Kenda Movie Review: ‘ಕೆಂಡ’ ಇದು ರಾಜಕೀಯ, ಸಮಾಜ ಮತ್ತು ಸಾಮಾನ್ಯನ ತ್ರಿವಳಿ ಮುಖಗಳ ಸಂಗಮ ಮತ್ತು ಸಂಘರ್ಷದ ಕಥೆ
Kenda Movie Review: ನಮಗೆ ಮನರಂಜನೆಯೇ ಬೇಕು ಅನ್ನೋ ಪ್ರೇಕ್ಷಕನಿಗೆ ಕೆಂಡ ಸಿನಿಮಾ ಹಿಡಿಸುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಒಂದು ಸೀಮಿತ ವರ್ಗದವರಿಗೆ, ರಾಜಕೀಯದಲ್ಲಿ ಪಳಗಿದವರಿಗೆ, ಬೌದ್ಧಿಕವಾಗಿ ಗಟ್ಟಿಯಾಗಿರುವವರಿಗೆ ಈ ಸಿನಿಮಾದಲ್ಲಿ ಹೇಳಿದ ಸೂಕ್ಷ್ಮತೆಗಳು ಅರಿವಾಗಬಹುದು.
Kenda Movie Review: ಹೊಸಬರು ಹೊಸತನದ ಮೂಲಕವೇ ಗುರುತಿಸಿಕೊಳ್ಳಲು ಇಷ್ಟಪಡ್ತಾರೆ ಅನ್ನೋ ಮಾತೀಗ ಮತ್ತೆ ಸಾಬೀತಾಗಿದೆ. ಅಂಥದ್ದೊಂದು ಪ್ರಯತ್ನ ಜುಲೈ 26ರಂದು ಬಿಡುಗಡೆಯಾದ ಕೆಂಡ ಸಿನಿಮಾದಲ್ಲಾಗಿದೆ. ಈ ಹಿಂದೆ ಗಂಟುಮೂಟೆ ಅನ್ನೋ ಸೂಕ್ಷ್ಮ ಚಿತ್ರವನ್ನು ಕನ್ನಡಕ್ಕೆ ನೀಡಿ, ವಿಮರ್ಶೆ ದೃಷ್ಟಿಯಿಂದಲೂ ಮೆಚ್ಚುಗೆ ಪಡೆದಿದ್ದ ತಂಡದ ಎರಡನೇ ಪ್ರಯೋಗ ಮತ್ತು ಪರಿಶ್ರಮವೇ ಈ ಕೆಂಡ. ರಾಜಕೀಯ, ಸಮಾಜ ಮತ್ತು ಸಾಮಾನ್ಯ ವ್ಯಕ್ತಿಯ ತ್ರಿವಳಿ ಮುಖಗಳ ಸಂಗಮ ಮತ್ತು ಸಂಘರ್ಷವನ್ನು ಇಲ್ಲಿ ವಿಡಂಬನಾತ್ಮಕವಾಗಿ ಹೇಳುವ ಪ್ರಯತ್ನ ನಿರ್ದೇಶಕ ಸಹದೇವ ಕೆಲವಡಿ ಅವರಿಂದಾಗಿದೆ. ಹಾಗಾದರೆ, ಏನಿದು ಕೆಂಡ? ವಿಮರ್ಶೆ ಓದಿ.
ಏನಿದು ಕೆಂಡ?
