Bangalore News: ಬೆಂಗಳೂರಿಗೆ ಹರಿದು ಬರುತ್ತಲೇ ಇದೆ ವಿದೇಶಿ ಮಾದಕ ವಸ್ತು, ಭಾರೀ ಮೌಲ್ಯದ ಇ ಸಿಗರೇಟ್ ವಶ
ಮಾದಕವಸ್ತು ಜಾಲದ ಮೇಲೆ ಪೊಲೀಸರು ನಿರಂತರ ದಾಳಿ ಮಾಡುತ್ತಿದ್ದರೂ ಬೆಂಗಳೂರಿನಲ್ಲಿ ಪ್ರಕರಣಗಳು ಹೆಚ್ಚುತ್ತಿವೆ.ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಬೆಂಗಳೂರಿನ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಯಶಸ್ವಿ ಕಾರ್ಯಾಚರಣೆ ನಡೆಸಿ ಓರ್ವ ವಿದೇಶಿ ಪ್ರಜೆ ಸೇರಿದಂತೆ ಮೂವರನ್ನು ಬಂಧಿಸಿ 5.5 ಕೆಜಿ ಗಾಂಜಾ ಮತ್ತು ವಿದೇಶಿ ಸಿಗರೇಟ್ ಗಳನ್ನು ವಶಪಡಿಸಿಕೊಂಡಿದೆ. ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸಿ ಆತನಿಂದ 10 ಲಕ್ಷ ರೂ. ಮೌಲ್ಯದ 5.5 ಕೆಜಿ ಗಾಂಜಾ ವಶಪಡಿಸಿಕೊಂಡಿದೆ.
ಮತ್ತೊಂದು ಪ್ರಕರಣದಲ್ಲಿ 22 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ ಇ-ಸಿಗರೇಟ್, ವಿದೇಶಿ ಸಿಗರೇಟ್ ಗಳು, ಹುಕ್ಕಾ ಪ್ಲೇವರ್‌ಗಳು ಮತ್ತು ಹುಕ್ಕಾ ಪಾಟ್‌ಗಳನ್ನು ವಶಪಡಿಸಿಕೊಂಡಿದೆ.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾಗುತ್ತದೆ. ಈತನ ಮನೆಯ ಮೇಲೆ ದಾಳಿ ನಡೆಸಿದಾಗ 10 ಲಕ್ಷ ರೂ. ಮೌಲ್ಯದ 5.5 ಕೆಜಿ ಗಾಂಜಾ ಸಿಕ್ಕಿದೆ.
ಈತ ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು, ಬೇಗೂರಿನಲ್ಲಿರುವ ಸ್ಪೋರ್ಟ್ಸ್ ಕ್ಲಬ್‌ವೊಂದರಲ್ಲಿ ಸ್ವಿಮ್ಮಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದ ಐಶಾರಾಮಿ ಜೀವನ ನಡೆಸುವ ಉದ್ದೇಶದಿಂದ ಸ್ಥಳೀಯ ಪೆಡ್ಲರ್‌ಗಳಿಂದ ಗಾಂಜಾವನ್ನು ಖರೀದಿಸಿ ಪರಿಚಯಸ್ಥ ಗಿರಾಕಿಗಳಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದಾನೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
22.35 ಲಕ್ಷ ರೂ ಮೌಲ್ಯದ ಇ-ಸಿಗರೇಟ್ ವಶ
ಮತ್ತೊಂದು ಪ್ರಕರಣದಲ್ಲಿ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬನ ಮನೆಯ ಮೇಲೆ ದಾಳಿ ನಡೆಸಿದಾಗ 22.35 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 291 ಇ-ಸಿಗರೇಟ್, 240 ವಿದೇಶಿ ಸಿಗರೇಟ್ ಪ್ಯಾಕ್‌ಗಳು, 360 ವಿವಿಧ ಬಗೆಯ ಹುಕ್ಕಾ ಪ್ಲೇವರ್‌ಗಳು ಮತ್ತು 100 ಹುಕ್ಕಾ ಪಾಟ್‌ಗಳನ್ನು ಸಿಸಿಬಿ ವಶಪಡಿಸಿಕೊಂಡಿದೆ.
ಕೊಕೇನ್ ಮಾರುತ್ತಿದ್ದ ವ್ಯಕ್ತಿ ಬಂಧನ
ಮೂರನೇ ಪ್ರಕರಣದಲ್ಲಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಕತ್ರಿಗುಪ್ಪೆಯ ಆಟದ ಮೈದಾನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಿಷೇದಿತ ಮಾದಕ ವಸ್ತು ಕೊಕೇನ್‌ನನ್ನು ಯುವಕರಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ರೀತಿ ಮಾರಾಟ ಮಾಡುತ್ತಿದ್ದ ಓರ್ವ ವಿದೇಶಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತನಿಂದ ರೂ. 1,75,000 ಮೌಲ್ಯದ 24 ಗ್ರಾಂ ತೂಕದ ಮಾದಕ ವಸ್ತು ಕೊಕೇನ್ ಹಾಗೂ 1,000 ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಈ ನಿಷೇಧಿತ ವಸ್ತುಗಳನ್ನು ಸಂಗ್ರಹಿಸಿದ್ದ ಇಬ್ಬರು ಮಾಲೀಕರು ಹಾಗೂ ಮತ್ತೋರ್ವ ಕೆಲಸಗಾರನ ತಲೆಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ವಿದೇಶಿ ಪ್ರಜೆ ಸೆರೆ
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವ ವಿದೇಶಿ ಪ್ರಜೆಯೊಬ್ಬ ಅಕ್ರಮವಾಗಿ ನೆಲೆಸಿರುವ ಮಾಹಿತಿ ಲಭ್ಯವಾಗಿದ್ದು, ಎಂ.ಎಸ್. ನಗರದಲ್ಲಿ ಈತನನ್ನು ಬಂಧಿಸಲಾಗಿದೆ.
ವಿದೇಶಿ ಪ್ರಜೆಯನ್ನು ವಿಚಾರಣೆಗೊಳಪಡಿಸಿದಾಗ, ಈತ 2014 ರಲ್ಲಿ ಸ್ಟೂಡೆಂಟ್ ವೀಸಾ ಪಡೆದು ಭಾರತಕ್ಕೆ ಆಗಮಿಸಿ, ಮಂಗಳೂರಿನ ಕರ್ನಾಟಕ ಸ್ಟೇಟ್ ಲಾ ಯೂನಿವರ್ಸಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾನೆ. 2023ನೇ ನವೆಂಬರ್ ತಿಂಗಳಿನಲ್ಲೇ ಪಾಸ್‌ಪೋರ್ಟ್ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ವಾಸವಾಗಿದ್ದಾನೆ. ನ್ಯಾಯಾಲಯದ ಆದೇಶದಂತೆ ಸೊಂಡೆಕೊಪ್ಪದಲ್ಲಿರುವ ಫಾರಿನರ್ ರಿಸ್ಟ್ರಿಕ್ಷನ್ ಸೆಂಟರ್ (ಎಫ್.ಆರ್.ಸಿ) ನಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ: ಎಚ್. ಮಾರುತಿ, ಬೆಂಗಳೂರು)