ಇವ್ನ ನಟನೆ ವರ್ಕ್ ಆಗಲ್ಲ ಕಳಿಸಿಬಿಡಿ ಅಂದವರೇ ಹೆಚ್ಚು; ಕ್ಯಾಬ್ ಡ್ರೈವರ್ ಜಗಪ್ಪ, ಕಾಮಿಡಿ ಕಿಲಾಡಿ ಆಗಿದ್ಹೇಗೆ?
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಹಾಸ್ಯದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುವ ನಟ ಜಗಪ್ಪ, ನಟನೆ ಆರಂಭಿಸುವುದಕ್ಕೂ ಮುನ್ನ ಓರ್ವ ಕ್ಯಾಬ್ ಡ್ರೈವರ್. ಅದಾದ ಮೇಲೆ ಹಾಸ್ಯಗಾರನಾಗಿಯೂ ಸಾಕಷ್ಟು ಅವಮಾನಗಳನ್ನು ಎದುರಿಸಿ ಈಗ ಸನ್ಮಾನ ಸ್ವೀಕರಿಸುತ್ತಿದ್ದಾರೆ.
Comedy Khiladigalu Premier League: ಮಜಾಭಾರತ ಶೋ ಮೂಲಕ ಕಿರುತೆರೆಗೆ ಬಂದ ನಟ ಜಗಪ್ಪ, ಆ ವೇದಿಕೆಯನ್ನು ಅಷ್ಟೇ ಚೆನ್ನಾಗಿ ಬಳಸಿಕೊಂಡು, ಖ್ಯಾತಿ ಪಡೆದುಕೊಂಡರು. ಆ ವೇದಿಕೆಯಿಂದಲೇ, ಅಲ್ಲಿ ಚಿಗುರಿದ ಪ್ರೀತಿಯಿಂದಲೇ ಜೀವನ ಸಂಗಾತಿಯೂ ಅವರ ಬಾಳಿಗೆ ಬಂದರು. ಹಾಗೆ ಸಾಗಿದ ಈ ಕಾಮಿಡಿ ಪಯಣ ಕಳೆದ ವರ್ಷ ಭರ್ಜರಿ ಬ್ಯಾಚುಲರ್ಸ್ ಶೋ ಮೂಲಕ ಜೀ ಕನ್ನಡಕ್ಕೂ ಅವರ ಆಗಮನವಾಯ್ತು. ಅಷ್ಟೇ ಅಲ್ಲ ಆ ಶೋನ ವಿಜೇತರಾಗಿಯೂ ಕಪ್ ಎತ್ತಿ ಹಿಡಿದರು. ಇದೀಗ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್‌ನಲ್ಲಿಯೂ ಜಗಪ್ಪ ಜಗಮಗ ಮಿಂಚುತ್ತಿದ್ದಾರೆ. ಈ ಹೊಗಳಿಕೆ ಹಿಂದೆ ಸಾಕಷ್ಟು ಅವಮಾನಗಳನ್ನೂ ಉಂಡಿದ್ದಾರೆ.
ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶುರುವಾಗಿದ್ದೇ ತಡ, ಜಗಪ್ಪನ ವರಸೆಯೇ ಬದಲಾಗಿದೆ. ಮಾಡಿದ ಪ್ರತಿ ಸ್ಕಿಟ್ ಸೂಪರ್ ಹಿಟ್ ಆಗುತ್ತಿದೆ. ನಟನೆ, ಕಾಮಿಡಿ ಟೈಮಿಂಗ್, ಮುತ್ತುಗಳಂತೆ ಉದುರಿಸುವ ಪಂಚ್‌ಗಳು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿವೆ. ತೀರ್ಪುಗಾರರಿಂದಲೂ ಅವರಿಗೆ ಬಹುಪರಾಕ್ ಸಿಗುತ್ತಿದೆ. ವೇದಿಕೆಗೆ ಜಗಪ್ಪ ಬರ್ತಿದ್ದಾರೆ ಎಂದರೆ, ಎಲ್ಲರೂ ನಗೋದಕ್ಕೆ ಅಣಿಯಾಗಿಯೇ ಕೂತಿರುತ್ತಾರೆ. ಭರ್ತಿ ಕಾಮಿಡಿಯನ್ನು ಹೊತ್ತು ಬರ್ತಾರೆ ಈ ನಟ. ಆದರೆ, ಇದೇ ಜಗಪ್ಪಗೆ ಇಂದು ಸಿಗುತ್ತಿರುವ ಸನ್ಮಾನಕ್ಕೂ ಮೊದಲು ಸಾಕಷ್ಟು ಅವಮಾನ ಎದುರಿಸಿದ್ದಾರೆ. ಅದನ್ನು ಅವಹೇಳಿಕೊಂಡು ಕಣ್ಣೀರಾಗಿದ್ದಾರೆ.
