ಮಧುಚಂದ್ರದ ಸಮಯದಲ್ಲಿ ವರನ ನಿಗೂಢ ಸಾವು, ಜಿಯೋ ಸಿನಿಮಾದಲ್ಲಿ ಹನಿಮೂನ್ ಫೋಟೋಗ್ರಾಫರ್ ವೆಬ್‌ಸರಣಿ, ಕನ್ನಡದಲ್ಲೂ ಸ್ಟ್ರೀಮಿಂಗ್
ಹನಿಮೂನ್ ಫೋಟೋಗ್ರಾಫರ್ ವೆಬ್ ಸರಣಿ: ನವವಧುವಿನ ಜತೆ ಮಧುಚಂದ್ರಕ್ಕೆ ತೆರಳಿದ್ದ ವರ ನಿಗೂಢವಾಗಿ ಕೊಲೆಯಾಗುತ್ತಾನೆ. ಈ ಕೊಲೆಯ ರಹಸ್ಯ ಏನು? ಜಿಯೋ ಸಿನಿಮಾದಲ್ಲಿ ಇದೇ ಸೆಪ್ಟೆಂಬರ್ 27ರಿಂದ ಹನಿಮೂನ್ ಫೋಟೋಗ್ರಾಫರ್ ಎಂಬ ವೆಬ್ ಸರಣಿ ಆರಂಭವಾಗಲಿದ್ದು, ಕುತೂಹಲ ಕೆರಳಿಸಿದೆ.
ಹನಿಮೂನ್ ಫೋಟೋಗ್ರಾಫರ್ ವೆಬ್ ಸರಣಿ: ಜಿಯೋ ಸಿನಿಮಾ ಒಟಿಟಿಯಲ್ಲಿ ಸದ್ಯದಲ್ಲಿಯೇ ಹನಿಮೂನ್ ಫೋಟೋಗ್ರಾಫರ್ ಎಂಬ ಹೊಸ ಕುತೂಹಲಕಾರಿ ಮರ್ಡರ್ ಮಿಸ್ಟರಿ ವೆಬ್ ಸರಣಿ ಬಿಡುಗಡೆಯಾಗಲಿದೆ. ಹನಿಮೂನ್‌ಗೆ ತೆರಳಿದ್ದ ವರನ ಹತ್ಯೆ. ಕೊಲೆ ಮಾಡಿದವರು ಯಾರು ಎಂಬ ನಿಗೂಢವನ್ನು ಭೇದಿಸುವ ಕಥೆಯೊಂದಿಗೆ ಸರಣಿಯು ತೆರೆದುಕೊಳ್ಳುತ್ತದೆ. ಜಿಯೋ ಸಿನಿಮಾ ಈ ಸರಣಿಯ ಟ್ರೇಲರ್ ಅನ್ನು ಗುರುವಾರ (ಸೆಪ್ಟೆಂಬರ್ 19) ಬಿಡುಗಡೆ ಮಾಡಿದೆ. ಕನ್ನಡದಲ್ಲೂ ಈ ವೆಬ್ ಸರಣಿ ರಿಲೀಸ್ ಆಗಲಿದೆ.
ಹನಿಮೂನ್ ಫೋಟೋಗ್ರಾಫರ್ ಒಟಿಟಿ ಸ್ಟ್ರೀಮಿಂಗ್ ವಿವರ
ಹನಿಮೂನ್ ಫೋಟೋಗ್ರಾಫರ್ ಎನ್ನುವುದು ಮರ್ಡರ್ ಮಿಸ್ಟರಿ ವೆಬ್ ಸರಣಿಯಾಗಿದೆ. ಈ ಸರಣಿಯು ಸೆಪ್ಟೆಂಬರ್ 27 ರಿಂದ ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಆಶಾ ನೇಗಿ, ಸಾಹಿಲ್ ಸಲಾಥಿಯಾ, ರಾಜೀವ್ ಸಿದ್ಧಾರ್ಥ್, ಅಪೇಕ್ಷಾ ಪೋರ್ವಾಲ್ ಈ ಸರಣಿಯಲ್ಲಿ ನಟಿಸಿದ್ದಾರೆ. ಅರ್ಜುನ್ ಶ್ರೀವಾಸ್ತವ್ ನಿರ್ದೇಶನದ ಈ ಸರಣಿಯ ಟ್ರೇಲರ್ ತುಂಬಾ ಆಸಕ್ತಿದಾಯಕವಾಗಿದ್ದು, ಒಟಿಟಿ ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಪತ್ನಿಯೊಂದಿಗೆ ಮಾಲ್ಡೀವ್ಸ್‌ಗೆ ಹ್ಯಾಪಿ ಹನಿಮೂನ್‌ಗೆ ತೆರಳಿದ್ದ ಪತಿ ಅನಿರೀಕ್ಷಿತವಾಗಿ ಕೊಲೆಗೀಡಾಗಿದ್ದು, ಸಮುದ್ರ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ನಿಗೂಢ ಕೊಲೆಯ ರಹಸ್ಯ ಈ ವೆಬ್ ಸರಣಿಯಲ್ಲಿ ತಿಳಿಯಲಿದೆ.
