Indian 2 Movie Review: ಕಮಲ್‌ ಹಾಸನ್‌ ಮರ್ಮಕಲೆಯ ಬೆರಳಿನಾಟದ ಬೆರಗಿನಾಟ, ಸೇನಾಪತಿಯ ವಿಫಲ ಕಥೆ- ಓದಿ ಇಂಡಿಯನ್‌ 2 ಸಿನಿಮಾ ವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  Indian 2 Movie Review: ಕಮಲ್‌ ಹಾಸನ್‌ ಮರ್ಮಕಲೆಯ ಬೆರಳಿನಾಟದ ಬೆರಗಿನಾಟ, ಸೇನಾಪತಿಯ ವಿಫಲ ಕಥೆ- ಓದಿ ಇಂಡಿಯನ್‌ 2 ಸಿನಿಮಾ ವಿಮರ್ಶೆ

Indian 2 Movie Review: ಕಮಲ್‌ ಹಾಸನ್‌ ಮರ್ಮಕಲೆಯ ಬೆರಳಿನಾಟದ ಬೆರಗಿನಾಟ, ಸೇನಾಪತಿಯ ವಿಫಲ ಕಥೆ- ಓದಿ ಇಂಡಿಯನ್‌ 2 ಸಿನಿಮಾ ವಿಮರ್ಶೆ

Kamala Hassan Indian 2 Movie Review: ಕಮಲ್‌ ಹಾಸನ್‌ ನಟನೆಯ ಇಂಡಿಯನ್‌ 2 ಸಿನಿಮಾವು ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಯುವ ಜನತೆಯ ಕಥೆ. ಸೋಷಿಯಲ್‌ ಮೀಡಿಯಾದ ಹ್ಯಾಷ್‌ಟ್ಯಾಗ್‌ ಅಭಿಯಾನಗಳಿಗೆ ಸ್ಪಂಧಿಸುವ ಸೇನಾಪತಿ ಈ ಬಾರಿ ತಾನು ಬಂದ ಉದ್ದೇಶ ಈಡೇರಿಸುವಲ್ಲಿ ಸಫಲನಾಗಿಲ್ಲ. ಎಸ್‌. ಶಂಕರ್‌ ನಿರ್ದೇಶನದ ಇಂಡಿಯನ್‌ 2 ಸಿನಿಮಾದ ವಿಮರ್ಶೆ ಇಲ್ಲಿದೆ ಓದಿ.

Indian 2 Movie Review: ಕಮಲ್‌ ಹಾಸನ್‌ ಮರ್ಮಕಲೆಯ ಬೆರಳಿನಾಟದ ಬೆರಗಿನಾಟ
Indian 2 Movie Review: ಕಮಲ್‌ ಹಾಸನ್‌ ಮರ್ಮಕಲೆಯ ಬೆರಳಿನಾಟದ ಬೆರಗಿನಾಟ

