ಎಆರ್ ರೆಹಮಾನ್, ಸಾಯಿರಾ ಬಾನು ಡೈವೋರ್ಸ್: 30 ವರ್ಷ ಮುಟ್ಟಲಿಲ್ಲ ನಮ್ಮ ದಾಂಪತ್ಯ, ವಿಚ್ಛೇದನದ ನೋವು ತೋಡಿಕೊಂಡ ಖ್ಯಾತ ಸಂಗೀತ ನಿರ್ದೇಶಕ
AR Rahman and Saira Banu Divorce: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ವಿಚ್ಛೇದನ ಪಡೆದುಕೊಂಡಿದ್ದಾರೆ.
ಎಆರ್ ರೆಹಮಾನ್, ಸಾಯಿರಾ ಬಾನು ಡೈವೋರ್ಸ್: ರೋಮಾಂಟಿಕ್ ಹಾಡುಗಳ ಮೂಲಕ ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಎ.ಆರ್.ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ವಿಚ್ಛೇದನ ಪಡೆದಿದ್ದಾರೆ (AR Rahman and Saira Banu Divorce). ವಿಚ್ಛೇದನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನೋವು ತೋಡಿಕೊಂಡಿರುವ ಎ.ಆರ್.ರೆಹಮಾನ್, 'ನಮ್ಮ ದಾಂಪತ್ಯ 30 ವರ್ಷ ಮುಟ್ಟಬಹುದು ಎಂದುಕೊಂಡಿದ್ದೆ' ಎಂದು ಹೇಳಿದ್ದಾರೆ. ವಿಶ್ವವಿಖ್ಯಾತ ಸೆಲಬ್ರಿಟಿಯಾಗಿರುವ ಎ.ಆರ್.ರೆಹಮಾನ್ ಅವರ ದಾಂಪತ್ಯದ ಸುದ್ದಿ ಈಗ ಜಗತ್ತಿನ ಗಮನ ಸೆಳೆದಿದೆ. ಈ ಬೆಳವಣಿಗೆಯ ಬಗ್ಗೆ ಸಾರ್ವಜನಿಕವಾಗಿ ಲಭ್ಯವಿರುವ ಪ್ರಮುಖ ಮಾಹಿತಿಯ ಸಂಗ್ರಹ ಇಲ್ಲಿದೆ.
ಎಆರ್ ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ ಹೇಳಿಕೆ
ಸಾಯಿರಾ ಬಾನು ಪರ ವಕೀಲೆ ವಂದನಾ ಶಾ ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆ, “ಸಾಯಿರಾ ಮತ್ತು ಅವರ ಪತಿ ಹೆಸರಾಂತ ಸಂಗೀತಗಾರ ಅಲ್ಲಾಹ್ ರಕ್ಕ ರೆಹಮಾನ್ (ಎ.ಆರ್. ರೆಹಮಾನ್) ಅವರ ಪರವಾಗಿ ಮತ್ತು ಅವರ ಸೂಚನೆಯ ಮೇರೆಗೆ ದಂಪತಿಗಳು ಬೇರೆಯಾಗುವ ನಿರ್ಧಾರದ ಬಗ್ಗೆ ವಂದನಾ ಶಾ ಮತ್ತು ಅಸೋಸಿಯೇಟ್ಸ್ ಈ ಕೆಳಗಿನ ಹೇಳಿಕೆಯನ್ನು ನೀಡಿರುತ್ತಾರೆ" ಎಂಬ ಒಕ್ಕಣೆಯೊಂದಿಗೆ ಶುರುವಾಗಿದೆ.
