Raayan Review: ಇವನು ರಾಯನ್ ಅಲ್ಲ ರಾವಣ, ಅಕ್ಷರಶಃ ನರರೂಪಿ ರಾಕ್ಷಸ!; ಹೇಗಿದೆ ಧನುಷ್ ನಟನೆಯ 50ನೇ ಸಿನಿಮಾ?
ಧನುಷ್ ನಟನೆಯ 50ನೇ ಸಿನಿಮಾ ಎಂಬ ವಿಶೇಷಣದ ಜತೆಗೆ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೂ ರಾಯನ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಆ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿಬಂದಿದೆ. ಕುಟುಂಬಕ್ಕಿಂತ ಹೆಚ್ಚಿನದೇನೂ ಇಲ್ಲ ಎಂಬ ಸಂದೇಶವನ್ನೂ ಈ ಸಿನಿಮಾ ಮೂಲಕ ದಾಟಿಸಿದ್ದಾರವರು.
Dhanush 50th Movie Raayan Review: ಕಾಲಿವುಡ್‌ನಲ್ಲಿ ನಟ ಧನುಷ್ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ತಮ್ಮದೇ ಆದ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಈ ನಟ. ನಟನೆ ಮಾತ್ರವಲ್ಲದೆ, ನಿರ್ದೇಶನದಲ್ಲಿಯೂ ಅಕಾಡಕ್ಕಿಳಿದಿದ್ದಾರೆ. ಇದೀಗ 50ನೇ ಸಿನಿಮಾ ಎಂಬ ವಿಶೇಷಣದ ಜತೆಗೆ ತೆರೆಕಂಡಿದೆ ಅವರ ರಾಯನ್ ಸಿನಿಮಾ. ಈ ಚಿತ್ರಕ್ಕೆ ಸ್ವತಃ ಧನುಷ್ ಆಕ್ಷನ್ ಕಟ್ ಹೇಳಿದ್ದಾರೆ. ಇಂದು (ಜುಲೈ 26) ಈ ಸಿನಿಮಾ ತೆರೆಕಂಡಿದೆ.
ಈ ಸಿನಿಮಾದಲ್ಲಿ ನಟರಾದ ಎಸ್.ಜೆ. ಸೂರ್ಯ, ಪ್ರಕಾಶ್ ರಾಜ್, ವರಲಕ್ಷ್ಮಿ ಶರತ್ ಕುಮಾರ್, ಸೆಲ್ವ ರಾಘವನ್, ಅಪರ್ಣಾ ಬಾಲಮುರಳಿ, ದುಶಾರ ವಿಜಯನ್ ಮುಂತಾದವರು ನಟಿಸಿದ್ದಾರೆ. ರಿವೇಂಜ್ ಥ್ರಿಲ್ಲರ್ ಸಿನಿಮಾದಲ್ಲಿ, ಧನುಷ್ ಪಾತ್ರವೂ ಅಷ್ಟೇ ಖಡಕ್ಕಾಗಿದೆ. ಚಿತ್ರ ನೋಡಿದವರಿಂದಲೂ ಬಹುಪರಾಕ್ ಸಿಗುತ್ತಿದೆ. ಹಾಗಾದರೆ, ಏನಿದು ಸಿನಿಮಾ? ರಾಯನ್ ಮೂಲಕ ಧನುಷ್ ಯಾವ ಅವತಾರ ಎತ್ತಿದ್ದಾರೆ? ನೋಡೋಣ ಬನ್ನಿ.
ಸೇಡಿನ ಕಥೆ
ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿರುವ ಧನುಷ್ ತನ್ನ ತಮ್ಮಂದಿರು ಮತ್ತು ತಂಗಿಯ ಜತೆಗೆ ಚೆನ್ನೈನಲ್ಲಿ ಸಣ್ಣ ಹೊಟೇಲ್ ನಡೆಸುತ್ತ ಜೀವನ ಸಾಗಿಸುತ್ತಿರುವಾತ. ಕೆಲವು ಅನಾಹುತಗಳಿಂದ ಧನುಷ್ ಕುಟುಂಬದ ಮೇಲೆ ಶತ್ರುಗಳ ಕಣ್ಣು ಬೀಳುತ್ತದೆ. ಸುಂದರ ಕುಟುಂಬಕ್ಕೆ ಕುತ್ತು ಬಂದೊದಗುತ್ತದೆ. ಅಲ್ಲಿಂದ ರಾಯನ್ ಹೇಗೆ ಗ್ಯಾಂಗ್‌ಸ್ಟರ್ ರೂಪ ಪಡೆದುಕೊಂಡು ಅವರೆಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ? ಹೇಗೆ ರಕ್ತದೋಕುಳಿಯನ್ನೇ ಹರಿಸುತ್ತಾನೆ ಎಂಬುದೇ ಈ ಸಿನಿಮಾದ ಒಂದೆಳೆ.
ಹೊಡಿ ಬಡಿ ಆಟ..
