ಕನ್ನಡ ಸುದ್ದಿ  /  Karnataka  /  Bangalore Coimbatore Double Decker Uday Express Runs In 7 Days In A Week From March 5 Rmy

Indian Railway: ಇಂದಿನಿಂದ ಬೆಂಗಳೂರು-ಕೊಯಮತ್ತೂರು ಡಬಲ್ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್ ರೈಲು ವಾರದ 7 ದಿನ ಸಂಚಾರ

Indian Railway: ಬೆಂಗಳೂರು ಮತ್ತು ಕೊಯಮತ್ತೂರು ಮಾರ್ಗದ ಡಬಲ್ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್ ವಾರದ ಎಲ್ಲಾ ದಿನಗಳಲ್ಲೂ ಸಂಚಾರ ನಡೆಸಲಿದೆ. ಈ ಹಿಂದೆ ಬುಧವಾರ ರೈಲು ಸೇವೆ ಇರಲಿಲ್ಲ.

ಮಾರ್ಚ್ 5 ರಿಂದ ಬೆಂಗಳೂರು-ಕೊಯಮತ್ತೂರು ಡಬಲ್ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್ ವಾರದ 7 ದಿನ ಸಂಚಾರ ನಡೆಸಲಿದೆ
ಮಾರ್ಚ್ 5 ರಿಂದ ಬೆಂಗಳೂರು-ಕೊಯಮತ್ತೂರು ಡಬಲ್ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್ ವಾರದ 7 ದಿನ ಸಂಚಾರ ನಡೆಸಲಿದೆ

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನಿಂದ ಕೊಯಮತ್ತೂರಿಗೆ ಸಂಚರಿಸುತ್ತಿದ್ದ ಡಬಲ್ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್ ರೈಲನ್ನು ವಾರದ 6 ದಿನಗಳ ಬದಲಾಗಿ 7 ದಿನ ಸಂಚರಿಸುವಂತೆ ಮಾಡಿದೆ. ಇಂದಿನಿಂದಲೇ (ಮಾರ್ಚ್ 5, ಮಂಗಳವಾರ) ವಾರದ ಏಳೂ ದಿನಗಳ ಸೇವೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಬುಧವಾರ ಈ ರೈಲಿನ ಸೇವೆ ಲಭ್ಯವಾಗುತ್ತಿರಲಿಲ್ಲ. ಇದೀಗ ಈ ದಿನವೂ ಕೂಡ ಡಬಲ್ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಗಳೂರಿನಿಂದ ಕೊಯಮತ್ತೂರು ಮಾರ್ಗದಲ್ಲಿ ಪ್ರಯಾಣಿಸಬಹುದಾಗಿದೆ. ಒಂದು ದಿನವನ್ನು ಹೆಚ್ಚಿಸಲಾಗಿದೆ. ಆದರೆ ಕೋಚ್‌ಗಳ ಸ್ಥಾನ, ಸಮಯ ಹಾಗೂ ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ರೈಲು ಸಂಖ್ಯೆ 22665/22666 ಕೆಎಸ್‌ಆರ್ ಬೆಂಗಳೂರು-ಕೊಯಮತ್ತೂರು-ಬೆಂಗಳೂರು ಡಬಲ್ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್ ಬುಧವಾರ ಸೇರಿದಂತೆ ವಾರದ ಏಳೂ ದಿನ ಸಂಚರಿಸಲಿದೆ ಎಂದು ಬೆಂಗಳೂರಿನಲ್ಲಿರುವ ನೈಋತ್ಯ ರೈಲ್ವೆ ಅಧಿಕಾರಿಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಿಂದ ಕೊಯಮತ್ತೂರಿಗೆ ಡಬಲ್ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್ ರೈಲು ಸಂಚಾರ ಒಟ್ಟು ನಿಲ್ದಾಣಗಳು

ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್‌(ಎಸ್‌ಬಿಸಿ)ನಿಂದ ಕೊಯಮತ್ತೂರು ಜಂಕ್ಷನ್ (ಸಿಬಿಇ) ವರೆಗೆ ಒಟ್ಟು 419 ಕಿಲೋ ಮೀಟರ್‌ಗಳ ರೈಲು ಸಂಚಾರ ಮಾರ್ಗವಾಗಿದ್ದು, 8 ನಿಲ್ದಾಣಗಳಲ್ಲಿ ರೈಲನ್ನು ನಿಲ್ಲಿಸಲಾಗುತ್ತದೆ. ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ನಿಂದ ಆರಂಭವಾದರೆ 2ನೇ ನಿಲ್ದಾಣ ಕೃಷ್ಣರಾಜಪುರ, 3 ಕುಪ್ಪಂ, 4 ಸೇಲಂ, 5 ಇರೋಡ್, 6 ತಿರುಪತಿ, 7 ಕೊಯಮತ್ತೂರು ನಾರ್ಥ್ ಹಾಗೂ 8 ಕೊಯಮತ್ತೂರು ಜಂಕ್ಷನ್‌ನಲ್ಲಿ ಕೊನೆಗೊಳ್ಳಲಿದೆ.

ಬೆಂಗಳೂರಿನಿಂದ ಕೊಯಮತ್ತೂರಿಗೆ ಡಬಲ್ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್ ರೈಲಿನ ಸಮಯ

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಾರ್ಚ್ 5ರ ಮಂಗಳವಾರದಿಂದ ಪ್ರತಿದಿನ ಮಧ್ಯಾಹ್ನ 2 ಗಂಟೆ 15 ನಿಮಿಷಕ್ಕೆ ಹೊರಡಲಿರುವ ಡಬಲ್ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್ ರೈಲು ಕೃಷ್ಣರಾಜಪುರಕ್ಕೆ ಮಧ್ಯಾಹ್ನ 2.34, ಕುಪ್ಪಂಗೆ 3.42, ಸೇಲಂ ನಿಲ್ದಾಣಕ್ಕೆ ಸಂಜೆ 5.52, ಇರೋಡ್‌ಗೆ ಸಂಜೆ 6.55, ತಿರುಪತಿಗೆ ರಾತ್ರಿ 7.43, ಕೊಯಮತ್ತೂರು ನಾರ್ಥ್‌ಗೆ 8.28ಕ್ಕೆ ಹಾಗೂ ಕೊಯಮತ್ತೂರು ಜಂಕ್ಷನ್‌ಗೆ ರಾತ್ರಿ 9 ಗಂಟೆಗೆ ತಲುಪುತ್ತದೆ. ಇರೋಡ್ ಜಂಕ್ಷನ್‌ನಲ್ಲಿ ಮಾತ್ರ 5 ನಿಮಿಷ ನಿಲ್ಲಿಸುತ್ತದೆ.

ಬೆಂಗಳೂರಿನಿಂದ ಕೊಯಮತ್ತೂರಿಗೆ ಡಬಲ್ ಡೆಕ್ಕರ್ ಉದಯ್ ಎಕ್ಸ್‌ಪ್ರೆಸ್ ರೈಲಿನ ಟಿಕೆಟ್ ದರಗಳು

ರೈಲಿನಲ್ಲಿ ಬೆಂಗಳೂರಿನಿಂದ ಕೊಯಮತ್ತೂರಿಗೆ 2ಎಸ್‌ಗೆ ಟಿಕೆಟ್ ಬೆಲೆ 180 ರೂಪಾಯಿ, ತಾತ್ಕಾಲ್ ಟಿಕೆಟ್ 195 ರೂಪಾಯಿ, ಸಿಸಿ ಟಿಕೆಟ್ ಬೆಲೆ 625 ರೂ ಹಾಗೂ ಸಿಸಿ ತಾತ್ಕಾಲ್ 790 ರೂಪಾಯಿ ಇದೆ. ಅತ್ಯಂತ ಸುರಕ್ಷಿತ ಸಾರಿಗೆ ಸೇವೆೆಯಲ್ಲಿ ರೈಲು ಸೇವೆ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಪ್ರತಿನಿತ್ಯ ಲಕ್ಷಾಂತರ ಮಂದಿ ರೈಲುಗಳ ಪ್ರಯಾಣವನ್ನೇ ಅವಲಂಬಿಸಿದ್ದಾರೆ. ಪ್ರಯಾಣಿಕರ ಆದ್ಯತೆ ಹಾಗೂ ಅನುಗುಣವಾಗಿ ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇದೆ. ಜೊತೆಗೆ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಮಾಡುತ್ತಾ ಬಂದಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )