ಕನ್ನಡ ಸುದ್ದಿ  /  Entertainment  /  Televison News Zee Kannada Mahanati Reality Show Judges Actress Prema Kantara Saptami Gowda Kateera Director Pcp

ಮಹಾನಟಿ ರಿಯಾಲಿಟಿ ಶೋ ಜಡ್ಜ್‌ ಸೀಟ್‌ನಲ್ಲಿ ಪ್ರೇಮಾ, ಸಪ್ತಮಿ ಗೌಡ; ಮೂರನೇ ಜಡ್ಜ್‌ ಯಾರು? ಸುಳಿವು ಕಾಟೇರ ಡೈರೆಕ್ಟರ್‌

Mahanati Kannada Reality Show: ಝೀ ಕನ್ನಡ ವಾಹಿನಿಯು ಮಹಾನಟಿ ರಿಯಾಲಿಟಿ ಶೋನ ಜಡ್ಜ್‌ ಯಾರು ಎಂದು ಮೂರು ವಿಡಿಯೋ ಬಿಡುಗಡೆ ಮಾಡಿದೆ. ಈ ವಿಡಿಯೋಗಳನ್ನು ನೋಡಿದರೆ ನಟಿ ಪ್ರೇಮಾ, ಕಾಂತಾರ ನಟಿ ಸಪ್ತಮಿ ಗೌಡ, ಕಾಟೇರ ನಿರ್ದೇಶಕ ತರುಣ್‌ ಸುಧೀರ್‌ ಜಡ್ಜ್‌ ಸೀಟ್‌ನಲ್ಲಿ ಕುಳಿತುಕೊಳ್ಳುವುದು ಪಕ್ಕಾ ಆದಂತೆ ಇದೆ.

ಮಹಾನಟಿ ರಿಯಾಲಿಟಿ ಶೋ ಜಡ್ಜ್‌ ಸೀಟ್‌ನಲ್ಲಿ ಪ್ರೇಮಾ, ಸಪ್ತಮಿ ಗೌಡ; ಮೂರನೇ ಜಡ್ಜ್‌ ಯಾರು?
ಮಹಾನಟಿ ರಿಯಾಲಿಟಿ ಶೋ ಜಡ್ಜ್‌ ಸೀಟ್‌ನಲ್ಲಿ ಪ್ರೇಮಾ, ಸಪ್ತಮಿ ಗೌಡ; ಮೂರನೇ ಜಡ್ಜ್‌ ಯಾರು?

ಸದ್ಯದಲ್ಲಿಯೇ ಝೀ ಕನ್ನಡ ವಾಹಿನಿಯಲ್ಲಿ ಮಹಾನಟಿ ಎಂಬ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಶೋಗೆ ಜಡ್ಜ್‌ ಆಗಿ ಆಗಮಿಸುವವರು ಯಾರೆಂದು ವಾಹಿನಿಯು ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದೆ. ಈಗಾಗಲೇ ದೊರಕಿರುವ ಸುಳಿವುಗಳ ಆಧಾರದಲ್ಲಿ ಜಡ್ಜ್‌ ಸೀಟ್‌ನಲ್ಲಿ ನಟಿ ಪ್ರೇಮಾ ಕುಳಿತುಕೊಳ್ಳುವುದು ಪಕ್ಕಾ ಆಗಿದೆ. ಇಂದು ಬಿಡುಗಡೆ ಮಾಡಿರುವ ವಿಡಿಯೋ ನೋಡಿದರೆ ಕಾಂತಾರ ನಟಿ ಸಪ್ತಮಿ ಗೌಡ ಕೂಡ ಜಡ್ಜ್‌ ಸೀಟ್‌ನಲ್ಲಿ ಕುಳಿತುಕೊಳ್ಳುವ ಸಾಧ್ಯತೆಗಳಿವೆ. ಇದೇ ರೀತಿ ಮತ್ತೊಂದು ವಿಡಿಯೋ ನೋಡಿದರೆ ಕಾಟೇರ ನಿರ್ದೇಶಕ ತರುಣ್‌ ಸುಧೀರ್‌ ಕೂಡ ಮಹಾನಟಿ ರಿಯಾಲಿಟಿ ಶೋಗೆ ಜಡ್ಜ್‌ ಆಗಿ ಆಗಮಿಸುವ ಸೂಚನೆಗಳಿವೆ.

ಮಹಾನಟಿ ರಿಯಾಲಿಟಿ ಶೋಗೆ ನಟಿ ಪ್ರೇಮಾ ಜಡ್ಜ್‌

ನಿನ್ನೆ (ಶನಿವಾರ) ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರಮೋದಲ್ಲಿ "ಮಹಾನಟಿ ಜಡ್ಜ್‌ ಯಾರು ಎಂದು ಊಹಿಸಿ" ಎಂದು ಪ್ರಶ್ನಿಸಿತ್ತು. ಆ ವಿಡಿಯೋ ನೋಡಿ ಬಹುತೇಕ ಪ್ರೇಕ್ಷಕರು ನಟಿ ಪ್ರೇಮಾ ಎಂದಿದ್ದರು. ಆ ವಿಡಿಯೋದಲ್ಲಿರುವ ವ್ಯಕ್ತಿಯ ದೈಹಿಕ ಚಹರೆಗಳನ್ನು ಗಮನಿಸಿದರೆ ಅದು ನಟಿ ಪ್ರೇಮಾ ರೀತಿಯೇ ಇದೆ. ಹೀಗಾಗಿ, ಮಹಾನಟಿ ಶೋಗೆ ನಟಿ ಪ್ರೇಮಾ ಜಡ್ಜ್‌ ಆಗಿ ಆಯ್ಕೆಯಾಗಿರುವುದು ಬಹುತೇಕ ಪಕ್ಕಾ ಆಗಿದೆ.

ಜಡ್ಜ್‌ ಸೀಟ್‌ನಲ್ಲಿ ಸಪ್ತಮಿ ಗೌಡ

ನಟಿ ಪ್ರೇಮಾ ಜತೆಗೆ ಕಾಂತಾರ ಸಿನಿಮಾದ ನಟಿ ಸಪ್ತಮಿ ಗೌಡ ಕೂಡ ಮಹಾನಟಿ ರಿಯಾಲಿಟಿ ಶೋದ ಜಡ್ಜ್‌ ಸೀಟ್‌ನಲ್ಲಿ ಕುಳಿತುಕೊಳ್ಳುವ ನಿರೀಕ್ಷೆಯಿದೆ. ಝೀ ಕನ್ನಡ ವಾಹಿನಿ ಇಂದು ಬಿಡುಗಡೆ ಮಾಡಿರುವ ಪ್ರಮೋ ನೋಡಿ ಬಹುತೇಕ ನೆಟ್ಟಿಗರು ಇವರು ನಟಿ ಸಪ್ತಮಿ ಗೌಡ ಎಂದಿದ್ದಾರೆ. ಮಹಾನಟಿ ಅನ್ನೋ ಹೆಸರಿಗೆ ತಕ್ಕಂಗೆ ಭಾರತಿ ವಿಷ್ಣುವರ್ಧನ್ ಅವರೋ ಇಲ್ಲಾ ಅಂಬಿಕಾ ಅವರೋ ಇಲ್ಲಾ ಗೀತಾ ಅವರು ಇಲ್ಲಾ ಭವ್ಯ ಅವರು ಮಹಾಲಕ್ಷ್ಮಿ ಅವರು ಬಂದಿದ್ರೆ ಚನ್ನಾಗಿ ಇರ್ತಿತ್ತು ಎಂದು ಕೆಲವು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ನಟಿಯರು ಯಾರನ್ನಾದರೂ ಜಡ್ಜ್ ಆಗಿ ಕರೆತನ್ನಿ.. ಆವಾಗ ಆ ಶೋ ಗೆ ಒಂದು ಕಳೆ ಬರುತ್ತೆ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಮಹಾನಟಿ ಜಡ್ಜ್‌ ಆಗಿ ತರುಣ್‌ ಸುಧೀರ್‌

ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಇನ್ನೊಂದು ಪ್ರಮೋದಲ್ಲಿ ಮತ್ತೊಬ್ಬರು ಜಡ್ಜ್‌ ಯಾರು ಎಂಬ ಪ್ರಶ್ನೆಯ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋ ಸಾಕಷ್ಟು ಜನರಿಗೆ ಗೊಂದಲ ಉಂಟು ಮಾಡಿದೆ. ಕೆಲವರು ಇವರು ಮಾಲಾಶ್ರೀ ಎಂದಿದ್ದಾರೆ. ಮಾಲಾಶ್ರೀಗೆ ಮೀಸೆ ಇದೆಯಾ ಎಂದು ಅದಕ್ಕೆ ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕರು ಇದು ಕಾಟೇರ ಡೈರೆಕ್ಟರ್‌ ತರುಣ್‌ ಸುಧೀರ್‌ ಎಂದಿದ್ದಾರೆ. ಆ ವಿಡಿಯೋ ನೋಡಿದರೆ ಬಹುತೇಕವಾಗಿ ತರುಣ್‌ ಸುಧೀರ್‌ರನ್ನು ಹೋಲುತ್ತದೆ.

ಮಹಾನಟಿ ರಿಯಾಲಿಟಿ ಶೋ ಬಗ್ಗೆ

ಕಳೆದ ಒಂದು ತಿಂಗಳಿನಿಂದ ಝೀ ಕನ್ನಡ ವಾಹಿನಿಯು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಮಹಾನಟಿ ರಿಯಾಲಿಟಿ ಶೋಗಾಗಿ ಅಡಿಷನ್‌ ನಡೆಸುತ್ತಿದೆ. ಸಿನಿಮಾ ಅಥವಾ ಸೀರಿಯಲ್‌ ನಟಿಯರಾಗಬೇಕು ಎಂದು ಬಯಸುವ ಯುವತಿಯರಿಗೆ ಅಡಿಶನ್‌ ನಡೆಸಲಾಗುತ್ತಿದೆ. ಈ ರಿಯಾಲಿಟಿ ಶೋನದಲ್ಲಿ ಇವರೆಲ್ಲರೂ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ. ಈ ಶೋನಲ್ಲಿ ಭಾಗವಹಿಸಿದವರು ಮುಂದಿನ ದಿನಗಳಲ್ಲಿ ಸೀರಿಯಲ್‌, ಸಿನಿಮಾಗಳಲ್ಲಿ ಅವಕಾಶ ಪಡೆದರೂ ಅಚ್ಚರಿಯಿಲ್ಲ.

IPL_Entry_Point