ಇಲ್ಲಿ ರೌಡಿ ಮಾಫಿಯಾದ ಜತೆಗಿನ ಸೆಣಸಾಟದ ಜತೆಗೆ ಸಂಬಂಧದ ಸುತ್ತ ಭಾವುಕ ಕೊಂಡಿಯೂ ಸುತ್ತಿಕೊಂಡಿದೆ. ಕಥಾನಾಯಕನನ್ನು ಮುಗಿಸಲು, ಸುತ್ತಲಿನ ಹತ್ತಾರು ಮಂದಿ ಆತನೆದುರು ತೊಡೆತಟ್ಟಿ ನಿಲ್ಲುತ್ತಾರೆ. ಈ ಹೊಡಿ ಬಡಿ ಆಟದಲ್ಲಿ ರಕ್ತದ ಕೋಡಿಯೇ ಹರಿಯುತ್ತದೆ. ಹೀಗೆ ಒಂದಷ್ಟು ರೋಚಕವಾಗಿಯೇ ಕಥೆಯನ್ನು ನೋಡುಗರ ಎದೆಗಿಳಿಸುವ ಕಾಯಕವನ್ನು ನಿರ್ದೇಶಕರೂ ಆಗಿರುವ ನಟ ಧನುಷ್ ಮಾಡಿದ್ದಾರೆ.
ಯಾರ ನಟನೆ ಹೇಗಿದೆ?
ಔಟ್‌ಡೇಟೆಡ್ ಕಥೆಯಾದರೂ, ಅದನ್ನು ನೋಡುಗರಿಗೆ ತಲುಪಿಸುವಲ್ಲಿ ನಟ ಮತ್ತು ನಿರ್ದೇಶಕ ಧನುಷ್ ಯಶಸ್ವಿಯಾಗಿದ್ದಾರೆ. ಕಥೆಯ ಆಯ್ಕೆ, ಪಾತ್ರವರ್ಗವನ್ನು ದುಡಿಸಿಕೊಂಡಿರುವ ರೀತಿ, ತಮ್ಮ ನಟನೆಯಲ್ಲಿಯೂ ರಾಕ್ಷಸನಂತೆ ಧನುಷ್ ಬೆದರಿಸಿದ್ದಾರೆ. ರಾಯನ ತಮ್ಮಂದಿರಾಗಿ ಸಂದೀಪ್ ಕಿಶನ್, ಕಾಳಿದಾಸ್ ಮತ್ತು ತಂಗಿ ದುಷಾರಾ ವಿಜಯನ್ ಸಿಕ್ಕ ಪಾತ್ರದಲ್ಲಿ ಜೀವಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಪ್ರಕಾಶ್ ರಾಜ್ ಅವರಿಂದ ಎಂದಿನಂತೆ ನೈಜ ಅಭಿನಯ ಸಂದಾಯವಾಗಿದೆ. ವಿಲನ್ ಆಗಿ ಎಸ್. ಜೆ. ಸೂರ್ಯ ನೋಡುಗರ ಹೃದಯ ಬಡಿತವನ್ನೇ ನಿಲ್ಲಿಸುವಷ್ಟು ಹೆದರಿಸುತ್ತಾರೆ.
ಸಂಗೀತವೇ ಚಿತ್ರದ ಎರಡನೇ ಹೀರೋ..
ಎ ಆರ್ ರೆಹಮಾನ್ ಅವರ ಸಂಗೀತ ಈ ಸಿನಿಮಾದ ಪ್ಲಸ್ ಪಾಯಿಂಟ್. ರಾಯನ್ ಮೊದಲ ಹೀರೋ ಆದರೆ, ಸಂಗೀತ ಈ ಚಿತ್ರದ ಎರಡನೇ ನಾಯಕ! ಸಂಗೀತದಿಂದಲೇ ಗುಂಗು ಹಿಡಿಸಿರುವ ರೆಹಮಾನ್, ಮತ್ತೆ ಹಳೇ ಲಯಕ್ಕೆ ಮರಳಿದ್ದಾರೆ. ಸಿನಿಮಾಟೋಗ್ರಾಫರ್ ಓಂ ಪ್ರಕಾಶ್ ತಮ್ಮ ಬೆಳಕಿನಿಂದ ಕಥೆಗೆ ಜೀವ ತುಂಬಿದ ರೀತಿ ಅದ್ಭುತ. ರಾಯನ್ ಸಿನಿಮಾ ಮೊದಲಾರ್ಧ ನೋಡುಗರಿಗೆ ಹುಚ್ಚು ಹಿಡಿಸಿದರೆ, ದ್ವಿತೀಯಾರ್ಧವು ಸೀಟಿನ ತುದಿಗೆ ತಂದು ಕೂರಿಸುತ್ತದೆ.
ಚಿತ್ರ: ರಾಯನ್
ನಿರ್ಮಾಣ: ಸನ್ ಪಿಕ್ಚರ್ಸ್
ನಿರ್ದೇಶನ: ಧನುಷ್
ತಾರಾಗಣ: ಧನುಷ್, ಎಸ್‌ಜೆ ಸೂರ್ಯ, ಪ್ರಕಾಶ್ ರಾಜ್, ಸೆಲ್ವರಾಘವನ್, ಸಂದೀಪ್ ಕಿಶನ್, ಕಾಳಿದಾಸ್ ಜಯರಾಮ್, ದುಶಾರ ವಿಜಯನ್, ಅಪರ್ಣಾ ಬಾಲಮುರಳಿ, ವರಲಕ್ಷ್ಮಿ ಶರತ್‌ಕುಮಾರ್, ಸರವಣನ್
ರೇಟಿಂಗ್: 3.5\5
ವಿಮರ್ಶೆ: ಮಂಜು ಕೊಟಗುಣಸಿ