Yuva Success Meet: ‘ಯುವ’ ಚಿತ್ರದ ಗೆಲುವಿನ ಖುಷಿಯಲ್ಲಿ ಮಿಂದೆದ್ದ ಯುವ ರಾಜ್‌ಕುಮಾರ್; ಹೊಂಬಾಳೆ ಫಿಲಂಸ್‌ಗೆ ಮತ್ತೊಂದು ಗೆಲುವು
ಇತ್ತೀಚೆಗಷ್ಟೇ ಬಿಡುಗಡೆಯಾದ ಯುವ ಸಿನಿಮಾ ಮೂರನೇ ವಾರಕ್ಕೆ ಕಾಲಿರಿಸಿದೆ. ಇದೇ ಖುಷಿಯಲ್ಲಿ ಚಿತ್ರದ ಸಕ್ಸಸ್ ಮೀಟ್ ಮಾಡಿ ಸಂಭ್ರಮಿಸಿದೆ.
Yuva Success Meet: ಸ್ಯಾಂಡಲ್‌ವುಡ್ ಚಿತ್ರರಂಗದಲ್ಲೀಗ ಸಾಕಷ್ಟು ಬದಲಾವಣೆಗಳಾಗಿವೆ. ಬರೀ ಕನ್ನಡಕ್ಕಷ್ಟೇ ಅಲ್ಲ ಪರಭಾಷೆಯ ಸಿನಿಮಾಗಳಿಗೂ ಇಲ್ಲಿನ ಚಿತ್ರಗಳು ಟಕ್ಕರ್ ಕೊಡುತ್ತಿವೆ. ಅದರಲ್ಲೂ ಕೆಜಿಎಫ್ ಸಿನಿಮಾ ಬಳಿಕ ಕನ್ನಡ ಸಿನಿಮಾ ವಿಶ್ವ ಮಟ್ಟಕ್ಕೂ ತಲುಪಿತು. ಬರೀ ಕೆಜಿಎಫ್ ಮಾತ್ರವಲ್ಲ, ಅದಕ್ಕೂ ಮೊದಲು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ರಾಜಕುಮಾರ್ ಮತ್ತು ಇತ್ತೀಚಿನ ಕಾಂತಾರ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದು ಹೊಂಬಾಳೆ ಫಿಲಂಸ್. ಈಗ ಇದೇ ಬ್ಯಾನರ್‌ನಲ್ಲಿ ಮೂಡಿಬಂದ ಯುವ ಸಿನಿಮಾ ಸಹ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ.
ಸಂತೋಷ್ ಆನಂದ್‌ರಾಮ್ ನಿರ್ದೇಶನದಲ್ಲಿ ಮೂಡಿಬಂದ ಯುವ ಸಿನಿಮಾದಲ್ಲಿ ಯುವ ರಾಜ್‌ಕುಮಾರ್ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಮೊದಲ ಚಿತ್ರದಲ್ಲಿಯೇ ಗೆಲುವಿನ ನಗೆ ಬೀರಿದ್ದಾರೆ ಯುವ. ಈ ಸಿನಿಮಾ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲೆಂದೇ ಇಡೀ ತಂಡ ಒಂದೆಡೆ ಸೇರಿತ್ತು. ಚಿತ್ರತಂಡದ ಬಹುತೇಕರು ಯುವ ಸಕ್ಸಸ್ ಬಗ್ಗೆ ಮಾತನಾಡಿದರು.
ಮೂರನೇ ವಾರಕ್ಕೆ ಯುವ ದಾಪುಗಾಲು
ನಿರ್ದೇಶಕ ಸಂತೋಷ್ ಆನಂದ್ ರಾಮ್ ಮಾತನಾಡಿ, ರಾಜ್ಯದ ಜನತೆ ಯುವ ಚಿತ್ರವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಚಿತ್ರ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈಗಲೂ ಜನ ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ. ಕನ್ನಡ ಕಲಾರಸಿಕರಿಗೆ, ಮಾಧ್ಯಮದವರಿಗೆ, ಹೊಂಬಾಳೆ ಫಿಲಂಸ್ ಸಂಸ್ಥೆಗೆ ಹಾಗೂ ನನ್ನ ಇಡೀ ಚಿತ್ರತಂಡಕ್ಕೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಸಂತೋಷ್ ಆನಂದರಾಮ್.
