ಬಂಡೆ ಮಹಾಕಾಳಿ ದೇಗುಲದಲ್ಲಿ ಕುಟೀರ ಚಿತ್ರಕ್ಕೆ ಮುಹೂರ್ತ; ಇದು ಕೋಮಲ್ ನಾಯಕನಾಗಿ ನಟಿಸುತ್ತಿರುವ 25ನೇ ಸಿನಿಮಾ
ಹಾಸ್ಯನಟನಿಂದ ನಾಯಕ ನಟನಾಗಿ ಬಡ್ತಿ ಪಡೆದಿರುವ ನಟ ಕೋಮಲ್, ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ಪೈಕಿ ನಾಯಕನಾಗಿ ನಟಿಸಲಿರುವ 25ನೇ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನೆರವೇರಿದೆ. ಚಿತ್ರಕ್ಕೆ ಕುಟೀರ ಎಂಬ ಶೀರ್ಷಿಕೆ ಇಡಲಾಗಿದೆ.
Kuteera Movie Launched: ಸ್ಯಾಂಡಲ್‌ವುಡ್‌ನಲ್ಲಿ ಹಾಸ್ಯನಟನಾಗಿ ಮಿಂಚಿದ ನಟ ಕೋಮಲ್ ಕುಮಾರ್, ಸದ್ಯ ಪೂರ್ಣಪ್ರಮಾಣದ ನಾಯಕನಾಗಿ ಚಂದನವನದಲ್ಲಿ ಬಿಜಿಯಾಗಿದ್ದಾರೆ. ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿದ್ದ ಇದೇ ಕೋಮಲ್ ನಾಯಕನಾಗಿ ಸದ್ಯ 24 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ 25ನೇ ಸಿನಿಮಾ ಸೆಟ್ಟೇರಿದೆ. ಚಿತ್ರಕ್ಕೆ ಕುಟೀರ ಎಂಬ ಶೀರ್ಷಿಕೆ ಇಡಲಾಗಿದೆ. ಹಾರರ್ ಕಾಮಿಡಿ ಶೈಲಿಯ ಈ ಸಿನಿಮಾದ ಮುಹೂರ್ತವೂ ಇತ್ತೀಚೆಗೆ ನೆರವೇರಿದೆ.
ಕಂಸಾಳೆ ಫಿಲಂಸ್ ಬ್ಯಾನರ್‌ನಲ್ಲಿ ಮಧು ಮರಿಸ್ವಾಮಿ ಕುಟೀರ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಅಂಟೋನಿ ನಿರ್ದೇಶನದ ಈ ಚಿತ್ರದಲ್ಲಿ ಕೋಮಲ್ ಕುಮಾರ್ ನಾಯಕರಾಗಿ ನಟಿಸಲಿದ್ದು, ಅವರಿಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಲಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಭ ಹಾಗೂ ಶೀರ್ಷಿಕೆ ಅನಾವರಣ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರರಂಗದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಕುಟೀರದ ಬಗ್ಗೆ ಕೋಮಲ್ ಹೇಳುವುದೇನು?
"ನಾನು ಈವರೆಗೂ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ನಾಯಕನಾಗಿ ನಟಿಸುತ್ತಿರುವ 25 ನೇ ಚಿತ್ರವಿದು. ಇದು ನಾನು ಬಹಳ ಇಷ್ಟಪಡುವ ಹಾರರ್ ಕಾಮಿಡಿ ಫ್ಯಾಂಟಸಿ ಚಿತ್ರ. ಈ ಹಿಂದೆ ನಾನು ಕೆಲವು ಹಾರರ್ ಕಾಮಿಡಿ ಚಿತ್ರಗಳಲ್ಲಿ ನಟಿಸಿದ್ದೇನೆ. ಆದರೆ ಈ ಚಿತ್ರದ ಕಥೆ ಸ್ವಲ್ಪ ವಿಭಿನ್ನ. ಚಿತ್ರದ ಹೆಸರೇ ಹೇಳುವಂತೆ ಕುಟೀರ ಎಂದರೆ ಮನೆ. ಈ ಚಿತ್ರದಲ್ಲೂ ಒಂದು ದೊಡ್ಡ ಮನೆ ಇರುತ್ತದೆ. ಅಲ್ಲಿಗೆ ಬಂದು ಸಿಕ್ಕಿ ಹಾಕಿಕೊಳ್ಳುವ ನನಗೆ ದೆವ್ವಗಳು ಏನು ಮಾಡುತ್ತವೆ? ಎಂಬುದನ್ನು ನಿರ್ದೇಶಕರು ಕಾಮಿಡಿ ಮೂಲಕ ತೋರಿಸಲಿದ್ದಾರೆ. ನನ್ನ ಮೂವತ್ತು ವರ್ಷಗಳ ಸಿನಿಜರ್ನಿಯಲ್ಲಿ ನೀವು ನೀಡುತ್ತಾ ಬಂದಿರುವ ಪ್ರೋತ್ಸಾಹ ಹಾಗೆ ಮುಂದುವರೆಯಲಿ ಎಂದರು ಕೋಮಲ್.
