ಸಾವು ಕೈ ಬೀಸಿ ಕರಿಯುತ್ತಿತ್ತು, ಆಗ ಆ ದೇವರು ಕೈ ಹಿಡಿದ; ಮತಾಂತರದಿಂದ ಬದುಕೇ ಬದಲಾಯ್ತೆಂದ ಶ್ರೀರಾಮಚಂದ್ರ ನಟಿ ಮೋಹಿನಿ
ಕನ್ನಡ ಸೇರಿ ಸೌತ್ನ ಎಲ್ಲ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಮೋಹಿನಿ, ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು, ಸದ್ಯ ಕ್ರಿಶ್ಚಿಯನ್ ಧರ್ಮ ಪ್ರಚಾರಕರಾಗಿದ್ದಾರೆ. ಈ ನಡುವೆ ಈ ಧರ್ಮಕ್ಕೆ ಸೇರಲು ಕಾರಣ ಏನೆಂಬುದನ್ನು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರವರು.
Mohini Actress: ಸ್ಯಾಂಡಲ್ವುಡ್ನಲ್ಲಿ 1992ರಲ್ಲಿ ರಾಘವೇಂದ್ರ ರಾಜ್ಕುಮಾರ್ ನಟನೆಯ ಕಲ್ಯಾಣ ಮಂಟಪ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದವರು ನಟಿ ಮೋಹಿನಿ ಶ್ರೀನಿವಾಸನ್ (ಮಹಾಲಕ್ಷ್ಮೀ ಶ್ರೀನಿವಾಸನ್). ಆ ಸಿನಿಮಾ ಬಳಿಕ ಅದೇ ವರ್ಷ ತೆರೆಗೆ ಬಂದ ಕ್ರೇಜಿಸ್ಟಾರ್ ರವಿಚಂದ್ರನ್ ಜತೆಗೆ ಶ್ರೀರಾಮಚಂದ್ರ ಚಿತ್ರದಲ್ಲೂ ನಟಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಮೂಲತಃ ತಮಿಳಿನವರಾದರೂ, ಅಪ್ಪಟ ಕನ್ನಡ ನೆಲದ ಹುಡುಗಿಯಂತೆಯೇ ಕಾಣಿಸಿದ್ದರು ಮೋಹಿನಿ.
ಕನ್ನಡದಲ್ಲಿ ಜ್ವಾಲಾ, ಸಿಡಿದೆದ್ದ ಪಾಂಡವರು, ಗಡಿಬಿಡಿ ಅಳಿಯ, ರೌಡಿ, ಲಾಲಿ, ನಿಶ್ಯಬ್ಧ ಸಿನಿಮಾಗಳಲ್ಲೂ ನಟಿಸಿದ ಮೋಹಿನಿ, ಒಳ್ಳೆಯ ಹೆಸರನ್ನು ಸಂಪಾದಿಸಿದರು. ದಕ್ಷಿಣ ಭಾರತದ ಇನ್ನುಳಿದ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿಯೂ ಮೋಹಿನಿ ಸಕ್ರಿಯರಾಗಿ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದರು. ಹೀಗಿರುವಾಗ 2006ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು ಮೋಹಿನಿ. ಅದಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರೂ, 2011ರಲ್ಲಿ ಮಲಯಾಳಂನಲ್ಲಿ ಬಂದ ಕಲೆಕ್ಟರ್ ಚಿತ್ರವೇ ಕೊನೇ. ಅದಾದ ಮೇಲೆ ಮೋಹಿನಿ ಸಿನಿಮಾರಂಗದ ಕಡೆಗೆ ಹೊರಳಲೇ ಇಲ್ಲ. ಬಣ್ಣದ ಲೋಕದಿಂದಲೇ ದೂರ ಉಳಿದರು.
ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಮೋಹಿನಿ ಅವರ ಆವತ್ತಿನ ನಿರ್ಧಾರ ಆವರ ಆಪ್ತ ಬಳಗಕ್ಕೆ ಶಾಕ್ ನೀಡಿತ್ತು. ಈ ನಿರ್ಧಾರದ ಹಿಂದಿನ ಅಸಲಿಯತ್ತನ್ನು ತಮಿಳಿನ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಮೋಹಿನಿ ಕ್ರಿಸ್ಟೀನಾ. ಮತಾಂತರವಾಗದಿದ್ದರೆ, ನಾನು ಬದುಕುತ್ತಲಿರಲಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುತ್ತಿದ್ದೆ ಎಂದು ಒಂದಷ್ಟು ಶಾಕಿಂಗ್ ವಿಚಾರಗಳನ್ನು ಹೇಳಿಕೊಂಡಿದ್ದಾರೆ.
ಖಿನ್ನತೆಗೆ ಜಾರಿದ್ದೆ..
