ಮಾರ್ಟಿನ್ ಕಾಪಿರೈಟ್ ಸ್ಟ್ರೈಕ್ ವಿವಾದ: ಧ್ರುವ ಸರ್ಜಾ ಚಿತ್ರದ ವಿರುದ್ಧ ಆಕ್ರೋಶ, ಯೂಟ್ಯೂಬ್ ಫೀಚರ್ ದುರ್ಬಳಕೆ ಮಾಡಿತೇ ಚಿತ್ರತಂಡ
ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ನಟನೆಯ, ಎಪಿ ಅರ್ಜುನ್ ನಿರ್ದೇಶನದ, ಉದಯ್ ಕೆ ಮೆಹ್ತಾ ನಿರ್ಮಾಣದ ಮಾರ್ಟಿನ್ ಸಿನಿಮಾದ ನೆಗೆಟಿವ್ ವಿಮರ್ಶೆಗಳ ವಿರುದ್ಧ ಚಿತ್ರತಂಡ "ಕಾಪಿರೈಟ್ ಸ್ಟ್ರೈಕ್ʼ ಆಯುಧವನ್ನು ಕೈಗೆತ್ತಿಕೊಂಡಿದೆ. ಆನ್‌ಲೈನ್‌ನಲ್ಲಿ ಈ ಕುರಿತು ಆಕ್ರೋಶ ವ್ಯಕ್ತವಾಗಿದೆ.
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಕಳೆದ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 2021ರ ಪೊಗರು ಬಳಿಕ ಆಕ್ಷನ್ ಫ್ರಿನ್ಸ್‌ನ ಈ ಚಿತ್ರ ತೆರೆಕಂಡಿದೆ. ಇದು ಹಲವು ಕಾರಣಗಳಿದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಧ್ರುವ ಸರ್ಜಾ ಮಾವ ಎಪಿ ಅರ್ಜುನ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಗಳಿಕೆಯೊಂದಿಗೆ ಸಾಗುತ್ತಿದೆ. ಎಪಿ ಅರ್ಜುನ್ ನಿರ್ದೇಶನದಲ್ಲಿ ಈ ಹಿಂದೆ ಅದ್ಧೂರಿ ಸಿನಿಮಾದಲ್ಲೂ ಧ್ರುವ ಸರ್ಜಾ ನಟಿಸಿದ್ದರು.
ಮಾರ್ಟಿನ್ ಸಿನಿಮಾ ಕಳೆದ ಕೆಲವು ದಿನಗಳಿಂದ ಬೇರೆ ಕಾರಣಗಳಿಂದಲೂ ಸುದ್ದಿಯಲ್ಲಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಮಾರ್ಟಿನ್ ಸಿನಿಮಾ ರಜನಿಕಾಂತ್ ನಟನೆಯ ವೆಟ್ಟೈಯನ್ ಚಿತ್ರಕ್ಕೆ ಬಾಕ್ಸ್‌ಆಫೀಸ್‌ನಲ್ಲಿ ನೇರ ಸ್ಪರ್ಧೆ ಒಡ್ಡಿತ್ತು. ಆದರೆ, ಈ ಎರಡು ಚಿತ್ರಗಳು ಹೇಳಿಕೊಳ್ಳುವಷ್ಟು ಗಳಿಕೆ ಮಾಡಿಲ್ಲ. ಆದರೆ, ಧ್ರುವ ಸರ್ಜಾ ಅವರ ಅಪಾರ ಅಭಿಮಾನಿಗಳು ಮಾರ್ಟಿನ್ ಅನ್ನು ಕೊಂಡಾಡುತ್ತಿದ್ದಾರೆ.
ಏನಿದು ಮಾರ್ಟಿನ್ ಕಾಪಿರೈಟ್ ಸ್ಟ್ರೈಕ್ ವಿವಾದ?
ಕಾಪಿರೈಟ್ ಸ್ಟ್ರೈಕ್ ಎಂದರೆ ಏನೆಂದು ಯೂಟ್ಯೂಬ್ ಬಳಕೆದಾರರಿಗೆ ತಿಳಿದಿರಬಹುದು. ಯೂಟ್ಯೂಬ್‌ನಲ್ಲಿ ಯಾವುದಾದರೂ ಆಡಿಯೋ, ವಿಡಿಯೋ ಅಪ್ಲೋಡ್ ಮಾಡುವಾಗ ಯಾವುದಾದರೂ ಕಾಪಿರೈಟ್ ಇರುವ ಕಂಟೆಂಟ್ ಹಾಕಿದ್ದರೆ ಇಂತಹ ಸ್ಟ್ರೈಕ್ ಬರುತ್ತದೆ. ಇದೀಗ ಇದನ್ನೇ ಮಾರ್ಟಿನ್ ಸಿನಿಮಾ ತಂಡ ದುರ್ಬಳಕೆ ಮಾಡಿಕೊಂಡಿದೆ ಎಂದು ಆನ್‌ಲೈನ್‌ನಲ್ಲಿ ಸಾಕಷ್ಟು ಜನರು ದಂಗೆ ಎದ್ದಿದ್ದಾರೆ ಎಂದು ಒಟಿಟಿಪ್ಲೇ ವರದಿ ಮಾಡಿದೆ. ಯೂಟ್ಯೂಬ್ ಮತ್ತು ಎಕ್ಸ್‌ನಲ್ಲಿ ಸಾಕಷ್ಟು ಜನರಿಗೆ ಕಾಪಿರೈಟ್ ಸ್ಟ್ರೈಕ್ ಬರುತ್ತಿದೆ. ಮಾರ್ಟಿನ್ ಸಿನಿಮಾ ಬಿಡುಗಡೆಯಾದಾಗ ಆರಂಭದಲ್ಲಿ ಸಿನಿಮಾದ ಕುರಿತು ಕೆಲವರು ಒಳ್ಳೆಯ ವಿಮರ್ಶೆ ನೀಡಿದ್ದರು. ಆದರೆ, ಕೆಲವೇ ಹೊತ್ತಿನಲ್ಲಿ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ಮಲಯಾಳಂ ವರ್ಷನ್‌ಗೂ ನೆಗೆಟಿವ್ ವಿಮರ್ಶೆಗಳು ಬರಲು ಆರಂಭವಾದವು. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಸಿನಿಮಾವನ್ನು ನೋಡಿ ಭ್ರಮಾನಿರಸನಗೊಂಡವರು ಆನ್‌ಲೈನ್‌ನಲ್ಲಿ ವಿಮರ್ಶೆ ಮಾಡಿದ್ದರು.
