‘ದರ್ಶನ್- ಪವಿತ್ರಾ ತಮ್ಮ ಸಮಾಧಿಗೆ ತಾವೇ 15 ಅಡಿ ಗುಂಡಿ ತೋಡಿಕೊಂಡು ಆಗಿದೆ, ಬೇಲ್ ಸಿಗೋ ಮಾತೇ ಇಲ್ಲ, ಸಾಯೋವರ್ಗೂ ಜೈಲು!’
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಸಾಬೀತಾದರೆ ದರ್ಶನ್‌ಗೆ ಎಷ್ಟು ವರ್ಷ ಶಿಕ್ಷೆ ಆಗಲಿದೆ? ನಟ ದರ್ಶನ್‌ಗೆ ಜಾಮೀನು ಸಿಗುತ್ತಾ ಈ ಬಗ್ಗೆ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ವಿವರವಾಗಿ ಮಾತನಾಡಿದ್ದಾರೆ.
Renuka Swamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿ ಆರೋಪಿ ಸ್ಥಾನದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ತಾವು ಪ್ರಭಾವಿಗಳು, ಮಾಡಿದ್ದೇ ಆಟ ಅನ್ನೋ ಮನೋಭಾವದಿಂದ ಎಲ್ಲರೂ ಆಚೆ ಬಂದು ಇದೀಗ ಸಾಮಾನ್ಯರಂತೆ ಕೈ ಕಟ್ಟಿ ನಿಂತಿದ್ದಾರೆ. ಸದ್ಯ ಪೊಲೀಸ್ ಇಲಾಖೆಯೂ ಬಲವಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಇನ್ನೇನು ಕೋರ್ಟ್‌ಗೂ ಚಾರ್ಜ್‌ಶೀಟ್ ನೀಡಲಿದೆ. ಒಂದು ವೇಳೆ ಈ ಕೊಲೆ ಆರೋಪ ಸಾಬೀತಾದ್ರೆ ನಟ ದರ್ಶನ್ ಮತ್ತವರ ಗ್ಯಾಂಗ್‌ಗೆ ಎಷ್ಟು ವರ್ಷ ಜೈಲಾಗಬಹುದು? ಬೇಲ್ ಸಿಗುವ ಸಾಧ್ಯತೆ ಇದೆಯೇ? ಈ ಬಗ್ಗೆ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಮಾತನಾಡಿದ್ದಾರೆ.
ತಮ್ಮ ಗುಂಡಿ ತಾವೇ ತೋಡಿಕೊಂಡಿದ್ದಾರೆ..
ಈ ಪ್ರಕರಣದ ಬಗ್ಗೆ ವಿವರವಾಗಿ ಮಾತನಾಡಿರುವ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎಸ್. ಕೆ ಉಮೇಶ್, "ಎ1 ಪವಿತ್ರಾ ಗೌಡ ಆಗಿದ್ದಾಳೆ. ಎ17 ಆ ಹುಡುಗ ಇದ್ದಾನೆ. ಎ1 ಆರೋಪಿಯೇ ಜೈಲಿಗೆ ಹೋಗ್ತಾಳೆ, ಅವಳಿಗೇ ಹೆಚ್ಚು ಶಿಕ್ಷೆ ಎಂದು ಎಷ್ಟೋ ಮಂದಿ ಊಹಿಸಿದ್ದಾರೆ. ಎ1=ಎ17 ಇಲ್ಲಿ ಎಲ್ಲರೂ ಒಂದೇ. ಸೀರಿಯಲ್ ನಂಬರ್ ಅಷ್ಟೇ ಅದು. ಕಿಡ್ನಾಪ್ ಮೂಲಕ ಒಂದು ಅಪರಾಧ ಮಾಡಿಯಾಯ್ತು. ಒಂದು ಅಪರಾಧ ಮಾಡಿ 3 ಅಡಿ ಗುಂಡಿ ತೋಡಿಕೊಂಡರು. ಅಷ್ಟೇ ಆಗಿದ್ದರೆ ಎದ್ದು ಬಂದು ಬಿಡಬಹುದಿತ್ತು. ಆ ವ್ಯಕ್ತಿಯನ್ನೇ ಕೊಲೆ ಮಾಡಿ ಆರಡಿ ಗುಂಡಿ ತೋಡಿಕೊಂಡ್ರು. ಅದಾದ ಮೇಲೆ ಎತ್ಕೊಂಡು ಬಿಸಾಕಿ ಬಿಡ್ರೋ ಎಂದು ಹೇಳಿ ಮತ್ತೆ 6 ಅಡಿ ಗುಂಡಿ ತೋಡಿಕೊಂಡು 12 ಅಡಿ ಮಾಡಿಕೊಂಡರು. 30 ಲಕ್ಷ ದುಡ್ಡು ಕೊಟ್ಟು ನಾಲ್ಕು ಜನರನ್ನು ರೆಡಿ ಮಾಡಿದ್ರು. ನಾವು ಮಾಡಿದ್ದೇವೆ ಅಂತ ಒಪ್ಪಿಕೊಂಡು ಬಿಡಿ ಎಂದು ಮತ್ತೆ ಮೂರು ಅಡಿ ಗುಂಡಿ ತೋಡಿಕೊಂಡು 15 ಅಡಿ ಮಾಡಿಕೊಂಡರು. ಒಟ್ಟಾರೆ ತಮ್ಮ ಗುಂಡಿ ತಾವೇ ತೋಡಿಕೊಂಡ್ರು" ಎಂದಿದ್ದಾರೆ.
"ಕಾಲಿಂದ ಮೇಲ್ಮುಖವಾಗಿ ತಮ್ಮನ್ನು ತಾವೇ ಸುತ್ತಿಕೊಂಡು ಬಂದಿದ್ದಾರೆ. ಇಡೀ ಮೈಗೆ ಸುತ್ತಿಕೊಂಡಿದ್ದಾರೆ. ಕುತ್ತಿಗೆ, ಕಣ್ಣು ಎಲ್ಲವನ್ನೂ ಸುತ್ತಿಕೊಂಡಿದ್ದಾರೆ. ತಪ್ಪಿನ ಮೇಲೆ ತಪ್ಪು ಮಾಡುತ್ತ ಹೋಗಿದ್ದಾರೆ. ಯಾರು ಇದನ್ನ ಮಾಡ್ತಾರೆ ಅಂದ್ರೆ ಈ ಜಗತ್ತಿನಲ್ಲಿ ಅತ್ಯಂತ ದಡ್ಡರು ಯಾರು ಇರ್ತಾರೋ ಅವ್ರು ಇಂಥ ಕೆಲಸ ಮಾಡ್ತಾರೆ. ಸತ್ತ ವ್ಯಕ್ತಿಯನ್ನು ಸುಡುವಂಥದ್ದು, ಎಸೆಯುವಂಥದ್ದು ಮಾಡುತ್ತಾನಲ್ಲ, ಅವನು ಎಲ್ಲ ತಪ್ಪುಗಳಲ್ಲಿ ಸಿಲುಕುವಂಥವನು. ಮನುಷ್ಯನನ್ನು ಕೊಂದ ಮೇಲೆ ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿ ಇರಲ್ಲ. ಬುದ್ಧಿ ಭ್ರಮಣೆ ಆಗಿ ಬಿಡುತ್ತದೆ. ವರ್ತನೆ ಬದಲಾಗುತ್ತದೆ. ಆಗ ಒಂದಾದ ಮೇಲೊಂದು ತಪ್ಪು ಮಾಡುತ್ತಲೇ ಹೋಗುತ್ತಾರೆ. ಹೇಗಾದ್ರೂ ಮಾಡಿ ಪಾರಾಗಬೇಕು ಎಂದು ತಪ್ಪಿನ ಮೇಲೊಂದು ತಪ್ಪು ಮಾಡುತ್ತಲೇ ಹೋಗುತ್ತಾರೆ. ಇಲ್ಲಿ ಆಗಿದ್ದೂ ಅದೇ" ಎಂದಿದ್ದಾರೆ.
ಒಂದು ವರ್ಷದ ವರೆಗೂ ಬೇಲ್ ಸಿಗೋದು ಡೌಟ್..
