ರಮೇಶ್ ಅರವಿಂದ್ ನಿರ್ಮಾಣದ ನೀನಾದೆ ನಾ ಸೀರಿಯಲ್‌ಗೆ ಗುಡ್‌ಬೈ ಹೇಳಿದ ಭವ್ಯ ಪೂಜಾರಿ; ಮತ್ತೊಮ್ಮೆ ಭೇಟಿಯಾಗೋಣ ಎಂದ ಶೈಲೂ
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ನೀನಾದೆ ನಾ ಧಾರಾವಾಹಿಯ ಶೈಲೂ ಪಾತ್ರದಾರಿ ಭವ್ಯ ಪೂಜಾರಿ ಸೀರಿಯಲ್‌ನಿಂದ ಹೊರನಡೆದಿದ್ದಾರೆ. ವೈಯಕ್ತಿಕ ಕಾರಣದಿಂದ ಈ ಸೀರಿಯಲ್‌ಗೆ ಗುಡ್‌ಬೈ ಹೇಳುತ್ತಿರುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಕಮಲಿ, ನಾಗಿಣಿ 2, ಮಂಗಳಗೌರಿ ಮದುವೆ, ಅರಮನೆ ಗಿಳಿ, ಸುಂದರಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದ, ನಟಿ ಭವ್ಯಶ್ರೀ ಇದೀಗ ನೀನಾದೆ ಸೀರಿಯಲ್‌ಗೆ ಗುಡ್‌ಬೈ ಹೇಳಿದ್ದಾರೆ. ವೈಯಕ್ತಿಕ ಕಾರಣದಿಂದ ಈ ಸೀರಿಯಲ್‌ನಿಂದ ಹೊರನಡೆಯುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಭವ್ಯ ಪೂಜಾರಿ ಅಪ್‌ಡೇಟ್ ನೀಡಿದ್ದಾರೆ. ನೀನಾದೆ ನಾ ಸೀರಿಯಲ್‌ನಲ್ಲಿ ಭವ್ಯ ಅವರು ಶೈಲೂ ಪಾತ್ರದಲ್ಲಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.
ಭವ್ಯ ಶ್ರೀ ಸೀರಿಯಲ್ ಬಿಡಲು ಕಾರಣವೇನು?
ವೈಯಕ್ತಿಕ ಕಾರಣದಿಂದ ನೀನಾದೆ ನಾ ಸೀರಿಯಲ್‌ನಿಂದ ಹೊರನಡೆಯುತ್ತಿರುವುದಾಗಿ ಭವ್ಯಶ್ರೀ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಅವರು ಇನ್‌ಸ್ಟಾಗ್ರಾಂನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ. "ನಮಸ್ಕಾರ. ಕಳೆದ ಒಂದು ವರ್ಷದಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನೀನಾದೆ ನಾ' ಧಾರಾವಾಹಿಯಲ್ಲಿ ನನ್ನ 'ಶೈಲೂ' ಪಾತ್ರಕ್ಕೆ ಜೀವ ತುಂಬಿ, ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ... ಇದೀಗ ನನ್ನ ವೈಯುಕ್ತಿಕ ಕಾರಣಗಳಿಂದ, ಆ ಪಾತ್ರದಿಂದ ಹೊರ ಬಂದಿದ್ದೇನೆ" ಎಂದು ಭವ್ಯ ಪೂಜಾರಿ ಮಾಹಿತಿ ನೀಡಿದ್ದಾರೆ.
