ರೂಪಾಂತರ ಸಿನಿಮಾ ವಿಮರ್ಶೆ ಮಾಡಿದ ರಿಷಬ್ ಶೆಟ್ಟಿ; 4ರಲ್ಲಿ 2 ಕಥೆ ತುಂಬಾ ಇಷ್ಟ ಆಯ್ತು, ಅಜ್ಜಅಜ್ಜಿಯಂತೂ ಚಿತ್ರದ ಪ್ರಮುಖ ಆಕರ್ಷಣೆ
Roopanthara Kannada Movie Review: ರೂಪಾಂತರ ಸಿನಿಮಾವನ್ನು ನೋಡಿರುವ ರಾಜ್ ಬಿ ಶೆಟ್ಟಿ ತುಂಬಾ ಚೆನ್ನಾಗಿದೆ. ನಾಲ್ಕರಲ್ಲಿ 2 ಕಥೆಗಳು ತುಂಬಾ ಇಷ್ಟ ಆಯ್ತು ಎಂದಿದ್ದಾರೆ. ಇದೇ ಸಿನಿಮಾದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರು ವಿಮರ್ಶೆ ಹಂಚಿಕೊಂಡಿದ್ದಾರೆ.
ಬೆಂಗಳೂರು: ಈ ವಾರ ಬಿಡುಗಡೆಯಾದ ಹಲವು ಕನ್ನಡ ಚಿತ್ರಗಳಲ್ಲಿ ರೂಪಾಂತರ ಹೆಸರಿನ ಚಿತ್ರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ನಾಲ್ಕು ಸಣ್ಣಕಥೆಗಳನ್ನು ಒಳಗೊಂಡ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಸೇರಿದಂತೆ ಅನೇಕ ಪ್ರತಿಭಾನ್ವಿತ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಕುರಿತು ಸಿನಿರಂಗದ ಪ್ರಮುಖರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ ಸಪ್ತ ಸಾಗರದಾಚೆ ಎಲ್ಲೋ ನಿರ್ದೇಶಕ ಹೇಮಂತ್ ರಾವ್ ಈ ಚಿತ್ರ ನನಗೆ ತುಂಬಾ ಇಷ್ಟವಾಯ್ತು ಎಂದಿದ್ದರು. ಇದಾದ ಬಳಿಕ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಕೂಡ ಈ ಸಿನಿಮಾವನ್ನು ಇಷ್ಟಪಟ್ಟು ವಿಮರ್ಶಿಸಿದ್ದರು. ಇದೀಗ ಈ ಚಿತ್ರದ ಕುರಿತು ಕಾಂತಾರ ನಟ ರಿಷಬ್ ಶೆಟ್ಟಿ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ರೂಪಾಂತರ ಸಿನಿಮಾ ವಿಮರ್ಶೆ ಮಾಡಿದ ರಿಷಬ್ ಶೆಟ್ಟಿ
"ನಾನು ಇತ್ತೀಚೆಗೆ ನೋಡಿದ ಒಂದು ಸಿನಿಮಾ ರೂಪಾಂತರ. ಬಹಳ ಒಳ್ಳೆಯ ಟೆಕ್ನಿಷಿಯನ್‌ಗಳೆಲ್ಲ ಸೇರಿಕೊಂಡು ಈ ಸುಂದರ ಸಿನಿಮಾ ಮಾಡಿದ್ದಾರೆ. ಕನ್ನಡಕ್ಕೆ ಇದೊಂದು ಹೆಮ್ಮೆಯ ಚಿತ್ರ. ನಾನು ನೋಡಿರುವ ಈ ನಾಲ್ಕು ಕಥೆಗಳಲ್ಲಿ ಎರಡು ಕಥೆಗಳು ತುಂಬಾ ಅದ್ಭುತವಾಗಿ ಖುಷಿಕೊಟ್ಟಿದೆ. ಎಲ್ಲಾ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಉತ್ತರ ಕರ್ನಾಟಕದ ಅಜ್ಜ ಅಜ್ಜಿಯ ಕಥೆಯಂತೂ ನನಗೆ ತುಂಬಾ ಇಂಪ್ಯಾಕ್ಟ್ ಮಾಡ್ತು. ರಾಜ್ ಬಿ ಶೆಟ್ಟಿಯವರ ಕ್ಯಾರೆಕ್ಟರ್ ಕೂಡ ಇಷ್ಟವಾಯಿತು. ಜತೆಗೆ ಎಲ್ಲಾ ಕಲಾವಿದರ ಅಭಿನಯ ಇಷ್ಟವಾಯಿತು. ಇಡೀ ಚಿತ್ರತಂಡ ಈ ಸಿನಿಮಾವನ್ನು ರಾಜ್ಯಾದ್ಯಂತ ನಿಮ್ಮ ಮುಂದೆ ಇಟ್ಟಿದ್ದಾರೆ. ನಾನು ಸಿನಿಮಾ ನೋಡಿದ್ದೇನೆ. ತುಂಬಾ ಇಷ್ಟ ಆಯ್ತು ನನಗೆ. ನಿಮಗೂ ಅಷ್ಟು ಇಷ್ಟವಾಗುತ್ತದೆ ಎಂದುಕೊಂಡಿದ್ದೇನೆ. ಇಂತಹ ಸಿನಿಮಾಗಳು ಗೆಲ್ಲಬೇಕು. ಈ ರೀತಿ ಗೆದ್ದರೆ ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಪ್ರತಿಭೆಗಳು, ಇನ್ನಷ್ಟು ಪ್ರಯೋಗಗಳು ನಡೆಯಲು ಸಾಧ್ಯವಾಗುತ್ತದೆ. ಇಂತಹ ಸಿನಿಮಾವನ್ನು ಕೈಬಿಡಬೇಡಿ. ಎಲ್ಲರೂ ಥಿಯೇಟರ್‌ಗೆ ಬಂದು ರೂಪಾಂತರ ಸಿನಿಮಾವನ್ನು ನೋಡಿ ಗೆಲ್ಲಿಸಿ" ಎಂದು ಕಾಂತಾರ ನಟ ರಿಷಬ್ ಶೆಟ್ಟಿ ವಿಡಿಯೋ ಮೂಲಕ ತಿಳಿಸಿದ್ದಾರೆ.
ರೂಪಾಂತರ ಸಿನಿಮಾದ ಪಬ್ಲಿಕ್ ರಿವ್ಯೂ ಮತ್ತು ರೇಟಿಂಗ್ಸ್
ಎಕ್ಸ್ ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿಯೂ ರೂಪಾಂತರ ಸಿನಿಮಾದ ಕುರಿತು ವೀಕ್ಷಕರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. "ಐದು ಸಣ್ಣ ಕಥೆಗಳ ಗುಚ್ಚ. ಭವಿಷ್ಯದ ಜಗತ್ತಿನ ರಚನೆ ಅದ್ಭುತ. ತಂಡದ ಒಳ್ಳೆಯ ಪ್ರಯತ್ನ" ಎಂದು ಆದರ್ಶ್ ಟ್ವೀಟ್ ಮಾಡಿದ್ದಾರೆ. ""ನಾಲ್ಕು ಕಥೆಗಳು, ನಾಲ್ಕು ರೂಪಕಗಳು, ನಾಲ್ಕು ಸಂದೇಶಗಳು ಒಂದಕ್ಕೊಂದು ಲಿಂಕ್ ಆಗಿವೆ. ರೂಪಾಂತರ ಕನ್ನಡ ಚಿತ್ರರಂಗದ ಅದ್ಭುತ ಸಿನಿಮಾ. ಮಿಥಿಲೇಶ್ ಅವರೇ ತುಂಬಾ ಉತ್ತಮ ಕೆಲಸ. ರಾಜ್ ಬಿ ಶೆಟ್ಟಿ ಬೆಂಬಲದಿಂದ ಚಿತ್ರ ಇನ್ನಷ್ಟು ಸುಂದರವಾಗಿ ಮೂಡಿದೆ" ಎಂದು ಶ್ರೀ ಹರಿ ಎಂಬವರು ಟ್ವೀಟ್ ಮಾಡಿದ್ದಾರೆ. ಇವರು ಈ ಸಿನಿಮಾಕ್ಕೆ 10ರಲ್ಲಿ 8.5 ಸ್ಟಾರ್ ರೇಟಿಂಗ್ ನೀಡಿದ್ದಾರೆ.