Indian 2 Movie Review: ಭಾರತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನರು ಪರಿತಪಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಇಂಡಿಯನ್‌ ಅಂದ್ರೆ ಸೇನಾಪತಿ ಇರಬೇಕಿತ್ತು ಎಂದು ಯುವಜನತೆ ಬಯಸುತ್ತದೆ. #comebackindian ಟ್ರೆಂಡ್‌ ಆಗುತ್ತದೆ. ಥೈವಾನ್‌ನ ತೈಪೈ ನಗರದಲ್ಲಿರುವ "ಅಜ್ಜ" ಕಮಲ್‌ ಹಾಸನ್‌ ಅಂದ್ರೆ ಸೇನಾಪತಿ ಭಾರತಕ್ಕೆ ಬರುತ್ತಾರೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು "ಯುವಜನತೆ ತಮ್ಮ ಹೆತ್ತವರ ಭ್ರಷ್ಟ ಹಣವನ್ನು ನಿರಾಕರಿಸಬೇಕು" ಎಂಬ ಸಂದೇಶ ಸಾರುತ್ತಾರೆ. ಸಾಕಷ್ಟು ಯುವ ಜನರು ತಮ್ಮ ಹೆತ್ತವರ ಬಂಧನಕ್ಕೆ ಕಾರಣವಾಗುತ್ತಾರೆ. ಈ ಕ್ರಾಂತಿಯ ಇದರ ತಕ್ಷಣದ ಪರಿಣಾಮಗಳಿಗೆ ಅಂಜಿ ಇದೇ ಯುವ ಜನತೆ #gobackindian ಟ್ರೆಂಡ್‌ ಮಾಡುತ್ತಾರೆ. ಸೇನಾಪತಿಯನ್ನು ಸಾವಿರಾರು ಜನರು ಓಡಿಸಲು ಮುಂದಾಗುತ್ತಾರೆ. ಒಂದು ಕಡೆ ಪೊಲೀಸರು ಅಟ್ಟಿಸಿಕೊಂಡು ಬರುತ್ತಾರೆ. ಇನ್ನೊಂದೆಡೆ ಜನರು ಅಟ್ಟಿಸಿಕೊಂಡು ಬರುತ್ತಿದ್ದಾರೆ. ಈ ನಡುವೆ ತಾನು ಭಾರತಕ್ಕೆ ಬಂದ ಕಾರ್ಯವನ್ನು ಪೂರೈಸಲು ಸೇನಾಪತಿಗೆ ಆಗುವುದೇ?

ಚಿತ್ರದ ಹೆಸರುಇಂಡಿಯನ್‌ 2
ನಿರ್ದೇಶನಎಸ್‌. ಶಂಕರ್‌
ಭಾಷೆತಮಿಳು (ಪ್ಯಾನ್‌ ಇಂಡಿಯಾ)
ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ರೇಟಿಂಗ್‌ ***
ತಾರಾಗಣಕಮಲ್‌ ಹಾಸನ್‌, ರಾಕುಲ್‌ ಪ್ರೀತ್‌ ಸಿಂಗ್‌, ಎಸ್‌ಜೆ ಸೂರ್ಯಾ, ವಿವೇಕ್‌ ಮುಂತಾದವರು

ಮರ್ಮಕಲೆಯ ಬೆರಗಿನಾಟ

ಇಂಡಿಯನ್‌ ಸಿನಿಮಾದಲ್ಲಿ ಕಮಲ್‌ ಹಾಸನ್‌ ತನ್ನ ಬೆರಳುಗಳಿಂದಲೇ (ಮಾರ್ಷಲ್‌ ಆರ್ಟ್‌ ಮರ್ಮಕಲೆ/ವರ್ಮಾ ಕಲೈ) ಎದುರಾಳಿಗಳನ್ನು ಫಿನಿಶ್‌ ಮಾಡುವ ಸಂಗತಿ ಎಲ್ಲರಿಗೂ ಗೊತ್ತು. ಇಂಡಿಯನ್‌ 2ನಲ್ಲಿ ಈ ಮರ್ಮಕಲೆ ಅಪ್‌ಗ್ರೇಡ್‌ ಆಗಿದೆ. ಸೇನಾಪತಿಯು ಎದುರಾಳಿಯ ದೇಹದ ನಿರ್ದಿಷ್ಟ ಜಾಗಕ್ಕೆ ನಿರ್ದಿಷ್ಟ ರೀತಿಯಲ್ಲಿ ಮರ್ಮಕಲೆ ಪ್ರಯೋಗಿಸಿದರೆ ವೈವಿಧ್ಯಮಯ ಫಲಿತಾಂಶ ದೊರಕುತ್ತದೆ. ಈ ಫಲಿತಾಂಶ ಸಿನಿಮಾ ವೀಕ್ಷಕರ ಮುಖದಲ್ಲಿ ನಗು ಮೂಡಿಸುವಲ್ಲಿಯೂ ಯಶಸ್ವಿಯಾಗಿದೆ. ಗೋಲ್ಡ್‌ ಮ್ಯಾನ್‌ ಸೇರಿದಂತೆ ಹಲವು ಭ್ರಷ್ಟರಿಗೆ ಒಂದೊಂದು ರೀತಿಯ ಬೆರಳಿನಾಟ ತೋರಿಸಿದ್ದಾರೆ. ಒಬ್ಬ ಭ್ರಷ್ಟ ಇವರ ಮರ್ಮ ಕಲೈನಿಂದ ಹಾಡುತ್ತಲೇ ಇರಬೇಕಾಗುತ್ತದೆ. ಇನ್ನೊಬ್ಬ ಓಡುತ್ತಲೇ ಇರಬೇಕಾಗುತ್ತದೆ. ಸಿನಿಮಾಗಳಲ್ಲಿ ಹೊಡಿಬಡಿಕಡಿ ರಕ್ತಪಾತ ಹೆಚ್ಚಾಗಿರುವ ಸಮಯದಲ್ಲಿ ಇಂಡಿಯನ್‌ 2ನ ಈ ಮರ್ಮಕಲೆಯ ಫೈಟ್‌ ನೋಡಲು ಹಿತವಾಗಿದೆ.

