Maharaja OTT Movie Review: ವಿಜಯ ಸೇತುಪತಿ ರಾಜ, ಚಿತ್ರಕಥೆ ಮಹಾರಾಜ; ಭಾವನಾತ್ಮಕ ಥ್ರಿಲ್ಲರ್ ಮಹಾರಾಜ ಸಿನಿಮಾದ ವಿಮರ್ಶೆ
Maharaja OTT Movie Review: ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ವಿಜಯ ಸೇತುಪತಿ ನಟನೆಯ ಮಹಾರಾಜ ಸಿನಿಮಾದ ಭಾವನಾತ್ಮಕ ಥ್ರಿಲ್ಲರ್ ಕಥೆ. ತಣ್ಣಗಿನ ಕ್ರೌರ್ಯ, ಅಪ್ಪ ಮಗಳ ಸೆಂಟಿಮೆಂಟ್ ಒಟಿಟಿ ಸಿನಿಮಾ ವೀಕ್ಷಕರನ್ನು ಕಾಡುವಂತೆ ಇದೆ. ಅಸಾಧಾರಣ ಕ್ಲೈಮ್ಯಾಕ್ಸ್ ಮತ್ತು ಅತ್ಯುತ್ತಮ ಚಿತ್ರಕಥೆ ಮಹಾರಾಜ ಸಿನಿಮಾದ ಪ್ರಮುಖ ಹೈಲೈಟ್ಸ್.
Maharaja OTT Movie Review: ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡ "ಮಹಾರಾಜ" ತಮಿಳು ಸಿನಿಮಾವು ನಟ ವಿಜಯ ಸೇತುಪತಿಯ 50ನೇ ಚಿತ್ರ. ವಿಕ್ರಂ ವೇದ, ಜವಾನ್, 96,ಸೇತುಪತಿ, ಮಾಸ್ಟರ್, ಮೇರಿ ಕ್ರಿಸ್ಮಸ್ ಮುಂತಾದ ಸಿನಿಮಾಗಳಲ್ಲಿ ವಿಜಯ ಸೇತುಪತಿಯ ನಟನೆಯನ್ನು ಮೆಚ್ಚಿಕೊಂಡವನಿಗೆ ಆರಂಭದಲ್ಲಿ "ಮಹಾರಾಜ" ಇಷ್ಟೇನ ಸಿನಿಮಾ ಅನಿಸಿದ್ದು ಸುಳ್ಳಲ್ಲ. ಏನಿದು ಡಸ್ಟ್‌ಬಿನ್ ಕಳೆದುಕೊಂಡ ಕಥೆ. ಪ್ರಮುಖ ನಟನೊಬ್ಬನ 50ನೇ ಸಿನಿಮಾಕ್ಕೆ ಇದೆಂಥ "ಡಸ್ಟ್‌ಬಿನ್" ಕಥೆ ಎಂದೆನಿಸಿತು. ಆದರೆ, ಸಿನಿಮಾ ನೋಡುತ್ತ ನೋಡುತ್ತ ಇದು ಕೇವಲ ಡಸ್ಟ್‌ಬಿನ್ ಕಥೆಯಲ್ಲ ಇನ್ನೇನೋ ಇದೆ ಎಂಬ ರೋಚಕತೆಯನ್ನು ಮುಂದಿಡುತ್ತ ಸಾಗುತ್ತದೆ. ಇದು ಗಮನಿವಿಟ್ಟು ನೋಡಬೇಕಾದ, ಕೇಳಬೇಕಾದ ಸಿನಿಮಾ. ಮಹಾರಾಜ ಸಿನಿಮಾವು ಕೆಲವೊಂದು ಕಾರಣಗಳಿಂದ ಇಷ್ಟವಾಗುತ್ತದೆ. ಕೆಲವು ಕಡೆ ತಣ್ಣಗಿನ ಕ್ರೌರ್ಯ ಬೆಚ್ಚಿ ಬೀಳಿಸುತ್ತದೆ.
