ಕನ್ನಡ ಸುದ್ದಿ  /  ಮನರಂಜನೆ  /  ಭೂಮಿಯೊಂದು ಬೋಳು ತಲೆಯು ಟೊಪ್ಪಿ ಇಟ್ರೆ ತಪ್ಪು ಏನು? ಕರಟಕ ದಮನಕ ಸಿನಿಮಾದ ಟೈಟಲ್‌ ಸಾಂಗ್‌ ಲಿರಿಕ್ಸ್‌

ಭೂಮಿಯೊಂದು ಬೋಳು ತಲೆಯು ಟೊಪ್ಪಿ ಇಟ್ರೆ ತಪ್ಪು ಏನು? ಕರಟಕ ದಮನಕ ಸಿನಿಮಾದ ಟೈಟಲ್‌ ಸಾಂಗ್‌ ಲಿರಿಕ್ಸ್‌

Karataka Damanaka Movie Title Song Kannada Lyrics: ಯೋಗರಾಜ್‌ ಭಟ್‌ ಸಾಹಿತ್ಯ ಮತ್ತು ನಿರ್ದೇಶನದ ಕರಟಕ ದಮನಕ ಸಿನಿಮಾದ ಟೈಟಲ್‌ ಸಾಂಗ್‌ "ಕರಟಕ ದಮನಕ ಹೇ ಕರಟಕ ದಮನಕ" ಬಿಡುಗಡೆಯಾಗಿದೆ. ಶಿವರಾಜ್‌ ಕುಮಾರ್‌ ಇಲ್ಲಿ ಕರಟಕನಾಗಿ ಪ್ರಭುದೇವ್‌ ದಮನಕನಾಗಿ ಕಾಣಿಸಿಕೊಂಡಿದ್ದಾರೆ. ಮಾರ್ಚ್‌ 8ರಂದು ಕರಟಕ ದಮನಕ ಸಿನಿಮಾ ಬಿಡುಗಡೆಯಾಗಲಿದೆ.

ಕರಟಕ ದಮನಕ ಸಿನಿಮಾದ ಟೈಟಲ್‌ ಸಾಂಗ್‌ ಲಿರಿಕ್ಸ್‌
ಕರಟಕ ದಮನಕ ಸಿನಿಮಾದ ಟೈಟಲ್‌ ಸಾಂಗ್‌ ಲಿರಿಕ್ಸ್‌

Karataka Damanaka Song Kannada Lyrics: ಯೋಗರಾಜ್‌ ಭಟ್‌ ಸಾಹಿತ್ಯ ಮತ್ತು ನಿರ್ದೇಶನದ ಕರಟಕ ದಮನಕ ಸಿನಿಮಾದ ಟೈಟಲ್‌ ಸಾಂಗ್‌ "ಕರಟಕ ದಮನಕ ಹೇ ಕರಟಕ ದಮನಕ" ಬಿಡುಗಡೆಯಾಗಿದೆ. ಇಬ್ಬರು ನರಿಗಳ ಪಂಚತಂತ್ರದ ಕಥೆಯ ಝಲಕ್‌ ಈ ಹಾಡಿನಲ್ಲಿ ವ್ಯಕ್ತವಾಗಿದೆ. ಶಿವರಾಜ್‌ ಕುಮಾರ್‌ ಇಲ್ಲಿ ಕರಟಕನಾಗಿ ಪ್ರಭುದೇವ್‌ ದಮನಕನಾಗಿ ಕಾಣಿಸಿಕೊಂಡಿದ್ದಾರೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ಅಂದರೆ ಮಾರ್ಚ್‌ 8ರಂದು ಕರಟಕ ದಮನಕ ಸಿನಿಮಾ ಬಿಡುಗಡೆಯಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಕರಟಕ ದಮನಕ ಸಿನಿಮಾದ ಹಾಡುಗಳು

ಯೋಗರಾಜ್‌ ಭಟ್ರ ಸಾಹಿತ್ಯದ ರಸದೌತಣವಿರುವ ಕರಟಕ ದಮನಕ ಸಿನಿಮಾದ ಮೊದಲ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದೆ. ಈ ಸಿನಿಮಾದ ಟೈಟಲ್‌ ಟ್ರ್ಯಾಕ್‌ನಲ್ಲಿ ಇವರಿಬ್ಬರನ್ನು "ಹತ್ತೂರಲ್ಲಿ ಕಷ್ಟಪಟ್ರು ಸಾರಿ ಹತ್ತೂರನ್ನೇ ಒತ್ತೆ ಇಟ್ರು" ಎಂದು ಗುಣಗಾನ ಮಾಡಲಾಗಿದೆ. ಜತೆಗೆ, "ಭೂಮಿಯೊಂದು ಬೋಳು ತಲೆಯು ಟೊಪ್ಪಿ ಇಟ್ರೆ ತಪ್ಪು ಏನು? ಬಾಳು ಒಂದು ನಂದಾದೀಪ ಬತ್ತಿ ಇಟ್ರೆ ತಪ್ಪು ಏನು?" ಎಂದು ಗುಳ್ಳೆನರಿಗಳ ಪರವಹಿಸಿ ಹಾಡು ಹೊಸೆಯಲಾಗಿದೆ. ಕರಟಕ ದಮನಕ ಎಂಬುಂದು ಪಂಚತಂತ್ರ ಕಥೆಯಲ್ಲಿ ಬರುವ ಗುಳ್ಳೆನರಿಗಳ ಹೆಸರು ಎಂದು ಈ ಹಿಂದೆಯೇ ಯೋಗರಾಜ್‌ ಭಟ್‌ ಹೇಳಿದ್ದರು.

ಎಲ್ಲರೂ ಉತ್ತಮರಾದರೆ ಅಧಮರು ಯಾರು?

" ನರಮಾನವ ನರಿಮಾನವ ನರಮಾನವ ನರಿಮಾನವ" ಎಂದು ಈ ಟೈಟಲ್‌ ಟ್ರ್ಯಾಕ್‌ನಲ್ಲಿ ಮನುಷ್ಯರೊಳಗಿನ ಕುತಂತ್ರ ಸ್ವಭಾವವನ್ನು ಅಣಕಿಸಲಾಗಿದೆ. "ಇಲ್ಲಿ ಎಲ್ಲರೂ ಉತ್ತಮರಾದರೆ ಅಧಮರು ಯಾರಾಗುವುದು?" "ಇಲ್ಲಿ ಎಲ್ಲರೂ ಹುಲಿಗಳೆ ಆದರೆ ಇಲಿಗಳು ಯಾರಾಗುವುದು?" ಎಂಬ ಸಾಲುಗಳೂ ಇದೇ ಅರ್ಥವನ್ನು ಧ್ವನಿಸುತ್ತವೆ. "ನಮ್‌ ಸಮಾಜ ಜೇನುಗೂಡು ಕಡ್ಡಿ ಇಟ್ರೆ ತಪ್ಪು ಏನು? ಹೊಟ್ಟೆ ಹಸಿವು ಸೃಷ್ಟಿಲೀಲೆ ಲಡ್ಡು ಕದ್ರೆ ತಪ್ಪು ಏನು?" ಎಂಬ ಸಾಲುಗಳ ಮೂಲಕ ಕರಟಕ ದಮನಕ ಸಿನಿಮಾದಲ್ಲಿ ಹೊಟ್ಟೆಪಾಡಿಗಾಗಿ ಗುಳ್ಳೆನರಿಗಳಾಗಿ ಕರಟಕ ಮತ್ತು ದಮನಕ ಇರಲಿದ್ದಾರೆ ಎಂಬ ಸೂಚನೆಯನ್ನು ಯೋಗರಾಜ್‌ ಭಟ್‌ ನೀಡಿದ್ದಾರೆ.

ಕರಟಕ ದಮನಕ ಸಿನಿಮಾದ ಟೈಟಲ್‌ ಟ್ರ್ಯಾಕ್‌ನ ಕನ್ನಡ ಲಿರಿಕ್ಸ್‌

ಕರಟಕ ದಮನಕ ಕರಟಕ ದಮನಕ

ಕರಟಕ ದಮನಕ ಕರಟಕ ದಮನಕ

ಕರಟಕ ದಮನಕ ಹೇ ಕರಟಕ ದಮನಕ

ಒಂದೂರಲ್ಲಿ ಒಬ್ಬ ಇದ್ದ ಸಾರಿ

ಒಂದೂರಲ್ಲಿ ಇಬ್ರು ಇದ್ರು

ಕರಟಕ ದಮನಕ

ಹತ್ತೂರಲ್ಲಿ ಕಷ್ಟಪಟ್ರು

ಸಾರಿ

ಹತ್ತೂರನ್ನೇ ಒತ್ತೆ ಇಟ್ರು

ಕರಟಕ ದಮನಕ

ಭೂಮಿಯೊಂದು ಬೋಳು ತಲೆಯು

ಟೊಪ್ಪಿ ಇಟ್ರೆ ತಪ್ಪು ಏನು?

ಬಾಳು ಒಂದು ನಂದಾದೀಪ

ಬತ್ತಿ ಇಟ್ರೆ ತಪ್ಪು ಏನು?