ನಿರ್ದೇಶಕರ ಮಾತು..
"ಈ ಕಥೆ ಬರೆದಾಗಲೇ ಕೋಮಲ್ ನಾಯಕ ಅಂದುಕೊಂಡಿದ್ದೆ. ನಿರ್ಮಾಪಕರ ಬಳಿಯೂ ಹೇಳಿದ್ದೆ. ಕೋಮಲ್ ಅವರು ಕಥೆ ಕೇಳಿ ಇಷ್ಟಪಟ್ಟರು. ಮಾರ್ಚ್ ಎರಡನೇ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹೆಚ್ಚಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ. ಯಶ್ ಶೆಟ್ಟಿ, ಕಾಕ್ರೋಚ್ ಸುಧೀ ತಾರಾಬಳಗದಲ್ಲಿದ್ದಾರೆ. ಬಿ.ಜಿ. ಭರತ್ ಸಂಗೀತ ನಿರ್ದೇಶನ, ಅರುಣ್ ಸುರೇಶ್ ಛಾಯಾಗ್ರಹಣ ಹಾಗೂ ಎನ್ ಎಂ ವಿಶ್ವ ಅವರ ಸಂಕಲನವಿರುವ ಈ ಚಿತ್ರಕ್ಕೆ ಶಂಕರ್ ರಾಮನ್ ಸಂಭಾಷಣೆ ಬರೆಯುತ್ತಿದ್ದಾರೆ ಎಂದರು ನಿರ್ದೇಶಕ ಅನೂಪ್ ಆಂಟೋನಿ.
ನನ್ನದು ಈ ಚಿತ್ರದಲ್ಲಿ ಆಂಗ್ಲೋ ಇಂಡಿಯನ್ ಪಾತ್ರ ಎಂದು ನಾಯಕಿ ಪ್ರಿಯಾಂಕ ತಿಮ್ಮೇಶ್ ತಿಳಿಸಿದರು. ಈ ಚಿತ್ರದಲ್ಲಿ ಸಿಜಿ ವರ್ಕ್‌ಗೆ ಹೆಚ್ಚು ಕಾಣಿಸಲಿದೆ. ಮಧು ಮರಿಸ್ವಾಮಿ ಮೊದಲ ಬಾರಿಗೆ ನಿರ್ಮಾಣ ಮಾಡುತ್ತಿದ್ದಾರೆ. ನುರಿತ ತಂತ್ರಜ್ಞರು ಹಾಗೂ ಅನುಭವಿ ಕಲಾವಿದರ ತಾರಾಬಳಗ ಕುಟೀರ ಚಿತ್ರದಲ್ಲಿದೆ. ಯೋಗೇಶ್, ಸಂಗೀತ ನಿರ್ದೇಶಕ ಭರತ್ ಬಿ.ಜೆ, ಛಾಯಾಗ್ರಾಹಕ ಅರುಣ್ ಸುರೇಶ್, ಸಂಭಾಷಣೆಕಾರ ಶಂಕರ್ ರಾಮನ್ ಹಾಗೂ ಕಲಾವಿದರಾದ ಯಶ್ ಶೆಟ್ಟಿ, ಕಾಕ್ರೋಜ್ ಸುಧೀ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.