ಮಹಾರಾಜ ಸಿನಿಮಾದ ಕಥೆ
ಈ ಸಿನಿಮಾದ ನಿಜವಾದ ಕಥೆ ಇರುವುದು ಕ್ಲೈಮ್ಯಾಕ್ಸ್‌ನಲ್ಲಿ. ಕ್ಲೈಮ್ಯಾಕ್ಸ್‌ನ ಕಥೆಯನ್ನು ಹೇಳಿದರೆ ಸಿನಿಮಾ ನೋಡುವ ನಿಮ್ಮ ಆಸಕ್ತಿ ಹೋಗಬಹುದು. ಸಂಕ್ಷಿಪ್ತವಾಗಿ ಚಿತ್ರದ ಕಥೆಯ ಮುನ್ನೋಟ ಈ ಮುಂದಿನಂತೆ ನೀಡಬಹುದು.
"ಮಹಾರಾಜ" ಸಿನಿಮಾದಲ್ಲಿ ಮಹಾರಾಜ ಎಂದರೆ ವಿಜಯಸೇತುಪತಿ ಹೆಸರು. ಸಲೂನ್‌ನಲ್ಲಿ ಕೆಲಸ ಮಾಡುವ ವ್ಯಕ್ತಿ ಈತ. ಆತನಿಗೊಬ್ಬಳು ಮಗಳಿದ್ದಾಳೆ. ಮನೆಗೆ ಲಾರಿಯೊಂದು ಡಿಕ್ಕಿ ಹೊಡೆದ ಸಂದರ್ಭ ತನ್ನ ಕಣ್ಣೆದುರೇ ಪತ್ನಿಯನ್ನು ಕಳೆದುಕೊಂಡಿರುವ ವ್ಯಕ್ತಿ. ತನ್ನ ಮನೆಯಲ್ಲಿರುವ ಲಕ್ಷ್ಮೀ ಹೆಸರಿನ ದೊಡ್ಡಗಾತ್ರದ ಡಸ್ಟ್‌ಬಿನ್ ಕಾಣೆಯಾಗಿರುವ ಕುರಿತು ಆತ ಕಂಪ್ಲೆಂಟ್ ನೀಡಲು ಪೊಲೀಸ್ ಸ್ಟೇಷನ್‌ಗೆ ಬರುತ್ತಾನೆ. ಮೊದಲಿಗೆ ಪೊಲೀಸರು ಈತನ ಸ್ಟೋರಿ ಕೇಳಿ ನಗುತ್ತಾರೆ. ಹುಚ್ಚ ಅಂದುಕೊಳ್ಳುತ್ತಾರೆ. 300 ರೂಪಾಯಿ ಮೌಲ್ಯದ ಡಸ್ಟ್‌ಬಿನ್ ಕಳೆದುಕೊಂಡ ಕಥೆಯನ್ನು ಮತ್ತೆಮತ್ತೆ ಹೇಳುತ್ತಾನೆ. ಆ ಡಸ್ಟ್‌ಬಿನ್ ಹೇಗಿತ್ತೆಂದು ಆತ ಕೈಯಲ್ಲಿ ತೋರಿಸಿ ಹೇಳುವ ಪರಿ "ಇನ್ನೇನೋ" ಗುಮಾನಿ ಹುಟ್ಟಿಸುತ್ತದೆ.
