ಹುಲಿ ಉಗುರು ಧರಿಸಿದ ಜಗ್ಗೇಶ್, ದರ್ಶನ್ ವಿರುದ್ಧ ದೂರು ಬಂದಿವೆ, ನೋಟಿಸ್ ಕಳಿಸಲಿದ್ದೇವೆ; ವನ್ಯಜೀವಿ ಅರಣ್ಯಾಧಿಕಾರಿ ರವೀಂದ್ರಕುಮಾರ್
Tiger Claws Row: ಹುಲಿ ಉಗುರು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಜಗ್ಗೇಶ್ ಹಾಗೂ ದರ್ಶನ್ ವಿರುದ್ಧ ದೂರು ಬಂದಿವೆ ಎಂದು ವನ್ಯಜೀವಿ ಅರಣ್ಯಾಧಿಕಾರಿ ರವೀಂದ್ರಕುಮಾರ್ ತಿಳಿಸಿದ್ದು, ಶೀಘ್ರದಲ್ಲಿ ನೋಟೀಸ್ ಸಹ ರವಾನೆಯಾಗಲಿದೆ.
Tiger Clow Row: ಹುಲಿ ಉಗುರು ಧರಿಸಿದ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ವನ್ಯಜೀವಿ ಸಂರಕ್ಷಣೆ ಕಾಯ್ದೆ ಹಿನ್ನೆಲೆಯಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇತ್ತ ಇದೇ ಹುಲಿ ಉಗುರಿನ ಮತ್ತಷ್ಟು ಮಗದಷ್ಟು ಪ್ರಕರಣಗಳು ಅರಣ್ಯ ಇಲಾಖೆಯ ಮೆಟ್ಟಿಲು ಏರುತ್ತಿವೆ. ಆ ಪೈಕಿ ಇದೀಗ ಪ್ರಭಾವಿಗಳ, ಸ್ಟಾರ್ ಸಿನಿಮಾ ಕಲಾವಿದರ ಕೊರಳಿಗೂ ಹುಲಿ ಉಗುರು ಉರುಳಾಗಿ ಸುತ್ತಿಕೊಳ್ಳುತ್ತಿದೆ.
ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಕನ್ನಡ ಸಿನಿಮಾ ಕಲಾವಿದರ ಹೆಸರೂ ಇದರಲ್ಲಿ ತಳುಕು ಹಾಕಿಕೊಂಡಿದೆ. ಕೇವಲ ಸಂತೋಷ್ ಮಾತ್ರವೇ ಹುಲಿ ಉಗುರು ಧರಿಸಿಲ್ಲ, ದರ್ಶನ್, ಜಗ್ಗೇಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿ ಇನ್ನೂ ಹಲವರೂ ಹುಲಿ ಉಗುರಿನ ಪೆಂಡೆಂಟ್ ಧರಿಸಿ ಫೋಟೋಗಳಿಗೆ ಪೋಸ್ ನೀಡಿದ ಚಿತ್ರಗಳು ವೈರಲ್ ಆಗುತ್ತಿವೆ. ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತ ಪೋಟೋಗಳೂ ಹರಿದಾಡುತ್ತಿವೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂಬ ಒತ್ತಾಯ ಹೆಚ್ಚಾಗಿದೆ.
ಜಗ್ಗೇಶ್ ವಿರುದ್ಧ MLC ಪಿ.ಆರ್ ರಮೇಶ್ ದೂರು
ಸ್ಯಾಂಡಲ್‌ವುಡ್ ನಟ, ನವರಸ ನಾಯಕ ಬಿಜೆಪಿಯ ರಾಜ್ಯಸಭಾ ಸದಸ್ಯ ಜಗ್ಗೇಶ್ ಸಹ ತಮ್ಮ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡಿದ್ದಾರೆ. ಹಾಗೇ ಧರಿಸಿದ ಅವರ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ನಾನು ಧರಿಸಿದ್ದು ಹುಲಿಯ ಉಗುರೇ ಎಂದು ಈ ಹಿಂದೆಯೂ ಜಗ್ಗೇಶ್ ಹೇಳಿಕೊಂಡಿದ್ದಾರೆ. ಅದರ ವಿಡಿಯೋ ಸಹ ಅರಣ್ಯಾಧಿಕಾರಿಗಳ ಖಯ ತಲುಪಿದೆ. ಇತ್ತ ಇದೇ ಹುಲಿ ಉಗುರಿನ ಬಗ್ಗೆ ಜಗ್ಗೇಶ್ ವಿರುದ್ಧ MLC ಪಿ.ಆರ್ ರಮೇಶ್ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳು ಸಾಧ್ಯತೆಯಿದೆ.
ಜಗ್ಗೇಶ್ ಪ್ರಕರಣ ಪರಿಗಣನೆಗೆ
ಈಗಾಗಲೇ ಜಗ್ಗೇಶ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಆ ಪ್ರಕರಣವನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ. ನಟ ದರ್ಶನ್ ವಿರುದ್ಧವೂ ಈಗಾಗಲೇ ದೂರು ಬಂದಿದೆ. ಅವರ ವಿರುದ್ಧವೂ ನಾವು ಕ್ರಮಕ್ಕೆ ಮುಂದಾಗುವ ಅವಕಾಶವಿದೆ. ಅವರು ಧರಿಸಿದ ಉಗುರಿನ ಬಗ್ಗೆ ಮೊದಲು ಅದರ ನೈಜತೆ ಖಚಿತಪಡಿಸಿಕೊಳ್ಳಬೇಕಿದೆ. ಇದೀಗ ಹಬ್ಬದ ನಿಮಿತ್ತ ಎರಡು ದಿನ ರಜೆ ಇದ್ದ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಅದು ಚುರುಕು ಪಡೆದುಕೊಳ್ಳಲಿದೆ ಎಂದು ವನ್ಯಜೀವಿ ಅರಣಾಧಿಕಾರಿ ರವೀಂದ್ರಕುಮಾರ್ ಟಿವಿ9ಗೆ ತಿಳಿಸಿದ್ದಾರೆ.
ಪ್ರಭಾವಿಗಳನ್ನೂ ಬಿಡಲ್ಲ..
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಹ ಪ್ರತಿಕ್ರಿಯೆ ನೀಡಿದ್ದಾರೆ. ಜಿಂಕೆ ಚರ್ಮ, ಆನೆ ದಂತ, ಯಾವುದೇ ಪ್ರಾಣಿಗಳ ಉತ್ಪನ್ನಗಳನ್ನು ಬಳಸುವಂತಿಲ್ಲ, ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಷ್ಟೇ ಪ್ರಭಾವಿಗಳಾದ್ರೂ, ಶಿಕ್ಷೆ ಸಮಾನ. ಯಾರು ತಪ್ಪು ಮಾಡಿದ್ದಾರೆ, ಕಾಯ್ದೆ ಮೀರಿದ್ದಾರೆ ಅವರಿಗೆ ಶಿಕ್ಷೆ ಆಗಲಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು 2022ರಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದೂ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.