ಕ್ಯಾನ್ ಡ್ರೈವರ್ ಕಾಮಿಡಿ ಕಿಲಾಡಿಯಾದ..
ನಟನಾಗಿ ಗುರುತಿಸಿಕೊಳ್ಳುವುದಕ್ಕೂ ಮುನ್ನ ಜಗಪ್ಪ ಓರ್ವ ಕ್ಯಾಬ್ ಡ್ರೈವರ್. ಬೆಂಗಳೂರಿನಲ್ಲಿ ಹೊಟ್ಟೆ ಪಾಡಿಗಾಗಿ ಕಾರ್ ಓಡಿಸುತ್ತಿದ್ದವ. ನಟನೆ ಮೇಲೆ ಆಸಕ್ತಿ ಇತ್ತಾದರೂ, ಆರಂಭದಲ್ಲಿ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಅದಾದ ಬಳಿಕ ಮಜಾಭಾರತಕ್ಕೂ ಎಂಟ್ರಿ ಕೊಟ್ಟು, ಒಂದಷ್ಟು ಹೆಸರು ಮಾಡಿ ಗುರುತಿಸಿಕೊಂಡರು. ಇದೀಗ ಕಾಮಿಡಿ ಕಿಲಾಡಿಗಳು ಶೋ ಮೂಲಕ ಆ ಹೆಸರನ್ನು ದುಪ್ಪಟ್ಟುಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಹೊಸ ಕಾರ್ ಸಹ ಖರೀದಿ ಮಾಡಿದ್ದಾರೆ ಜಗಪ್ಪ.
ವೇದಿಕೆ ಮೇಲೆಯೇ ಜಗಪ್ಪ ಕಣ್ಣೀರು..
“ನನಗ್ಯಾಕೆ ಇಷ್ಟು ಹೊಗಳಿಕೆ ಸಿಗ್ತಾಯಿದೆ ಅಂತಾನೇ ನನಗೆ ಸತ್ಯವಾಗಲೂ ಗೊತ್ತಿಲ್ಲ ಅಣ್ಣ. ಒನ್ ಟೈಮ್‌ನಲ್ಲಿ ಇವನು ವರ್ಕೇ ಆಗಲ್ಲ ಅಂತ ಆಚೆ ಬಂದ ಕಲಾವಿದ ನಾನು. ಇಲ್ಲಿ ಬಂದು ವರ್ಕ್ ಆಗ್ತಿದೆ ಎಂದಾಗ, ಪ್ರತಿದಿನ ನನಗೇ ಆಶ್ಚರ್ಯ ಆಗ್ತಿದೆ. ಎಷ್ಟೋ ಕಡೆ ಶೋಗಳನ್ನು ಮಾಡಿದ್ದೀನಿ. ಸೀರಿಯಸ್ ಆಗಿ ಹೇಳ್ತಿದ್ದೀನಿ. ಅದೊಂದು ನೋವಿದೆ. ಎಷ್ಟೋ ವರ್ಷ ಜತೆಗೆ ಕೆಲಸ ಮಾಡಿ, ಇವ್ನು ವರ್ಕ್ ಆಗಲ್ಲ, ಮನೆಗೆ ಕಳಿಸಿಬಿಡಿ ಅಂದಾಗ, ಶರಣಯ್ಯ ಸರ್ ನನ್ನನ್ನು ಕರೆಸಿ ಭರ್ಜರಿ ಬ್ಯಾಚುಲರ್ಸ್‌ಗೆ ಅವಕಾಶ ಕೊಟ್ಟರು”
ಅವ್ನು ವರ್ಕ್ ಆಗಲ್ಲ ಕಳಿಸಿ ಅಂದಿದ್ರು..