ಸರಿ ಸುಮಾರು 20- 22 ವರ್ಷಗಳ ಹಿಂದಿನ ಕಾಲಘಟ್ಟವದು. ಫೋನ್ ಬಳಕೆಯ ಚಟ ಹತ್ತದ, ಸುದ್ದಿವಾಹಿನಿಗಳ ಅಬ್ಬರವಿಲ್ಲದ, ಸೋಷಿಯಲ್ ಮೀಡಿಯಾ ಸುಳಿವಿಲ್ಲದ ಸಮಯದಲ್ಲಿ ನಡೆಯುವ ರಾಜಕೀಯ ಪ್ರಹಸನವೇ ಈ ಕೆಂಡ. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ಅತೀ ಸಾಮಾನ್ಯನಾದ ಕೇಶವನಿಗೆ (ಭರತ್), ಮರುಧ್ವನಿ ಪತ್ರಿಕೆಯ ಸಂಪಾದಕರ ಪರಿಚಯವಾಗುತ್ತದೆ. ಅವರ ಗುಂಪಿಗೆ ಸೇರಿ, ಸಮಾಜದ ಸ್ವಾಸ್ಥ ಕೆಡಿಸುವ ಕೆಲಸಕ್ಕೂ ಇಳಿಯುತ್ತಾನೆ, ಇಳಿಸುತ್ತಾರೆ. ಎಲ್ಲೆಂದರಲ್ಲಿ ಕಲ್ಲು ಎಸೆಯುವುದು, ಗಲಾಟೆ ಮಾಡಿಸುವ ಕೆಲಸ ಈ ಗುಂಪಿನದ್ದು. ಆದರೆ, ಒಂದು ಸಮಯದಲ್ಲಿ ಈ ಕೆಲಸ ಕೇಶವನಿಗೆ ಅಸಹನೀಯ ಎನಿಸತೊಡಗುತ್ತದೆ. ನಾನು ಮಾಡುತ್ತಿರುವ ತಪ್ಪೇನು? ಅಲ್ಲಿಂದ ಆತ ಇಡುವ ಹೆಜ್ಜೆ ಯಾವುದು? ಈ ಒಂದೆಳೆಯೇ ಕೆಂಡ ಚಿತ್ರದ ಕಥೆ.
ಇಲ್ಯಾವುದೂ ಉತ್ಪ್ರೇಕ್ಷೆ ಅನಿಸದು..
ಎರಡು ದಶಕಗಳ ಹಿಂದಿನ ರಾಜಕೀಯ, ಮತ್ತು ರಾಜಕೀಯ. ಇದಷ್ಟೇ ಈ ಸಿನಿಮಾದ ಜೀವಾಳ. ಹಾಗಾಗಿಯೇ ಕೆಂಡ ಒಂದು ರಾಜಕೀಯ ವಿಡಂಬನಾತ್ಮಕ ಚಿತ್ರವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತದೆ. ಅಧಿಕಾರದ ಹಪಹಪಿ, ರಾಜಕೀಯದ ಪ್ರಭಾವ ಹೇಗೆ ಸಾಮಾನ್ಯನ ಮೇಲೆ ಪ್ರಭಾವ ಬೀರಲಿದೆ ಎಂಬ ಅಂಶವೂ ಈ ಚಿತ್ರದಲ್ಲಿ ಕಾಣುತ್ತಲೇ ಸಾಗುತ್ತದೆ. ರಾಜಕೀಯವಾಗಿ ಬೆಳೆಯಲು, ಹೇಗೆ ಇತರರ ಮೇಲೆ ಗೂಬೆ ಕೂರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂಬ ಇಣುಕು ನೋಟವೂ ಕೆಂಡದಲ್ಲಿದೆ. ಹಾಗಂತ ಅದ್ಯಾವುದನ್ನೂ ಉತ್ಪ್ರೇಕ್ಷೆಯಿಂದ ಇಲ್ಲಿ ಹೇಳಿಲ್ಲ. ಮಸಾಲೆ ಬೆರೆಸದೇ ನೈಜವಾಗಿ ಹೇಳುವ ಕೆಲಸ ಇಲ್ಲಾಗಿದೆ.
ಕೆಂಡ ಹತ್ತರಲ್ಲಿ ಹನ್ನೊಂದಲ್ಲ, ಏಕೆ?
ಸಿನಿಮಾ ಅಂದರೆ ಅಲ್ಲಿ ಇಂತಿಂಥ ಕಂಟೆಂಟ್ ಇರಲೇಬೇಕು, ನಮಗೋಸ್ಕರ ಅಲ್ಲದಿದ್ದರೂ ನೋಡುಗರಿಗೆ, ಪ್ರೇಕ್ಷಕರಿಗಾದರೂ ನಾವು ಅವುಗಳನ್ನು ಸೇರಿಸಬೇಕು. ಕಥೆಯಲ್ಲಿ ಏನೇ ಇದ್ದರೂ, ಅದನ್ನು ಆಚೀಚೆ ಮಾಡಿಯಾದರೂ ಮನರಂಜನೆ ಅಂಶಗಳನ್ನು ಸೇರಿಸಬೇಕು.. ಇಂಥ ಎಷ್ಟೋ ವಿಚಾರಗಳು ಸಿನಿಮಾ ಮೇಕಿಂಗ್ ಹಂತದಲ್ಲಿಯೇ ನಿರ್ದೇಶಕರ ವಲಯದಲ್ಲಿ ಚರ್ಚೆಗಳು ನಡೆದಿರುತ್ತವೆ. ಆದರೆ, ಕೆಂಡ ಸಿನಿಮಾ ವಿಚಾರದಲ್ಲಿ ಅದೆಲ್ಲವೂ ಘಟಿಸಿಲ್ಲ. ನಿರ್ದೇಶಕ ಸಹದೇವ ಕೆಲವಡಿ ತಲೆಯಲ್ಲಿ ಏನಿದೆಯೋ ಅದಷ್ಟೇ ದೃಶ್ಯರೂಪ ಪಡೆದುಕೊಂಡಿದೆ. ಹಾಗಾಗಿಯೇ ಇದು ಮಾಮೂಲಿ ಸಿನಿಮಾ ಸಾಲಿಗೆ ಸೇರುವಂಥದ್ದಲ್ಲ. ಅವಸರದ ಊಟ ಹೊಟ್ಟೆಗೆ ಹಿತವಲ್ಲ ಎಂಬುದನ್ನು ಅರಿತ ನಿರ್ದೇಶಕರು, ಸಾವಧಾನವಾಗಿಯೇ ಜೀರ್ಣಿಸಿಕೊಳ್ಳುವ ಚಿತ್ರ ಕಟ್ಟಿಕೊಟ್ಟಿದ್ದಾರೆ.
ಹಾಡಿಲ್ಲ, ರೊಮ್ಯಾನ್ಸ್ ಇಲ್ಲವೇ ಇಲ್ಲ..
ದೊಡ್ಡ ಕ್ಯಾನ್ವಾಸ್, ಸ್ಟಾರ್ ಕಲಾವಿದರು, ಹಾಡು ಕುಣಿತ, ಹಾಸ್ಯ, ನಾಯಕಿ ಜತೆಗಿನ ರೊಮ್ಯಾನ್ಸ್, ಮೈನವಿರೇಳಿಸುವ ಸಾಹಸಕ್ಕೂ ಇಲ್ಲಿ ಜಾಗವಿಲ್ಲ. ಹುಡುಕಿದರೂ ಇದ್ಯಾವುದರ ಸುಳಿವೂ ಕೆಂಡದಲ್ಲಿ ಸಿಗುವುದಿಲ್ಲ. ಹಾಗಾಗಿಯೇ ಇದು ರೆಗ್ಯುಲರ್ ಫಾರ್ಮ್ಯಾಟ್ ಸಿನಿಮಾ ಸಾಲಿಗೆ ಸೇರುವಂಥದ್ದಲ್ಲ. ನಮಗೆ ಮನರಂಜನೆಯೇ ಬೇಕು ಅನ್ನೋ ಪ್ರೇಕ್ಷಕನಿಗೆ ಕೆಂಡ ಹಿಡಿಸುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಒಂದು ಸೀಮಿತ ವರ್ಗದವರಿಗೆ, ರಾಜಕೀಯದಲ್ಲಿ ಗುರುತಿಸಿಕೊಂಡವರಿಗೆ, ಬೌದ್ಧಿಕವಾಗಿ ಸ್ಟ್ರಾಂಗ್ ಆಗಿರುವವರಿಗೆ ಈ ಸಿನಿಮಾದಲ್ಲಿ ಹೇಳಿದ ಸೂಕ್ಷ್ಮತೆಗಳು ಅರಿವಾಗಬಹುದು.
