ಲಕ್ಕಿ ಬಾಸ್ಕರ್‌ ಸಿನಿಮಾ ವಿಮರ್ಶೆ: ದುಲ್ಕರ್‌ ಸಲ್ಮಾನ್‌ ಮಾಸ್ಟರ್‌ ಪೀಸ್‌ ನಟನೆ; ಅನಿರೀಕ್ಷಿತ ತಿರುವುಗಳು, ಅದ್ಭುತ ರೋಮಾಂಚನದ ಹಣಾಹಣಿ
ಕನ್ನಡ ಸುದ್ದಿ  /  ಮನರಂಜನೆ  /  ಲಕ್ಕಿ ಬಾಸ್ಕರ್‌ ಸಿನಿಮಾ ವಿಮರ್ಶೆ: ದುಲ್ಕರ್‌ ಸಲ್ಮಾನ್‌ ಮಾಸ್ಟರ್‌ ಪೀಸ್‌ ನಟನೆ; ಅನಿರೀಕ್ಷಿತ ತಿರುವುಗಳು, ಅದ್ಭುತ ರೋಮಾಂಚನದ ಹಣಾಹಣಿ

ಲಕ್ಕಿ ಬಾಸ್ಕರ್‌ ಸಿನಿಮಾ ವಿಮರ್ಶೆ: ದುಲ್ಕರ್‌ ಸಲ್ಮಾನ್‌ ಮಾಸ್ಟರ್‌ ಪೀಸ್‌ ನಟನೆ; ಅನಿರೀಕ್ಷಿತ ತಿರುವುಗಳು, ಅದ್ಭುತ ರೋಮಾಂಚನದ ಹಣಾಹಣಿ

Lucky Baskhar Movie Review: ಬ್ಯಾಂಕಿಂಗ್‌ ಕ್ಷೇತ್ರದ ಹಿನ್ನೆಲೆಯನ್ನು ಇಟ್ಟುಕೊಂಡು ಅದ್ಭುತ ರೋಮಾಂಚನ, ಆಕರ್ಷಕ ತಿರುವುಗಳು, ಹಳೆಯ ಕಾಲದ ವಾತಾವರಣದಲ್ಲಿ ಸುಂದರವಾಗಿ ನಿರ್ಮಿಸಿರುವ ಲಕ್ಕಿ ಬಾಸ್ಕರ್‌ ಸಿನಿಮಾ ಇಷ್ಟವಾಗುತ್ತದೆ. ಇದರೊಂದಿಗೆ ದುಲ್ಕರ್‌ ಸಲ್ಮಾನ್‌ ಬಾಸ್ಕರ್‌ ಪಾತ್ರದಲ್ಲಿ ಮಾಸ್ಟರ್‌ ಪೀಸ್‌ ಎಂಬಂತೆ ನಟಿಸಿದ್ದಾರೆ.

ಲಕ್ಕಿ ಬಾಸ್ಕರ್‌ ಸಿನಿಮಾ ವಿಮರ್ಶೆ
ಲಕ್ಕಿ ಬಾಸ್ಕರ್‌ ಸಿನಿಮಾ ವಿಮರ್ಶೆ

Lucky Baskhar Movie Review: ಬ್ಯಾಂಕಿಂಗ್‌ ಕ್ಷೇತ್ರದ ಹಿನ್ನೆಲೆಯಲ್ಲಿ ಅದ್ಭುತ ರೋಮಾಂಚನ, ಆಕರ್ಷಕ ತಿರುವು, ಪ್ರಭಾವಶಾಲಿ ನಿರ್ಮಾಣದಿಂದಾಗಿ ಲಕ್ಕಿ ಬಾಸ್ಕರ್‌ ಸಿನಿಮಾ ಇಷ್ಟವಾಗುತ್ತದೆ. ಇದರೊಂದಿಗೆ ದುಲ್ಕರ್‌ ಸಲ್ಮಾನ್‌ ಬಾಸ್ಕರ್‌ ಪಾತ್ರದಲ್ಲಿ ಮಾಸ್ಟರ್‌ ಪೀಸ್‌ ಎಂಬಂತೆ ನಟಿಸಿದ್ದಾರೆ. ಈ ತೆಲುಗು ಸಿನಿಮಾದ ವಿಮರ್ಶೆ ಇಲ್ಲಿದೆ.