“ಹಾಗೇ ಕೊಟ್ಟ ವೇದಿಕೆಯನ್ನು ಉಳಿಸಿಕೊಳ್ಳಬೇಕು ಅಂತ ಪ್ರತಿ ವಾರ ಭಯದಲ್ಲಿಯೇ ಇರ್ತೀನಿ. ಪ್ರತಿ ಸಲ ವೇದಿಕೆಗೆ ಹತ್ತೋವಾಗ ಒಂದು ಭಯ ಇದ್ದೇ ಇರುತ್ತೆ. ಕರೆದು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಇಲ್ಲಿಯೂ ವರ್ಕ್ ಆಗಲಿಲ್ಲ ಅಂದರೆ, ಮತ್ತೆಲ್ಲಿಗೆ ಹೋಗಲ್ಲಪ್ಪ ನಾನು? ಮತ್ತೆ ಡ್ರೈವಿಂಗ್ ಕೆಲಸ ಮಾಡಬೇಕಾ ನಾವು ಅಂತ ಅನಿಸಿದ್ದುಂಟು. ಆ ಭಯದಲ್ಲಿಯೇ ನಾನು ಪ್ರತಿ ಸಲ ಸ್ಟೇಜ್‌ಗೆ ಬರ್ತೀನಣ್ಣ. ನಾನೇನೂ ಸಾಚಾ ಅಂತ ಹೇಳಿಕೊಳ್ಳಲ್ಲ. ನಾವೂ ಅಲ್ಲಿ ಇಲ್ಲಿ ನೋಡಿನೇ ಒಂದಷ್ಟು ಸ್ಕಿಟ್ ರೆಡಿಮಾಡ್ತೀವಿ. ನವೀನ್ ಅವ್ರೇ ನನ್ನ ಗುರು. ನನ್ನ ಸುತ್ತಮುತ್ತ ಏನಿದೆ ಅದನ್ನ ನಾನು ಜಾಸ್ತಿ ಗಮನಿಸ್ತಿರುತ್ತೀನಿ. ಇಲ್ಲಿರುವ ಎಲ್ಲ ಕಲಾವಿದರನ್ನು ಅಬ್ಸರ್ವ್ ಮಾಡ್ತೀನಿ. ಅದಕ್ಕಾಗಿಯೇ ಅಷ್ಟೋ ಇಷ್ಟೋ ಆಕ್ಟಿಂಗ್ ಮಾಡ್ತೀನಿ ಎಂದಿದ್ದಾರೆ ಜಗಪ್ಪ”
ಅಕುಲ್ ಬಾಲಾಜಿ ಏನಂದ್ರು?
ಜಗಪ್ಪನ ಮಾತಿಗೆ ಪ್ರತಿಯಾಗಿ ಪ್ರತಿಕ್ರಿಯೆ ನೀಡಿದ ಜಡ್ಜ್ ಅಕುಲ್ ಬಾಲಾಜಿ, “ಮಗಾ ಒಂದು ಮಾತು ಹೇಳ್ತಿನಿ ಕೇಳು. ನಿನಗೆ ಹಸಿವು ಇರೋವರೆಗೂ ನಿನಗೆ ಗೆಲುವಿರುತ್ತೆ. ಯಾವಾಗ ಹೊಟ್ಟೆ ತುಂಬುತ್ತೋ ಅಲ್ಲಿಗೆ ಎಲ್ಲವೂ ಎಂಡ್ ಆಗುತ್ತೆ. ಆ ಹಸಿವನ್ನು ಇಟ್ಕೊಂಡು ಮುಂದೆ ಹೋಗು. ಒಳ್ಳೆಯದೇ ಆಗುತ್ತೆ. ಆಲ್ ದಿ ಬೆಸ್ಟ್” ಎಂದಿದ್ದಾರೆ.
ವಿಭಾಗ