Rishab shetty in Kantara: ಎಲ್ಲವನ್ನೂ ಶಾಸ್ತ್ರೋಕ್ತವಾಗಿ ಮಾಡಿದ್ದೇವೆ...ದೈವ ನರ್ತಕ ಪಾತ್ರದ ತಯಾರಿ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?
ದೇವರ ಪೂಜೆಗೆ ಹೇಗೆ ಮಡಿಯಾಗಿ ಇರುತ್ತೇವೋ, ದೈವಾರಾಧನೆಗೆ ಕೂಡಾ ಅಷ್ಟೇ ಮಡಿಯಾಗಿರಬೇಕು. ಆದ್ದರಿಂದ ಇಡೀ ಸೆಟ್‌ನಲ್ಲಿ ನಾನ್ ವೆಜ್‌ಗೆ ಅವಕಾಶ ಇರಲಿಲ್ಲ. ನಾವು ಸೆಟ್ ಹಾಕಿದ ಸುತ್ತಮುತ್ತ ಕೂಡಾ ಭೂತಾರಾಧನೆ ಮಾಡುವವರ ಮನೆಗಳು ಇದ್ದವು. ಈ ಸಂದರ್ಭದಲ್ಲಿ ನಮಗೆ ಕೆಲವೊಂದು ಅನುಭವಗಳಾಗಿವೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ, ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಶುಕ್ರವಾರ ತೆರೆ ಕಂಡಿದೆ. ಎಲ್ಲರೂ ಚಿತ್ರ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ರಿಷಬ್ ಶೆಟ್ಟಿ ನಟನೆ, ಮೇಕಿಂಗ್ ನೋಡಿ ಸಿನಿಮಾ ಅತ್ಯದ್ಭುತ ಎಂದಿದ್ದಾರೆ. ಅದರಲ್ಲೂ ಕೊನೆಯ 20 ನಿಮಿಷಗಳು ಮಾತ್ರ ವರ್ಣಿಸಲು ಅಸಾಧ್ಯ ಎಂದು ಸಿನಿಮಾ ನೋಡಿದ ಪ್ರತಿಯೊಬ್ಬರೂ ಹೇಳುವ ಮಾತು.
ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಘರ್ಷದ ಎಳೆ ಇಟ್ಟುಕೊಂಡು ತಯಾರಾಗಿರುವ ಈ ಚಿತ್ರದಲ್ಲಿ ಭೂತದ ಕೋಲದ ಬಗ್ಗೆ ಕೂಡಾ ಚಿತ್ರಿಸಲಾಗಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ದೈವ ನರ್ತಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಭಾಗದಲ್ಲಿ ದೈವಾರಾಧನೆಗೆ ಕೂಡಾ ಬಹಳ ಪ್ರಾಮುಖ್ಯತೆ ಇದೆ. ಈ ಪಾತ್ರಕ್ಕೆ ಬಣ್ಣ ಹಚ್ಚುವುದು ಸುಲಭದ ಮಾತಾಗಿರಲಿಲ್ಲ. ಇದಕ್ಕೆ ಸಾಕಷ್ಟು ತಯಾರಿ ಬೇಕು. ಜೊತೆಗೆ ಬಹಳ ಶಾಸ್ತ್ರೋಕ್ತವಾಗಿ ಮಾಡಬೇಕು. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಷಬ್ ಶೆಟ್ಟಿ, ತಾವು ಆ ಪಾತ್ರಕ್ಕೆ ಮಾಡಿಕೊಂಡಿದ್ದ ತಯಾರಿ ಬಗ್ಗೆ ಮಾತನಾಡಿದ್ದಾರೆ.
