BMTC Digital Pass: ಡಿಜಿಟಲ್‌ ಪಾಸ್‌ ಕಡ್ಡಾಯದಿಂದ ಹಿಂದೆ ಸರಿದ ಬಿಎಂಟಿಸಿ; ಈಗ ಡಿಜಿಟಲ್‌, ಮುದ್ರಿತ ಪಾಸ್‌ ಕೂಡ ಲಭ್ಯ-bangalore news bmtc took back order of digital pass compulsory commuters use both digital and manual mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bmtc Digital Pass: ಡಿಜಿಟಲ್‌ ಪಾಸ್‌ ಕಡ್ಡಾಯದಿಂದ ಹಿಂದೆ ಸರಿದ ಬಿಎಂಟಿಸಿ; ಈಗ ಡಿಜಿಟಲ್‌, ಮುದ್ರಿತ ಪಾಸ್‌ ಕೂಡ ಲಭ್ಯ

BMTC Digital Pass: ಡಿಜಿಟಲ್‌ ಪಾಸ್‌ ಕಡ್ಡಾಯದಿಂದ ಹಿಂದೆ ಸರಿದ ಬಿಎಂಟಿಸಿ; ಈಗ ಡಿಜಿಟಲ್‌, ಮುದ್ರಿತ ಪಾಸ್‌ ಕೂಡ ಲಭ್ಯ

ಎಲ್ಲರ ಬಳಿಯೂ ಸ್ಮಾರ್ಟ್ ಫೋನ್‌ ಇರುವುದಿಲ್ಲ ಎಂಬ ಟೀಕೆಗಳ ಹಿನ್ನೆಲೆ ಡಿಜಿಟಲ್‌ ಪಾಸ್‌ ಕಡ್ಡಾಯದ ನಿರ್ಧಾರದಿಂದ ಹಿಂದೆ ಸರಿದ ಬಿಎಂಟಿಸಿ( BMTC Digital Pass). ಡಿಜಿಟಲ್‌, ಮುದ್ರಿತ ಎರಡೂ ರೀತಿಯ ಬಸ್‌ ಪಾಸ್‌ ಪ್ರಯಾಣಿಕರಿಗೆ ಒದಗಿಸುವುದಾಗಿ ಹೇಳಿದೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಬೆಂಗಳೂರಿನಲ್ಲಿ ಬಿಎಂಟಿಸಿ ಡಿಜಿಟಲ್‌ ಪಾಸ್‌ ಜತೆಗೆ ಮುದ್ರಿತ ಪಾಸ್‌ ಅನ್ನೂ ಮುಂದುವರಿಸಲಿದೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಡಿಜಿಟಲ್‌ ಪಾಸ್‌ ಜತೆಗೆ ಮುದ್ರಿತ ಪಾಸ್‌ ಅನ್ನೂ ಮುಂದುವರಿಸಲಿದೆ. (The Hindu)

ಬೆಂಗಳೂರು: ಎಲ್ಲಾ ರೀತಿಯ ಬಸ್‌ ಪಾಸ್‌ ಗಳನ್ನು ಸೆಪ್ಟಂಬರ್‌ 15 ರಿಂದ ಡಿಜಿಟಲೀಕರಣಗೊಳಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯ ತೀರ್ಮಾನಕ್ಕೆ ತೀವ್ರ ಟೀಕೆಗಳು ವ್ಯಕ್ತವಾದ ನಂತರ ಬಿಎಂಟಿಸಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಹಿಂದಿನಂತೆ ಡಿಜಿಟಲ್‌ ಮತ್ತು ಮುದ್ರಿತ ಬಸ್‌ ಪಾಸ್‌ ಗಳನ್ನು ನೀಡಲು ತೀರ್ಮಾನಿಸಿದೆ. ದೈನಿಕ, ಸಾಪ್ತಾಹಿಕ ಮತ್ತು ಮಾಸಿಕ ಬಸ್‌ ಪಾಸ್‌ ಗಳನ್ನು ಮೊಬೈಲ್‌ ಆಪ್‌ ಮೂಲಕ ವಿತರಿಸಲು ಬಿಎಂಟಿಸಿ ಕ್ರಮ ಕೈಗೊಂಡಿತ್ತು. ಪ್ರಯಾಣಿಕರಿಗೆ ಸುಲಭ ಮತ್ತು ಸರಾಗವಾಗಿ ಪಾಸ್‌ ದೊರಕಬೇಕೆಂಬ ಉದ್ದೇಶದಿಂದ ಹಾಗೂ ಇಲಾಖೆಯನ್ನು ಕಾಗದರಹಿತಗೊಳಿಸುವ ನಿಟ್ಟಿನಲ್ಲಿ ಸೆಪ್ಟಂಬರ್‌ 15 ರಿಂದ ಅನ್ವಯವಾಗುವಂತೆ ಡಿಜಿಟಲ್‌ ಪಾಸ್‌ ಗಳನ್ನು ವಿತರಿಸಲು ನಿರ್ಧರಿಸಿತ್ತು.