ನರಮಾನವ ನರಿಮಾನವ

ನರಮಾನವ ನರಿಮಾನವ

ಇಲ್ಲಿ ಎಲ್ಲರೂ ಉತ್ತಮರಾದರೆ

ಅಧಮರು ಯಾರಾಗುವುದು

ಹೇ ಕರಟಕ ದಮನಕ

ಕರಟಕ ದಮನಕ

ಸತ್ಯ ಸುತ್ಕೊಳ್ಳಲ್ಲ ಲುಂಗಿ

ಸುಳ್ಳು ಹಾಕ್ಕೊಂಡೈತೆ ಅಂಗಿ

ಕರಟಕ ದಮನಕ

ಒಬ್ಬೊಬ್ರದು ಒಂದೊಂದು ಪುಂಗಿ

ಒಬ್ರಿಗಿಂತ ಒಬ್ರು ಢೋಂಗಿ

ದಮನಕ ಕೇಳ್‌ ದಮನಕ

ಫರ್ಫೆಕ್ಟಾಗಿ ಇಲ್‌ ಯಾರಾವ್ನೆ

ಪ್ರತಿಯೊಬ್ಬರೂ ತುಸು ಕೆಟ್ಟವ್ನೆ

ಇಲ್ಲಿ ನಾವೇ ಬೆಸ್ಟು, ಎಲ್ರೂ ವೇಸ್ಟು

ನಾನು ಗ್ರೇಟು ನೀನು ಗ್ರೇಟು ಎತ್ತು ಬೆಟ್ಟು

ನಮ್‌ ಸಮಾಜ ಜೇನುಗೂಡು

ಕಡ್ಡಿ ಇಟ್ರೆ ತಪ್ಪು ಏನು

ಹೊಟ್ಟೆ ಹಸಿವು ಸೃಷ್ಟಿಲೀಲೆ

ಲಡ್ಡು ಕದ್ರೆ ತಪ್ಪು ಏನು

ಹುಲುಮಾನವ ಹುಲಿಮಾನವ

ಹುಲುಮಾನವ ಹುಲಿಮಾನವ

ಇಲ್ಲಿ ಎಲ್ಲರೂ ಹುಲಿಗಳೆ ಆದರೆ

ಇಲಿಗಳು ಯಾರಾಗುವುದು

ಕರಟಕ ದಮನಕ ಕರಟಕ ದಮನಕ

ಕರಟಕ ದಮನಕ ಕರಟಕ ದಮನಕ

ಕರಟಕ ಹೇ ದಮನಕ

ಕರಟಕ ದಮನಕ ಸಿನಿಮಾದ ಟೈಟಲ್‌ ಟ್ರ್ಯಾಕ್‌ನ ಕನ್ನಡ ಲಿರಿಕ್ಸ್‌ ವಿಡಿಯೋ

ಕರಟಕ ದಮನಕ ಟೈಟಲ್‌ ಸಾಂಗ್‌ ಅನ್ನು ಯೋಗರಾಜ್‌ ಭಟ್‌ ರಚಿಸಿದ್ದಾರೆ. ಇದು ಶಂಕರ್‌ ಮಹಾದೇವನ್‌ ಮಧುರಕಂಠದಲ್ಲಿ ಮೂಡಿ ಬಂದಿದೆ. ಇದಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಡಾ. ಶಿವರಾಜ್‌ ಕುಮಾರ್‌, ಪ್ರಭುದೇವ, ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕರಟಕ ದಮನಕ ಸಿನಿಮಾವು ಯೋಗರಾಜ್‌ ಭಟ್‌ ನಿರ್ದೇಶನ ಮತ್ತು ರಾಕ್‌ಲೈನ್‌ ಎಂಟರ್‌ಟೇನ್ಮೆಂಟ್‌ ಬ್ಯಾನರ್‌ನಡಿ ಬಿಡುಗಡೆಯಾಗಲಿದೆ.

ಕರಟಕ ದಮನಕ ಹಾಡಿಗೆ ಫ್ಯಾನ್ಸ್‌ ಪ್ರತಿಕ್ರಿಯೆ

ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಕರಟಕ ದಮನಕ ಹಾಡಿನ ಮೋಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅತ್ಯುತ್ತಮ ಸಾಹಿತ್ಯ, ಭಟ್ರ ಸಾಹಿತ್ಯಕ್ಕೆ ಸಾಟಿಯಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ. ಇದೇ ಸಮಯದಲ್ಲಿ ಇಬ್ಬರು ಡ್ಯಾನ್ಸರ್‌ಗಳು ಒಂದು ಸಿನಿಮಾದಲ್ಲಿ ಒಂದಾಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ. "ನನ್ನ ಪ್ರಕಾರ ಇವತ್ತಿನ ದಿವಸ ಪುನೀತ್ ಸರ್ ಇದ್ರೆ ಈ ಹಾಡನ್ನ ಅವರಿಂದ್ಲೇ ಹಾಡುಸ್ತ ಇದ್ರು ಅನ್ಸುತ್ತೆ ಈ ಹಾಡು ಅಪ್ಪು ಸರ್ ದ್ವನಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಿತ್ತು" ಎಂದು ಅಭಿಮಾನಿಯೊಬ್ಬರು ಪುನೀತ್‌ ರಾಜ್‌ಕುಮಾರ್‌ರನ್ನು ನೆನಪಿಸಿಕೊಂಡಿದ್ದಾರೆ. ಒಟ್ಟಾರೆ ಕರಟಕ ದಮನಕ ಟೈಟಲ್‌ ಟ್ರ್ಯಾಕ್‌ಗೆ ಒಂದು ಸಾವಿರಕ್ಕಿಂತ ಹೆಚ್ಚು ಕಾಮೆಂಟ್‌ಗಳು, ಲಕ್ಷಾಂತರ ವೀಕ್ಷಣೆಗಳು ಬಂದಿವೆ.

IPL_Entry_Point