Vaishnavi Tattoo: ರೈಸಿಂಗ್ ವುಮೆನ್...ಹೊಸ ಟ್ಯಾಟೂ ಜೊತೆ, ಹೊಸ ಹುರುಪಿನಿಂದ ಮತ್ತೆ ಕೆಲಸಕ್ಕೆ ಮರಳಿದ ವೈಷ್ಣವಿ
''ನನ್ನ ಮೊದಲ ಟ್ಯಾಟೂ, ರೈಸಿಂಗ್ ವುಮೆನ್ ಚಿಹ್ನೆಯ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಈ ಚಿಹ್ನೆಯು ದೈವಿಕ ಸ್ತ್ರೀ ಶಕ್ತಿಯನ್ನು(ಚಂದ್ರ) ಪ್ರತಿನಿಧಿಸುತ್ತದೆ ದೈವಿಕ ಪುಲ್ಲಿಂಗ (ಸೂರ್ಯ) ಶಕ್ತಿಯೊಂದಿಗೆ ವಿಲೀನಗೊಂಡು ಆತ್ಮದೊಂದಿಗೆ ದೈವಿಕ ವಿಲೀನವನ್ನು ಸೃಷ್ಟಿಸುತ್ತದೆ. ಮೈ ಕೊಡವಿ ಏಳಲು ಹಾಗೂ ಎಲ್ಲವನ್ನೂ ಮರೆತು ಮುನ್ನುಗ್ಗಲು ಇದು ದಾರಿಯಾಗಿದೆ'' ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.
ಕಿರುತೆರೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥದ ಸುದ್ದಿ ಇತ್ತೀಚೆಗೆ ಬಹಳ ಸದ್ದು ಮಾಡಿತ್ತು. ಸದ್ದಿಲ್ಲದೆ ವೈಷ್ಣವಿ, ಎಂಗೇಜ್‌ಮೆಂಟ್ ನಡೆದಿದ್ದು ಕೆಲವೇ ದಿನಗಳಲ್ಲಿ ಅವರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಇದು ಎಂಗೇಜ್‌ಮೆಂಟ್ ಅಲ್ಲ ಎಂದು ವೈಷ್ಣವಿ ಸ್ಪಷ್ಟಪಡಿಸಿದ್ದರು. ಇದರ ಬೆನ್ನಲ್ಲೇ ವಿದ್ಯಾಭರಣ ವಿರುದ್ಧ ಇಬ್ಬರು ಯುವತಿಯರು ಮಾತನಾಡಿರುವ ಆಡಿಯೋ ವೈರಲ್ ಆಗಿ ಈ ಸಂಬಂಧ ಮುರಿದುಬಿತ್ತು.
ವಿವಾದ ಆರಂಭವಾದಾಗಿನಿಂದ ವೈಷ್ಣವಿ ಬಹಳ ಬೇಸರದಲ್ಲಿದ್ದರು. ಅವರು ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ವೈಷ್ಣವಿ ತಂದೆ ಕೂಡಾ ಮಾತನಾಡಿ, ಈ ಘಟನೆಯಿಂದ ಮಗಳು ಬಹಳ ನೊಂದಿದ್ದಾಳೆ, ನಮಗೂ ನೋವಾಗಿದೆ ಎಂದಿದ್ದರು. ಆದರೆ ಇದೀಗ ವೈಷ್ಣವಿ ಎಲ್ಲವನ್ನೂ ಮರೆತು ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಟ್ಯಾಟೂ ಹಾಕಿಸಿಕೊಂಡು ಆ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ''ನನ್ನ ಮೊದಲ ಟ್ಯಾಟೂ, ರೈಸಿಂಗ್ ವುಮೆನ್ ಚಿಹ್ನೆಯ ಟ್ಯಾಟೂ ಹಾಕಿಸಿಕೊಂಡಿದ್ದೇನೆ. ಈ ಚಿಹ್ನೆಯು ದೈವಿಕ ಸ್ತ್ರೀ ಶಕ್ತಿಯನ್ನು(ಚಂದ್ರ) ಪ್ರತಿನಿಧಿಸುತ್ತದೆ ದೈವಿಕ ಪುಲ್ಲಿಂಗ (ಸೂರ್ಯ) ಶಕ್ತಿಯೊಂದಿಗೆ ವಿಲೀನಗೊಂಡು ಆತ್ಮದೊಂದಿಗೆ ದೈವಿಕ ವಿಲೀನವನ್ನು ಸೃಷ್ಟಿಸುತ್ತದೆ. ಮೈ ಕೊಡವಿ ಏಳಲು ಹಾಗೂ ಎಲ್ಲವನ್ನೂ ಮರೆತು ಮುನ್ನುಗ್ಗಲು ಇದು ದಾರಿಯಾಗಿದೆ'' ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.
