ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ 14ನೇ ಪುಣ್ಯಸ್ಮರಣೆ; ಸಾಹಸಸಿಂಹನ ನೆನಪಿನಲ್ಲಿ ವಿಷ್ಣು ಪುಣ್ಯಭೂಮಿಯಲ್ಲಿ ಅನ್ನದಾನ, ರಕ್ತದಾನ, ದೀಪೋತ್ಸವ
Dr Vishnuvardhan Punyasmarane: ಕನ್ನಡ ಸಿನಿಮಾ ನಟ, ಅಭಿನಯ ಭಾರ್ಗವ, ಸಾಹಸಸಿಂಹ ದಿ. ಡಾ. ವಿಷ್ಣುವರ್ಧನ್ ಅವರ 14ನೇ ಪುಣ್ಯಸ್ಮರಣೆ ಇಂದು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಮತ್ತು ಮೈಸೂರಿನಲ್ಲಿ ನಡೆಯುತ್ತಿದೆ. ನಿನ್ನೆ ರಾತ್ರಿಯೇ ಸಮಾದಿ ಬಳಿ ದೀಪೋತ್ಸವ ಬೆಳಗಿಸಿ ವಿಷ್ಣುವನ್ನು ಸ್ಮರಿಸಲಾಗಿದೆ.
ಕನ್ನಡ ಚಿತ್ರರಂಗ ಕಂಡ ಮೇರುನಟ ಡಾ. ವಿಷ್ಣುವರ್ಧನ್ ಪುಣ್ಯಸ್ಮರಣೆ ಬೆಂಗಳೂರು, ಮೈಸೂರಿನಲ್ಲಿ ನಡೆಯುತ್ತಿದೆ. ಕರ್ನಾಟಕದ ವಿವಿಧ ಭಾಗದಲ್ಲಿರುವ ವಿಷ್ಣು ಅಭಿಮಾನಿಗಳು ವಿಷ್ಣು ದಾದಾನ ನೆನಪಿನಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಬೆಂಗಳೂರು, ಮೈಸೂರಿನಲ್ಲಿ ಅನ್ನದಾನ, ರಕ್ತದಾನ ಶಿಬಿರಗಳು ನಡೆಯುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿ ವಿಷ್ಣುವಿಗೆ ಪುಣ್ಯಭೂಮಿ ದೊರಕದ ನೋವಿನ ನಡುವೆಯೂ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸಮಾದಿ ಬಳಿ ಅನ್ನದಾನ, ರಕ್ತದಾನ ನಡೆಯುತ್ತಿದೆ.
ಸಾಹಸಸಿಂಹ ವಿಷ್ಣು ವರ್ಧನ್ ಅವರು ಸುಮಾರು 220ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಇವರು 2009ರ ಡಿಸೆಂಬರ್ 30ರಂದು ನಮ್ಮನ್ನಗಲಿದರು. ಸಾಹಸ ಸಿಂಹ ಮಾತ್ರವಲ್ಲದೆ ಅಭಿನಯ ಭಾರ್ಗವ, ಮೈಸೂರು ರತ್ನ ಇತ್ಯಾದಿ ಹಲವು ಬಿರುದುಗಳನ್ನು ಇವರು ಹೊಂದಿದ್ದರು.