''ಚಿಕ್ಕ ವಯಸ್ಸಿನಿಂದ ನಾವು ಅದೇ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಪ್ರತಿ ವರ್ಷವೂ ದೈವದ ಮನೆಗಳಿಗೆ ತಪ್ಪದೆ ಭೇಟಿ ನೀಡುತ್ತೇವೆ. ದೇವರ ಪೂಜೆಗೆ ಹೇಗೆ ಮಡಿಯಾಗಿ ಇರುತ್ತೇವೋ, ದೈವಾರಾಧನೆಗೆ ಕೂಡಾ ಅಷ್ಟೇ ಮಡಿಯಾಗಿರಬೇಕು. ಆದ್ದರಿಂದ ಇಡೀ ಸೆಟ್‌ನಲ್ಲಿ ನಾನ್ ವೆಜ್‌ಗೆ ಅವಕಾಶ ಇರಲಿಲ್ಲ. ನಾವು ಸೆಟ್ ಹಾಕಿದ ಸುತ್ತಮುತ್ತ ಕೂಡಾ ಭೂತಾರಾಧನೆ ಮಾಡುವವರ ಮನೆಗಳು ಇದ್ದವು. ಈ ಸಂದರ್ಭದಲ್ಲಿ ನಮಗೆ ಕೆಲವೊಂದು ಅನುಭವಗಳಾಗಿವೆ. ಆದರೆ ಅದನ್ನು ಹೇಳಿಕೊಳ್ಳಲು ಆಗುವುದಿಲ್ಲ. ದೇವರನ್ನು ನಿರ್ಮಿಸಿದ್ದ ಸ್ಥಳದಲ್ಲಿ ಚಪ್ಪಲಿ ಧರಿಸಿ ಬರಲು ನಿಷೇಧವಿತ್ತು. ಭೂತದ ಕೋಲ ಪಾತ್ರ ಮಾಡುವ ಸುಮಾರು 25 ದಿನಗಳ ಮೊದಲೇ ನಾನು ಸಂಪೂರ್ಣ ನಾನ್ ವೆಜ್ ತ್ಯಜಿಸಿದ್ದೆ. ಭೂತದ ಕೋಲದ ವೇಷದಲ್ಲಿದ್ದಾಗ ನಾನು ಊಟ ಕೂಡಾ ಮಾಡುತ್ತಿರಲಿಲ್ಲ. ಅವಲಕ್ಕಿ ಪ್ರಸಾದ ಹಾಗೂ ಎಳನೀರು ಮಾತ್ರ ಸೇವಿಸುತ್ತಿದ್ದೆ'' ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಹಾಗೇ ಭೂತದ ಕೋಲ ಪಾತ್ರ ಮಾಡುವ ಮುನ್ನ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿ ಬಂದಿದ್ದರಂತೆ. ಸಿನಿಮಾ ಪ್ರೀಮಿಯರ್ ಶೋ ಸಮಯದಲ್ಲಿ ಕೂಡಾ ನಟ ಪ್ರಮೋದ್ ಶೆಟ್ಟಿ ಮಾತನಾಡಿ, 'ಚಿತ್ರದ ಕ್ಲೈಮಾಕ್ಸ್‌ನಲ್ಲಿ ರಿಷಬ್ ಶೆಟ್ಟಿ ಅವರಾಗಿರಲಿಲ್ಲ, ಅವರ ಮೇಲೆ ನಿಜವಾಗಿಯೂ ದೈವ ಬಂದಿದ್ದು, ಅದರ ಪ್ರೇರಣೆಯಿಂದಲೇ ಅವರು ಅಷ್ಟು ಅದ್ಭುತವಾಗಿ ನಟಿಸಿದ್ದು. ಈ ಸಿನಿಮಾದಲ್ಲಿ ನಟಿಸಿದ್ದು ನನ್ನ ಅದೃಷ್ಟ'' ಎಂದು ಹೇಳಿದ್ದರು.
ದಕ್ಷಿಣ ಕನ್ನಡದ ಸಂಸ್ಕೃತಿ ಮತ್ತು ಅಲ್ಲಿನ ಸೊಗಡನ್ನು ಸುಂದರವಾಗಿ ಕಟ್ಟಿಕೊಟ್ಟಿರುವ 'ಕಾಂತಾರ' ಸಿನಿಮಾ ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳು ಮತ್ತು ವಿದೇಶಗಳಲ್ಲಿಯೂ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ದಂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಚಿತ್ರವನ್ನು ರಾಜ್ಯದಲ್ಲಿ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ವಿತರಿಸಿದೆ.