"ಈ ಸಂದರ್ಭದಲ್ಲಿ ಇಂತಹ ಅದ್ಭುತವಾದ ಅವಕಾಶವನ್ನು ನೀಡಿದ ರಮೇಶ್ ಅರವಿಂದ್ ಸರ್, ರವಿ ಜೋಶಿ ಸಾರ್ ಅವರಿಗೆ ಹಾಗೂ ಸ್ಟಾರ್ ಸುವರ್ಣಕ್ಕೆ ನನ್ನ ಹೃದಯಂತರಾಳದ ಧನ್ಯವಾದಗಳು. ನನ್ನ ಈ ಪಯಣದಲ್ಲಿ ಜೊತೆಯಾದ ಧಾರಾವಾಹಿಯ ಎಲ್ಲಾ ತಾಂತ್ರಿಕ ಕುಟುಂಬಕ್ಕೆ ಹಾಗೂ ಕಲಾವಿದ ಸ್ನೇಹಿತರಿಗೆ ನನ್ನ ನಮನ. ಇಷ್ಟು ದಿನ ನೀವೆಲ್ಲರೂ ನನ್ನ 'ಶೈಲೂ' ಪಾತ್ರವನ್ನು ಮನಸಾರೆ ಮೆಚ್ಚಿ, ಹರಸಿದಿರಿ. ನಿಮ್ಮ ಪ್ರೀತಿಗೆ ನಾನು ಋಣಿ. ನಿಮಗೆಲ್ಲ ನನ್ನ ಕೋಟಿ ನಮನ" ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
"ಭೂಮಿ ದುಂಡಗಿದೆ...ಮತ್ತೊಂದು ಪಾತ್ರದೊಂದಿಗೆ, ಮತ್ತೆ ನಿಮ್ಮ ಮುಂದೆ ಬರುತ್ತೇನೆ. ಆಗ ಮತ್ತೆ ಭೇಟಿಯಾಗೋಣ.. ಸದಾ ನಿಮ್ಮ ಆಶೀರ್ವಾದ, ಪ್ರೀತಿ ಇರಲಿ" ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. "ಮಿಸ್ ಯು ಮಾಮ್ ಮತ್ತು ನಿಮ್ಮ ಆಕ್ಟಿಂಗ್ ಕೂಡ ಮಿಸ್ ಮಾಡೋತ್ತಿವಿ ಮಾಮ್" "ದೇವರು ಒಳ್ಳೇದು ಮಾಡಲಿ ನಿಮ್ಮ ಆಕ್ಟಿಂಗ್ ಮಿಸ್ ಮಾಡ್ಕೋತೀನಿ" "ಮಿಸ್ ಯು ಅಕ್ಕಾ" ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
ನೀನಾದೆ ನಾ ಸೀರಿಯಲ್ ಬಗ್ಗೆ
ಕನ್ನಡ ಕಿರುತೆರೆಯಲ್ಲಿ ಸುಮಾರು ಒಂದು ವರ್ಷದ ಹಿಂದೆ ಸ್ಟಾರ್ ಸುವರ್ಣದಲ್ಲಿ ನೀನಾದೆ ನಾ ಎಂಬ ಸೀರಿಯಲ್ ಆರಂಭವಾಗಿತ್ತು. ನಮ್ಮ ಲಚ್ಚಿ, ರಾಣಿ ಸೀರಿಯಲ್‌ಗಳು ಪ್ರೇಕ್ಷಕರ ಮನಗೆದ್ದ ಸಮಯದಲ್ಲಿ ನೀನಾದದೆ ನಾ ಎಂಬ ಹೊಸ ಸೀರಿಯಲ್ ಆರಂಭಿಸಿತ್ತು. ಅಪರಿಚಿತ ಹೃದಯಗಳ ನಡುವೆ ಅನಿರೀಕ್ಷಿತ ಪ್ರೇಮಾಯಾನದ ಕಥೆ ಇರುವ ನೀನಾದೆ ನಾ ಸೀರಿಯಲ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ವಿದೇಶದಲ್ಲಿ ಓದಿದ್ದರೂ ಆಚಾರ, ವಿಚಾರ ಪರಿಪಾಲನೆಗೆ ಮಹತ್ವ ನೀಡುವ ನಾಯಕಿ ವೇದಾಳ ಕಥೆ ಎಲ್ಲರಿಗೂ ಇಷ್ಟವಾಗಿತ್ತು. ಕಥಾ ನಾಯಕ ವಿಕ್ರಮ್ ಗೂಂಡಗಿರಿಗೆ ಫೇಮಸ್. ಈತ ಆಚಾರ ವಿಚಾರದಿಂದ ದೂರ. ಅಚಾನಕ್ ಆಗಿ ದೇವರ ಸನ್ನಿಧಾನದಲ್ಲಿ ವಿಕ್ರಮ್ ವೇದಾಳಿಗೆ ತಾಳಿಕಟ್ಟುತ್ತಾನೆ. ಮುಂದೆ ಇವರ ಬದುಕು ಯಾವ ರೀತಿ ಇರುತ್ತದೆ? ಇತ್ಯಾದಿ ಕುತೂಹಲದೊಂದಿಗೆ ಸೀರಿಯಲ್ ಆರಂಭವಾಗಿತ್ತು.
ನೀನಾದೆ ನಾ ಸೀರಿಯಲ್‌ನಲ್ಲಿ ನಾಯಕ ಪಾತ್ರದಲ್ಲಿ ದಿಲೀಪ್ ಶೆಟ್ಟಿ ಮತ್ತು ನಾಯಕಿಯಾಗಿ ಖುಷಿ ಅಭಿನಯಿಸುತ್ತಿದ್ದಾರೆ. ರಮೇಶ್ ಅರವಿಂದ್ ಅವರು ವಂದನಾ ಮೀಡಿಯಾ ಎಂಬ ಸಂಸ್ಥೆಯಡಿ ಈ ಸೀರಿಯಲ್ ಪರಿಚಯಿಸಿದ್ದರು.