“ಕೆಲವೊಮ್ಮೆ ನಾನೇಕೆ ಬದುಕಬೇಕು? ಈ ಜೀವನ ಏಕೆ ಬೇಕು ಎಂಬ ಆಲೋಚನೆ ಬಂದಿತ್ತು. ಇದಾದ ನಂತರ ಖಿನ್ನತೆಗೆ ಒಳಗಾದೆ. ಕೆಟ್ಟ, ಕೆಟ್ಟ ಕನಸುಗಳನ್ನು ಕಾಣಲಾರಂಭಿಸಿದೆ. ನಿದ್ದೆಯೂ ಹಾಳಾಗುತ್ತ ಹೋಯಿತು. ಆರೋಗ್ಯದಲ್ಲೂ ಕೊಂಚ ಏರಿಳಿತ ಕಾಣುತ್ತ ಬಂತು. ಮನಸ್ಸು ಮೊದಲಿನಂತಿರಲಿಲ್ಲ. ವೈದ್ಯರ ಬಳಿ ಹೋದಾಗ, ಎಲ್ಲವೂ ಸರಿಯಾಗಿಯೇ ಇದೆ ಎಂಬ ಉತ್ತರ ನೀಡಿದರು. ಆದರೆ ನನಗೆ ಮಾತ್ರ ಸಮಾಧಾನ ಆಗುತ್ತಿರಲಿಲ್ಲ"
ಯೇಸು ಕ್ರಿಸ್ತ ಕನಸಲ್ಲಿ ಬಂದ
"ನನಗೆ ಏನಾಗ್ತಿದೆ ಎಂಬುದನ್ನು ಅರಿಯುವ ಸಲುವಾಗಿಯೇ ನಾನು ಒಬ್ಬ ಶಿವಾಚಾರ್ಯರನ್ನು ಭೇಟಿಯಾದೆ. ಬದುಕಿನಲ್ಲಿನ ಏರಿಳಿಗಳ ಬಗ್ಗೆ ಅವರೊಂದಿಗೆ ಮಾತನಾಡಿದೆ. ಈ ಜಗತ್ತಿನಲ್ಲಿ ಒಳ್ಳೆಯದು ಇದೆ ಎಂದಾದರೆ, ಕೆಟ್ಟದ್ದೂ ಇರಲೇಬೇಕು ಎಂದರು. ನಾನು ಅದರ ಹಿಂದೆ ಒಂದಷ್ಟು ಶೋಧನೆ ಆರಂಭಿಸಿದೆ. ಜ್ಯೋತಿಷ್ಯ, ಜಾತಕ, ಕಾಲ, ಕರ್ಮ ಎಲ್ಲವನ್ನೂ ಮೀರಿದ ದೇವರು ಯಾರು ಎಂದು ಹುಡುಕತೊಡಗಿದೆ. ಆಗ ಯೇಸು ಕ್ರಿಸ್ತನು ನನ್ನ ಕನಸಿನಲ್ಲಿ ಬಂದನು"
ಹಲವು ಸಲ ಆತ್ಮಹತ್ಯೆಗೆ ಯತ್ನ
“ಜೀಸಸ್ ಕ್ರೈಸ್ಟ್ ನನ್ನ ಕನಸಿನಲ್ಲಿ ಬಂದಾಗ, ನಾನು ಸ್ವಾತಂತ್ರ್ಯ ಪಡೆಯಲು ಪ್ರಾರಂಭಿಸಿದೆ. ಕೆಟ್ಟ ಕನಸುಗಳು ನಿಧಾನಕ್ಕೆ ಕಡಿಮೆಯಾದವು. ನನ್ನ ಆರೋಗ್ಯ ಸುಧಾರಿಸಲು ಪ್ರಾರಂಭಿಸಿತು. ಆತ್ಮಹತ್ಯೆ ಆಲೋಚನೆ ನಿಂತಿತು. ಮನಸ್ಸು ನಿರಾಳವಾಗತೊಡಗಿತು. ಸಮಾಧಾನವಾಗತೊಡಗಿತು. ಯೇಸು ಕ್ರಿಸ್ತನೇ ನನ್ನನ್ನು ಅನೇಕ ಬಾರಿ ರಕ್ಷಿಸಿದ್ದಾನೆ”
"ಕೆಟ್ಟ ವಿಚಾರ ತಲೆಗೆ ಬಂದಾಗ, ನನ್ನ ಆತ್ಮಹತ್ಯಾ ಆಲೋಚನೆಗಳು ಮೇಲುಗೈ ಸಾಧಿಸಿದ ಉದಾಹರಣೆಗಳಿವೆ. ಒಮ್ಮೆ ನನ್ನ ಕೈಯನ್ನೇ ನಾನು ಚಾಕುವಿನಿಂದ ಕುಯ್ದುಕೊಂಡಿದ್ದೆ. ಅದೇ ರೀತಿ ಇನ್ನೊಂದು ಸಲ ಕೋಕ ಕೋಲಾಗೆ ಇಲಿ ವಿಷ ಬೆರೆಸಿ ಕುಡಿದಿದ್ದೆ. ದೇಹಕ್ಕೆ ಏನಾದ್ರೂ ಆಗುತ್ತೆ ಅಂತ ನಾನೂ ಕಾಯ್ತಾ ಇದ್ದೆ. ಆದರೆ ನನಗೆ ಏನೂ ಆಗಲಿಲ್ಲ. ಇನ್ನೊಂದು ಬಾರಿ ಸುಮಾರು 136 ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡೆದ್ದೆ" ಎಂದೂ ಹೇಳಿಕೊಂಡಿದ್ದಾರೆ ಮೋಹಿನಿ.