OTT Horror Web Series: ಒಟಿಟಿಯಲ್ಲಿ ಮಲಯಾಳಂ ಹಾರರ್ ವೆಬ್ ಸರಣಿ , ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಲಭ್ಯ, ಬಿಡುಗಡೆ ಯಾವಾಗ
OTT Horror Malayalam Web Series: ಹಾರರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಮಲಯಾಳಂ ಭಾಷೆಯಲ್ಲಿ ಹಲವು ಸಿನಿಮಾಗಳು ಒಟಿಟಿಯಲ್ಲಿ ಲಭ್ಯ ಇವೆ. ವಿಶೇಷವೆಂದರೆ, ಈ ವಾರ ಹೊಸ ವೆಬ್ ಸರಣಿಯ ಕುರಿತು ಘೋಷಣೆ ಮಾಡಲಾಗಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ 1000 ಬೇಬಿಸ್ (1000 babies web series) ಎಂಬ ವೆಬ್ ಸರಣಿ ಬಿಡುಗಡೆಯಾಗಲಿದೆ.
OTT Horror Malayalam Web Series: ಹಾರರ್ ಸಿನಿಮಾ, ವೆಬ್ ಸರಣಿಗಳನ್ನು ನೋಡಲು ಸಾಕಷ್ಟು ಜನರು ಇಷ್ಟಪಡುತ್ತಾರೆ. ಇದೀಗ 1000 ಬೇಬಿಸ್ ಎಂಬ ವೆಬ್ ಸರಣಿ (1000 babies web series) ಒಟಿಟಿ ಪ್ರಿಯರ ನಿರೀಕ್ಷೆ ಹೆಚ್ಚಿಸಿದೆ. ಈ ಕುರಿತು ನಿನ್ನೆಯೇ ವೆಬ್ ಸರಣಿ ತಂಡ ಅಧಿಕೃತವಾಗಿ ಮಾಹಿತಿ ನೀಡಿದೆ. ಈಗಾಗಲೇ ಈ ವೆಬ್ ಸರಣಿಯ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಈ ವೆಬ್ ಸರಣಿಯು ಶೀಘ್ರದಲ್ಲೇ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಮಲಯಾಳಂ ಸಿನಿಮಾಗಳ ಕುರಿತು ಸಾಕಷ್ಟು ಜನರಿಗೆ ಕ್ರೇಜ್ ಇದೆ. ಇವರು ಕಥೆ ಹೇಳುವ ಶೈಲಿ, ಹೊಸತನದಿಂದ ಕೂಡಿದ ಕಂಟೆಂಟ್‌ಗಳ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ. ಶೀಘ್ರದಲ್ಲಿ ಬರಲಿರುವ 1000 ಬೇಬಿಸ್ ಎಂಬ ವೆಬ್ ಸರಣಿ ಕೂಡ ಹಾರರ್ ಕಥಾಹಂದರ ಹೊಂದಿದೆ.
ಮಲಯಾಳಂ ಹಾರರ್ ವೆಬ್ ಸರಣಿ: 1000 ಬೇಬಿಸ್
ಮಲಯಾಳಂ ವೆಬ್ ಸರಣಿಗಳು ಆರಂಭವಾಗಿವೆ. ಕನ್ನಡದಲ್ಲಿ ವೆಬ್ ಸರಣಿಗೆ ಅಂತಹ ಮಾರುಕಟ್ಟೆ ಇನ್ನೂ ಸೃಷ್ಟಿಯಾಗಿಲ್ಲ. ಇದೇ ಕಾರಣಕ್ಕೆ ರಕ್ಷಿತ್ ಶೆಟ್ಟಿ ತನ್ನ ವೆಬ್ ಸರಣಿ ಏಕಂ ಅನ್ನು ಪ್ರತ್ಯೇಕ ವೆಬ್ ಸೈಟ್ ಮೂಲಕ ಬಿಡುಗಡೆ ಮಾಡಿದ್ದರು. ಮಲಯಾಳಂನಲ್ಲೂ ವೆಬ್ ಸರಣಿಗಳು ಅಷ್ಟಾಗಿ ಬಂದಿರಲಿಲ್ಲ. ಇದೀಗ ಮಾಲಿವುಡ್ ಕೂಡ ವೆಬ್ ಸರಣಿಯತ್ತ ತೆರೆದುಕೊಳ್ಳುತ್ತಿದೆ. 1000 ಬೇಬಿಸ್ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಶೀಘ್ರದಲ್ಲೇ ಸ್ಟ್ರೀಮ್ ಆಗಲಿರುವ ಈ ಸರಣಿಯಲ್ಲಿ ರೆಹಮಾನ್ ಮತ್ತು ನೀನಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಅಲ್ಲದೆ, ತೆಲುಗು, ತಮಿಳು, ಕನ್ನಡ, ಹಿಂದಿ, ಬೆಂಗಾಲಿ ಮತ್ತು ಮರಾಠಿ ಭಾಷೆಗಳಲ್ಲಿ ಸರಣಿ ಬಿಡುಗಡೆಯಾಗಲಿದೆ.
ಸದ್ಯ ಬಿಡುಗಡೆಯಾಗಿರುವ ಪೋಸ್ಟರ್ ಗಮನಿಸಿದರೆ 1000 ಬೇಬಿಸ್ ಎನ್ನುವುದು ಹಾರರ್ ಡ್ರಾಮಾದಂತೆ ಕಾಣಿಸುತ್ತದೆ. ಈ ಪೋಸ್ಟರ್‌ನಲ್ಲಿ ಕಾಡಿನಲ್ಲಿ ಮರಗಳ ನಡುವೆ ಜೋಕಾಲಿಗಳ ಮುಂದೆ ಮಗುವನ್ನು ನೋಡಬಹುದು. ಈ 1000 ಬೇಬಿಸ್ ವೆಬ್ ಸಿರೀಸ್ ನಲ್ಲಿ ಸಂಜು ಶಿವರಾಮ್, ಆದಿಲ್, ಜಾಯ್ ಮ್ಯಾಥ್ಯೂ, ಶ್ರೀಕಾಂತ್ ಮುರಳಿ, ಅಶ್ವಿನ್ ಕುಮಾರ್, ಇರ್ಷಾದ್ ಅಲಿ ಕೂಡ ನಟಿಸಿದ್ದಾರೆ.
ಹಾಟ್‌ಸ್ಟಾರ್‌ನಲ್ಲಿ ಮಲಯಾಳಂ ವೆಬ್ ಸರಣಿ
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಹೆಚ್ಚು ಮಲಯಾಳಂ ಕಂಟೆಂಟ್‌ಗಳಿವೆ. ಮಲಯಾಳಂ ಸಿನಿಮಾಗಳಿಗೆ ಬೇಡಿಕೆ ಇರುವುದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಪ್ಲಸ್ ಪಾಯಿಂಟ್ ಆಗಿದೆ. ಮಲಯಾಳಂನ ಮೊದಲ ವೆಬ್ ಸರಣಿಯಾದ ಕೇರಳ ಕ್ರೈಮ್ ಫೈಲ್ಸ್ ಕೂಡ ಕಳೆದ ವರ್ಷ ಇದೇ ಡಿಸ್ನಿಯಲ್ಲಿ ಬಿಡುಗಡೆಯಾಗಿತ್ತು. ಈ ವರ್ಷ ಪೆರಲ್ಲೂರ್ ಪ್ರೀಮಿಯರ್ ಲೀಗ್ ಮತ್ತು ನಾಗೇಂದ್ರನ ಹನಿಮೂನ್ಸ್‌ನಂತಹ ವೆಬ್ ಸರಣಿಗಳು ಸಹ ಸ್ಟ್ರೀಮ್ ಆಗುತ್ತಿವೆ.
ಈ ಮಲಯಾಳ ವೆಬ್ ಸರಣಿ ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಯಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ "ಪ್ಯಾನ್ ಇಂಡಿಯಾ" ಪ್ರೇಕ್ಷಕರ ಗಮನ ಸೆಳೆಯಬಹುದು.
"ಈ 1000 ಬೇಬಿಸ್ ಸರಣಿಯು ಭಾರತದಾದ್ಯಂತ ಪ್ರೇಕ್ಷಕರನ್ನು ಗಮನ ಸೆಳೆಯಲಿದೆ. ಹಲವು ಸೀಸನ್‌ಗಳಲ್ಲಿ ಬಿಡುಗಡೆಯಾಗಲಿದೆ" ಎಂದು ಸರಣಿಯ ನಿರ್ಮಾಪಕ ಶಾಜಿ ನಟೇಶನ್ ಹೇಳಿದ್ದಾರೆ. ನಾಜಿಮ್ ಕೋಯಾ ಈ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ.
1000 ಬೇಬೀಸ್ ವೆಬ್ ಸೀರೀಸ್ 210 ನಿಮಿಷಗಳ ಕಾಲ ಇರಲಿದೆ ಎಂದು ಶಾಜಿ ಬಹಿರಂಗಪಡಿಸಿದ್ದಾರೆ. ಅಂದರೆ ಮೂರೂವರೆ ಗಂಟೆ ಇರಲಿದೆ. ಈ ಸರಣಿಯ ನಿರ್ಮಾಣವು ಕಳೆದ ವರ್ಷ ಪ್ರಾರಂಭವಾಯಿತು. ಇದಲ್ಲದೆ, ಸರಣಿಯನ್ನು ಏಕಕಾಲದಲ್ಲಿ 93 ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ದಕ್ಷಿಣದಿಂದ ಹಾಟ್‌ಸ್ಟಾರ್‌ನಲ್ಲಿ ಬರುತ್ತಿರುವ ಅತಿದೊಡ್ಡ ವೆಬ್ ಸರಣಿಗಳಲ್ಲಿ ಇದೂ ಒಂದು ಎಂದು ನಿರ್ಮಾಪಕ ಶಾಜಿ ಹೇಳಿದ್ದಾರೆ. ಈ ಸರಣಿಯ ಸ್ಟ್ರೀಮಿಂಗ್ ದಿನಾಂಕವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.