ಪೊಲೀಸರು ಸಹಜವಾಗಿ ಇಂತಹ ಕಂಪ್ಲೆಟ್ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಆದರೆ, ಈ ಡಸ್ಟ್‌ಬಿನ್ ಹುಡುಕಿಕೊಟ್ಟರೆ 5 ಲಕ್ಷ ರೂಪಾಯಿ ಲಂಚ ನೀಡುತ್ತೇನೆ ಎಂದು ಈತ ಹೇಳಿದಾಗ ಪೊಲೀಸರ ವರಸೆ ಬದಲಾಗುತ್ತದೆ. ಡಸ್ಟ್‌ಬಿನ್ ಹುಡುಕಲು ಪ್ರಯತ್ನಿಸುತ್ತಾರೆ. ಹುಡುಕುವುದೆಂದರೆ ಅಂತಹ ಇನ್ನೊಂದು ಡಸ್ಟ್‌ಬಿನ್ ತಯಾರಿಸಿ ಕಳ್ಳನೊಬ್ಬನ ಕಟ್ಟು ಕಥೆ ಹೇಳಿ ಆ 5 ಲಕ್ಷ ರೂಪಾಯಿ ಲಂಚ ತಮ್ಮದಾಗಿಸುವ ಪ್ರಯತ್ನ. ಈ ಕ್ಷೌರಿಕನ ಕಥೆಯೊಂದಿಗೆ ಮನೆಗೆ ನುಗ್ಗಿ ಅಲ್ಲಿದ್ದವರನ್ನು ಅಮಾನುಷವಾಗಿ ಕೊಲೆ ಮಾಡುವ, ಹೆಣ್ಣು ಮಕ್ಕಳ ಮೇಲೆ ಹೇಯ ದೌರ್ಜನ್ಯ ಮಾಡುವ "ದರೋಡೆಕೋರರ" ಇನ್ನೊಂದು ಗುಂಪು ಈ ಸಿನಿಮಾದಲ್ಲಿದೆ. ಅನುರಾಗ್ ಕಶ್ಯಪ್ ಇಲ್ಲಿ ವಿಲನ್ ರೋಲ್‌ನಲ್ಲಿದ್ದಾನೆ. ಆತ ಮಹಿಳೆಯರ ಮೇಲೆ ಯಾವುದೇ ದೌರ್ಜನ್ಯ ಮಾಡುವುದಿಲ್ಲ. ತನ್ನ ಜತೆಗಾರರು ದೌರ್ಜನ್ಯ ನಡೆಸುವಾಗ ಆ ಮನೆಯಲ್ಲಿದ್ದ ಆಹಾರ (ಹೆಚ್ಚಾಗಿ ಅನ್ನ ಮತ್ತು ಚಿಕನ್ ಕರಿ) ತಿನ್ನುತ್ತಾ ಇರುತ್ತಾನೆ. ದೌರ್ಜನ್ಯ ನಡೆಯುತ್ತಿರುವಾಗ ಸುಮ್ಮನಿರುವುದು ಕೂಡ ದೌರ್ಜನ್ಯವೇ.
ಇಷ್ಟಕ್ಕೂ ಮಹಾರಾಜನಿಗೆ ಯಾಕೆ ಆ ಡಸ್ಟ್‌ಬಿನ್ ಬೇಕು? ಈ ಸಿನಿಮಾದಲ್ಲಿರುವ ಆಘಾತಕಾರಿ ತಿರುವು ಏನು? ತಣ್ಣನೆಯ ಕ್ರೌರ್ಯ ತುಂಬಿರುವ ರೋಚಕ ಸಿನಿಮಾ ನೋಡಲು ಬಯಸುವವರು ಮುಂದಿನ ಕಥೆಗಾಗಿ ಮಹಾರಾಜ ನೋಡಬಹುದು.
ನಟನೆ ಹೇಗಿದೆ?
ವೈಯಕ್ತಿಕವಾಗಿ ನನಗೆ ವಿಜಯ ಸೇತುಪತಿ "96" ಸಿನಿಮಾದಲ್ಲಿ ಇಷ್ಟವಾಗಿದ್ದ. ಲವರ್‌ಬಾಯ್ ಪಾತ್ರದಲ್ಲಿ ತನ್ನ ನಟನೆಯಿಂದಲೇ ಕಾಡಿದ್ದ. ಇನ್ನುಳಿದಂತೆ ಮೇರಿ ಕ್ರಿಸ್‌ಮಸ್, ವಿಕ್ರಂ ವೇದ, ಜವಾನ್ ಮುಂತಾದ ಸಿನಿಮಾಗಳಲ್ಲಿ ತನ್ನ ವಿನೂತನ ಶೈಲಿಯ ವಿಲನ್ ರೋಲ್‌ನಲ್ಲಿ ಇಷ್ಟವಾಗಿದ್ದ. ಆದರೆ, ಈ ಸಿನಿಮಾದಲ್ಲಿ ಬಡ ಕ್ಷೌರಿಕನ ಪಾತ್ರ. ಜತೆಗೆ, ಡಸ್ಟ್ ಬಿನ್ ಕಳೆದುಕೊಂಡವನ ಪಾತ್ರ. ಇದರೊಂದಿಗೆ ಮಗಳ ಮೇಲೆ ಅಪಾರ ಪ್ರೀತಿ ಹೊಂದಿರುವ ಒಳ್ಳೆಯ ಅಪ್ಪನ ಪಾತ್ರ. ಈ ಮೂರು ಪಾತ್ರಗಳಲ್ಲಿಯೂ ಭಾವನಾತ್ಮಕವಾಗಿ ಇವರ ನಟನೆ ಇಷ್ಟವಾಗುತ್ತದೆ. ವಿಶೇಷವಾಗಿ ಈ ಸಿನಿಮಾ ಮಹಾರಾಜ ಪಾತ್ರವನ್ನೇ ಕೇಂದ್ರೀಕರಿಸಿದೆ.