ಪ್ರಯಾಣಿಕರು ಪ್ಲೇ ಸ್ಟೋರ್‌ ನಿಂದ ಟುಮ್ಯಾಕ್‌ ಆಪ್‌ ಡೌನ್‌ ಲೋಡ್‌ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ನಂತರ ಬೇಕಾದ ಪಾಸ್‌ ಆಯ್ಕೆ ಮಾಡಿಕೊಂಡು ವಿವಿರಗಳನ್ನು ಭರ್ತಿ ಮಾಡಿ ಭಾವಚಿತ್ರ ಸಹಿತ ಅಪ್‌ ಲೋಡ್‌ ಮಾಡಬೇಕು. ಈ ಅರ್ಜಿ ದೃಢೀಕರಣಗೊಂಡ ನಂತರ ಪಾಸ್‌ ನ ಮೊತ್ತವನ್ನು ಪಾವತಿಸಿ ಬಸ್‌ ಪಾಸ್‌ ಪಡೆಯಬಹುದಾಗಿತ್ತು. ಶುಕ್ರವಾರವಷ್ಟೇ ಈ ನಿರ್ಧಾರವನ್ನು ಪ್ರಕಟಿಸಿದ್ದ ಬಿಎಂಟಿಸಿ ತೀವ್ರ ಟೀಕೆಗಳು ವ್ಯಕ್ತವಾದ ನಂತರ ಡಿಜಿಟಲ್‌ ಪಾಸ್‌ ಗಳ ಜೊತೆಗೆ ಮುದ್ರಿತ ಪಾಸ್‌ ಗಳನ್ನೂ ವಿತರಿಸುವುದಾಗಿ ತಿಳಿಸಿದೆ.

ಈ ಹೊಸ ತಂತ್ರಜ್ಞಾನದ ವ್ಯವಸ್ಥೆಯಿಂದ ವಿಶೇಷವಾಗಿ ಹಿರಿಯ ನಾಗರೀಕರು ತೊಂದರೆಗೀಡಾಗುತ್ತಾರೆ. ಬಡವರೂ ಸಹ ಸ್ಮಾರ್ಟ್‌ ಫೋನ್‌ ಗಳನ್ನು ಇಟ್ಟುಕೊಂಡಿರುವುದಿಲ್ಲ. ಖಾಸಗಿ ಆಪ್‌ ಬಳಕೆ ಮಾಡುವುದರಿಂದ ವೈಯಕ್ತಿಕ ಮಾಹಿತಿ ಸೋರಿ ಹೋಗುತ್ತದೆ ಎಂಬ ಆತಂಕವೂ ವ್ಯಕ್ತವಾಗಿತ್ತು.

ಈ ಹಿನ್ನಲೆಯಲ್ಲಿ ಬೆಂಗಳೂರಿನ ಎಲ್ಲಾ ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಮುದ್ರಿತ ಪಾಸ್‌ ಗಳನ್ನು ವಿತರಿಸಲಾಗುತ್ತದೆ. ಗ್ರಾಹಕರು ತಮಗೆ ಅನುಕೂಲವಾಗುವ ಪಾಸ್‌ ಗಳನ್ನು ಪಡೆಯಬಹುದಾಗಿದೆ.

ಡಿಜಿಟಲ್‌ ಪಾಸ್‌ ಆಯ್ಕೆ ಮಾಡಿಕೊಳ್ಳುವವರು ಟುಮ್ಯಾಕ್‌ ಆಪ್‌ ಅನ್ನು ಡೌನ್‌ ಲೋಡ್‌ ಮಾಡಿಕೊಳ್ಳಲೇಬೇಕು. ನಂತರ ತಮ್ಮಿಷ್ಟದ ಪಾಸ್‌ ಆಯ್ಕೆ ಮಾಡಿಕೊಂಡು ಹಣ ಪಾವತಿಸಿ ಪಾಸ್‌ ಅನ್ನು ಡೌನ್‌ ಲೋಡ್‌ ಮಾಡಿಕೊಳ್ಳಬಹುದಾಗಿದೆ. ಪ್ರಯಾಣ ಮಾಡುವಾಗ ಗುರುತಿನ ಚೀಟಿಯನ್ನು ಹೊಂದಿರಬೇಕು.ಪ್ರಯಾಣಿಕರು ಪಾಸ್‌ ಅನ್ನು ಬಸ್‌ ನಲ್ಲಿರುವ ಕ್ಯೂ ಆರ್‌ ಕೋಡ್‌ ಮೂಲಕ ಸ್ಕ್ಯಾನ್‌ ಮಾಡಬೇಕಾಗುತ್ತದೆ. ಎರಡೂ ರೀತಿಯ ವ್ಯವಸ್ಥೆ ಇರುವುದರಿಂದ ಗ್ರಾಹಕರಿಗೆ ಅನುಕೂಲವಾಗುತ್ತದೆ. ತಮಗೆ ಅನುಕೂಲವಾಗುವ ಬಸ್‌ ಪಾಸ್ ಪಡೆಯಬಹುದಾಗಿದೆ.

ವರದಿ: ಎಚ್‌.ಮಾರುತಿ, ಬೆಂಗಳೂರು