ಸಂದೇಶ ಅತ್ಯುತ್ತಮ

ಇಂಡಿಯನ್‌ 2 ಸಿನಿಮಾ ಯುವಜನತೆಯಲ್ಲಿ ಒಂದು ಜಾಗೃತಿ ಮೂಡಿಸುವ ಸಾಧ್ಯತೆಯನ್ನು ಹೊಂದಿದೆ. ಈ ಸಿನಿಮಾ ನೋಡುವ ಯುವಕರು ದೇಶದಲ್ಲಿ ನಡೆಯುವ ಭ್ರಷ್ಟಾಚಾರದ ಕುರಿತು ಒಂದು ಅಲರ್ಟ್‌ ಹೊಂದಬಹುದು. ಇದೇ ಸಮಯದಲ್ಲಿ ಭ್ರಷ್ಟರಿಗೂ ಇದು ಒಂದು ಎಚ್ಚರಿಕೆ ನೀಡಬಹುದು. ಭ್ರಷ್ಟಾಚಾರ ಮಾಡುವ ಹೆತ್ತವರೂ ತಮ್ಮ ಹಣದ ಮೂಲವನ್ನು ಪುನರ್‌ಅವಲೋಕನ ಮಾಡಿಕೊಳ್ಳಬಹುದು. ದೇಶದ ಸುಧಾರಣೆ ಮನೆಯಿಂದಲೇ ಆರಂಭವಾಗುವ ಕಲ್ಪನೆ ಇಷ್ಟವಾಗಬಹುದು. ಸೋಷಿಯಲ್‌ ಮೀಡಿಯಾವನ್ನು ಭ್ರಷ್ಟಾಚಾರದ ವಿರುದ್ಧ, ಅನ್ಯಾಯದ ವಿರುದ್ಧ ಹೋರಾಡಲು ಬಳಸಬಹುದು ಎಂಬ ಜಾಗೃತಿ ಮೂಡಿಸಬಹುದು. ಆದರೆ, ಸಿನಿಮಾಗಳು ನೀಡುವ ಸಂದೇಶಗಳನ್ನು ಜನರು ಎಷ್ಟು ಹೊತ್ತು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎನ್ನುವುದು ಕೂಡ ಯೋಚಿಸಬೇಕಾದ ವಿಚಾರ.

ಯಾರ ನಟನೆ ಹೇಗಿದೆ?