ಅನುರಾಗ್ ಕಶ್ಯಪ್‌ಗೆ ಈ ಸಿನಿಮಾದಲ್ಲಿ ನೆಗೆಟಿವ್ ಪಾತ್ರ. ಆರಂಭದಲ್ಲಿ ವಿಲಕ್ಷಣ ಪಾತ್ರ. ಕಥೆ ಮುಂದೆ ಸಾಗುತ್ತಿದ್ದಂತೆ ಇವರ ಪಾತ್ರವೂ ಚಿತ್ರದಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. ಮಹಾರಾಜನ ಮಗಳಾಗಿ ಸಚನ ನೇಮಿದಾಸ್ ಕೂಡ ಉತ್ತಮವಾಗಿಯೇ ನಟಿಸಿದ್ದಾಳೆ. ಅನುರಾಗ್ ಕಶ್ಯಪ್‌ನ ಪತ್ನಿಯ ಪಾತ್ರದಲ್ಲಿ ಅಭಿರಾಮಿ ಪಾತ್ರವೂ ಇಷ್ಟವಾಗುತ್ತದೆ. ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ನೇಟಿ ಮತ್ತು ಇತರೆ ಕಲಾವಿದರ ನಟನೆಯೂ ಸಹಜವಾಗಿದೆ.
ಗಮನಸೆಳೆಯುವ ಇನ್ನಿತರ ಅಂಶಗಳು
ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಚಿತ್ರದಲ್ಲಿ ಗಮನ ಸೆಳೆಯುವ ಪ್ರಮುಖಾಂಶ. ಸಂಕಲನಕ್ಕೂ ಪೂರ್ಣ ಅಂಕ ನೀಡಬಹುದು. ಸಸ್ಪೆನ್ಸ್ ಗೊತ್ತಾಗದಂತೆ ಕೊನೆವರೆಗೆ ಕಥೆಯನ್ನು ತೆರೆ ಮೇಲೆ ಸಾಗಿಸುವುದು ಸುಲಭದ ಕೆಲಸವಲ್ಲ. ಈ ವಿಷಯದಲ್ಲಿ ನಿಥಿಲನ್ ಸಮಿನಾಥನ್ ಗೆದ್ದಿದ್ದಾರೆ.
ಇಷ್ಟವಾಗುವ ಮತ್ತು ಇಷ್ಟವಾಗದ ವಿಷಯಗಳು
ಈ ಚಿತ್ರದ ಗಟ್ಟಿ ಚಿತ್ರಕಥೆ ಇಷ್ಟವಾಗುತ್ತದೆ. ವಿಜಯ ಸೇತುಪತಿಯ ನಟನೆ ಅದ್ಭುತ ಎನ್ನಬಹುದು. ಭಾವನಾತ್ಮಕವಾಗಿ ತಟ್ಟುವ ಚಿತ್ರವಿದು. ಅಸಾಧಾರಣ ಕ್ಲೈಮ್ಯಾಕ್ಸ್ ಇಷ್ಟವಾಗುತ್ತದೆ. ಆರಂಭದಲ್ಲಿ ಸ್ವಲ್ಪ ಹೊತ್ತು ಈ ಸಿನಿಮಾ ನೀರಸ ಎನಿಸಬಹುದು. ಮತ್ತೆಮತ್ತೆ ಡಸ್ಟ್‌ಬಿನ್ ಕಥೆ ಕೇಳಲು ಬೇಸರವಾಗಬಹುದು. ಮಹಿಳೆ ಮೇಲಿನ ದೌರ್ಜನ್ಯ ಸಿನಿಮಾ ವೀಕ್ಷಕರಿಗೆ ಕಸಿವಿಸಿ ಉಂಟುಮಾಡಬಹುದು.