ಮದುವೆಯಾದ ಹಲವು ವರ್ಷಗಳ ನಂತರ, ಸಾಯಿರಾ ಮತ್ತು ಅವರ ಪತಿ ಎ ಆರ್ ರೆಹಮಾನ್ ಪರಸ್ಪರ ವಿಚ್ಛೇದನ ಪಡೆಯುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ನಿರ್ಧಾರವು ಅವರ ಸಂಬಂಧದಲ್ಲಿ ಗಮನಾರ್ಹವಾದ ಭಾವನಾತ್ಮಕ ಒತ್ತಡ ಉಂಟಾದ ಬಳಿಕ ತೆಗೆದುಕೊಂಡಿದ್ದಾರೆ. ಒಬ್ಬರಿಗೊಬ್ಬರು ಆಳವಾದ ಪ್ರೀತಿಯ ಹೊರತಾಗಿಯೂ, ಉದ್ವಿಗ್ನತೆ ಮತ್ತು ತೊಂದರೆಗಳು ತಮ್ಮ ನಡುವೆ ದುಸ್ತರವಾದ ಅಂತರವನ್ನು ಸೃಷ್ಟಿಸಿರುವುದನ್ನು ದಂಪತಿ ಕಂಡುಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಇಬ್ಬರ ಪೈಕಿ ಯಾರೂ ಕೂಡ ರಾಜಿಯಾಗಲು ಸಾಧ್ಯವಿಲ್ಲ ಎಂಬ ಭಾವನೆಯನ್ನು ಹೊಂದಿರುತ್ತಾರೆ. ಆದ್ದರಿಂದ ಸಾಯಿರಾ ಬಾನು ಮತ್ತು ಅವರ ಪತಿ ಎ ಆರ್ ರೆಹಮಾನ್ ಅವರು ಅತ್ಯಂತ ನೋವು ಮತ್ತು ವಿಷಾದ ಭಾವದಿಂದಲೇ ವಿಚ್ಛೇದನ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಸವಾಲಿನ ಸನ್ನಿವೇಶದಲ್ಲಿ ಸಾಯಿರಾ ಬಾನು ಮತ್ತು ಅವರ ಪತಿ ಎ ಆರ್ ರೆಹಮಾನ್ ಅವರು ಖಾಸಗಿತನ ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಸಾರ್ವಜನಿಕರು ಇದನ್ನು ಅರ್ಥಮಾಡಿಕೊಂಡು ಸ್ಪಂದಿಸಬೇಕು. ಸಂಕಷ್ಟಮಯವಾಗಿರುವ ವೈಯಕ್ತಿಕ ಬದುಕಿನ ಈ ಕಾಲಘಟ್ಟದಲ್ಲಿ ಮುಂದೆ ಸಾಗುವುದಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಿದ್ದಾರೆ.
ಇದೇ ವೇಳೆ, ಸಾಯಿರಾ ಬಾನು ಮತ್ತು ಎ ಆರ್ ರೆಹಮಾನ್ ಅವರ ಪುತ್ರ ಅಮೀನ್ ಕೂಡ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ಕುಟುಂಬ ಖಾಸಗಿತನಕ್ಕೆ ಗೌರವ ನೀಡುವಂತೆ ಮನವಿ ಮಾಡಿದ್ದಾರೆ.
ಎ ಆರ್ ರೆಹಮಾನ್ - ಸಾಯಿರಾ ಬಾನು ಕುಟುಂಬ ಚಿತ್ರಣ
ಎ ಆರ್ ರೆಹಮಾನ್ ಮತ್ತು ಸಾಯಿರಾ ಬಾನು ಅವರದ್ದು ಪ್ರೇಮ ವಿವಾಹವಾಗಿರಲಿಲ್ಲ. ಎ ಆರ್ ರೆಹಮಾನ್ ಅವರ ತಾಯಿಯೇ ನಿಶ್ಚಯಿಸಿದ ವಿವಾಹ ಸಂಬಂಧವಾಗಿತ್ತು. ಇದನ್ನು ಎ ಆರ್ ರೆಹಮಾನ್ ಅವರು ಸಿಮಿ ಗರೆವಾಲ್ ಜತೆಗಿನ ಮಾತುಕತೆ ವೇಳೆ ಬಹಿರಂಗಪಡಿಸಿದ್ದರು. ಅಂದು ನನಗೆ 29 ವರ್ಷವಾಗಿತ್ತು. ತಾಯಿ ಬಳಿ ನನಗೊಂದು ಸಂಗಾತಿ ಹುಡುಕಿಕೊಡುವಂತೆ ಹೇಳಿದ್ದೆ ಎಂದು ರೆಹಮಾನ್ ಅಂದು ಹೇಳಿದ್ದರು. ರೆಹಮಾನ್ ವೃತ್ತಿ ಬದುಕಿನಲ್ಲಿ ಅತ್ಯಂತ ಬಿಜಿಯಾಗಿದ್ದ ಸಂದರ್ಭವಾಗಿತ್ತು.
