‘ಕಟುವಾಗಿ ವಿಮರ್ಶೆ ಬರೆದ ಗೌರಿ ಲಂಕೇಶ್‌ಗೆ ಮನೆಗೆ ಕರೆದು ಅಭಿನಂದಿಸಿದ್ದರು ಅಣ್ಣಾವ್ರು, ಆದ್ರೆ ಮಾರ್ಟಿನ್ ಸಿನಿಮಾ ತಂಡ ಜೈಲಿಗೆ ಕಳಿಸ್ತಿದೆ!’
ಮಾರ್ಟಿನ್ ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಮಾಡಿದ್ದ ಯೂಟ್ಯೂಬರ್ ಸುಧಾಕರ್ ಗೌಡ ಅವರ ವಿರುದ್ಧ ದೂರು ನೀಡಿ, ಜೈಲಿಗೆ ಕಳಿಸಿತ್ತು ಚಿತ್ರತಂಡ. ಇದೀಗ ಇದೇ ಘಟನೆ ಕುರಿತು ನಿರ್ದೇಶಕ ಪ್ರಕಾಶ್ ರಾಜ್ ಮೇಹು ಚಿತ್ರತಂಡದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಅಣ್ಣಾವ್ರ ಉದಾಹರಣೆಯನ್ನೂ ಕೊಟ್ಟಿದ್ದಾರೆ.
Prakash Raj Mehu on Martin Movie: ಮಾರ್ಟಿನ್ ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಈ ಸಿನಿಮಾಕ್ಕೆ ಮೆಚ್ಚುಗೆಗಿಂತ ನೆಗೆಟಿವ್ ಕಾಮೆಂಟ್‌ಗಳೇ ಹೆಚ್ಚು ಬಂದಿದೆ. ಕಲೆಕ್ಷನ್ ವಿಚಾರದಲ್ಲಿಯೂ ಹೇಳಿಕೊಳ್ಳುವಂಥ ಏರಿಕೆ ಕಾಣದ ಈ ಸಿನಿಮಾ, ನಿನ್ನೆಯಷ್ಟೇ ಸಕ್ಸಸ್ ಮೀಟ್ ಮಾಡಿ, ಚಿತ್ರವನ್ನು ಅಪ್ಪಿ ಒಪ್ಪಿದ ಎಲ್ಲರಿಗೂ ಧನ್ಯವಾದ ಎಂದಿದೆ. ಈ ನಡುವೆಯೇ ಇದೇ ಮಾರ್ಟಿನ್ ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದ ಯೂಟ್ಯೂಬರ್ ಸುಧಾಕರ್ ಗೌಡ ಅವರನ್ನು ಜೈಲಿಗೆ ಕಳಿಸಿತ್ತು ಮಾರ್ಟಿನ್ ಸಿನಿಮಾ ತಂಡ.
ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ವಿಮರ್ಶೆ ಮಾಡಿ ಅದರ ವಿಡಿಯೋ ಶೇರ್ ಮಾಡಿದ್ದರು ಸುಧಾಕರ್ ಗೌಡ. ಹಾಗೇ ಕೆಟ್ಟ ವಿಮರ್ಶೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದೇ ತಡ, ಚಿತ್ರತಂಡ ಆ ವ್ಯಕ್ತಿ ವಿರುದ್ಧ ಬೆಂಗಳೂರಿನ ಮಾದನಾಯಕನಹಳ್ಳಿ ಠಾಣೆಯಲ್ಲಿ ದೂರು ನೀಡಿ, ಜೈಲಿಗೆ ಕಳಿಸಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು ಸುಧಾಕರ್ ಗೌಡ. ಇದೀಗ ಇದೇ ಘಟನೆ ಬಗ್ಗೆ ಸ್ಯಾಂಡಲ್‌ವುಡ್‌ನ ನಿರ್ದೇಶಕ ಮತ್ತು ಡಾ. ರಾಜ್‌ಕುಮಾರ್ ಕುಟುಂಬದ ಆಪ್ತ ಪ್ರಕಾಶ್ ರಾಜ್‌ಮೇಹು ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡದ ಈ ನಡೆಯನ್ನು ಖಂಡಿಸಿದ್ದಾರೆ.
ಪ್ರಕಾಶ್ ರಾಜ್ ಮೇಹು ಏನಂದ್ರು?
ಹಿಂದೆ ಡಾ.ರಾಜಕುಮಾರ್ ಅವರ ಸಿನಿಮಾಗಳ ಬಗ್ಗೆ ಕೆಟ್ಟ ವಿಮರ್ಶೆ ಬರೆಯಲು "ವಿಪ್ರೋತ್ತಮ"ರ ದಂಡೇ ಕಾದು ಕುಳಿತಿರುತ್ತಿತ್ತು! ಅವರುಗಳು ಸಿನಿಮಾ ಬಗ್ಗೆ ನಕಾರಾತ್ಮಕವಾಗಿ ಬರೆದು ತಮಗೆ ತಾವೇ ಖುಷಿ ಪಡುತ್ತಿದ್ದರು!! ಆದರೆ ಸಹೃದಯ ಪ್ರೇಕ್ಷಕ ಸಮೂಹ 100 Days, 25 Weeks, 35 Weeks, 1year, 2 years ಅಂತ ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮ ಪಡುತಿತ್ತು!!!
"ಶಬ್ಧವೇದಿ" ಸಿನಿಮಾ ಬಗ್ಗೆ ಗೌರಿ ಲಂಕೇಶ್ ಬೈದು ಬರೆದಿದ್ದರು. ಅಣ್ಣಾವ್ರ ಮನೆಯವರು ಅದನ್ನು ಓದಿ ಬೇಸರ ವ್ಯಕ್ತ ಪಡಿಸಿದಾಗ,ಅಣ್ಣಾವ್ರು "ಆ ಮಗು ಸರಿಯಾಗಿಯೆ ಬರೆದಿದೆ, ಸಾಧ್ಯವಾದರೆ ಅವರನ್ನು ಮನೆಗೆ ಕರೆಯಿಸಿ, ನಾನು ಅಭಿನಂದಿಸಿ, ಧನ್ಯವಾದ ಹೇಳಬೇಕು" ಅಂದಿದ್ದರು!!!
ವಿಮರ್ಶಕರು ಹಾಡಿ ಹೊಗಳಿದ ಮಾತ್ರಕ್ಕೆ ಸೂಪರ್ ಹಿಟ್ಟಾಗುವುದಿಲ್ಲ! ಅಥವಾ ಅವರು ತೆಗಳಿದ ಮಾತ್ರಕ್ಕೆ ಸೋತು ಹೋಗುವುದಿಲ್ಲ ಅನ್ನುವುದಕ್ಕೆ ಇತಿಹಾಸದಲ್ಲಿ ಹಲವಾರು ಉದಾಹರಣೆಗಳು ಸಿಗುತ್ತವೆ. ನಾನು ಕೆಲಸ ಮಾಡಿದ ಎರಡು ಸಿನಿಮಾಗಳ ಉದಾಹರಣೆ ಕೊಟ್ಟು ಹೇಳಬೇಕೆಂದರೆ "ಜನುಮದ ಜೋಡಿ" ಚಿತ್ರಕ್ಕೆ ನಕಾರಾತ್ಮಕ ವಿಮರ್ಶೆಗಳು ಬಂದಿದ್ದವು ಚಿತ್ರ 1ವರ್ಷ ಓಡಿತು!! "ತಾಯೀ ಸಾಹೇಬ" ಚಿತ್ರವನ್ನು ಇನ್ನಿಲ್ಲದಂತೆ ಹೊಗಳಿದ್ದರು, ಆದರೆ ಅದು ಕಮರ್ಷಿಯಲ್ಲಾಗಿ ಗೆಲ್ಲಲಿಲ್ಲ!!!
"ವಿಮರ್ಶೆ" ಅಂದರೆ ಅದೂ ಕೂಡ ಒಬ್ಬ ವ್ಯಕ್ತಿಯ ಅಭಿಪ್ರಾಯದ ಅಭಿವ್ಯಕ್ತಿಯೇ ವಿನಃ ಮತ್ತೇನು ಅಲ್ಲ ಅನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಆದರೆ ವಿಮರ್ಶಕರಾದವರಿಗೆ ಸಿನಿಮಾ ತಾಂತ್ರಿಕತೆಯ ಅರಿವು, ಕಲಾಭಿರುಚಿ, ಸಾಹಿತ್ಯ- ಸಂಸ್ಕೃತಿಯ ಪರಿಜ್ಞಾನ ಅವೆಲ್ಲದರ ಜೊತೆಗೆ ವಸ್ತುನಿಷ್ಠವಾಗಿ ನೋಡುವ ಸಮಚಿತ್ತತೆ, ಅಭಿವ್ಯಕ್ತಿಯಲ್ಲಿ ಪ್ರಾಮಾಣಿಕತೆ ಇರಬೇಕು. ಆದರೆ ಇತ್ತೀಚಿನ ಬಹಳಷ್ಟು ವಿಮರ್ಶಕರಿಗೆ ಆ ರೀತಿಯ ಯಾವ ಯೋಗ್ಯತೆಯೂ ಇದ್ದಂತೆ ಕಾಣುವುದಿಲ್ಲ. ಹಾಗಾಗಿ ಅಂಥವರ ವಿಮರ್ಶೆಗಳನ್ನು ಸಿನಿಮಾದವರಾಗಲೀ, ಪ್ರೇಕ್ಷಕರಾಗಲಿ ಗಂಭೀರವಾಗಿ ಪರಿಗಣಿಸಬೇಕಿಲ್ಲ ಮತ್ತು ಈ ರೀತಿಯ ತೀರ್ಮಾನಗಳಿಂದ ವಾಕ್ ಸ್ವಾತಂತ್ರ್ಯವನ್ನು ಕಸಿಯುತ್ತಿರುವವರಿಗೆ ಧಿಕ್ಕಾರ...ಧಿಕ್ಕಾರ..." ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ವಿಭಾಗ