ಚಿತ್ರತಂಡ ಆರಂಭದಲ್ಲಿ ಈ ನೆಗೆಟಿವ್ ಸಿನಿಮಾ ವಿಮರ್ಶೆಯನ್ನು ಕಡೆಗಣಿಸಿತ್ತು. ಇನ್ನೊಬ್ಬ ಜನಪ್ರಿಯ ನಟನ ಅಭಿಮಾನಿಗಳು ಈ ಸುಳ್ಳು ವಿಮರ್ಶೆಗಳನ್ನು ಮಾಡುತ್ತಿದ್ದಾರೆ ಎಂದು ಚಿತ್ರತಂಡ ಹೇಳುತ್ತಾ ಬಂದಿತ್ತು. ಮೂರನೇ ದಿನ ಚಿತ್ರದ ಸಕ್ಸಸ್ ಮೀಟ್ ಕೂಡ ನಡೆಸಿತ್ತು.
ಈ ರೀತಿಯ ವಿಮರ್ಶೆಗಳ ವಿರುದ್ಧ ಚಿತ್ರತಂಡ ತನ್ನದೇ ಹಾದಿ ಅನುಸರಿಸಿದೆ. ಕಾಪಿರೈಟ್ ಸ್ಟ್ರೈಕ್ ಅನ್ನೇ ಆಯುಧವಾಗಿಸಿ ಎಲ್ಲಾ ನೆಗೆಟಿವ್ ವಿಮರ್ಶೆಗಳನ್ನು ತೆಗೆಯುವ ಪ್ರಯತ್ನ ಮಾಡಿದೆ. ಆದರೆ, ಈ ರೀತಿ ವಿಮರ್ಶೆ ಮಾಡುವವರ ಹಿನ್ನೆಲೆ ಗಮನಿಸಿಲ್ಲ. ಸಾಕಷ್ಟು ಪ್ರತಿಭಾನ್ವಿತ ಸಿನಿಮಾ ವಿಮರ್ಶಕರ ವಿಮರ್ಶೆಗಳಿಗೂ ಕಾಪಿರೈಟ್ ಸ್ಟ್ರೈಕ್ ಬಿದ್ದಿವೆ. ಇದಾದ ಬಳಿಕ ಅದೇ ಚಾನೆಲ್‌ಗಳು ಮಾರ್ಟಿನ್ ತಂಡವು ಹೇಗೆ ಕಾಪಿರೈಟ್ ಸ್ಟ್ರೈಕ್ ಅನ್ನು ದುರ್ಬಳಕೆ ಮಾಡುತ್ತಿದೆ ಎಂದು ಬೇರೆ ವಿಡಿಯೋಗಳ ಮೂಲಕ ತಿಳಿಸುತ್ತಿದ್ದಾರೆ. "ಮಾತನಾಡುವ ಹಕ್ಕು" "ವಿಮರ್ಶಿಸುವ ಹಕ್ಕು" ಹೇಗೆ ಕಸಿದುಕೊಳ್ಳಲಾಗಿದೆ ಎಂದು ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಟನ ಅಭಿಮಾನಿಗಳಿಂದ ನಮಗೆ ಬೆದರಿಕೆ ಕೂಡ ಬಂದಿದೆ" ಎಂದು ಕೆಲವರು ಹೇಳಿದ್ದಾರೆ.
ಚಿತ್ರ ಬಿಡುಗಡೆಯಾಗುವ ಮುನ್ನವೂ ಮಾರ್ಟಿನ್ ಸಿನಿಮಾ ಹಲವು ಕಾರಣಗಳಿಂದ ಸುದ್ದಿಯಾಗಿತ್ತು. ವಿಎಫ್‌ಎಕ್ಸ್, ಉದಯ್ ಕೆ ಮೆಹ್ತಾ ಮತ್ತು ನಿರ್ದೇಶಕ ಎಪಿ ಅರ್ಜುನ್ ನಡುವಿನ ತಿಕ್ಕಾಟವೂ ಸುದ್ದಿಯಾಗಿತ್ತು.
ಪೂರಕ ಮಾಹಿತಿ: ಒಟಿಟಿ ಪ್ಲೇ