ಇದನ್ನು ನೋಡಿದ ನೆಟಿಜನ್ಸ್, ಈಗ ಹೇಗಿದ್ದೀರಿ..? ತಲೆ ಕೆಡಿಸಿಕೊಳ್ಳಬೇಡಿ, ಎಲ್ಲವನ್ನೂ ಮರೆತು ಮುನ್ನುಗ್ಗಿ, ಜೀವನದಲ್ಲಿ ಇಂತಹ ಸಮಸ್ಯೆಗಳು ಸಹಜ, ಆದರೆ ಯಾವುದಕ್ಕೂ ಧೈರ್ಯ ಕಳೆದುಕೊಳ್ಳಬಾರದು. ದೇವರ ಆಶಿರ್ವಾದ ನಿಮ್ಮ ಮೇಲಿದೆ ಎಂದು ಕಮೆಂಟ್ ಮಾಡುವ ಮೂಲಕ ಧೈರ್ಯ ಹೇಳುತ್ತಿದ್ದಾರೆ. ಇನ್ನೂ ಕೆಲವರು ನೀವು ಧೀರ ಮಹಿಳೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ವೈಷ್ಣವಿ ಅವರ ಈ ಟ್ಯಾಟೂ ವಿಡಿಯೋ ಬಹಳ ವೈರಲ್ ಆಗುತ್ತಿದೆ.
'ಅಗ್ನಿಸಾಕ್ಷಿ' ಧಾರಾವಾಹಿ ವೀಕ್ಷಕರಿಗೆ ವೈಷ್ಣವಿ ಗೌಡ ಬಹಳ ಚೆನ್ನಾಗಿ ಪರಿಚಯ. ವೈಷ್ಣವಿ, ಹೆಚ್ಚು ಧಾರಾವಾಹಿಗಳಲ್ಲಿ ನಟಿಸದೆ ಇದ್ದರೂ, ಅವರು 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಮನೆ ಮಾತಾಗಿದ್ದಾರೆ. ಇಂದಿಗೂ ಅವರನ್ನು ಬಹಳಷ್ಟು ಜನರು ಸನ್ನಿಧಿ ಎಂದೇ ಗುರುತಿಸುತ್ತಾರೆ. ಬಿಗ್ ಬಾಸ್ ನಂತರ ನಟನೆಯಿಂದ ದೂರ ಉಳಿದಿದ್ದ ವೈಷ್ಣವಿ ಗೌಡ, ತಮ್ಮದೇ ಯೂಟ್ಯೂಬ್ ಚಾನೆಲ್ ಮೂಲಕ ವಿವಿಧ ವಿಡಿಯೋಗಳನ್ನು ಮಾಡಿದ್ದಾರೆ. ಈಗ ಸ್ವಪ್ನಕೃಷ್ಣ ನಿರ್ದೇಶನದ 'ಸೀತಾರಾಮ' ಧಾರಾವಾಹಿ, ಮಂಗಳಗೌರಿ ಮದುವೆ ಖ್ಯಾತಿಯ ಗಗನ್ ಜೊತೆ ಹೊಸ ಧಾರಾವಾಹಿ ಹಾಗೂ 'ಲಕ್ಷಣ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಇದೇ ತಿಂಗಳ ನವೆಂಬರ್ 11 ರಂದು, ಹುಡುಗನ ಮನೆಯವರು ವೈಷ್ಣವಿ ಮನೆಗೆ ಬಂದು ಬೊಟ್ಟು ಇಡುವ ಶಾಸ್ತ್ರ ಮಾಡಿದ್ದರು. ವೈಷ್ಣವಿಗೆ ವಿದ್ಯಾಭರಣ ಅವರನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಸಮಯ ಬೇಕಾದ ಕಾರಣ ಅವರು ಮದುವೆಗೆ ಇನ್ನೂ ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದಲೇ ಈ ವಿಚಾರವನ್ನು ಅವರು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಆದರೆ ಹೇಗೋ ಫೋಟೋ ಹಾಗೂ ವಿಡಿಯೋಗಳು ರಿವೀಲ್ ಆಗಿದ್ದವು. ಇದು ವೈರಲ್ ಆಗುತ್ತಿದ್ದಂತೆ ಇಬ್ಬರು ಯುವತಿಯರು ವಿದ್ಯಾಭರಣ ವಿರುದ್ಧ ಆರೋಪ ಮಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿ ಅವಾಂತರ ಸೃಷ್ಟಿಸಿತು.
ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದ ವೈಷ್ಣವಿ, ''ಎಲ್ಲಿ ನೋಡಿದರೂ ಇದೇ ಸುದ್ದಿ ಹರಿದಾಡುತ್ತಿದೆ. ದಯವಿಟ್ಟು ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಿ. ಇದು ಖಂಡಿತ ಎಂಗೇಜ್‌ಮೆಂಟ್ ಅಲ್ಲ, ನಾವು ಈ ಸಂಬಂಧವನ್ನು ಮುಂದುವರೆಸುತ್ತಿಲ್ಲ. ನನಗೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು'' ಎಂದು ಬರೆದುಕೊಂಡಿದ್ದರು. ಘಟನೆ ನಡೆದ 4-5 ದಿನಗಳು ವೈಷ್ಣವಿ ಬಹಳ ಡಿಸ್ಟರ್ಬ್ ಆಗಿದ್ದರು. ಆದರೆ ಈಗ ಎಲ್ಲವನ್ನೂ ಮರೆತು ಮತ್ತೆ ಮೊದಲಿನಂತೆ ಧಾರಾವಾಹಿಗಳಲ್ಲಿ ಬ್ಯುಸಿ ಆಗಿದ್ದಾರೆ.