ಮೊದಲ ಸಿನಿಮಾ, ತಪ್ಪಾಗಿದ್ದರೆ ಕ್ಷಮಿಸಿ..
ಪ್ರೇಕ್ಷಕರು ನನ್ನ ಮೊದಲು ಸಿನಿಮಾಕ್ಕೆ ತೋರಿಸಿದ ಪ್ರೀತಿಗೆ, ನನಗೆ ಮಾತೇ ಬರುತ್ತಿಲ್ಲ. ಮೊದಲಿಗೆ ಈ ಅವಕಾಶ ನೀಡಿದ ಹೊಂಬಾಳೆ ಫಿಲಂಸ್‌ಗೆ ಹಾಗೂ ವಿಜಯ್ ಕಿರಂಗಂದೂರು ಅವರಿಗೆ ನನ್ನ ಧನ್ಯವಾದಗಳು. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೇ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಸಹ ಕಲಾವಿದರ ಹಾಗೂ ತಂತ್ರಜ್ಞರ ಪ್ರೋತ್ಸಾಹವನ್ನು ಈ ಸಮಯದಲ್ಲಿ ನೆನೆಯುತ್ತೇನೆ. ಮೊದಲ ಚಿತ್ರದಲ್ಲಿ ನನ್ನಿಂದೇನಾದರೂ ಸಣ್ಣಪುಟ್ಟ ತಪ್ಪಾಗಿದ್ದರೆ ಮುಂದಿನ ಚಿತ್ರಗಳಲ್ಲಿ ಸರಿ ಪಡಿಸಿಕೊಳ್ಳುತ್ತೇನೆ. ಜನ ಫ್ಯಾಮಿಲಿ ಸಮೇತ ಬಂದು ಚಿತ್ರವನ್ನು ನೋಡುತ್ತಿರುವುದು ಬಹಳ ಖುಷಿಯಾಗಿದೆ. ಈ ಮೂಲಕ ರಾಜ್ಯದ ಜನತೆಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ ಎಂದರು ನಾಯಕ ಯುವ ರಾಜ್‌ಕುಮಾರ್.
ಹರಸಿ ಹಾರೈಸಿ ಎಂದ ರಾಘಣ್ಣ
ನನ್ನ ಮಗನ ಮೊದಲ ಚಿತ್ರವನ್ನು ನಿರ್ಮಾಣ ಮಾಡಿದ ಹೊಂಬಾಳೆ ಸಂಸ್ಥೆಗೆ ಮೊದಲು ಧನ್ಯವಾದ ಹೇಳುತ್ತೇನೆ. ಯುವನಿಗೆ ಒಂದೇ ರೀತಿಯ ಪಾತ್ರ ಅಥವಾ ಬ್ರಾಂಡ್‌ಗೆ ಸೀಮಿತ ಮಾಡದೇ ಅವನಲ್ಲಿನ ನಟನೆಯನ್ನು ಸಂತೋಷ್ ಆನಂದ್ ರಾಮ್ ಹೊರತೆಗೆಸಿದ್ದಾರೆ. ಮಗನ ಸಿನಿಮಾದ ಪಯಣ ಈಗಷ್ಟೇ ಶುರುವಾಗಿದೆ. ಇನ್ನೂ ಬೇರೆ ಬೇರೆ ಪಾತ್ರಗಳ ಮೂಲಕ ಆಗಮಿಸಿ ನೋಡುಗರಿಂದ ಮೆಚ್ಚುಗೆ ಪಡೆಯಬೇಕು ಎಂದರು ರಾಘವೇಂದ್ರ ರಾಜ್‌ಕುಮಾರ್.
ಒಳ್ಳೆಯ ಪಾತ್ರ ನೀಡಿದ್ದಕ್ಕೆ ನಾಯಕಿ ಸಪ್ತಮಿ ಗೌಡ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ ಹೇಳಿದರು. ಚಿತ್ರದಲ್ಲಿ ಅಭಿನಯಿಸಿರುವ ಅಚ್ಯುತಕುಮಾರ್, ಸುಧಾರಾಣಿ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ರಾಘು ಶಿವಮೊಗ್ಗ ಹಾಗೂ ಛಾಯಾಗ್ರಾಹಕ ಶ್ರೀಶ ಕುದುವಳ್ಳಿ "ಯುವ" ಚಿತ್ರದ ಗೆಲುವನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು