ಭೀಕರ ಅಪಘಾತದಲ್ಲಿ ಪುಟ್ಟಕ್ಕನ ಮಕ್ಕಳು ಸ್ನೇಹಾ, ಸೀತಾರಾಮ ಸಿಹಿ ಸಾವು? ಮಹಾ ತಿರುವಿನತ್ತ ಜೀ ಕನ್ನಡದ ಧಾರಾವಾಹಿಗಳು
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಹಾಗೂ ಸೀತಾರಾಮ ಎರಡೂ ಧಾರಾವಾಹಿಗಳಲ್ಲಿ ಮಹತ್ತರ ತಿರುವುಗಳು ಕಂಡುಬಂದಿದೆ. ಭೀಕರ ಅಪಘಾತದಲ್ಲಿ ಪುಟ್ಟಕ್ಕನ ಮಕ್ಕಳು ಸ್ನೇಹಾ, ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಪಾತ್ರಗಳ ಸಾವಾಗಿದೆ.
ಜೀ ಕನ್ನಡ ಧಾರಾವಾಹಿಗಳಲ್ಲಿ ಮಹತ್ತರ ತಿರುವುಗಳು ಕಂಡುಬಂದಿದೆ. ಪುಟ್ಟಕ್ಕನ ಮಕ್ಕಳು ಹಾಗೂ ಸೀತಾ, ರಾಮ ಧಾರಾವಾಹಿ ವೀಕ್ಷಕರಿಗೆ ಕುತೂಹಲ ಹೆಚ್ಚಿದೆ. ಆದರೆ ಹೆಚ್ಚಿನ ಪಕ್ಷ ನಿರಾಸೆಯೇ ಆಗಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮ ಹಾಗೂ ಸ್ನೇಹಾ ಇಬ್ಬರೂ ಪ್ರಯಾಣ ಮಾಡುತ್ತಿರುವ ಕಾರ್‌ಗೆ ಅಪಘಾತವಾಗುತ್ತದೆ. ಆ ಸಂದರ್ಭದಲ್ಲಿ ಕಂಠಿ ಕೂಡ ಅಲ್ಲೇ ಇರುತ್ತಾನೆ. ಅವನಿಗೆ ಇದರ ಬಗ್ಗೆ ತಿಳಿದಿದ್ದು ಅವರಿಬ್ಬರ ಹೆಸರನ್ನೂ ಕೂಗುತ್ತಾ ಬರುತ್ತಾನೆ. ಆದರೆ ಅದು ಯಾವುದೇ ಪ್ರಯೋಜನ ಆಗುವುದಿಲ್ಲ. ಅವನು ಎಷ್ಟು ವೇಗವಾಗಿ ಬಂದರೂ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ನಂತರ ಒಂದು ಲಾರಿ ಬಂದು ಅವರಿಬ್ಬರ ಕಾರಿಗೆ ಗುದ್ದುತ್ತದೆ. ಡ್ರೈವರ್ ಸಮೇತ ಎಲ್ಲರೂ ಗಾಯಗೊಳ್ಳುತ್ತಾರೆ. ಕಂಠಿ ತುಂಬಾ ಗಾಬರಿಯಿಂದ ಬಂದು ಕಾರಿನ ಗ್ಲಾಸ್ ಒಡೆದು ಅವರಿಬ್ಬರನ್ನೂ ಹೊರಗೆ ತೆಗೆಯುತ್ತಾನೆ. ಆದರೆ ಯಾವುದೇ ಪ್ರಯೋಜನ ಆದಂತಿಲ್ಲ. ಅಷ್ಟರಲ್ಲಾಗಲೇ ಸ್ನೇಹಾಗೆ ತುಂಬಾ ಪೆಟ್ಟಾಗಿ ರಕ್ತಸ್ರಾವ ಆಗುತ್ತಾ ಇರುತ್ತದೆ.
ಸಿಹಿ ಅಧ್ಯಾಯ ಅಂತ್ಯ
ಇನ್ನು ಸೀತಾ, ರಾಮ ಧಾರಾವಾಹಿಯಲ್ಲಿ. ಸಿಹಿ, ಸೀತಾ ಮತ್ತು ರಾಮ್ ಹೊರಗಡೆ ಹೋಗಿರುತ್ತಾರೆ. ಆ ಸಂದರ್ಭದಲ್ಲಿ ಸಿಹಿಗೆ ಖುಷಿಯಾಗುವ ಎಲ್ಲವನ್ನೂ ಅವರಿಬ್ಬರು ಕೊಡಿಸುತ್ತಾ ಇರುತ್ತಾರೆ. ರಾಮ್ ಕ್ಷಣ ಮಾತ್ರ ಅಲ್ಲಿಂದ ಬೇರೆ ಕಡೆ ಹೋಗುತ್ತಾನೆ. ಅದು ಕೂಡ ಸಿಹಿ ಮತ್ತು ಸೀತಾ ಸಲುವಾಗಿಯೇ ಆಗಿರುತ್ತದೆ. ಅಷ್ಟರಲ್ಲಿ ಭಾರ್ಗವಿ ಕೊಲೆ ಮಾಡುವ ಸಂಚು ರೂಪಿಸಿರುತ್ತಾಳೆ. ಕೊಲೆ ಮಾಡಬೇಕಾಗಿರುವು ಸೀತಾಳನ್ನು ಎಂದು ಹೇಳಿರುತ್ತಾಳೆ. ಸಿಹಿ ಕೈಯ್ಯಲ್ಲಿದ್ದ ಆಟಿಕೆ ನೆಲದ ಮೇಲೆ ಬಿದ್ದ ಕಾರಣ ಅದನ್ನು ಸೀತಾ ಎತ್ತಿಕೊಡಲು ಮುಂದಾಗುತ್ತಾಳೆ. ಅದೇ ಸಮಯಕ್ಕೆ ಸರಿಯಾಗಿ ಸಿಹಿ ಅಲ್ಲೊಂದು ವಾಹನ ಬರುತ್ತಾ ಇರುವುದನ್ನು ಗಮನಿಸಿ ಅಮ್ಮನನ್ನು ದೂರ ತಳ್ಳುತ್ತಾಳೆ.
ಹೀಗೆ ಮಾಡಿದಾಗ ವಾಹನ ಸಿಹಿಗೆ ಗುದ್ದಿ ಸಿಹಿ ಹಾರಿ ಬೀಳುತ್ತಾಳೆ. ಅಷ್ಟರಲ್ಲಿ ರಾಮ ಅವಳನ್ನು ಕಾಪಾಡಲು ಬರುವ ಪ್ರಯತ್ನ ಮಾಡುತ್ತಾನೆ. ಅಷ್ಟರಲ್ಲಾಗಲೇ ಸಿಹಿ ತಲೆಗೆ ತುಂಬಾ ಪೆಟ್ಟಾಗಿರುತ್ತದೆ. ಕ್ಷಣ ಮಾತ್ರದಲ್ಲಿ ಎಲ್ಲಾ ಮುಗಿದು ಹೋಗಿರುತ್ತದೆ.
ಕನ್ನಡ ಕಿರುತೆರೆಯಲ್ಲಿ ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿದೆ. ಕೌಟುಂಬಿಕ ಪ್ರಧಾನ ಕಥೆಯ ಜತೆಗೆ ಆಕ್ಷನ್ ಸಿನಿಮಾಗಳಂತೆ ಮಾಸ್ ಎಲಿಮೆಂಟ್‌ಗಳನ್ನೂ ವೀಕ್ಷಕರಿಗೆ ಭರ್ತಿಯಾಗಿ ನೀಡುತ್ತಿವೆ ಸೀರಿಯಲ್‌ಗಳು. ಇಷ್ಟು ದಿನ ನಾಯಕಿಯ ಕಣ್ಣೀರಷ್ಟೇ ಕಾಣುತ್ತಿದ್ದ ಕಿರುತೆರೆಯಲ್ಲೀಗ, ರಗಡ್ ಆಗಿ ಫೈಟ್ ಮಾಡುವ ನಾಯಕನೂ ಅಖಾಡದಲ್ಲಿದ್ದಾನೆ. ಕಿರುತೆರೆಯ ವೀಕ್ಷಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಹೊಸ ಹೊಸ ಸೀರಿಯಲ್‌ಗಳ ಆಗಮನದಿಂದ ಟಿಆರ್‌ಪಿ ಸ್ಪರ್ಧೆಯೂ ತುಸು ಜೋರಾಗಿದೆ. ಇಂತಹ ಸಂದರ್ಭಗಳಲ್ಲಿ ಧಾರಾವಾಹಿಗಳಲ್ಲಿನ ಗುಣಮಟ್ಟ ಹಾಗೂ ರೋಚಕತೆ ಹೆಚ್ಚಿಸಲು ಪ್ರಯತ್ನ ನಡೆಯುತ್ತಿದೆ.
ಆಗಾಗ ಈ ರೀತಿ ತಿರುವುಗಳನ್ನು ನೀಡುವ ಮೂಲಕ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಧಾರಾವಾಹಿಗಳು ಮಾಡುತ್ತಿದೆ. ಹೀಗೆ ಮಾಡಿದಾಗ ಕೆಲವು ಧಾರಾವಾಹಿಗಳು ಕ್ಲಿಕ್ ಆದರೆ ಇನ್ನು ಕೆಲವು ಧಾರಾವಾಹಿಗಳು ಟಿಆರ್‌ಪಿ ರೇಸ್‌ನಲ್ಲಿ ಹಿಂದೆ ಬೀಳುತ್ತದೆ. ಜನರು ಹೆಚ್ಚಾಗಿ ಇಷ್ಟಪಡುತ್ತಿದ್ದ ಪಾತ್ರಗಳನ್ನೇ ಕೊಂದರೆ ಜನರು ನೋಡಲು ಇಷ್ಟಪಡುವುದಿಲ್ಲ. ಈ ಹಿಂದೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಪಾತ್ರವನ್ನು ಹಾಗೂ ರಾಮಾಚಾರಿ ಧಾರಾವಾಹಿಯಲ್ಲಿ ಕಿಟ್ಟಿಯ ಪ್ರಾತ್ರವನ್ನು ಇಲ್ಲದಂತೆ ಮಾಡಿದ್ದರು. ಇದೀಗ ಒಂದು ಹೊಸ ಟ್ರೆಂಡ್ ಎಂಬಂತೆ ಭಾಸವಾಗುತ್ತಿದೆ.