ಪುಣ್ಯಭೂಮಿಯಲ್ಲಿ ದೀಪೋತ್ಸವ
ಪುಣ್ಯಭೂಮಿಯಲ್ಲಿ ಇಂದು ದೀಪೋತ್ಸವ ನಡೆದಿದೆ. ಮಹಿಳಾ ಘಟಕ ಉತ್ತರ ವಲಯದ ವಿಜಯಲಕ್ಷ್ಮಿ ಮತ್ತು ಅವರ ತಂಡದ ನೇತೃತ್ವದಲ್ಲಿ ಇದೊಂದು ಅದ್ಭುತ ಕೆಲಸ ಆಗಿದೆ. ವಾಸ್ತವದಲ್ಲಿ ಇದು ಮೈಸೂರಿನ ಸ್ಮಾರಕ ಲೋಕಾರ್ಪಣೆ ಸಂದರ್ಭದಲ್ಲಿ ಆಗಬೇಕಿತ್ತು ಆದರೆ ಭದ್ರತಾ ವಿಷಯವನ್ನು ಮುಂದಿಟ್ಟು ನಮಗೆ ಅಂದು ಅನುಮತಿಯನ್ನು ನಿರಾಕರಿಸಲಾಗಿತ್ತು. ಬಯಕೆಗಳು ಬಲವಾಗಿದ್ದಾಗ ಭಗವಂತ ಬಲಗಡೆಯಿಂದ ಹೂ ಕೊಡುತ್ತಾನೆ ಎಂಬ ಮಾತು ಮತ್ತೊಮ್ಮೆ ಖಾತ್ರಿಯಾಯಿತು. ಬರೋಬ್ಬರಿ ಒಂದು ವರ್ಷಗಳ ನಂತರ ನಮ್ಮ ಮಹಿಳಾ ಅಭಿಮಾನಿಗಳ ಆ ಕನಸು ಇಂದು ಈಡೇರಿದೆ ಇದಕ್ಕೆ ಕಾರಣೀಕರ್ತರಾದಂತಹ ಎಲ್ಲಾ ಮಹಿಳಾ ಸೇನಾನಿಗಳಿಗೆ ಮತ್ತು ದೀಪಗಳ ಕಾಣಿಕೆ ನೀಡಿದ ಪ್ರತಿಯೊಬ್ಬ ಸೇನಾನಿಗೂ ಕೂಡ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ವೀರಕಪುತ್ರ ಶ್ರೀನಿವಾಸ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
ಅಭಿಮಾನಿಗಳಿಂದ ಅನ್ನದಾನ, ರಕ್ತದಾನ ಶಿಬಿರ
ನಿನ್ನೆ ರಾತ್ರಿಯಿಂದಲೇ ಬೆಂಗಳೂರು ಮತ್ತು ಮೈಸೂರಿನ ಸಮಾದಿ ಬಳಿ ವಿಷ್ಣು ಅಭಿಮಾನಿಗಳು ನೆರೆದಿದ್ದಾರೆ. ತಮ್ಮ ಅಚ್ಚುಮೆಚ್ಚಿನ ನಟನ ಪುಣ್ಯಭೂಮಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇಲ್ಲಿಗೆ ಆಗಮಿಸುವ ಸಾವಿರಾರು ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಭಿಮಾನಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ವಿಷ್ಣು ಪುಣ್ಯಭೂಮಿ ಸ್ಮಾರಕ ವಿವಾದ
ಕನ್ನಡದ ಮೇರುನಟ ದಿವಂಗತ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರಕಾರವು ಗಮನ ನೀಡದೆ ಇರುವುದರಿಂದ ಡಿಸೆಂಬರ್ 17 ರಂದು ಡಾ.ವಿಷ್ಣುವರ್ಧನ ಅಭಿಮಾನಿ ಸಂಘಗಳ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸಿತ್ತು. ವಿಷ್ಣುವರ್ಧನ್ ಅಂತ್ಯ ಸಂಸ್ಕಾರವಾದ ಜಾಗದಲ್ಲಿ ಪುಣ್ಯಭೂಮಿ ಆಗಬೇಕು ಎಂದು ವಿಷ್ಣು ಅಭಿಮಾನಿಗಳು ಈ ಹಿಂದಿನಿಂದಲೂ ಸರ್ಕಾರಗಳಿಗೆ ಆಗ್ರಹಿಸುತ್ತಲೇ ಬಂದಿದ್ದಾರೆ. ಆದರೆ, ಅದಕ್ಕೆ ಈ ವರೆಗೂ ಉತ್ತರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಹೋರಾಟಕ್ಕೆ ಕಿಚ್ಚ ಸುದೀಪ್, ಡಾಲಿ ಧನಂಜಯ ಸೇರಿದಂತೆ ಸಾಕಷ್ಟು ಸಿನಿಮಾ ಕಲಾವಿದರು ಬೆಂಬಲ ಸೂಚಿಸಿದ್ದರು.