ಲಕ್ಕಿ ಬಾಸ್ಕರ್ ಸಿನಿಮಾದ ಕಥೆ

1980ರ ದಶಕದ ಕೊನೆಯಲ್ಲಿ ಮುಂಬೈನಲ್ಲಿ ನಡೆಯುವಂತಹ ಕಥೆಯನ್ನು ಲಕ್ಕಿ ಭಾಸ್ಕರ್ ಹೊಂದಿದೆ. ಮೂರು ವರ್ಷ ಒಳ್ಳೆಯ ಉದ್ಯೋಗಿಯಾಗಿ ಕೆಲಸ ಮಾಡಿದರೂ ಬಡ್ತಿ ದೊರಕದ ಬ್ಯಾಂಕ್‌ ಉದ್ಯೋಗಿ ಬಾಸ್ಕರ್ (ದುಲ್ಕರ್ ಸಲ್ಮಾನ್). ಇದೇ ಸಮಯದಲ್ಲಿ ಕಳ್ಳ ಸಾಗಾಣಿಕೆ ವ್ಯವಹಾರಕ್ಕಾಗಿ ಒಬ್ಬ ವ್ಯಕ್ತಿ (ರಾಮ್ಕಿ) ಬಾಸ್ಕರ್‌ನನ್ನು ಸಂಪರ್ಕಿಸುತ್ತಾನೆ. ಈಗಾಗಲೇ ಬ್ಯಾಂಕ್‌ನ ವ್ಯವಸ್ಥೆಯಿಂದ ಹತಾಶನಾಗಿರುವ ಬಾಸ್ಕರ ಇದನ್ನು ಒಪ್ಪುತ್ತಾನೆ. ಬ್ಯಾಂಕ್‌ನಿಂದ ಹಣ ಕದಿಯುತ್ತಾನೆ. ದೊಡ್ಡಮಟ್ಟದಲ್ಲಿ ಲಾಭವನ್ನೂ ಗಳಿಸುತ್ತಾನೆ. ಈ ರೀತಿ ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂದು ತಿಳಿದ ಬಳಿಕ ಬಾಸ್ಕರ್‌ನ ದುರಾಸೆ ಹೆಚ್ಚುತ್ತದೆ. ಷೇರು ಮಾರುಕಟ್ಟೆಯಲ್ಲಿ ತ್ವರಿತವಾಗಿ ಹಣ ಸಂಪಾದನೆ ಮಾಡಲು ಮುಂದಾಗುತ್ತಾನೆ. ಅಲ್ಲಿನ ಜೂಜಾಟದಲ್ಲಿ ಕೋಟಿಗಟ್ಟಲೆ ಗಳಿಸುತ್ತಾನೆ. ಹಣದ ಮೇಲಿನ ಆಸೆಯು ಅವನನ್ನು ತೀವ್ರ ತೊಂದರೆಗೆ ಸಿಲುಕಿಸುತ್ತದೆ ಎಂದು ಅವನಿಗೆ ಗೊತ್ತಿಲ್ಲ. ಈ ಸವಾಲುಗಳನ್ನು ಆತ ಹೇಗೆ ಬಗೆಹರಿಸುತ್ತಾನೆ ಎನ್ನುವುದು ಈ ಸಿನಿಮಾದ ಕಥೆಯ ಮೂಲವಾಗಿದೆ. ಮುಂದೆನಾಗುತ್ತದೆ ಎನ್ನುವುದನ್ನು ಸಿನಿಮಾ ನೋಡಿಯೇ ಅನುಭವಿಸಬೇಕು.

ಲಕ್ಕಿ ಬಾಸ್ಕರ್ ಸಿನಿಮಾದ ವಿಮರ್ಶೆ

ತೆಲುಗು ಚಿತ್ರರಂಗದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕುರಿತಾದ ಚಲನಚಿತ್ರಗಳು ಅಪರೂಪ. ನಿರ್ದೇಶಕ ವೆಂಕಿ ಅಟ್ಲೂರಿ ಈ ವಿಷಯವನ್ನು ಕೌಟುಂಬಿಕ ನಾಟಕದ ಟ್ವಿಸ್ಟ್‌ನೊಂದಿಗೆ ತೆರೆಗೆ ತಂದಿದ್ದಾರೆ. ಆರಂಭಿಕ ದೃಶ್ಯದಿಂದ ಕೊನೆಯವರೆಗೂ ಲಕ್ಕಿ ಬಾಸ್ಕರ್‌ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತಾನೆ. ಅದರ ನಿರೂಪಣೆ ಶೈಲಿಯೇ ಹಾಗಿದೆ. ಹಿಂದಿನ ಕಾಲದ ನಿರ್ಮಾಣ ವಿನ್ಯಾಸ, ವೇಷಭೂಷಣ, ಭಾವನಾತ್ಮಕ ಅಂಶಗಳನ್ನು ಸೇರಿಸಿ ವೆಂಕಿ ಅಟ್ಲೂರಿ ಅದ್ಭುತವಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ದುಲ್ಕರ್‌ ಸಲ್ಮಾನ್‌ ಮಧ್ಯಮ ವರ್ಗದ ಬ್ಯಾಂಕ್ ಉದ್ಯೋಗಿಯಾಗಿ ಅದ್ಭುತವಾಗಿ ನಟಿಸಿರುವುದು ಚಿತ್ರದಲ್ಲಿ ಗಮನಸೆಳೆಯುವ ಪ್ರಮುಖ ಅಂಶವಾಗಿದೆ, ಏಕೆಂದರೆ ಮಲಯಾಳಂ ಸೂಪರ್‌ಸ್ಟಾರ್ ಚಿತ್ರದುದ್ದಕ್ಕೂ ಆಕರ್ಷಕವಾಗಿ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ನಟಿಸಿದ್ದಾರೆ. ಲಕ್ಕಿ ಭಾಸ್ಕರ್ ಮೊದಲಾರ್ಧವು ಆಕರ್ಷಕವಾಗಿದ್ದು, ಅನೇಕ ಸಾಹಸಮಯ ಕ್ಷಣಗಳನ್ನು ಹೊಂದಿದೆ. ಸಾಕಷ್ಟು ಥ್ರಿಲ್‌ ನೀಡುತ್ತದೆ. ಲಕ್ಕಿ ಭಾಸ್ಕರ್‌ನ ಗಮನಾರ್ಹ ಅಂಶವೆಂದರೆ ಅದು ಮೆಲೋಡ್ರಾಮಾದಿಂದ ದೂರ ಉಳಿದಿದೆ. ನಿಜವಾದ ಮತ್ತು ಸಮತೋಲಿತ ಭಾವನೆ ನೀಡುತ್ತದೆ. ಕಾನ್ಮೆನ್ ರೀತಿಯ ತೆಲುಗು ಚಲನಚಿತ್ರಗಳು ಅಪರೂಪ, ಆದರೆ ವೆಂಕಿ ಅಟ್ಲೂರಿ ರೋಚಕತೆಯನ್ನೂ ಉಳಿಸಿಕೊಂಡು ಕಾನ್ಮೆನ್‌ ಶೈಲಿಯಲ್ಲಿ ಮಸ್ತ್‌ ಸಿನಿಮಾ ನೀಡಿದ್ದಾರೆ ಎನ್ನಬಹುದು.