ಎ ಆರ್ ರೆಹಮಾನ್ ಅವರ ಪುತ್ರಿ ಖತೀಜಾ ವಿವಾಹ 2022ರಲ್ಲಿ ನಡೆಯಿತು. ಇದರ ಫೋಟೋವನ್ನು ಎ ಆರ್ ರೆಹಮಾನ್ ಅಂದು ಹಂಚಿಕೊಂಡಿದ್ದರು.
ಎಆರ್‌ಆರ್ ಸಾಯಿರಾ ಬ್ರೇಕಪ್ ಟ್ವೀಟ್
ಎ ಆರ್ ರೆಹಮಾನ್ ಅವರು ಎಆರ್‌ಆರ್ ಸಾಯಿರಾ ಬ್ರೇಕಪ್ ಟ್ವೀಟ್ ಕೂಡ ಮಾಡಿದ್ಧಾರೆ.
“ನಾವು ಮೂವತ್ತು ವರ್ಷಗಳ ದಾಂಪತ್ಯ ಪೂರೈಸಬಹುದು ಎಂದುಕೊಂಡಿದ್ದೆವು. ಆದರೆ, ಎಲ್ಲ ಅಂತ್ಯವನ್ನು ಕಾಣದ ವಿಷಯಗಳಾಗಿ ಮಾರ್ಪಟ್ಟಿರುವಂತೆ ತೋರುತ್ತದೆ. ಘಾಸಿಯಾದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ವಿಚ್ಛೇದನದಲ್ಲಿ, ನಾವು ಅರ್ಥವನ್ನು ಹುಡುಕುತ್ತೇವೆ. ಆದರೂ ಒಡೆದ ಕನ್ನಡಿ ಮತ್ತೆ ಒಂದಾಗುವುದು ಸಾಧ್ಯವಿಲ್ಲ. ನಾವು ಈ ದುರ್ಬಲ ಕ್ಷಣಗಳಲ್ಲಿ ಸಾಗುವಾಗ ನಿಮ್ಮ ದಯೆ ಇರಲಿ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಸ್ನೇಹಿತರಾದ ನಿಮಗೆ ಧನ್ಯವಾದಗಳು” ಎಂದು ಎ ಆರ್ ರೆಹಮಾನ್ ಟ್ವೀಟ್ ಮಾಡಿದ್ದಾರೆ.
ಪತ್ನಿ ಸಾಯಿರಾ ಬಾನು ಅವರೊಂದಿಗೆ ವಿಚ್ಛೇದನ ಪಡೆದಿರುವ ಕುರಿತು ಎಆರ್ ರೆಹಮಾನ್ ಮಾಡಿರುವ ಟ್ವೀಟ್ ವೈರಲ್ ಆಗಿದೆ. ನವೆಂಬರ್ 20ರ ಮಧ್ಯರಾತ್ರಿ 12.11 ಕ್ಕೆ ಪೋಸ್ಟ್ ಮಾಡಿರುವ ಟ್ವೀಟ್ ವೈರಲ್ ಆಗಿದೆ. 1,400 ಕ್ಕೂ ಹೆಚ್ಚು ಮಂದಿ ಇದಕ್ಕೆ ಕಾಮೆಂಟ್ ಮಾಡಿದ್ದು, 13,300 ಮಂದಿ ಲೈಕ್ ಮಾಡಿದ್ದಾರೆ. ಬಹುತೇಕರು ಈ ದಾಂಪತ್ಯ ಉಳಿಯಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆಘಾತವಾಗಿದೆ ಎಂದು ಹೇಳಿಕೊಂಡಿದ್ದಾರೆ. ಬಾಂಬೆ, ನಾಯಗನ್ ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಎ.ಆರ್.ರೆಹಮಾನ್ ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅಪರೂಪದ ಸಂಗೀತ ಸಾಧಕ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
(AR Rahman and Saira Banu Divorce Oscar Award winner famous music director AR Rahman pens his pain on twitter post).