ಕನ್ನಡದಲ್ಲಿ ಬರಲಿದೆ ಅಯೋಧ್ಯೆ ರಾಮ ಮಂದಿರ ಕುರಿತ ಬಯೋಪಿಕ್! ಯಾರ ಜೀವನ ಕಥೆ ಹೇಳ ಹೊರಟಿದ್ದಾರೆ ‘ದಂಡುಪಾಳ್ಯ’ ನಿರ್ದೇಶಕ?
ಅಯೋಧ್ಯೆಯ ಶ್ರೀರಾಮನ ಮಂದಿರದ ಬಯೋಪಿಕ್ಅನ್ನು ಸಿನಿಮಾ ರೂಪದಲ್ಲಿ ತರಲು ನಿರ್ದೇಶಕ ಶ್ರೀನಿವಾಸರಾಜು ಮುಂದಾಗಿದ್ದಾರೆ. ಈ ಚಿತ್ರದ ಶೀರ್ಷಿಕೆ ಇನ್ನು ನಿಗದಿಯಾಗಿಲ್ಲ. ಆದರೆ ಸತ್ಯಂ ಶಿವಂ ಸುಂದರಂ ಎಂಬ ಟ್ಯಾಗ್ ಲೈನ್ ಇಡಲಾಗಿದೆ.
Ayodhya Ram Mandir biopic: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾದ ಮಹಾಪರ್ವ ಕಾಲವಿದು. ಇದೇ ಶ್ರೀರಾಮ ತನ್ನದೇ ಆದ ಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಳ್ಳಲು ಸುದೀರ್ಘ 500 ವರ್ಷಗಳೇ ಬೇಕಾದವು. ಅದಕ್ಕಾಗಿ ಇಡೀ ದೇಶ ಕಾದಿತ್ತು. 1528 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣವಾಯಿತು. ಆನಂತರ ಆ ಜಾಗದಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಬೇಕೆಂದು ಸಾಕಷ್ಟು ಹೋರಾಟಗಳು ನಡೆದವು.
ಇದೇ ವಿವಾದ ಕೋರ್ಟ್ ಮೆಟ್ಟಿಲು ಏರಿತ್ತು. ನೂರಕ್ಕೂ ಹೆಚ್ಚು ವರ್ಷಗಳ ಕಾಲ ಯಾವುದಾದರೂ ಒಂದು ಕೇಸ್ ಕೋರ್ಟ್‌ನಲ್ಲಿ ನಡೆದಿದ್ದರೆ ಅದು ಶ್ರೀರಾಮ ಜನ್ಮಭೂಮಿಯದೆ ಇರಬಹುದು. ಕೊನೆಗೂ 2019ರಲ್ಲಿ ನ್ಯಾಯಾಲಯ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಅದರಂತೆ ಇದೇ ವರ್ಷದ ಜನವರಿಯಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಾಯಿತು. ಕೋಟ್ಯಾಂತರ ಭಾರತೀಯರ ಕನಸೂ ನನಸಾಯ್ತು. ಈಗ ಅಚ್ಚರಿಯ ವಿಚಾರ ಏನೆಂದರೆ, ಇದೇ ರಾಮಮಂದಿರ ಕುರಿತು ಕನ್ನಡಲ್ಲಿ ಬಯೋಪಿಕ್ ನಿರ್ಮಾಣವಾಗುತ್ತಿದೆ.
ದಂಡುಪಾಳ್ಯ ನಿರ್ದೇಶಕರ ಹೊಸ ಪ್ರಯತ್ನ
ಈ ಅಯೋಧ್ಯೆಯ ಶ್ರೀರಾಮನ ಮಂದಿರದ ಬಯೋಪಿಕ್ ಅನ್ನು ಸಿನಿಮಾ ರೂಪದಲ್ಲಿ ತರಲು ದಂಡುಪಾಳ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀನಿವಾಸರಾಜು ಮುಂದಾಗಿದ್ದಾರೆ. ಈ ಚಿತ್ರದ ಶೀರ್ಷಿಕೆ ಇನ್ನು ನಿಗದಿಯಾಗಿಲ್ಲ. ಆದರೆ "ಸತ್ಯಂ ಶಿವಂ ಸುಂದರಂ" ಎಂಬ ಟ್ಯಾಗ್ ಲೈನ್ ಅಂತಿಮವಾಗಿದೆ. ಗಣೇಶ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ನಿರ್ಮಾಣ ಮಾಡಿರುವ ಪ್ರಶಾಂತ್ ರುದ್ರಪ್ಪ, ತಮ್ಮದೇ ಆದ ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
ಇದು ವ್ಯಕ್ತಿಯ ಬಯೋಪಿಕ್ ಅಲ್ಲ..
ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕರು, “ಸಾಮಾನ್ಯವಾಗಿ ಮನುಷ್ಯರ ಬಯೋಪಿಕ್ ಸಿನಿಮಾರೂಪದಲ್ಲಿ ತೆರೆಕಂಡ ಉದಾಹರಣಗಳಿವೆ. ಆದರೆ, ದೇವಸ್ಥಾನವೊಂದರ ಬಯೋಪಿಕ್ ಇರುವುದು ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಮಾತ್ರ ಎನ್ನುವುದು ನನ್ನ ಅಭಿಪ್ರಾಯ. ಈ ಮೂಲಕ 500 ವರ್ಷಗಳ ಇತಿಹಾಸವನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡುವ ಕೆಲಸಕ್ಕೆ ಇಳಿದಿದ್ದೇವೆ” ಎನ್ನುತ್ತಾರೆ.
“ಕನ್ನಡದಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಬಾಬರಿ ಮಸೀದಿಗೂ ಮೊದಲು ರಾಜಾ ವಿಕ್ರಮಾದಿತ್ಯ ಪ್ರತಿಷ್ಠಾಪಿಸಿದ ಶ್ರೀರಾಮ ಮಂದಿರದಿಂದ ಈ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ರಾಮಾಯಣದ ಅಂಶವೂ ಈ ಸಿನಿಮಾದಲ್ಲಿ ಇರಲಿದೆ. ಹಾಗೆಂದ ಮಾತ್ರಕ್ಕೆ ಇದು ಪೂರ್ತಿ ರಾಮಾಯಣದ್ದೇ ಸಿನಿಮಾ ಅಲ್ಲ” ಎಂಬುದು ನಿರ್ದೇಶಕರ ಅಂಬೋಣ.
ಮೂರು ಭಾಗಗಳಲ್ಲಿ ತೆರೆಗೆ
“ದಶರಥ, ರಾಮ, ಸೀತಾ, ಹನುಮಂತ, ವಾಲಿ ಹಾಗೂ ವಾಲ್ಮೀಕಿ ಈ ಆರು ಪಾತ್ರಗಳು ಮಾತ್ರ ಇರುತ್ತದೆ. ತುಳಿಸಿದಾಸರ ಜೀವನವೂ ಈ ಸಿನಿಮಾದಲ್ಲಿರಲಿದೆ. ರಘುಪತಿ ರಾಘವನ ಆದರ್ಶಗಳನ್ನು ಈ ಚಿತ್ರದಲ್ಲಿ ಕಾಣಬಹುದು. ಸತ್ಯಂ ಶಿವಂ ಸುಂದರಂ ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದ್ದು, ಮೂರು ಭಾಗಗಳಲ್ಲಿ ಚಿತ್ರ ಬರಲಿದೆ. ಈ ಬಯೋಪಿಕ್‌ಗೆ ಇನ್ನೂ ಶೀರ್ಷಿಕೆ ನಿಗದಿಯಾಗಿಲ್ಲ” ಎನ್ನುತ್ತಾರೆ ನಿರ್ದೇಶಕರು
ಅದ್ಧೂರಿಯಾಗಿರಲಿದೆ ಬಯೋಪಿಕ್
“ಸಿನಿಮಾ ನಿರೀಕ್ಷೆಗೂ ಮೀರಿ ಅದ್ಧೂರಿಯಾಗಿರಲಿದೆ. ದೇಶದ ವಿವಿಧ ಸಿನಿಮಾರಂಗದ ಖ್ಯಾತ ನಾಮ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದ ಭಾಗವಾಗಲಿದ್ದಾರೆ. ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಶ್ರೀರಾಮನವಮಿಯ ಈ ದಿನದಂದು ಇದಿಷ್ಟು ಮಾಹಿತಿ ರಿವೀಲ್ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಚಿತ್ರದ ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿ ನೀಡಲಿದ್ದೇವೆ” ಎಂಬುದು ನಿರ್ದೇಶಕ ಶ್ರೀನಿವಾಸರಾಜು ಮಾತು.