ಮಾತಿಗಿಂತ ಮೌನವೇ ಹೆಚ್ಚು ಪ್ರಭಾವಿ ಎಂಬುದು ಕೆಂಡದಲ್ಲಿ ಕಾಣಿಸುತ್ತದೆ. ಕೆಲವೊಮ್ಮೆ ಏರುಧ್ವನಿಯ ಡೈಲಾಗ್‌ಗಿಂತ ಮೌನವೇ ಸಾವಿರ ಪಾಲು ಲೇಸು ಎಂದೂ ಅನಿಸುತ್ತದೆ. ಹಾಡುಗಳಿಲ್ಲದಿದ್ದರೂ, ಹಿನ್ನೆಲೆ ಸಂಗೀತದಿಂದಲೇ ಚಿತ್ರವನ್ನು ಒಂದು ಹಂತ ಮೇಲಕ್ಕೆ ಎತ್ತಿದ್ದಾರೆ ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್ ಕಾಯ್ಕಿಣಿ. ಇದರಾಚೆಗೂ ಇಲ್ಲೊಂದಿಷ್ಟು ಮೈನಸ್ ಅಂಶಗಳೂ ಕಣ್ಣಿಗೆ ಬೀಳುತ್ತವೆ. ಗಟ್ಟಿ ಕಥೆಯನ್ನೇನೋ ಹೆಣೆದ ನಿರ್ದೇಶಕರು, ಮೇಕಿಂಗ್ ವಿಚಾರದಲ್ಲ್ಯಾಕೋ ಮಂಕಾಗಿದ್ದಾರೆ, ಎಡವಿದ್ದಾರೆ ಎಂದೆನಿಸುತ್ತದೆ. ನಿರೂಪಣೆಯ ದಾಟಿಯೂ ಸಾಮಾನ್ಯ ನೋಡುಗನ ತಾಳ್ಮೆ ಪರೀಕ್ಷಿಸಬಹುದು.
ನಟರ ನಟನೆ ಹೇಗಿದೆ?
ಪಾತ್ರಧಾರಿಗಳ ವಿಚಾರವಾಗಿ ಇಲ್ಲಿ ಯಾರೂ ಗೊತ್ತಿರುವ ಮುಖಗಳಲ್ಲ. ಆದರೆ, ಸಿನಿಮಾ ನೋಡಿದ ಬಳಿಕ ಪ್ರತಿ ಮುಖವೂ ನೆನಪಿನಲ್ಲಿ ಉಳಿಯುತ್ತವೆ. ಹೊಸ ಪ್ರತಿಭೆಗಳನ್ನು ಚಿತ್ರದಲ್ಲಿ ಚೆನ್ನಾಗಿಯೇ ದುಡಿಸಿಕೊಂಡಿದ್ದಾರೆ. ಕೇಶವನಾಗಿ ಬಿ.ವಿ. ಭರತ್ ಅವರ ಅಭಿನಯಕ್ಕೆ ಮೆಚ್ಚುಗೆ ಸಂದಾಯವಾಗುತ್ತದೆ. ಕನ್ನಡದ ಕೆಲವೇ ಕೆಲವು ಪೋಷಕ ನಟರ ಸಾಲಿನಲ್ಲಿ ಪ್ರಭಾವಿ ನಟ ಎನಿಸಿರುವ ಗೋಪಾಲಕೃಷ್ಣ ದೇಶಪಾಂಡೆ ಹೆಚ್ಚು ಇಷ್ಟವಾಗುತ್ತಾರೆ. ಇನ್ನುಳಿದಂತೆ ಪ್ರಣವ್ ಶ್ರೀಧರ್, ಸಚಿನ್ ಶ್ರೀನಾಥ್, ವಿನೋದ್ ಸುಶೀಲ, ಬಿಂದು, ರೇಖಾ ಕೂಡ್ಲಿಗಿ, ದೀಪ್ತಿ ನಾಗೇಂದ್ರ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರೆ.
ಚಿತ್ರ: ಕೆಂಡ
ನಿರ್ದೇಶನ: ಸಹದೇವ ಕೆಲವಡಿ
ನಿರ್ಮಾಣ: ಅಮೆಯುಕ್ತಿ ಸ್ಟುಡಿಯೋಸ್ (ರೂಪಾ ರಾವ್)
ತಾರಾಗಣ: ಬಿ.ವಿ.ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಸಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನಾ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ, ರಾಮ್, ಭೀಮಯ್ಯ ಗುತ್ತೇದಾರ್, ಗಂಗಾಧರ ಹರಸೂರ್ಕರ್, ನವೀನ್ ಕೆ. ರೇಖಾ ಕೂಡ್ಲಿಗಿ, ಪ್ರಭಾಕರ ಜೋಶಿ ಮುಂತಾದವರು.
ರೇಟಿಂಗ್: 3\5
ವಿಮರ್ಶೆ: ಮಂಜು ಕೊಟಗುಣಸಿ