ಒಟಿಟಿ ಸಿನಿಮಾವೆಂದು ಮನೆಯಲ್ಲಿ ಹೆಚ್ಚು ಸದ್ದುಗದ್ದಲವಿದ್ದಾಗ ನೋಡಿದರೆ ಸುಲಭವಾಗಿ ಈ ಚಿತ್ರದ ಕಥೆ ದಕ್ಕದ್ದು. ಎಚ್ಚರಿಕೆಯಿಂದ ಚಿತ್ರಕಥೆಯನ್ನು ಗಮನಿಸುತ್ತ ನೋಡಿದರೆ ಚಿತ್ರದ ಕಥೆ ಸರಿಯಾಗಿ ಅರ್ಥವಾದೀತು. ಇದು ಥ್ರಿಲರ್‌ಗಿಂತ ಹೆಚ್ಚಾಗಿ ಭಾವನಾತ್ಮಕ ಸಿನಿಮಾವಾಗಿದೆ. ಭಾವನಾತ್ಮಕ ಥ್ರಿಲ್ಲರ್ ಎಂದು ಇದನ್ನು ಕರೆಯಲು ಅಡ್ಡಿಯಿಲ್ಲ. ಅಪ್ಪ ಮತ್ತು ಮಗಳ ಬಾಂಧವ್ಯದ ಕಥೆಯಾಗಿ ಮಹಾರಾಜ ಕಾಡುತ್ತಾನೆ.
ಚಿತ್ರ ವಿಮರ್ಶೆ: ಪ್ರವೀಣ್ ಚಂದ್ರ ಪುತ್ತೂರು
ರೇಟಿಂಗ್: 3.5/5
ಮಹಾರಾಜ ಸಿನಿಮಾದ ಟ್ರೇಲರ್
ಮಹಾರಾಜ ಸಿನಿಮಾದ ಬಗ್ಗೆ
ನಿರ್ದೇಶನ: ನಿಥಿಲನ್ ಸಮಿನಾಥನ್
ಬ್ಯಾನರ್: ಪ್ಯಾಶನ್ ಸ್ಟುಡಿಯೋಸ್
ಪಾತ್ರವರ್ಗ: ವಿಜಯ್ ಸೇತುಪತಿ, ಅನುರಾಗ್ ಕಶ್ಯಪ್, ನಟ್ಟಿ (ನಟರಾಜ್), ಭಾರತಿರಾಜ, ಅಭಿರಾಮಿ, ಮಮತಾ ಮೋಹನ್‌ದಾಸ್, ಸಿಂಗಂಪುಲಿ, ಅರುಲ್ದಾಸ್ ಮತ್ತು ಇತರರು
ಸಂಭಾಷಣೆ: ವಸಂತ್
ಸಂಗೀತ: ಬಿ ಅಜನೀಶ್ ಲೋಕನಾಥ್
ಡಿಒಪಿ: ದಿನೇಶ್ ಪುರುಷೋತ್ತಮನ್
ಸಂಕಲನ: ಕೊಡತಿ ಪವನ್ ಕಲ್ಯಾಣ್
ಪ್ರೊಡಕ್ಷನ್ ಡಿಸೈನರ್: ವಿ. ಸೆಲ್ವಕುಮಾರ್
ಸಾಹಸ ನಿರ್ದೇಶನ: ಅನ್ಲ್ ಅರಸು
ನಿರ್ಮಾಪಕರು: ಸುಧನ್ ಸುಂದರಂ, ಜಗದೀಶ್ ಪಳನಿಸಾಮಿ
ಚಿತ್ರಮಂದಿರಗಗಳಲ್ಲಿ ಬಿಡುಗಡೆ ದಿನಾಂಕ: ಜೂನ್ 14, 2024
ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ?: ನೆಟ್‌ಫ್ಲಿಕ್ಸ್
ಒಟಿಟಿ ಬಿಡುಗಡೆ ದಿನಾಂಕ: ಜುಲೈ 12