ವೆಂಕಿ ಅಟ್ಲೂರಿ ಸಂಕೀರ್ಣವಾದ ಬ್ಯಾಂಕಿಂಗ್, ಬ್ಯಾಂಕ್ ವಂಚನೆಗಳು ಮತ್ತು ಷೇರು ಮಾರುಕಟ್ಟೆ ವಿವರಗಳನ್ನು ಸರಳವಾಗಿ ಕಟ್ಟಿಕೊಟ್ಟ ರೀತಿಯೇ ಅದ್ಭುತ. ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್‌ನ ಹೈಲೈಟ್‌ನೊಂದಿಗೆ ಎರಡು ಭಾಗಗಳಲ್ಲಿ ಚಿತ್ರವನ್ನು ಮುನ್ನಡೆಸುತ್ತಾ ಸಾಗುತ್ತಾರೆ. ಹಲವು ಹಗರಣಗಳಲ್ಲಿ ಭಾಗಿಯಾದ ನಾಯಕ ಹೇಗೆ ನಿರ್ಮಲವಾಗಿ ಹೊರಬಹುದು ಎನ್ನುವ ನಿರೀಕ್ಷೆಯನ್ನೂ ಕಾಯ್ದುಕೊಂಡಿದೆ. ಕ್ಲೈಮ್ಯಾಕ್ಸ್‌ ಕೂಡ ತೃಪ್ತಿಕರವಾಗಿದೆ.

ನಟನೆ ಹೇಗಿದೆ?

ಅಭಿನಯದ ವಿಷಯದಲ್ಲಿ ದುಲ್ಕರ್ ಸಲ್ಮಾನ್ ಭಾಸ್ಕರ್ ಅವರ ಅದ್ಭುತವಾಗಿ ತನ್ನ ಪ್ರತಿಭೆ ಪ್ರದರ್ಶಿಸಿದ್ದಾರೆ. ಈ ರೀತಿಯ ಪಾತ್ರವು ಅವರಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಈ ಪಾತ್ರ ಇವರಲ್ಲದೆ ಬೇರೆ ಯಾರೂ ಮಾಡಿದರೂ ಹೊಂದಿಕೆಯಾಗದು ಎನ್ನುವಂತೆ ನಟಿಸಿದಾರೆ. ಇವರು ಸೂಕ್ಷ್ಮವಾಗಿ ನಟಿಸಿದ್ದು, ಯಾವುದೇ ನಕಾರಾತ್ಮಕ ಅಂಶಗಳು ಕಾಣಿಸದಂತೆ ಮಾಡಿವೆ. ವಿರೋಚಿತ ಘಟನೆಗಳು ಮಾಸ್‌ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗುತ್ತದೆ.

ಮೀನಾಕ್ಷಿ ಚೌಧರಿ ಅವರು ತಮ್ಮ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಸಿಬಿಐ ಅಧಿಕಾರಿಯಾಗಿ ಸಾಯಿ ಕುಮಾರ್ ಮತ್ತು ಬ್ಯಾಂಕ್ ಎಂಡಿಯಾಗಿ ಟಿನು ಆನಂದ್ ತಮ್ಮ ಪಾತ್ರಗಳಲ್ಲಿ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ಎಡಿಟಿಂಗ್ ಗರಿಗರಿಯಾಗಿದೆ. ಸಂಭಾಷಣೆಗಳನ್ನು ಅತ್ಯುತ್ತಮವಾಗಿ ಬರೆಯಲಾಗಿದೆ. ಪ್ರೊಡಕ್ಷನ್‌ಗೆ ಹೆಚ್ಚಿನ ಕಾಳಜಿ ವಹಿಸಿರುವುದು ಪರದೆಯ ಮೇಲೆ ಸ್ಪಷ್ಟವಾಗಿ ಕಾಣಿಸುತ್ತದೆ.

ನಿರ್ಮಾಣ ವಿನ್ಯಾಸವು ಚಿತ್ರದ ಯಶಸ್ಸಿಗೆ ಕಾರಣವಾದ ಇನ್ನೊಂದು ಅಂಶ ಎಂದರೆ ತಪ್ಪಾಗದು. ಬ್ಯಾಂಕ್ ಸೆಟ್ ಮತ್ತು 80ರ ದಶಕದ ಅಂತ್ಯದ ವಾತಾವರಣವನ್ನು ಸುಂದರವಾಗಿ ತೋರಿಸಲಾಗಿದೆ. ಇದಕ್ಕಾಗಿ ಚಿತ್ರದ ಕಲಾ ವಿಭಾಗಕ್ಕೂ ಧನ್ಯವಾದ ಹೇಳಬೇಕು. ಜಿವಿ ಪ್ರಕಾಶ್ ಅವರ ಸಂಗೀತವು ಅತ್ಯುತ್ತಮವಾಗಿದೆ. ಎಲ್ಲಾ ಹಾಡುಗಳು ಹೃದಯ ತಟ್ಟುತ್ತದೆ. ಹಿನ್ನೆಲೆ ಸಂಗೀತವು ದೃಶ್ಯಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ.

