಹೊತ್ತಿನಲ್ಲಿ ನಿಮ್ಮ ದಯೆ ನಮ್ಮ ಮೇಲಿರಲಿ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಸ್ನೇಹಿತರಾದ ನಿಮಗೆ ಧನ್ಯವಾದಗಳು‘ ಎಂದು ರೆಹಮಾನ್ ಟ್ವೀಟ್ ಮಾಡಿದ್ದಾರೆ.
ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ವಿಚ್ಛೇದನದ ಸುದ್ದಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ.
ವಿಭಾಗ