"ಕೊಲೆ ಪ್ರಕರಣದಲ್ಲಿ ಬೇಲ್ ಕೊಡುವುದು ನ್ಯಾಯಾಲಯಕ್ಕೆ ಬಿಟ್ಟಿದ್ದು. ಕೊಟ್ಟ ದಾಖಲೆ, ತನಿಖಾ ವರದಿ ಮೇಲೆ ಇದೆಲ್ಲ ನಿಂತಿರುತ್ತದೆ. ಸಡನ್ ಆಗಿ ಬೇಲ್ ಆಗುವ ಚಾನ್ಸೇ ಇಲ್ಲ. ಆರು ತಿಂಗಳ ಮೇಲೆಯೇ ಬೇಲ್ ಸಿಗುವ ಸಾಧ್ಯತೆ ಇದೆಯಾದರೂ, ಒಂದು ವರ್ಷದ ವರೆಗೂ ಬೇಲ್ ಸಿಗುವುದು ಕಷ್ಟ. ಒಂದು ವೇಳೆ ದರ್ಶನ್ ಬದಲು ಅವರಲ್ಲಿಯೇ ಬೇರೆ ಯಾರಾದ್ರೂ ಮಾಡಿದ್ರೆ, ಬೇಲ್ ಸಿಗುವ ಸಾಧ್ಯತೆ ಹೆಚ್ಚು. ಆಗ ಆಚೆ ಬಂದು ಸಿನಿಮಾ ಶೂಟಿಂಗ್‌ನಲ್ಲೂ ಭಾಗವಹಿಸಬಹುದು. ಆದರೆ, ಇಲ್ಲಿ ಅದು ಸಾಧ್ಯವಿಲ್ಲ. ಸರ್ಕಾರ ಮತ್ತು ಸಮಾಜದ ಜತೆಗೆ ಮೀಡಿಯಾ ಗಟ್ಟಿಯಾಗಿ ನಿಂತಿವೆ. ಬೇಲ್ ಆಗುವ ವರೆಗೂ ಇದು ನಡೆಯುತ್ತಲೇ ಇರುತ್ತದೆ"
ಒಂದು ವೇಳೆ ಆರೋಪ ಸಾಬೀತಾದ್ರೆ ದರ್ಶನ್ ಗತಿ ಏನು?
"14 ವರ್ಷ ಅಂತ ಏನೂ ಇಲ್ಲ. ಇಂಥ ಪ್ರಕರಣಗಳಲ್ಲಿ ಸಾಯುವವರೆಗೂ ಜೈಲು ಶಿಕ್ಷೆಯಾದ ಉದಾಹರಣೆಗಳೂ ಸಾಕಷ್ಟಿವೆ. ಚಾರ್ಜ್‌ಶೀಟ್‌ನಲ್ಲಿ ವರ್ಗೀಕರಣ ಆದರೆ, ಶಿಕ್ಷೆಯೂ ಬದಲಾಗುತ್ತದೆ. ಯಾರ ಪಾತ್ರ ಹೇಗೆ, ಒಳಗೆ ಯಾರಿದ್ದರು, ಹೊರಗೆ ಯಾರಿದ್ದರು, ಹಲ್ಲೆ ಮಾಡಿದವರು ಯಾರು, ಇದೆಲ್ಲ ಪರಿಗಣನೆ ಆಗುತ್ತದೆ. ಸಾಕ್ಷ್ಯಾಧಾರಗಳ ವಿಚಾರಣೆ ವೇಳೆ ಇವೆಲ್ಲವೂ ಮುನ್ನೆಲೆಗೆ ಬರುತ್ತವೆ. ಕೋರ್ಟ್ ಯಾವ ಕೋನದಲ್ಲಿ ವಿಚಾರಣೆ ನಡೆಸಿ ತೀರ್ಪು ಕೊಡುತ್ತದೆ ಎಂಬುದೇ ಮುಖ್ಯ. ಜೀವಾವಧಿ ಶಿಕ್ಷೆ ಸಾಧ್ಯತೆ ಹೆಚ್ಚು. ಪ್ರಕರಣ ಪ್ರೂವ್ ಆಗಲಿಲ್ಲ ಎಂದಾದರೆ ಹೊರಬರಬಹುದು" ಎಂದು ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಎಸ್ ಕೆ ಉಮೇಶ್ ಹೇಳಿಕೊಂಡಿದ್ದಾರೆ.
ವಿಭಾಗ