ವೆಂಕಿ ಅಟ್ಲೂರಿ ಅವರ ಚಿತ್ರಕಥೆಯ ಮೇಲೆ ಉತ್ತಮ ಹಿಡಿತ ಹೊಂದಿದ್ದಾರೆ. ಒಳ್ಳೆಯ ಇಂಟರ್‌ವಲ್‌ ಮತ್ತು ಕ್ಲೈಮ್ಯಾಕ್ಸ್‌ ನೀಡಿದ್ದಾರೆ. ಇಂಟರ್‌ವಲ್‌ ಬಳಿಕದ ಕೆಲವು ದೃಶ್ಯಗಳು ಅನಗತ್ಯವೆನಿಸಬಹುದು. ಲಕ್ಕಿ ಬಾಸ್ಕರ್‌ ಸಿನಿಮಾವು ಪ್ರೇಕ್ಷಕರನ್ನು ಕೊನೆಯವರೆಗೆ ರಂಜಿಸುವ ತಂತ್ರವನ್ನು, ಉದ್ದೇಶವನ್ನು ಹೊಂದಿರುವುದರಿಂದ ಚಿತ್ರಮುಗಿದ ಬಳಿಕ ಪ್ರೇಕ್ಷಕರು ಹ್ಯಾಪಿಯಾಗಿ ಚಿತ್ರಮಂದಿರದಿಂದ ಹೊರಬರಬಹುದು. ಲಕ್ಕಿ ಭಾಸ್ಕರ್ ಎಲ್ಲ ರೀತಿಯಲ್ಲೂ ಚೆನ್ನಾಗಿ ರೂಪಿಸಿದ ಚಿತ್ರ. ತೆಲುಗು ಸಿನಿಮಾದ ವಾಡಿಕೆಯ ವಿಧಾನಗಳನ್ನು ಪಕ್ಕಕ್ಕಿಟ್ಟು ನಿರ್ಮಿಸಿರುವ ಲಕ್ಕಿ ಭಾಸ್ಕರ್ ರಿಫ್ರೆಶ್ ಮತ್ತು ಒಳ್ಳೆಯ ಮನರಂಜನೆಯ ಫೀಲ್‌ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಆಗಮಿಸಿದ ಸಂಪೂರ್ಣವಾಗಿ ಮನರಂಜನೆ ನೀಡುವ ತೆಲುಗು ಚಿತ್ರಗಳಲ್ಲಿ ಲಕ್ಕಿ ಬಾಸ್ಕರ್ ಒಂದಾಗಿದೆ. ಹಿನ್ನೆಲೆ, ಭಾವನೆಗಳು, ರೋಮಾಂಚನಗಳು ಮತ್ತು ದುಲ್ಕರ್ ಸಲ್ಮಾನ್ ಅವರ ಅದ್ಭುತ ನಟನೆಯು ಈ ಚಿತ್ರವನ್ನು ವಿಷಯ ಮತ್ತು ಮನರಂಜನೆಯನ್ನು ಶ್ರೀಮಂತವಾಗಿಸಿದೆ.

ಚಿತ್ರವಿಮರ್ಶೆ ಕೃಪೆ: ಓಟಿಟಿಪ್ಲೇ

ವಿಮರ್ಶಕರು: ಅವದ್ ಮೊಹಮ್ಮದ್

ರೇಟಿಂಗ್‌: 3.5/5

ಕನ್ನಡಕ್ಕೆ: ಪ್ರವೀಣ್‌ ಚಂದ್ರ ಪುತ್ತೂರು (ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ)

Whats_app_banner