ಕೊಲೆ ಆರೋಪಿ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ, ಪಾರ್ಟಿ: 7 ಸೆರೆಮನೆ ಅಧಿಕಾರಿಗಳ ಅಮಾನತಿಗೆ ಗೃಹ ಸಚಿವ ಪರಮೇಶ್ವರ್ ಸೂಚನೆ-sandalwood news darshan prison party vvip treatment in jail home minister parameshwara strict action pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕೊಲೆ ಆರೋಪಿ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ, ಪಾರ್ಟಿ: 7 ಸೆರೆಮನೆ ಅಧಿಕಾರಿಗಳ ಅಮಾನತಿಗೆ ಗೃಹ ಸಚಿವ ಪರಮೇಶ್ವರ್ ಸೂಚನೆ

ಕೊಲೆ ಆರೋಪಿ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ, ಪಾರ್ಟಿ: 7 ಸೆರೆಮನೆ ಅಧಿಕಾರಿಗಳ ಅಮಾನತಿಗೆ ಗೃಹ ಸಚಿವ ಪರಮೇಶ್ವರ್ ಸೂಚನೆ

Darshan prison party: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ಪಾರ್ಟಿ ಮಾಡುತ್ತಿರುವ ಫೋಟೋಗಳು ವೈರಲ್‌ ಆಗಿವೆ. ಇದೇ ಸಂದರ್ಭದಲ್ಲಿ 7 ಸೆರೆಮನೆ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಿರುವುದಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ನಟ ದರ್ಶನ್‌ ಜೈಲಿನಲ್ಲಿ ಪಾರ್ಟಿ ಮಾಡುತ್ತಿರುವ ಫೋಟೋ
ನಟ ದರ್ಶನ್‌ ಜೈಲಿನಲ್ಲಿ ಪಾರ್ಟಿ ಮಾಡುತ್ತಿರುವ ಫೋಟೋ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಕೊಲೆ ಆರೋಪಿ ದರ್ಶನ್‌ಗೆ ರಾಜಾಥಿತ್ಯ ಒದಗಿಸಿರುವ ಪ್ರಕರಣ ಇದೀಗ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ. ಬಿಜೆಪಿ ಕೇಂದ್ರ ಘಟಕದ ಮಾಧ್ಯಮ ಸಂಯೋಜಕ ಶೆಹ್‌ನಾಜ್ ಪೂನವಾಲಾ ಕರ್ನಾಟಕ ಸರ್ಕಾರವು ಕೊಲೆ ಆರೋಪಿಗೆ ರಾಜಾಥಿತ್ಯ ನೀಡಿದೆ. ಇದು ಸರ್ಕಾರ ಎಷ್ಟರಮಟ್ಟಿಗೆ ನ್ಯಾಯಪರವಾಗಿ ಎನ್ನುವುದನ್ನು ಸೂಚಿಸುತ್ತಿದೆ ಎಂದು ಟೀಕಿಸಿದ್ದಾರೆ.

ಮತ್ತೊಂದೆಡೆ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್, 'ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. 7 ಮಂದಿ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಿದ್ದೇನೆ. ಹಿರಿಯ ಅಧಿಕಾರಿಗಳಿಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸಲು ಸೂಚಿಸಿದ್ದೇನೆ. ನಿರ್ದಾಕ್ಷಿಣ್ಯವಾಗಿ ಅಗತ್ಯ ಶಿಸ್ತು ಕ್ರಮ ಜರುಗಿಸಲಾಗುವುದು' ಎಂದು ಹೇಳಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ದರ್ಶನ್‌ರಿಂದ ಕೊಲೆಯಾದವರು ಎನ್ನಲಾದ ರೇಣುಕಸ್ವಾಮಿ ಅವರ ತಂದೆ ಶಿವ ಗೌಡ, 'ಈ ಘಟನೆಯಿಂದ ಪೊಲೀಸರ ಬಗ್ಗೆ ನಂಬಿಕೆಯೇ ಹೋಗುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್‌ ಮತ್ತು ಇತರರಿಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ದೊರಕುತ್ತಿರುವ ಕುರಿತು ತನಿಖೆಗೆ ಗೃಹಸಚಿವ ಡಾ ಜಿ ಪರಮೇಶ್ವರ್ ಆದೇಶಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ ಖಡಕ್ ಎಚ್ಚರಿಕೆ

ಕೊಲೆ ಆರೋಪಿ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ ತಪ್ಪು ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡಿರುವ ನಿರ್ಧಾರ ಪ್ರಕಟಿಸಿದರು. 'ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಕಾಫಿ-ಟೀ ಕುಡಿಯುತ್ತಿರುವ ಫೋಟೊ ಬಗ್ಗೆ ನಿನ್ನೆಯೇ ನನಗೆ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಅಗತ್ಯ ಪರಿಶೀಲನೆ ನಡೆಸಿ, 7 ಮಂದಿಯನ್ನು ಅಮಾನತು ಮಾಡಿದ್ದೇನೆ' ಎಂದು ತಿಳಿಸಿದರು.

ಜೈಲರ್‌ಗಳಾದ ಶರವಣ, ಶರಣ ಬಸವ ಅಮೀನಗಡ, ಪ್ರಭು ಎಸ್‌ ಖಂಡೇಲ್‌ವಾಲ್, ಅಸಿಸ್ಟೆಂಟ್ ಜೈಲರ್‌ಗಳಾದ ಎಲ್.ಎಸ್.ತಿಪ್ಪೇಸ್ವಾಮಿ, ಶ್ರೀಕಾಂತ್ ತಲವಾರ್, ಹೆಡ್ ವಾರ್ಡರ್‌ಗಳಾದ ವೆಂಕಪ್ಪ ಪೊರ್ಕಿ, ಸಂಪತ್‌ಕುಮಾರ್ ಕಡಪಟ್ಟಿ, ವಾರ್ಡರ್ ಬಸಪ್ಪ ಕೇರಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಪರಮೇಶ್ವರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದರು. ಪೊಲೀಸ್ ಮಹಾನಿರ್ದೇಶಕರು (ಡಿಜಿ, ಪ್ರಿಸನ್ಸ್‌) ಈಗ ಪರಪ್ಪನ ಅಗ್ರಹಾರದ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ ಹೋಗಿದ್ದಾರೆ ಎಂದು ಅವರು ಹೇಳಿದರು.

ಏನಿದು ವಿವಾದ?

ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರು ಕೈಲಿ ದೊಡ್ಡ ಕಾಫಿ ಮಗ್, ಸಿಗರೇಟ್ ಹಿಡಿದು ನಗುತ್ತಾ ಮಾತನಾಡುತ್ತಿರುವ ಫೋಟೊಗಳು ಇತ್ತೀಚೆಗೆ ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ದರ್ಶನ್ ಜೊತೆಗೆ ಇದ್ದವನು ರೌಡಿ ಶೀಟರ್ ಎಂದು ದೃಢಪಟ್ಟಿತ್ತು. ದರ್ಶನ್ ಮತ್ತೊಬ್ಬ ರೌಡಿಯೊಂದಿಗೆ ವಿಡಿಯೊ ಕಾಲ್ ಮಾಡಿ ಮಾತನಾಡಿರುವ ದೃಶ್ಯಗಳಿರುವ ವಿಡಿಯೊ ಕೂಡ ವೈರಲ್ ಆಗಿತ್ತು. ಜೈಲಿನಲ್ಲಿಯೇ ಕೊಲೆ ಆರೋಪಿಗೆ ರಾಜಾಥಿತ್ಯ ಸಿಗುತ್ತಿರುವುದು ಜನರಲ್ಲಿ ಆಕ್ರೋಶ ಮೂಡಿಸಿದೆ.

'ಹಣವಂತರು, ಪ್ರಭಾವಿಗಳು ಏನು ಮಾಡಿದರೂ ಸರಿ. ಬಡವರಿಗೆ ಮಾತ್ರ ಕಾನೂನು ಅನ್ವಯವಾಗಲಿದೆ ಅಲ್ಲವೇ? ಸಾಮಾನ್ಯ ಜನರು ತಮ್ಮ ತಂದೆ ಜೈಲಿನಲ್ಲಿದ್ದರೂ ನೋಡಲು ಪರದಾಡಬೇಕು. ಆದರೆ ಶ್ರೀಮಂತರಿಗೆ ಯಾವ ನಿಯಮಗಳೂ ಅನ್ವಯಿಸುವುದಿಲ್ಲ' ಎಂದು ಜನರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೇಣುಕಸ್ವಾಮಿ ತಂದೆಯ ಬೇಸರ

ನನಗೆ ನ್ಯಾಯಾಂಗದ ಮೇಲೆ, ಪೊಲೀಸರ ಮೇಲೆ ನಂಬಿಕೆಯಿದೆ. ಆದರೆ ಈ ಘಟನೆ ಹೇಗೆ ನಡೆಯಿತು ಅಂತ ಆಶ್ಚರ್ಯವಾಗುತ್ತೆ. ಸರ್ಕಾರ ತನಿಖೆ ಮಾಡಿ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು. ದರ್ಶನ್ ಅವರಿಗೆ ತಪ್ಪು ಮಾಡಿದ್ದೇನೆ ಅಂತ ಅನ್ನಿಸಿದಂತೆಯೇ ಇಲ್ಲ. ಈ ದೃಶ್ಯಗಳನ್ನು ನೋಡಿದರೆ ಹಾಗನ್ನಿಸುತ್ತೆ ಎಂದು ಮೃತ ರೇಣುಕಸ್ವಾಮಿ ಅವರ ತಂದೆ ಶಿವಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.