ವೀರಶೇಖರನ್‌ ಸೇನಾಪತಿಯಾಗಿ ಕಮಲ್‌ ಹಾಸನ್‌ ನಟನೆಯ ಕುರಿತು ಎರಡು ಮಾತಿಲ್ಲ. ಇಂಡಿಯನ್‌ 2ನಲ್ಲಿ ಜಾಗೃತ ಯುವ ಜನತೆಯ ಪ್ರತಿನಿಧಿಯಾಗಿ ಸಿದ್ಧಾರ್ಥ್‌ (ಚಿತ್ರ ಅರವಿಂದನ್‌) ಎಂದಿನಂತೆ ಸಹಜವಾಗಿ ನಟಿಸಿದ್ದಾರೆ. ದಿಶಾ ಪಾತ್ರದಲ್ಲಿ ರಾಕುಲ್‌ ಪ್ರೀತ್‌ ಸಿಂಗ್‌ಗೆ ನಟನೆಗೆ ಹೆಚ್ಚಿನ ಅವಕಾಶವಿಲ್ಲ. ಸಕಲಕಲಾವಲ್ಲಭನ್‌ ಪಾತ್ರದಲ್ಲಿ ಎಸ್‌ಜೆ ಸೂರ್ಯನಿಂದ ಇನ್ನಷ್ಟು ನಟನೆಯ ನಿರೀಕ್ಷೆಯಿತ್ತು. ಜನಪ್ರಿಯ ಹಾಸ್ಯನಟ ಬ್ರಹ್ಮಾನಂದಂ ಒಂದು ಬಾರಿ ಮಾತ್ರ ಕಾಣಿಸುತ್ತಾರೆ. ಸಿಬಿಐ ಅಧಿಕಾರಿ ಪಾತ್ರದಲ್ಲಿ ವಿವೇಕ್‌ ನಟನೆ ಗಮನ ಸೆಳೆಯುತ್ತದೆ.

ಹೇಗಿದೆ ಇಂಡಿಯನ್‌ 2?

ಇಂಡಿಯನ್‌ 2 ಸಿನಿಮಾ ಅರ್ಥವಾಗಬೇಕಾದರೆ ಇಂಡಿಯನ್‌ (ಭಾಗ -1) ನೋಡಲೇಬೇಕೆಂದಿಲ್ಲ. ಸಿನಿಮಾದಲ್ಲಿ ಮುಂದೇನಾಗಬಹುದು ಎಂದು ಬಹುತೇಕ ಕಡೆ ಊಹೆ ಮಾಡುವಂತೆ ಇದೆ. ಅನಿರೀಕ್ಷಿತ ತಿರುವುಗಳಿಲ್ಲ. ಸಿನಿಮಾದ ಕಥೆಯೂ ಗಟ್ಟಿಯಾಗಿಲ್ಲ. ಅಲ್ಲಲ್ಲಿ ಮೊಲ ಮತ್ತು ಆಮೆಯ ಓಟದಂತೆ, ಇನ್ನು ಕೆಲವು ಕಡೆ ಇಲಿ ಮತ್ತು ಬೆಕ್ಕಿನ ಓಟದಂತೆ ಸಿನಿಮಾ ಸಾಗುತ್ತದೆ. ಅರ್ಧಗಂಟೆಯ ಬಳಿಕ ಕಮಲ್‌ ಹಾಸನ್‌ ಎಂಟ್ರಿಯಾಗುತ್ತಾರೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರೋಮಾಂಚನಕಾರಿ ಓಟವಿದೆ. ಯುವಜನತೆ ತಮ್ಮ ಹೆತ್ತವರ ಭ್ರಷ್ಟ ಹಣದ ಪ್ರಯೋಜನವನ್ನು ನಿರಾಕರಿಸಬೇಕು ಎಂಬ ಪರಿಕಲ್ಪನೆ ಚೆನ್ನಾಗಿದೆ. ಚಿತ್ರದ ಮೊದಲಾರ್ಧ ಒಂದಿಷ್ಟು ಭ್ರಷ್ಟಲೋಕವನ್ನು ಪರಿಚಯಿಸುವ ಪ್ರಯತ್ನದಲ್ಲಿ ಸಫಲವಾಗಿದೆ. ಮೊದಲಾರ್ಧಕ್ಕೆ ಹೋಲಿಸಿದರೆ ಇಂಟರ್‌ವಲ್‌ ಬಳಿಕ ಸಿನಿಮಾ ವೇಗ ಪಡೆಯುತ್ತದೆ.

