ಕನ್ನಡ ಸುದ್ದಿ  /  ಕರ್ನಾಟಕ  /  ದರ್ಶನ್‌ ಮೇಲೆ ಕೊಲೆ ಪ್ರಕರಣ ಮಾತ್ರವಲ್ಲ ವನ್ಯಜೀವಿ ಕಾಯಿದೆ ಉಲ್ಲಂಘನೆ ಮೊಕದ್ದಮೆಯೂ ಉಂಟು

ದರ್ಶನ್‌ ಮೇಲೆ ಕೊಲೆ ಪ್ರಕರಣ ಮಾತ್ರವಲ್ಲ ವನ್ಯಜೀವಿ ಕಾಯಿದೆ ಉಲ್ಲಂಘನೆ ಮೊಕದ್ದಮೆಯೂ ಉಂಟು

Forest News

ದರ್ಶನ್‌ ಪ್ರಾಣಿ, ಪಕ್ಷಿ ಪ್ರಿಯರೂ ಹೌದು. ಅವರ ವಿರುದ ಅಕ್ರಮವಾಗಿ ಹಕ್ಕಿ ಸಂಗ್ರಹಿಸಿಟ್ಟುಕೊಂಡ ಪ್ರಕರಣವೂ ಇದೆ.
ದರ್ಶನ್‌ ಪ್ರಾಣಿ, ಪಕ್ಷಿ ಪ್ರಿಯರೂ ಹೌದು. ಅವರ ವಿರುದ ಅಕ್ರಮವಾಗಿ ಹಕ್ಕಿ ಸಂಗ್ರಹಿಸಿಟ್ಟುಕೊಂಡ ಪ್ರಕರಣವೂ ಇದೆ.

ಬೆಂಗಳೂರು: ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ. ಇಡೀ ದೇಶದ ಗಮನ ಸೆಳೆದಿರುವ ಈ ಕೊಲೆ ಪ್ರರಣದಲ್ಲಿ ದರ್ಶನ್‌ ಅವರ ಪಾತ್ರವೇ ಪ್ರಮುಖವಾಗಿದೆ ಎನ್ನುವುದು ಪೊಲೀಸ್‌ ವಿಚಾರಣೆ ವೇಳೆ ಬಯಲಾಗುತ್ತಿದೆ. ಇದರ ನಡುವೆ ದರ್ಶನ್‌ ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿದ್ದವರು. ಆದರೆ ಅವರ ಮೈಸೂರು ಹೊರವಲಯದ ತೋಟದ ಮನೆಯಲ್ಲಿ ವಿಲಕ್ಷಣ ಗುಣದ ಹಕ್ಕಿಗಳನ್ನು( exotic birds) ಅನ್ನು ಅಕ್ರಮವಾಗಿ ಸಂಗ್ರಹಸಿಟ್ಟುಕೊಂಡ ಪ್ರಕರಣವೂ ಈ ಹಿಂದೆ ದಾಖಲಾಗಿದ್ದು. ಅದರ ವಿಚಾರಣೆಯೂ ಈ ವೇಳೆ ನಡೆಯುವ ಸಾಧ್ಯತೆಗಳಿವೆ.

ಕಳೆದ ವರ್ಷ ಖಚಿತ ಮಾಹಿತಿ ಮೇರೆಗೆ ಕರ್ನಾಟಕ ಅರಣ್ಯ ಇಲಾಖೆಯ ಮೈಸೂರು ವಿಭಾಗ ಹಾಗೂ ಅರಣ್ಯ ವಿಚಕ್ಷಣ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೈಸೂರು ಹೊರ ವಲಯದ ತಿ.ನರಸೀಪುರ ರಸ್ತೆಯಲ್ಲಿರುವ ದರ್ಶನ್‌ ಅವರ ತೋಟದ ಮನೆಗೆ ದಾಳಿ ಮಾಡಿದ್ದರು. ಇಲ್ಲಿ ಹೊರ ದೇಶಗಳಿಂದ ತಂದಿರುವ ವಿವಿಧ ಜಾತಿಯ ವಿಲಕ್ಷಣ ಹಕ್ಕಿಗಳನ್ನು ಸಾಕಲಾಗುತ್ತಿದೆ. ಇದನ್ನು ಸಾಕಲು ಅನುಮತಿ ಇಲ್ಲ. ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ ಎನ್ನುವ ದೂರು ನೀಡಲಾಗಿತ್ತು. ಇದನ್ನಾಧರಿಸಿಯೇ ಮೈಸೂರು ವೃತ್ತ್ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯಾ, ವಿಚಕ್ಷಣ ಘಟಕದ ಡಿಸಿಎಫ್‌ ಆಗಿದ್ದ ಭಾಸ್ಕರ್‌ ಹಾಗೂ ಸಿಬ್ಬಂದಿಗಳು ದಾಳಿ ಮಾಡಿದ್ದರು. ಆಗ ಪಟ್ಟೆ ಬಾತು ಸೇರಿದಂತೆ ಹಲವು ಬಗೆಯ ಹಕ್ಕಿಗಳನ್ನು ಅಕ್ರಮವಾಗಿ ಇರಿಸಿಕೊಂಡಿರುವುದು ಪತ್ತೆಯಾಗಿತ್ತು. ಅವುಗಳನ್ನು ವಶಕ್ಕೆ ಪಡೆದಿದ್ದ ಸಿಬ್ಬಂದಿ ನಟ ದರ್ಶನ್‌ ಹಾಗೂ ಇತರರ ವಿರುದ್ದ ಪ್ರಕರಣಗಳನ್ನು ದಾಖಲಿಸಿದ್ದರು.ವನ್ಯಜೀವಿ ಕಾಯಿದೆಯಡಿ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸಿದ್ದರು, ಇದರ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎನ್ನುವ ಅಂಶವನ್ನು ತನಿಖೆ ವೇಳೆ ದರ್ಶನ್‌ ಹಾಗೂ ಇತರರು ತಿಳಿಸಿದ್ದರು. ಇದಾದ ನಂತರ ತನಿಖೆ ಅಲ್ಲಿಗೆ ನಿಂತಿತ್ತು.

ಈ ಕುರಿತು ಹೇಳಿಕೆ ನೀಡಿರುವ ಕರ್ನಾಟಕ ಪರಿಸರ, ಜೀವಿ ಶಾಸ್ತ್ರ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ, ಈ ಹಿಂದೆಯೇ ಅರಣ್ಯ ಇಲಾಖೆಯಿಂದ ಕೆಲವು ಹಕ್ಕಿಗಳನ್ನು ಅಕ್ರಮವಾಗಿ ಇರಿಸಿಕೊಂಡ ಆರೋಪ ಮೇಲೆ ದರ್ಶನ್‌ ತೂಗುದೀಪ ವಿರುದ್ದ ಪ್ರಕರಣ ದಾಖಲಾಗಿ ವಿಚಾರಣೆ ನಡೆದಿದೆ. ಈ ಕುರಿತು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರೂ ತನಿಖೆ ಆಗಬೇಕಾಗಿದೆ. ಅಗತ್ಯ ಬಿದ್ದರೆ ದರ್ಶನ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಾನೂನು ವಿರುದ್ದ ಯಾರೇ ಹೋಗಿದ್ದರೂ ಅವರ ವಿರುದ್ದ ಕ್ರಮ ಆಗಲಿದೆ. ಯಾರೇ ವ್ಯಕ್ತಿಯಾಗಲಿ. ಎಷ್ಟೇ ಪ್ರಭಾವಿ, ದೊಡ್ಡವರಾದರೂ ಕಾನೂನು ಮುಂದೆ ತಲೆಬಾಗಲೇಬೇಕು. ಒಂದೂವರೆ ವರ್ಷ ಹಿಂದಿನ ಹಳೆಯದಾದ ಈ ಪ್ರಕರಣದ ತನಿಖೆ ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವುದು ಸಚಿವರು ನೀಡುವ ವಿವರಣೆ.

ದರ್ಶನ್‌ ಅವರು ವನ್ಯಜೀವಿ ಪ್ರಿಯರು ಹೌದು. ನಾಗರಹೊಳೆ, ಬಂಡೀಪುರ, ಭದ್ರಾ ಸೇರಿದಂತೆ ಕರ್ನಾಟಕದ ಪ್ರಮುಖ ಅರಣ್ಯಗಳಿಗೆ ಆಗಾಗ ಭೇಟಿ ನೀಡಿ ಸಫಾರಿ ನಡೆಸುತ್ತಾರೆ. ಸ್ನೇಹಿತರೊಂದಿಗೆ ತೆರಳಿ ಫೋಟೋಗ್ರಾಫಿ ಕೂಡ ಮಾಡುವುದು ಅವರ ಹವ್ಯಾಸ. ಕೋವಿಡ್‌ ಸಮಯದಲ್ಲಿ ಮೈಸೂರು ಮೃಗಾಲಯಕ್ಕೆ ಆದಾಯವಿಲ್ಲದೇ ಪ್ರಾಣಿಗಳ ಆಹಾರಕ್ಕೂ ತೊಂದರೆ ಇದ್ದಾಗ ಆಗ ದರ್ಶನ್‌ ಸ್ವಯಂ ಪ್ರೇರಿತವಾಗಿ ತಾವೂ ನೆರವು ನೀಡಿದ್ದರು. ಅಲ್ಲದೇ ಹಲವು ಪರಿಚಯಸ್ಥರಿಂದಲೂ ನೆರವನ್ನು ಕೊಡಿಸಿದ್ದರು. ಇದರ ನಡುವೆ ಅಕ್ರಮ ಪಕ್ಷಿಗಳ ಸಂಗ್ರಹದ ಆರೋಪವೂ ಅವರ ಮೇಲಿದ್ದು, ವಿಚಾರಣೆ ನಡೆಯುವ ಸಾಧ್ಯತೆಯಿದೆ.