ಇರಾನಿ ಫಾರ್ಮಾದ ಮುಖ್ಯಸ್ಥ ಅಧೀರ್ ಇರಾನಿ (ಸಾಹಿಲ್) ನನ್ನು ಕೊಲೆ ಮಾಡಲಾಗಿದೆ ಎಂಬ ವಿವರವನ್ನು ಈಗಾಗಲೇ ಹನಿಮೂನ್ ಫೋಟೋಗ್ರಾಫರ್ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಈ ಪ್ರಕರಣದಲ್ಲಿ ನಾಲ್ವರು ಶಂಕಿತರಿದ್ದಾರೆ. ಆತನ ಪತ್ನಿ, ಸ್ನೇಹಿತ, ಕುಟುಂಬದ ಸದಸ್ಯರು ಮತ್ತು ಅವರನ್ನು ಅನುಸರಿಸುವ ಅಪರಿಚಿತರ ಮೇಲೆ ಸಂಶಯವಿದೆ. ಇವರಲ್ಲಿ ನಿಜಕ್ಕೂ ಕೊಲೆಗಾರರು ಯಾರು ಎನ್ನುವ ವಿವರ ಸೆಪ್ಟೆಂಬರ್ 27ರಂದು ವೆಬ್ ಸರಣಿ ನೋಡಿದ ಮೇಲೆ ಗೊತ್ತಾಗಲಿದೆ.
ಆಶಾ ನೇಗಿ ಈ ಸರಣಿಯಲ್ಲಿ ಅಂಬಿಕಾ ನಾಥ್ ಎಂಬ ಮಧುಚಂದ್ರ ಛಾಯಾಗ್ರಾಹಕಿಯಾಗಿ ನಟಿಸಿದ್ದಾರೆ. ದಂಪತಿಯ ಹನಿಮೂನ್ ಫೋಟೋ ತೆಗೆಯಲು ನಿಯೋಜನೆಗೊಂಡ ಈಕೆಯ ಮೇಲೂ ಪೊಲೀಸರಿಗೆ ಶಂಕೆ ಇದೆ. ಈ ಕೊಲೆಯಲ್ಲಿ ಈಕೆಯ ಪಾತ್ರವೂ ಇದೆ ಎಂದು ಸಂಶಯಿಸುತ್ತಿದ್ದಾರೆ.
ನಿಗೂಢ ಕೊಲೆಯ ವಿಷಯ
ಒಟಿಟಿಗಳಲ್ಲಿ ಮರ್ಡರ್ ಮಿಸ್ಟರಿ ಕಂಟೆಂಟ್‌ಗೆ ಬೇಡಿಕೆ ಹೆಚ್ಚಿದೆ. ಇಂತಹ ಸಿನಿಮಾಗಳು ಮತ್ತು ವೆಬ್ ಸಿರೀಸ್ ಗಳಲ್ಲಿ ಸಾಮಾನ್ಯವಾಗಿ ಕೊಲೆಗಾರ ಯಾರು ಎಂಬ ಕುತೂಹಲವನ್ನು ಕೊನೆಯವರೆಗೂ ಬಚ್ಚಿಡುತ್ತವೆ. “ಒಬ್ಬರು ಫೋಟೋಗ್ರಾಫರ್, ಒಂದು ಚಿತ್ರ, ಪರಿಪೂರ್ಣ ಹನಿಮೂನ್. ಮತ್ತು ಮಾರಣಾಂತಿಕ ರಹಸ್ಯ. ಕೊಲೆಗಾರ ಯಾರು? ಹನಿಮೂನ್ ಫೋಟೋಗ್ರಾಫರ್ ಸೆಪ್ಟೆಂಬರ್ 27 ರಿಂದ ಜಿಯೋ ಸಿನಿಮಾ ಪ್ರೀಮಿಯಂನಲ್ಲಿ ಸ್ಟ್ರೀಮಿಂಗ್ ಆಗಲಿದೆ" ಎಂದು ಸೋಷಿಯಲ್ ಮೀಡಿಯಾದಲ್ಲಿ ಹನಿಮೂನ್ ಫೋಟೋಗ್ರಾಫರ್ ಟ್ರೇಲರ್ ಹಂಚಿಕೊಳ್ಳಲಾಗಿದೆ.
ವಿಭಾಗ