ಚಿತ್ರದ ಕ್ಯಾಮೆರಾ ವರ್ಕ್‌ ಉತ್ತಮವಾಗಿದೆ. ಆದರೆ, ಚಿತ್ರಕಥೆ ಗೊಜಲುಗೊಜಲಾಗಿದ್ದಾಗ ಕ್ಯಾಮೆರಾವೂ ಅದಕ್ಕೆ ತಕ್ಕಂತೆ ಜಂಪ್‌ ಮಾಡಬೇಕಾಗುತ್ತದೆ. ಹಿನ್ನೆಲೆ ಧ್ವನಿ ಒಂದಿಷ್ಟು ಕರ್ಕಶ ಎನ್ನಬಹುದು. ಹಿಂದಿನ ಇಂಡಿಯನ್‌ ಸಿನಿಮಾಕ್ಕೆ ಎಆರ್‌ ರೆಹಮಾನ್‌ ಸಂಗೀತವಿತ್ತು. ಈ ಬಾರಿ ಅನಿರುದ್ಧ್‌ ರವಿಚಂದರ್‌ ಸಂಗೀತ ನೀಡಿದ್ದಾರೆ. ಸಿನಿಮಾದ ದೃಶ್ಯವೊಂದರಲ್ಲಿ "ನಿನ್ನ ಮದುವೆಗೆ ಎಆರ್‌ ರೆಹಮಾನ್‌ರ ಸಂಗೀತ ಕಾರ್ಯಕ್ರಮವನ್ನು ಇಟ್ಟುಕೊಳ್ಳಲು ಬಯಸಿದ್ದೇವು" ಎಂಬ ಡೈಲಾಗ್‌ ಇದೆ. ಈ ಡೈಲಾಗ್‌ ಮೂಲಕ ಈ ಹಿಂದಿನ ಇಂಡಿಯನ್‌ ಸಂಗೀತ ನಿರ್ದೇಶಕರಿಗೆ ನಿರ್ದೇಶಕರು ಏನು ಹೇಳಲು ಬಯಸಿದ್ದಾರೋ? ಸಿನಿಮಾದ ಸಂಕಲನವೂ ಅತ್ಯುತ್ತಮವಾಗಿಲ್ಲ. ನಿರ್ದೇಶಕ ಶಂಕರ್‌ ಅವರ ಅನ್ನಿಯನ್‌, 2.0 ಮುಂತಾದ ಸಿನಿಮಾಗಳಿಗೆ ಹೋಲಿಸಿದರೆ ಇಂಡಿಯನ್‌ 2 ಸಾಕಷ್ಟು ಹಿಂದಿದೆ. ಇಂಡಿಯನ್‌ 2 ಮೂಲಕ ಸೇನಾಪತಿ ಭಾರತಕ್ಕೆ ಬಂದ ಉದ್ದೇಶ ಸಕ್ಸಸ್‌ ಆಗಿಲ್ಲ. ಆದರೆ, ಇಂಡಿಯನ್‌ 3ಯಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಇದೆ. ಕಮಲ್‌ ಹಾಸನ್‌ ಅಭಿಮಾನಿಗಳಿಗೆ ಇಂಡಿಯನ್‌ 2 ಒಂದು ಬಾರಿ ನೋಡಿದಾಗ ಖುಷಿ ನೀಡಬಹುದಾದ ಸಿನಿಮಾ ಎಂದು ಈ ವಿಮರ್ಶೆಗೆ ಷರಾ ಬರೆಯಬಹುದು.

ಇಂಡಿಯನ್‌ 2 ಸಿನಿಮಾ ಎಂಡ್‌ ಟೈಟಲ್‌ ಬಂದಾಗ ಎದ್ದು ಹೋಗಬೇಡಿ. ಅಂತಿಮ ದೃಶ್ಯ ಮುಗಿದ ಬಳಿಕ  ಇಂಡಿಯನ್‌ 3ನ ಸಣ್ಣ ಝಲಕ್‌ ಪ್ರದರ್ಶನಗೊಳ್ಳುತ್ತದೆ. ಇಂಡಿಯನ್‌ 3ಯಲ್ಲಿ ಸೇನಾಪತಿಯ ಮೇಲೆಯೇ ಮರ್ಮಕಲೆ ಪ್ರಯೋಗಿಸಲಾಗುತ್ತದೆ.

ಚಿತ್ರ ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

ರೇಟಿಂಗ್‌: 3\5

Whats_app_banner