"ರೂಪಾಂತರ ಸಿನಿಮಾ ತುಂಬಾ ಚೆನ್ನಾಗಿದೆ. ಕೆಲವು ಕಥೆಗಳು ತುಂಬಾ ಡೀಪ್ ಆಗಿ ಉಳಿದುಕೊಳ್ಳುತ್ತವೆ. ಕಡಿಮೆ ಬಜೆಟ್‌ನಲ್ಲಿ ರೂಪಕ ಜಗತ್ತನ್ನು ತುಂಬಾ ಸುಂದರವಾಗಿ ಮಾಡಿದ್ದಾರೆ. ನಮ್ಮ ಉತ್ತರ ಕರ್ನಾಟಕದ ದಶರಥ ಮತ್ತು ಕೈಕೊಯಿ ಅವರು ಈ ಸಿನಿಮಾದ ಪ್ರಮುಖ ಹೈಲೈಟ್" ಎಂದು ನೀಲ್ ಸಾಗರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
"ರೂಪಾಂತರ ಕನ್ನಡ ಚಿತ್ರರಂಗಕ್ಕೆ ಆಸಕ್ತಿದಾಯಕ ಸೇರ್ಪಡೆಯಾಗಿದೆ. ಕಥೆಗಳು ರಿವರ್ಟಿಂಗ್ ಆಗಿದ್ದವು, ನಿರಂತರವಾಗಿ ನಿಮ್ಮನ್ನು ಮತ್ತು ನಿಮ್ಮ ಪೂರ್ವಾಗ್ರಹಗಳನ್ನು ಪ್ರಶ್ನಿಸುವಂತೆ ಮಾಡುತ್ತವೆ. ಪ್ರದರ್ಶನಗಳು ಮತ್ತು ಬರವಣಿಗೆ ಮತ್ತು ನಿರ್ದೇಶನವು ಉನ್ನತ ದರ್ಜೆಯಿಂದ ಕೂಡಿದೆ" ಎಂದು ಶುಭ ಜಯನಾಗರಾಜ ಎಂಬವರು ಎಕ್ಸ್‌ನಲ್ಲಿ ವಿಮರ್ಶೆ ಮಾಡಿದ್ದಾರೆ.
ರಾಜ್ ಬಿ ಶೆಟ್ಟಿ ನಟನೆಯ ನಿರ್ದೇಶನದ ಒಂದು ಮೊಟ್ಟೆಯ ಕಥೆಯನ್ನು ಬೆಂಬಲಿಸಿದ ಸುಹಾನ್ ಪ್ರಸಾದ್ ಅವರ ಎರಡನೇ ನಿರ್ಮಾಣ ಇದಾಗಿದೆ. ರೂಪಾಂತರದಲ್ಲಿ ಲೇಖಾ ನಾಯ್ಡು, ಹನುಮಕ್ಕ, ಭರತ್ ಜಿಬಿ, ಸೋಮಶೇಖರ್ ಬೋಳೆಗಾಂವ್ ಮುಂತಾದವರು ನಟಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣ ಮತ್ತು ಮಿಧುನ್ ಮುಕುಂದನ್ ಸಂಗೀತವಿದೆ. ಸದ್ಯ ಈ ಸಿನಿಮಾದ ಕುರಿತು ಸಕಾರಾತ್ಮಕ ವಿಮರ್ಶೆ ವ್ಯಕ್ತವಾಗುತ್ತಿದೆ.